ಸುವರ್ಣ ಮುಖಿ . ವಿಮರ್ಶೆ.
ಆತ್ಮೀಯರು ಪ್ರಕಾಶಕರು ಆದ ಎಂ ವಿ ಶಂಕರಾನಂದರ ಜೊತೆ ಒಮ್ಮೆ ಸಿದ್ದರ ಬೆಟ್ಟದ ಚಾರಣಕ್ಕಾಗಿ ಹೋದಾಗ ಅಲ್ಲೇ ಹತ್ತಿರದ ಹೊಲತಾಳ್ ನ ಅಬೇತೋಸಂ ( ಅನೌಪಚಾರಿಕ ಬೇಸಾಯ ಮತ್ತು ತೋಟಗಾರಿಕೆ ಸಂಸ್ಕೃತಿ) ಗೆ ಭೇಟಿ ನೀಡಿದಾಗ ಈ ಪುಸ್ತಕವನ್ನು ಡಾ.ಸಿದ್ದಗಂಗಯ್ಯ ಹೊಲತಾಳ್ ರವರಿಂದ ಖರೀದಿಸಿ ತಂದು 464 ಪುಟಗಳ ಬೃಹತ್ ಪುಸ್ತಕವನ್ನು ಕೆಲವೇ ದಿನಗಳಲ್ಲಿ ಓದಿ ಮುಗಿಸಿದೆ.
ಸಿದ್ಧರ ಬೆಟ್ಟದ ಆಸುಪಾಸಿನ ಅಧ್ಯಯನ ಎಂಬ ಟ್ಯಾಗ್ ಲೈನ್ ನ ಪುಸ್ತಕದಲ್ಲಿ
ಡಾ. ಸಿದ್ಧಗಂಗಯ್ಯ ಹೊಲತಾಳು ರವರು ಚನ್ನರಾಯನ ದುರ್ಗ ದ ಸಮಗ್ರ ಅಧ್ಯಯನ ಮತ್ತು ಪ್ರವಾಸ ಮಾಡಿ ಅನುಭವದ ಕಥನವನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ ಪರಿಸರ ಪ್ರಿಯರು, ಸಂಶೋಧನಾ ವಿದ್ಯಾರ್ಥಿಗಳು, ಪ್ರವಾಸಪ್ರಿಯರಿಗೆ ಇದೊಂದು ಆಕರ ಗ್ರಂಥವೆಂದರೆ ತಪ್ಪಾಗಲಾರದು.
ಡಾ. ಸಿದ್ಧಗಂಗಯ್ಯ ಹೊಲತಾಳು ರವರ ಈ ಹೆಸರಿನಲ್ಲಿಯೇ ನೆಲಮೂಲದ ಹಳ್ಳಿಯ ಹೆಸರು ಇರುವುದನ್ನು ಗುರುತಿಸಬಹುದು. 'ಹೊಲತಾಳು ಗ್ರಾಮವು ಕೋಳಿಕಲ್ ಅರಣ್ಯ ಪ್ರದೇಶದ ತಪ್ಪಲಿನಲ್ಲಿ ಅಂದರೆ ಸಿದ್ಧರಬೆಟ್ಟದ ದಕ್ಷಿಣ ದಿಕ್ಕಿನಲ್ಲಿದೆ. ಈ ನೆಲದಲ್ಲಿ ಆಳಿದನೆಂದು ಆಕರಗಳಿಂದ ತಿಳಿದು ಬರುವ ಕುರಂಗರಾಯನ ಸತಿಯ ಕಥನದೊಂದಿಗೆ ತಳುಕ ಹಾಕಿಕೊಂಡಿರುವ 'ಹೊಲತಾಳು' ಗ್ರಾಮದವರಾದ ಸಿದ್ಧಗಂಗಯ್ಯನವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರನ್ನು ಆಂಗ್ಲಭಾಷಾ ವಿದ್ವಾಂಸರಾಗಿ, ಪರಿಸರವಾದಿಯಾಗಿ ಸಾವಯವ ಕೃಷಿಕರಾಗಿ, ದೇಸೀ ಸಂಸ್ಕೃತಿಯ ಹರಿಕಾರರಾಗಿ, ದಣಿವರಿಯದ ಓದುಗರಾಗಿ, ಸಂಶೋಧಕರಾಗಿ ಗುರುತಿಸಬಹುದು. 'ಅಬೇತೋಸಂ' ಎಂಬ ಕೇಂದ್ರದ ಸ್ಥಾಪಕರಾಗಿದ್ದಾರೆ. ನೆಲಮೂಲದ ಕಥನವನ್ನು ಮುಂದಿನ ಪೀಳಿಗೆಗೂ ಪ್ರಸರಿಸುವ ಬದ್ಧತೆ ಮತ್ತು ಉತ್ಸಾಹವನ್ನು ಹೊಂದಿದ್ದಾರೆ.
ಚನ್ನರಾಯನದುರ್ಗ ಆಡಳಿತ ಘಟಕದ ವ್ಯಾಪ್ತಿಯಲ್ಲಿರುವ ಸ್ಥಳಗಳನ್ನು ಪರಿಚಯಿಸಿರುವ ಇವರ ಪ್ರಯತ್ನವು ಶ್ಲಾಘನೀಯವಾದುದು. ಚನ್ನರಾಯನದುರ್ಗದಿಂದ ದೊಗ್ಗನಹಳ್ಳಿ, ಮಲ್ಲೇಕಾವು, ಗೌಜುಗಲ್ಲು, ಬೆಂಡೋಣೆ, ಬೂದಗವಿ, ಜೋನಿಗರಹಳ್ಳಿ, ತೋವಿನಕೆರೆ, ಮಣುವಿನಕುರಿಕೆ, ಹೊಲತಾಳು, ದೊಡ್ಡನರಸಯ್ಯನಪಾಳ್ಯ,ಮುಂತಾದ ಹಳ್ಳಿಗಳ ಪ್ರವಾಸ ಮಾಡಿ ಅಲ್ಲಿನ ಐತಿಹಾಸಿಕ, ಸಮಾಜೋ ಆರ್ಥಿಕ ಸಾಂಸ್ಕೃತಿಕ ಅಧ್ಯಯನ ಮಾಡಿ ನಮಗೆ ಒಂದು ಉತ್ತಮ ಚಿತ್ರಣ ನೀಡಿದ್ದಾರೆ.
ಕೃತಿಕಾರರ ಮಾತಿನಲ್ಲೇ ಹೇಳುವುದಾದರೆ
'ಸುವರ್ಣಮುಖಿ' ಬಹುತೇಕ ನಿಧಾನ ನಡಿಗೆಯ ಪ್ರವಾಸಕಥನ.
ಈ ಪ್ರವಾಸದಲ್ಲಿ ಅರಿವು, ಅಧ್ಯಯನ : ಸಂವಾದ, ಸಂಶೋಧನೆ ; ಪ್ರಾಕೃತಿಕ ಸೊಬಗು, ಪ್ರಾಯೋಗಿಕ ಅನುಭವ; ಚಿಂತನ-ಮಂಥನ ; ಕರಕುಶಲ ಜಾನಪದ-ಸಂಪ್ರದಾಯ-ಆಚರಣೆ-ಹಾಡು ; ಹಿಂದಿನ - ಇಂದಿನ - ಮುಂದಿನ ನೋಟ
ಎಲ್ಲವೂ ಈ ಬರವಣಿಗೆಯಲ್ಲಿ ಸಂಮಿಳಿತವಾಗಿವೆ. ಕನಸು-ಕಲ್ಪನೆ-ಕತೆಯೂ ಇದೆ, ಸಿದ್ಧರಬೆಟ್ಟದ ಆಸುಪಾಸು - ಚನ್ನರಾಯನದುರ್ಗ ಹೋಬಳಿ, ಬಾರ್ಡರ್ ಲೈನ್ ಒಳಗೊಂಡಂತೆ. ಸುಮಾರು ಎಂಭತ್ತು ಕಿಲೋಮೀಟರ್ ಸುತ್ತಳತೆ, ಎಂಭತ್ತು ಹಳ್ಳಿಗಳ ವ್ಯಾಪ್ತಿಯಲ್ಲಿ ಅವರ ನಡಿಗೆ.
ಸುವರ್ಣಮುಖಿ ನದಿಯ ಜಲದ ಜಾಡಿನಲ್ಲಿ ಬೇಸಾಯ ಸಂಸ್ಕೃತಿಯ ಅನಂತ ಮುಖಗಳನ್ನು ಪಯಣದ ಅವಧಿಯಲ್ಲಿ ನೋಡಿ ದಾಖಲಿಸಿದ್ದಾರೆ. ಸಮಾಜ-ಕೃಷಿ-ಆರ್ಥಿಕತೆ-ನೀರು-ಅರಣ್ಯ ,ಮಣ್ಣಿನ ಗುಣ-ಕಲೆ-ಸ್ಥಳೀಯ ಸಂವೇದನೆ-ಸ್ಥಿತ್ಯಂತರ , ಅರಿವು, ಮಾಗಿಯ ಬೆಳಗಿನ ಚುಮುಚುಮು ಚಳಿ-ಮಂಜು, ಮಧ್ಯಾಹ್ನದ ಬಿಸಿಲು, ಸಂಜೆಯ ಸುಳಿಗಾಳಿಯಿಂದ ಆರಂಭವಾಗಿ ಚೈತ್ರದ ಚಿಗುರಿನ ಪಕ್ಷಿಗಳಿಂಚರದಲ್ಲಿ ಮುಂದುವರಿದು, ಮಳೆಬಿದ್ದ ನೆಲವ ಉತ್ತಿ ಬೀಜ ಬಿತ್ತಿ ಪೈರುನೆಟ್ಟು
ಗರಿಮೇದು ಬೆಳೆಕಟ್ಟುವ ತನಕ ನನ್ನ ಈ ಪ್ರವಾಸ ಮುಂದುವರೆದಿದೆ.
ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಜಾನಪದ ತಜ್ಞರಾದ ಡಾ.ಬಸವರಾಜ ನೆಲ್ಲಿಸರ ರವರ ಮಾತಿನಲ್ಲಿ ಹೇಳುವುದಾದರೆ
ನಮ್ಮ ಹಳ್ಳಿಯ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು ಏನು ಮಾಡ್ತಾ ಇದ್ದಾರೆ? ಬೇಕರಿಯಲ್ಲಿ, ಗ್ಯಾರೇಜಿನಲ್ಲಿ, ಗಾರ್ಮೆಂಟಿನಲ್ಲಿ, ಚಪ್ಪಲಿ ಅಂಗಡಿಗಳಲ್ಲಿ, ಟ್ಯಾಕ್ಸಿ ಚಾಲನೆಯಲ್ಲಿ, ಹೋಟೆಲ್ಗಳಲ್ಲಿ, ಮಾಲ್ಗಳಲ್ಲಿ ಜವಾನರೋ ದಿವಾನರೋ ಆಗಿ ದುಡಿಯುತ್ತಿದ್ದಾರೆ. ಮದುವೆ ಮಾಡಿಕೊಂಡ್ರೆ ಮನೆ ಮಾಡಬೇಕಲ್ಲಾ ಎಂದು ಸಣ್ಣ ರೂಮಿನಲ್ಲಿದ್ದು, ಅನ್ನ ಮಾಡಿಕೊಂಡು ಹೋಟೆಲ್ ಸಾಂಬಾರ್ ತಂದು, ಉಂಡು ಜೀವನ ಮಾಡ್ತಿದ್ದಾರೆ. 'ಕೆಟ್ಟು ಪಟ್ಟಣ ಸೇರು' ಅನ್ನೋ ಗಾದೆ ಮಾತು, ಈಗ 'ಕೆಡೋದಕ್ಕೆ ಪಟ್ಟಣ ಸೇರು' ಆಗಿದೆ. ಮೈಬಗ್ಗಿಸಿ ಬೆವರು ಹರಿಸಿ ದುಡಿದ್ರೆ 'ಭೂಮಿತಾಯಿ ಕೂಡಾಕಿಲ್ಲವಾ! ಹೀಗೆ ಪ್ರತಿ ಹಳ್ಳಿಗಳಲ್ಲೂ ಹಣದ ಬೆನ್ನುಹತ್ತಿ ಪೇಟೆ ಸೇರಿದವರ ದೊಡ್ಡ ಪಟ್ಟಿಯೇ ದೊರೆಯುತ್ತದೆ. ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲು, ಕೇರಳದ ಮಲೆಯಾಳಿಗಳು, ಪಾಳುಬಿದ್ದ ಜಮೀನು ನೋಡಲು ಹಳ್ಳಿಗಳಿಗೆ ಬರುತ್ತಿದ್ದಾರೆ. ಆದರೆ ನಮ್ಮವರು ಏನು ಮಾಡುತ್ತಿದ್ದಾರೆ? ಗಂಡಸರಿಗಿಂತ ನಮ್ಮೂರಿನ ಹೆಂಗಸರಿಗೆ ಶ್ರಮಿಕ ಪ್ರಜ್ಞೆ ಹೆಚ್ಚು ಕುಟುಂಬದಲ್ಲಿ ಹತ್ತು ಕೈಗಳು ಗಲೀಜು ಮಾಡುತ್ತವೆ ಎರಡು ಕೈಗಳು ಶುಚಿ ಮಾಡುತ್ತವೆ. ಹೊಲದಲ್ಲಿ ಸಿರಿಧಾನ್ಯಗಳಾದ ಆರ್ಕ, ನವಣೆ ಮುಂತಾದವನ್ನು ಬೆಳೆಯುತ್ತಾರೆ. ಗ್ರಾಮೀಣ ವೃತ್ತಿಗಳು ನೂರಾರಿದ್ದವು. ಕುಂಬಾರ, ಕಮ್ಮಾರ, ಚಮ್ಮಾರ, ತೋಟಿ, ತಳವಾರ, ಸಾರುವಯ್ಯ ಮುಂತಾದವರೆಲ್ಲರ ಕಸುಬುಗಳು, ಮೂಲ ಸಂಸ್ಕೃತಿ ಯಿಂದ ಮರೆಯಾಗುತ್ತಿವೆ. ದೇಶಿಜ್ಞಾನ ಪದ್ಧತಿ ಮರೆಯಾಗುತ್ತಿದೆ. ರೈತ ಕೃಷಿಯನ್ನೇ ನಂಬಿದವನು ಹೊಸದನ್ನ ಕಲಿಯುವುದಿಲ್ಲ, ಹಳೆಯದನ್ನು ಬಿಡುವುದಿಲ್ಲ ಎಂಬಂತಾಗಿದೆ. 'ನಮ್ಮಂಗೆ ನೀವಾಗ್ಬೇಡಿ' ಎಂದು ರೈತರು ತಮ್ಮ ಮಕ್ಕಳಿಗೆ ಹೇಳುತ್ತಾ, ಅಲ್ಪಸ್ವಲ್ಪ ಓದಿದ ಯುವಕ ಯುವತಿಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ನಮ್ಮೆಲ್ಲರ ಬೇರುಗಳು ಗ್ರಾಮಮೂಲವೇ ಆಗಿರುವುದರಿಂದ ನಮ್ಮ ಸಂಸ್ಕೃತಿ ಉಳಿದು ಬರಬೇಕಾದರೆ ಪ್ರಾಮಾಣಿಕ ದುಡಿಮೆ, ಶ್ರದ್ಧೆ, ಜೊತೆಗೆ ಸ್ವಸಾಮರ್ಥ್ಯವಿರಬೇಕು. ವಿದ್ಯಾವಂತರಾದವರು ಮರಳಿ ತಮ್ಮ ತಮ್ಮ ಊರುಗಳಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿ, ಮರಗಿಡಗಳನ್ನು ನೆಟ್ಟು, ಕೃಷಿಹೊಂಡಗಳನ್ನು ನಿರ್ಮಿಸಿ ಹಸಿರು ಸಮೃದ್ಧಿಯ ಬೇಸಾಯಮಾಡಿ ಗಾಂಧೀಜಿಯ ಗ್ರಾಮೀಣ ಅಭಿವೃದ್ಧಿಯ ಕನಸನ್ನು ನನಸು ಮಾಡುತ್ತ ಹೆಜ್ಜೆ ಹಾಕಬೇಕೆಂಬುದು ಲೇಖಕರ ಮಹದಾಸೆ .ಅದಕ್ಕೆ ಅವರೇ ಮಾದರಿ.
'ಸುವರ್ಣಮುಖಿ'ಯಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆಯಲ್ಲದೆ, ಈ ನದಿ ಹರಿವ ಕಡೆಯಲ್ಲೆಲ್ಲಾ ಜೀವ ಅರಳಿಸುವ ಶಕ್ತಿ ಇದೆ. ಸಿದ್ದಗಂಗಯ್ಯ ರವರು ಒಂದು ಹೋಬಳಿಯ ಸಮಗ್ರ ಪ್ರವಾಸ ಕಥನ ಓದಿದ ನನಗೆ ಇವರು ತುಮಕೂರು ಜಿಲ್ಲೆಯ ೧೦ ತಾಲೂಕಿನ ಎಲ್ಲಾ ಹೋಬಳಿಯ ಪ್ರವಾಸ ಕಥನ ಬರೆದರೆ ಅದು ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯನ್ನು ಚಿತ್ರಿಸುವ ಕೆಲಸ ಮಾಡಿದಂತಾಗುತ್ತದೆ. ಜೊತೆಗೆ ಒಂದು ಉತ್ತಮ ಆಕರ ಗ್ರಂಥ ನೀಡಿದಂತಾಗುತ್ತದೆ.
ಪುಸ್ತಕದ ಹೆಸರು: ಸುವರ್ಣಮುಖಿ
ಲೇಖಕರು: ಡಾ. ಸಿದ್ದಗಂಗಯ್ಯ ಹೊಲತಾಳು
ಪ್ರಕಾಶಕರು: ಸ್ಟೂಡೆಂಟ್ ಬುಕ್ ಕಂಪನಿ.ತುಮಕೂರು
ಬೆಲೆ: 400. ₹
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
No comments:
Post a Comment