ತ್ರಿಮುಖಿ ಪುಸ್ತಕ ವಿಮರ್ಶೆ
(ನೆನಪುಗಳ ಹಾದಿಯಲ್ಲಿ )
ಸಿ ಆರ್ ಸತ್ಯ ರವರು ಬರೆದ
ತ್ರಿಮುಖಿ ಓದುತ್ತಾ ಕುಳಿತಾಗ ಒಬ್ಬ ವ್ಯಕ್ತಿ ತನ್ನ ಪ್ರಾಮಾಣಿಕವಾದ ಪ್ರಯತ್ನ ಮತ್ತು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ,ಉತ್ತಮ ವ್ಯಕ್ತಿಗಳ ಸತ್ಸಂಗ ದೊರತರೆ ನಾವೂ ಬೆಳೆಯಬಹುದು ಮತ್ತು ದೇಶಕ್ಕಾಗಿ ನಮ್ಮ ಕೈಲಾದ ಸೇವೆ ಸಲ್ಲಿಸಬಹುದು ಎಂಬುದು ಮನವರಿಕೆಯಾಯಿತು.
ಇದಕ್ಕೆ ಬಾಹ್ಯಾಕಾಶ ತಂತ್ರಜ್ಞರು ಕವಿಗಳು ಆದ ಸಿ ಆರ್ ಸತ್ಯ ಅವರೇ ಜೀವಂತ ಸಾಕ್ಷಿ.
ಸಿ. ಆರ್, ಸತ್ಯ ಅವರು ವೃತ್ತಿಪರವಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣತರು, ಐವತ್ತು ವರ್ಷಗಳಿಗೂ ಮೇಲ್ಪಟ್ಟು ಇವರು ಈ ಕ್ಷೇತ್ರದಲ್ಲಿ ಇಸ್ರೋ ಮತ್ತು ಟಾಟಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಇವರು ಬರೆದಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು, ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ, ರಕ್ಷಣಾ ಇಲಾಖೆಯ ಪ್ರಕಟಣೆಗಳಲ್ಲಿ, ವಿಜ್ಞಾನ ಲೋಕ, ಉತ್ಥಾನ ಇಂತಹ ನಿಯತಕಾಲಿಕೆಗಳಲ್ಲಿ ಮತ್ತು ವೈಜ್ಞಾನಿಕ ಲೇಖನ ಸಂಕಲನಗಳ ಪುಸ್ತಕಗಳಲ್ಲಿ ಕಾಣಬಹುದು. ಸತ್ಯ ಅವರು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಇವಲ್ಲಿ ವ್ಯಕ್ತಿ ಚಿತ್ರಗಳಿವೆ. ಜೀವನಾನುಭವಗಳಿವೆ, ಹಾಸ್ಯ ಸಂಕಲನವಿದೆ ಮತ್ತು ಸಂಶೋಧನೆಗಳಿವೆ, ಇವರ ಕುಹಕ ಕವನ 'ಆಚೇ ಮನೆ ಸುಬ್ಬಮ್ಮನಿಗೆ ಏಕಾದಸಿ ಉಪವಾಸ' 1959ರಲ್ಲಿ ಕೊರವಂಜಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ, ನಂತರ ಹೊರಬಂದ ಅಪರಂಜಿ ಪತ್ರಿಕೆಯಲ್ಲಿ ಅನೇಕ ಹಾಸ್ಯ ಲೇಖನಗಳನ್ನು ಈಗಲೂ ಬರೆಯುತ್ತಿದ್ದಾರೆ. ತಿರುವನಂತಪುರದಲ್ಲಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಲ್ಲುಗಳ ಮೇಲೆ ಸತ್ಯ ಅವರು ಮಾಡಿದ ಸಂಶೋಧನೆಯ ಬಗ್ಗೆ ಕನ್ನಡದಲ್ಲಿ ಅವರು ಬರೆದಿರುವ 'ಅಳಿವಿಲ್ಲದ ಸ್ಥಾವರ' ಪುಸ್ತಕಕ್ಕೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಹಾಗೂ ಇವರೇ ಬರೆದಿರುವ ಪುಸ್ತಕದ ಇಂಗ್ಲಿಷ್ ಅನುವಾದ 'ಸೆಂಟಿನಲ್ಸ್ ಆಫ್ ಗ್ಲೋರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ದೊರೆತಿವೆ. ಬಹುಮುಖ ಆಸಕ್ತಿಯುಳ್ಳ ಸತ್ಯ ಅವರು ಪರಿಸರ ರಕ್ಷಣೆ, ಸಾಹಿತ್ಯ, ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ಪರಿಚಯ, ಶಬ್ಧ ಚಿತ್ರಗಳ ನಿರೂಪಣೆಗಳು - ಈ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೇಶದ ಹಿರಿಯ ವಿಜ್ಞಾನಿಗಳು ಹಾಗೂ ನಾಯಕರೊಡನೆ ಒಡನಾಟ, ಅನೇಕ ದೇಶಗಳಲ್ಲಿನ ಪ್ರಯಾಣ ಮತ್ತು ತಮ್ಮ ಹವ್ಯಾಸಗಳಿಂದ ಮೂಡಿಬಂದ ಕೆಲವು ಕುತೂಹಲಕರ ಅನುಭವಗಳನ್ನು ಈ ಪುಸ್ತಕ 'ತ್ರಿಮುಖಿ'ಯಲ್ಲಿ ಸತ್ಯ ಅವರು ಓದುಗರಲ್ಲಿ ಹಂಚಿಕೊಂಡಿದ್ದಾರೆ.
ಮೊದಲನೆಯ ಭಾಗದಲ್ಲಿ ಅವರು ನಮ್ಮ ರಾಜ್ಯದ ಹೊರಗಡೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಘಟಿಸಿದ ಪ್ರಮುಖವಾದ ಘಟನೆಗಳ ಮೆಲುಕು ಹಾಕಿದ್ದಾರೆ. ಅದರಲ್ಲಿ ದೇಶದ ಮಹಾನ್ ವಿಜ್ಞಾನಿಗಳು, ಮಂತ್ರಿಗಳು ,ಮುಖ್ಯಮಂತ್ರಿ ಗಳು ವಿದ್ವಾಂಸರು ,ಇತಿಹಾಸತಜ್ಞರು, ಹೀಗೆ ಗಣ್ಯ ವ್ಯಕ್ತಿಗಳ ಒಡನಾಟವನ್ನು ದಾಖಲಿಸಿದ್ದಾರೆ.
ಎರಡನೇ ಮುಖದಲ್ಲಿ ಅವರ ವಿದೇಶಿ ಪ್ರವಾಸದ ಸ್ವಾರಸ್ಯಕರ ಅನುಭವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅಮೆರಿಕಾ, ಶ್ರೀಲಂಕಾ, ಈಜಿಪ್ಟ್, ಇಸ್ರೇಲ್ ಹೀಗೆ ಬಹುತೇಕ ದೇಶಗಳಲ್ಲಿ ಮಾಡಿದ ಪ್ರವಾಸದ ಅನನ್ಯ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ನಮಗೂ ವಿದೇಶಿ ಪ್ರವಾಸ ಕೈಗೊಳ್ಳಲು ಪ್ರೇರಣೆ ನೀಡಿದ್ದಾರೆ.
ಮೂರನೆಯ ಮುಖದಲ್ಲಿ ಮರಳಿ ತಾಯ್ನಾಡಿಗೆ ಮರಳಿದ ನಂತರದ ಅವರ ಜೀವಮಾನದ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ನನಗೆ ಸತ್ಯ ರವರ ಈ ಪುಸ್ತಕದಲ್ಲಿ ಬಹಳ ಆಸಕ್ತಿ ಮತ್ತು ಇಚ್ಚೆಯಿಂದ ಓದಿದ ಭಾಗಗಳೆಂದರೆ ಅವರು ಒಡನಾಡಿದ ಭಾರತದ ರತ್ನಗಳಾದ ಡಾ. ಎ. ಪಿ ಜೆ ಅಬ್ದುಲ್ ಕಲಾಂಜಿ, ರಾಜಾರಾಮಣ್ಣ, ಡಾ.ವಿಕ್ರಂ ಸಾರಾಬಾಯ್ ಮುಂತಾದವರ ಬಗ್ಗೆ ಅವರ ಅನುಭವಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ.
ಸಿ ಆರ್ ಸತ್ಯ ರವರು ಓದುಗರಲ್ಲಿ ವಿನಂತಿ ಮಾಡಿಕೊಂಡಂತೆ ಇದು ಅವರ 'ಆತ್ಮ ಚರಿತ್ರೆ' ಎಂದು ಮಾತ್ರ ಪರಿಗಣಿಸಬೇಕಿಲ್ಲ . ಅವರ ಮಾತುಗಳಲ್ಲಿ ಹೇಳುವುದಾದರೆ" ಆತ್ಮ ಚರಿತ್ರೆ ಬರೆಯುವುದಕ್ಕೆ ನಾನು ಯಾವ ರೀತಿಯ ಸಾಧಕನೂ ಅಲ್ಲ ಸಾಹಿತಿಯೂ ಅಲ್ಲ. ಆದರೆ ಎಲ್ಲರಿಗೂ ಆಗುವ ಹಾಗೆ ನನ್ನ ಜೀವನದಲ್ಲಿ ಅನೇಕ ಬಗೆಯ ಅನುಭವಗಳನ್ನು ಅನುಭವಿಸಿದವನು. ಅನುಭವಗಳು ಸಹಜವಾಗಿಯೇ ಜೀವನ ಮಾರ್ಗದಲ್ಲಿ ನಮ್ಮನ್ನು ಆವರಿಸುತ್ತವೆ. ಕೆಲವು ಸಂತಸದ ಅನುಭವಗಳಾದರೆ ಮತ್ತೆ ಕೆಲವು ಮನಸ್ಸನ್ನು ಕಲಕುವ ಅನುಭವಗಳೂ ಆಗಿರುತ್ತವೆ. ಇದರಿಂದ ನಮ್ಮ ಮೇಲೆ ನಾನಾ ಬಗೆಯ ಪರಿಣಾಮಗಳು ಬೀರಿದಂತಾಗುತ್ತವೆ. ಕೆಲವು ನಮ್ಮ ಸ್ಮೃತಿ ಪಟಲದಲ್ಲಿ ಹಾಗೆಯೇ ಉಳಿಯುತ್ತವೆ. ಕೆಲವು ಕಾಲ ಸಾಗುತ್ತಿದ್ದ ಹಾಗೆಯೇ ನಮ್ಮ ಮನಸ್ಸಿನಿಂದ ದೂರವಾಗುತ್ತವೆ.
ಅನುಭವ ಅನ್ನುವುದು ಒಂದು ವೈಯಕ್ತಿಕ ಪ್ರಕ್ರಿಯೆಯೇನೋ ಹೌದು. ಆದರೆ ಅವನ್ನು ಬೇರೊಬ್ಬರಲ್ಲಿ ಹಂಚಿಕೊಳ್ಳುವುದೇಕೆ ಎಂದು ಕೇಳಬಹುದು.
ನನ್ನ ಅನಿಸಿಕೆಯ ಪ್ರಕಾರ ಎಲ್ಲಾ ಅನುಭವಗಳಿಗೂ ಅನುಭವಿಸುವವರಿಗಲ್ಲದೆ ಮಿಕ್ಕವರಿಗೆ ಅವುಗಳಲ್ಲಿ ಕಾಣಬಹುದಾದ ಕೆಲವು ಅಂಶಗಳಿವೆ. ಅವು ವ್ಯಕ್ತಿತ್ವದ ವಿಷಯವಿರಬಹುದು, ಚಾರಿತ್ರಿಕ ಮಾಹಿತಿಯಿರಬಹುದು. ಹಾಸ್ಯವಿರಬಹುದು, ಕೆಲವು ರೋಚಕ ಸಂಗತಿಗಳಿರಬಹುದು. ಇವುಗಳಲ್ಲಿ ಯಾವುದಾದರೊಂದು ಅಂಶವು ಓದುಗರ ಮನಸ್ಸನ್ನು ಸ್ಪಂದಿಸುತ್ತದೆ ಎಂಬುದು ನನ್ನ ಭಾವನೆ. ಜೀವನ ಎಂಬುವುದಕ್ಕೆ ಅನೇಕ ಆಯಾಮಗಳಿವೆ. ನಾವು ನಮ್ಮ ಜೀವನ ಪಥದಲ್ಲಿ ನಡೆಯುವಾಗ, ನಮ್ಮ ಬಗ್ಗೆ ನಾವೇ ಅರಿವು ಮಾಡಿಕೊಳ್ಳುತ್ತೇವೆ; ಒಡನಾಟವಿದ್ದ ಮಿಕ್ಕವರನ್ನು ಅರ್ಥೈಸಿಕೊಳ್ಳುತ್ತೇವೆ; ನೋಡುವ, ಜ್ಞಾಪಿಸುವ ಸ್ಥಳಗಳನ್ನು ಅರಿಯುತ್ತೇವೆ. ಇದರಿಂದ ನಾವು ಸಾಕಷ್ಟು ಕಲಿಯುತ್ತೇವೆ. ಇಂತಹ ಕಲಿಕೆ ರಸಮಯವಾಗಿರುತ್ತದೆ, ವೈವಿಧ್ಯಗಳಿಂದಾಗಿ ಕೂಡಿರುತ್ತದೆ. ಒಮ್ಮೊಮ್ಮೆ ದು:ಖಮಯವಾಗಿಯೂ ಇರುತ್ತದೆ. ಆದರೆ, ಇದನ್ನು ನಾವು ಗ್ರಹಿಸುವ ಬಗೆ ಬಹುಮಟ್ಟಿಗೆ ವ್ಯಕ್ತಿಗತವಾಗಿರುತ್ತದೆ. ನಮ್ಮ ಅನುಭವಗಳು ನಮ್ಮ ಮಾನಸಿಕ
ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮದೇ ಬಣ್ಣದ ಗಾಜುಗಳುಳ್ಳ ಕನ್ನಡಕಗಳ ಮೂಲಕ ಹೊರಪ್ರಪಂಚವನ್ನು ಕಾಣುತ್ತೇವೆ. ಇದರಿಂದಾಗಿ, ನಮ್ಮ ಸುತ್ತಮುತ್ತಲಿನ ಅನೇಕ ಆಗುಹೋಗುಗಳನ್ನು ನಾವು ನೋಡುವುದೇ ಇಲ್ಲ! ಅವು ಘಟನೆಗಳಿರಬಹುದು, ಸಾಧಕರಿರಬಹುದು, ರಸವತ್ತಾದ ಹಿನ್ನೆಲೆಯುಳ್ಳ ಸ್ಥಳಗಳಿರಬಹುದು. ಮನಸ್ಸಿನಲ್ಲಿ ನಿಲ್ಲುವ ಪುಸ್ತಕ-ನಾಟಕ-ಚಲನಚಿತ್ರ-ಸಂಗೀತ ಇರಬಹುದು. ಹೀಗೆ ನಮ್ಮಲ್ಲಿರುವ ಮಾನಸಿಕ ಪ್ರವೃತ್ತಿಯಿಂದಾಗಿ, ನಾವು ಎಷ್ಟೋ ಜೀವನಾನುಭವಗಳೊಡನೆ ಸ್ಪಂದಿಸುವುದೇ ಇಲ್ಲ! ಇದನ್ನು ನಾನು ಇಷ್ಟು ನಿಖರವಾಗಿ ಏಕೆ ಹೇಳುತ್ತಿದ್ದೇನೆಂದರೆ, ಇವೆಲ್ಲವೂ ನಾನು ನನ್ನ ಜೀವನದಲ್ಲಿ ಕಂಡುಕೊಂಡ ಸತ್ಯವೇ ಆಗಿದೆ".
ತ್ರಿಮುಖಿ ಪುಸ್ತಕ ಓದುತ್ತಾ ನಮಗೆ ಸಿ ಆರ್ ಸತ್ಯ ರವರ ಬಹುಮಖಗಳ ಪರಿಚಯವಾಗುತ್ತದೆ.ನಮ್ಮ ದೇಶದ ಬಾಹ್ಯಾಕಾಶ ಸಾಧನೆಗೆ ಪೂರಕವಾದ ತಂತ್ರಜ್ಞರಲ್ಲಿ ಅವರೂ ಕೂಡಾ ಒಬ್ಬರು ಎಂಬ ಹೆಮ್ಮೆಯ ಭಾವ ಮೂಡುತ್ತದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಹಾಗೂ ಅವರಿಂದ ಇನ್ನೂ ಇಂತಹ ಪುಸ್ತಕಗಳು ಹೊರಬರಲಿ ಅವುಗಳ ಓದುವ ಸೌಭಾಗ್ಯ ನಮ್ಮದಾಗಲಿ..
ಪುಸ್ತಕ: ತ್ರಿಮುಖಿ
ಲೇಖಕರು: ಸಿ ಆರ್ ಸತ್ಯ
ಪ್ರಕಾಶನ :ಬೀಚಿ ಪ್ರಕಾಶನ
ವರ್ಷ:೨೦೨೧
ಬೆಲೆ:೧೯೯₹
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment