01 March 2022

ಬಾಲ್ಯದ ನಂಬಿಕೆಗಳು


 


ಬಾಲ್ಯದ ನಂಬಿಕೆಗಳು 


ಬಾಲ್ಯದಲ್ಲಿ ನಾವು ಆಡಿದ ಆಟಗಳು ಕೀಟಲೆಗಳು ಒಂದಾ ಎರಡಾ ಕೆಲವು ಮುಗ್ದ ನಂಬಿಕೆಗಳು ಸಹ ನಮ್ಮನ್ನು ಆ ತರಹದ ಆಟಗಳಿಗೆ ಪ್ರೇರಣೆ ನೀಡುತ್ತಿದ್ದವು .

ಅಂತಹ ನಂಬಿಕೆಗಳಲ್ಲಿ ಒಂದು ದೊಣ್ಣೆ ಕ್ಯಾತ ಹೊಡೆದು ಅದರ ಬಾಯಲ್ಲಿ ನಾಣ್ಯ ಇಟ್ಟು ನಾವು ಹಣ ಹುಡುಕಲು ಹೊರಟರೆ ಅಪಾರ ಪ್ರಮಾಣದ ಹಣ ಲಭಿಸುತ್ತದೆ ಎಂಬ ನಂಬಿಕೆ.ಒಮ್ಮೆ ಬೇಲಿ ಸಾಲು ಅಲೆದು ಹುಡುಕಿ ಕಡೆಗೂ ಒಂದು ದೊಣ್ಣೇಕ್ಯಾತ ಹೊಡೆದು ಅದರ ಬಾಯಲ್ಲಿ ಐದು ಪೈಸೆಯ ನಾಣ್ಯ ಇಟ್ಟು ಉತ್ತರ ದಿಕ್ಕಿನಲ್ಲಿ ಹಣ ಹುಡುಕಲು ನಡೆದೆವು ಕಾಕತಾಳೀಯ ಎಂಬಂತೆ ಚಂದ್ರಯ್ಯನವರ ಅಂಗಡಿಗೆ ಹತ್ತು ಹೆಜ್ಜೆ ದೂರದಲ್ಲಿ ಒಂದು ರೂಪಾಯಿ ಸಿಕ್ಕೇ ಬಿಟ್ಟಿತು. ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ.ಎಲ್ಲಾ ಗೆಳೆಯರು ಚಂದ್ರಯ್ಯನವರ ಅಂಗಡಿಗೆ ಹೋಗಿ ಬೋಟಿ ಮತ್ತು ಮಂಡಕ್ಕಿ ಉಂಡೆ ತಿಂದು ಮಜಾ ಮಾಡಿದೆವು .ಮುಂದಿನ ಭಾನುವಾರದ ದೊಣ್ಣೇಕ್ಯಾತಕ್ಕೆ ಕಾದೆವು ಆದರೆ ಅಂದು ಎಷ್ಟು ಹುಡುಕಿದರೂ ಹಣದ ಸುಳಿವಿರಲಿಲ್ಲ.ಮೊನ್ನೆ ಊರಿಗೆ ಹೋದಾಗ ಆನಂದ ಸಿಕ್ಕಾಗ ಇದೆಲ್ಲಾ ನೆನದು ನಕ್ಕೆವು.

ಇದರ ಜೊತೆಯಲ್ಲಿ ಬಾಲ್ಯದಲ್ಲಿ ಇನ್ನೂ ವಿಚಿತ್ರ ನಂಬಿಕೆಗಳು ಇದ್ದವು .ಹುಣಸೆ ಬೀಜ ತಿಂದರೆ ಹೊಟ್ಟೆಯಲ್ಲಿ ಮರ ಬೆಳೆಯುತ್ತೆ, ನವಿಲು ಗರಿ ಪುಸ್ತಕದಲ್ಲಿ ಮರಿ ಹಾಕುತ್ತೆ, ಬೆಳೆಯುವ ಸಸ್ಯದ ಚಿಗುರಿಗೆ ಉಗುರು ತೋರಿಸಿದರೆ ಸುಟ್ಟು ಹೋಗುತ್ತದೆ, ಉದುರಿದ ಹಲ್ಲನ್ನು ಬೇರೆಯವರು ಕಾಲಲ್ಲಿ ತುಳಿದರೆ ಹಲ್ಲು ಹುಟ್ಟಲ್ಲ, ಆಕಾಶದಲ್ಲಿ ನಕ್ಷತ್ರಗಳ ಬಿದ್ದರೆ ಆ ಕಡೆ ನಮ್ಮ ಬಂಧುಗಳ ಮರಣ ಆಗುತ್ತದೆ. ಹೀಗೆ ನಂಬಿಕೆ, ಮೂಢನಂಬಿಕೆ  ನಮ್ಮ ಬಾಲ್ಯದಲ್ಲಿ ಹಾಸುಹೊಕ್ಕಾಗಿ ಹೋಗಿದ್ದವು ಅವನ್ನು ನೆನದರೆ ನಗು ಬರುತ್ತದೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: