19 March 2022

ಉದಕದೊಳಗಿನ ಕಿಚ್ಚು ಭಾಗ ೨೧


 


ನಾಟಕದ ಪ್ರಾಕ್ಟೀಸ್ , ಮನೆಯಲ್ಲಿ ಕೆಲಸ ಇವುಗಳ ನಡುವೆ  ಸತೀಶನಿಗೆ ದಿನಗಳು ಉರುಳಿದ್ದೆ ಗೊತ್ತಾಗಲಿಲ್ಲ . ಬೇಸಿಗೆ  ರಜೆ ಕಳೆದು ಎರಡನೇ ವರ್ಷದ ಪಿ ಯು ಸಿ ಓದಲು ಕಾಲೇಜು ಜೂನ್ ಮೂರನೆ ತಾರೀಖು ಆರಂಭವಾಗುವುದು ಎಂದು ಪ್ರಿನ್ಸಿಪಾಲ್ ಹೇಳಿದ್ದು ನೆನಪಾಗಿ,  ಪುಸ್ತಕ ಮತ್ತು ಪೆನ್ನುಗಳ  ಜೋಡಿಸಿಕೊಂಡು ಅನ್ನ ಮೊಸರು ಉಂಡು ಊರ ಮುಂದಿನ ಬಸ್ ನಿಲ್ದಾಣದ ಬಳಿ ಬಂದು ಪಾಕ್ಷಪ್ಪರ ಅಂಗಡಿ ಹಿಂದಿರುವ ಬೇವಿನ ಮರದ ಕಡೆ ನೋಡಿದ ,ಯಾರೂ ಇರಲಿಲ್ಲ. ಇನ್ಯಾರು ಇರುವರು ಅವಳು ಕಾಣೆಯಾಗಿ ಎಷ್ಟೋ ತಿಂಗಳಾದವಲ್ಲ .


ಮೊದಲಾದರೆ ಸತೀಶ ಬರುವ ಮೊದಲೇ ಬಿಗಿಯಾದ ರವಿಕೆ ತೊಟ್ಟು ಎದೆಯ ಮೇಲೆ ಸುಮ್ಮನೆ ಇರಲಿ ಎಂದು ಹಾಕಿಕೊಂಡ ದಾವಣಿ ಅಲ್ಲಿರದೇ ಬೇಸರಗೊಂಡು ಎಲ್ಲಿಗೋ ಜರುಗಿರುತ್ತಿತ್ತು, ಬೇವಿನ ಮರದ ಕೆಳಗಿರುವ ಕಲ್ಲಿನ ಬೆಂಚಿನ ಮೇಲೆ ಕುಳಿತು ಅವಳು ಕಾಲು ಅಲ್ಲಾಡಿಸುತ್ತಿದ್ದರೆ ಕಾಲ್ಗೆಜ್ಜೆ ತಾಳ ಬದ್ದವಾಗಿ ಸದ್ದು ಮಾಡುತ್ತಿದ್ದವು,  ಊರ ತರ್ಲೆ ಹುಡುಗರು ಅವಳ ನೋಡಲೆ ಬಂದು ದೂರದಲ್ಲಿ ನಿಲ್ಲುತ್ತಿದ್ದರು. ಆದರೆ ಅವಳು ಮಾತ್ರ ಸತೀಶನ ಬಿಟ್ಟು ಯಾರನ್ನೂ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ, ಅವನು ಬಂದೊಡನೆ ಚಂಗನೆ ಕಲ್ ಬೆಂಚಿನಿಂದ ಎಗರಿ ಇಳಿದು ನಕ್ಕು ಮತ್ತೆ  ಜೈರಾಂ ಬಸ್ ಬರುವವರೆಗೂ ಅಲ್ಲೇ ಕುಳಿತು ನಗುವಿನ ವಿನಿಮಯ, ಮನಸುಗಳ ಪಿಸುಮಾತಿನ ವಿನಿಮಯ ನಡೆಯುತ್ತಿತ್ತು.


ಮತ್ತೆ ಅವಳಿಲ್ಲದ್ದನ್ನು ನೆನೆದು ಬೇಸರದಿಂದ ಶೆಟ್ಟರ ಭೀಮಮೂರ್ತಿ ಅಂಗಡಿಯ ಮುಂದೆ ನಿಂತು ,ಆಸ್ಪತ್ರೆಯ ದಿನ್ನೆ ಕಡೆಗೆ ನೋಡಲಾರಂಭಿಸಿದ, ಅಂದೇಕೋ ಬಸ್ ಸಹ ನಿಧಾನವಾಗಿ ಬೇಸರದಿಂದ ಏದುಸಿರು ಬಿಡುತ್ತಾ ಬಂದು ‌ನಿಂತಿತು.

ಡ್ರೈವರ್ ಮೂರ್ತಣ್ಣ "ಏ ....ಆ ಬಕೆಟ್ ತಗಂಡು ಜಗ್ಗ ನಲ್ಲಿಲಿ ನೀರ್ ತಂದು ರೇಡಿಯೇಟರ್ ಗೆ ಹಾಕಲೆ . ಹೊಗೆ ಬತೈತೆ" ಕೂಗಿದರು

ಕಂಡಕ್ಟರ್ ಸೀನ ಬಕೆಟ್ ನಲ್ಲಿ ನೀರು ತಂದು ಚಿಕ್ಕ ಜಗ್ ನಲ್ಲಿ ತುಂಬಿ  ರೇಡಿಯೇಟರ್ ಗೆ ಹಾಕಿ ಬಕೆಟ್ ಅನ್ನು ಒಂದು ಸೀಟ್ನ  ಕೆಳಗೆ ಇಟ್ಟು "ರೈಟ್ ರೈಟ್" ಅಂದ 

ಬಸ್ಸು ದೊಡ್ಡ ಸೇತುವೆ ದಾಟಿ ನಮೂಜಿ  ದಿನ್ನೆಯನ್ನು ಕಷ್ಟಪಡುತ್ತಾ ಹತ್ತುತ್ತಿತ್ತು. ಸತೀಶನ  ಮನ ಸುಜಾತಳ ಬಗ್ಗೆ ಯೋಚಿಸುತ್ತಿತ್ತು.


ಮೊದಲಿನಿಂದಲೂ ಸೈನ್ಸ್ ತಲೆಗೆ ಹತ್ತಲಿಲ್ಲ ,ಮೊದಲಾಗಿದ್ದರೆ  ಕಾಲೇಜು ತರಗತಿಗಳು ಬೇಸರವಾದರೆ ಸುಜಾತಳ ಜೊತೆ ಯಾವುದಾದರೂ ಪಾರ್ಕಿನಲ್ಲೋ ,ಶ್ರೀಶೈಲ ಅಥವಾ ಜಯಲಕ್ಷ್ಮಿ ಚಿತ್ರಮಂದಿರಗಳಲ್ಲಿ ಯಾವುದಾದರೂ ಚಲನಚಿತ್ರ ನೋಡುತ್ತಾ ಕಾಲ ಕಳೆಯುತ್ತಿದ್ದ .ಈಗ ಅವಳಿಲ್ಲ. ನರಹರಿ ರೂಂ ನಲ್ಲಿ ಉಳಿಯಲು ಮಾವ ಬಿಡುತ್ತಿಲ್ಲ , ಹಿರಿಯೂರಿಗೆ ಹೋಗಲೂ ಬೇಸರದಿಂದ ಹೋಗದಿದ್ದರೆ ಅದಕ್ಕೂ ಅಜ್ಜಿ ಮಾವಂದಿರು ಯಾಕೋ ಕಾಲೇಜ್ ಗೆ ಹೋಗಿಲ್ಲ ಎಂದು ಬೈಯುತ್ತಿದ್ದರು .ಒಟ್ಟಿನಲ್ಲಿ  ಸತೀಶನಿಗೆ ಯಾವ ಕಡೆಯಿಂದಲೂ ನೆಮ್ಮದಿ ಇಲ್ಲದಂತಾಗಿತ್ತು.

ದೇವಿಮಹಾತ್ಮೆ ನಾಟಕದಲ್ಲಿ ಪಾತ್ರ ಮಾಡಿದ ಎಲ್ಲರನ್ನೂ ‌ದೇವಿ ಹೂವಿನಂತೆ ಮೇಲೆತ್ತಿಕೊಳ್ಳುವಳು ಎಂದೂ ,ದೇವಿಗೆ ಅವಮಾನ ಮಾಡಿದವರನ್ನು ಭಸ್ಮ ಮಾಡುವಳು ಎಂದು ,ಎರಡಕ್ಕೂ ಉದಾಹರಣೆ ಸಮೇತ ಕೆಲವರ ಹೆಸರು ಹೇಳಿದ್ದರು ,ಹಾಗೆ ಯೋಚಿಸಿದಾಗ ಅದು ದಿಟವೂ ಎಂಬುದು ಕೆಲ ಉದಾಹರಣೆ ಮೂಲಕ ತಿಳಿದಿತ್ತು. ಸತೀಶ ದೇವಿಮಹಾತ್ಮೆ ನಾಟಕದಲ್ಲಿ ಪಾತ್ರ ಮಾಡಲು ಇದೂ ಒಂದು ಕಾರಣವಾಗಿತ್ತು, ಮನಃಪೂರ್ವಕವಾಗಿ ಸುಜಾತ ನನಗೇ ಸಿಗಬೇಕು ಮತ್ತು ಅವಳೊಂದಿಗೆ ನನ್ನ ಮದುವೆಯಾಗಬೇಕು ಎಂದು ಪ್ರಾಕ್ಟೀಸ್ ಮಾಡುವಾಗ ಕೆಲವೊಮ್ಮೆ, ಮತ್ತು ನಾಟಕವಾಡುವಾಗ ಒಂದೆರಡು ಸಲ ಎಂದುಕೊಂಡದ್ದನ್ನು‌ ಸತೀಶ ಜ್ಞಾಪಿಸಿಕೊಂಡ.

ಹಾಗಾದರೆ ಜನರು ನಂಬಿರುವುದು ಸುಳ್ಳಾ?

ದೇವಿಯ ಮಹಾತ್ಮೆ ಏನೂ ಇಲ್ಲವೆ?

ನಾಟಕ ಆಗಿ ಮೂರ್ನಾಲ್ಕು ತಿಂಗಳಾದರೂ ನನಗೇನು ಒಳ್ಳೆಯದು ಏಕೆ ಕಾಣಲಿಲ್ಲ?  ಹೀಗೆ ನಾನ ಪ್ರಶ್ನೆಗಳು ಸತೀಶನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು.


ಹೀಗೆ ಒಂದು ಭಾನುವಾರ ತಿಮ್ಮಕ್ಕ ಸತೀಶನ ಕರೆದು 

" ನನಗೆ ರಾಗಿ, ಜೋಳ ಹಸನು ಮಾಡಿ ಹಿಟ್ಟು ಮಾಡಿಸಲು ಮೆಷಿನ್ಗೆ ಹೋಗಬೇಕು ಇವತ್ತು ಬಿಳಿಯಣ್ಣ ನಿಗೆ ನೀನೇ ಬುತ್ತಿ ಕೊಟ್ ಬಾ ಸತೀಶ " ಎಂದರು


"ಆಯ್ತು ಅಕ್ಕ ಬುತ್ತಿ ಕಟ್ ಕೊಡು ನಾನೇ ತಗಂಡು ಹೋಗಿ ಬತ್ತೀನಿ " ಖುಷಿಯಿಂದಲೇ ನುಡಿದ ಸತೀಶ 


ಮೊದಲಾಗಿದ್ದರೆ ಬಿದಿರು ಬುಟ್ಟಿಯಲ್ಲಿ ಬುತ್ತಿ ಹೊತ್ತು ಹೋಗುತ್ತಿದ್ದ ಸತೀಶ ಮನೆಗೆ ಹೊಸ ಹೀರೊ ಸೈಕಲ್‌ ಬಂದಾಗಿನಿಂದ ಎಲ್ಲದಕ್ಕೂ ಸೈಕಲ್‌ ಏರಿ ಹೋಗುತ್ತಿದ್ದ ,ಅಷ್ಟಕ್ಕೂ ಆಗ ಆ ಊರಿನಲ್ಲಿ ಇದ್ದದ್ದೇ ಐದಾರು ಸೈಕಲ್ ಇದು ಸಹ ಪದೇ ಪದೇ ಸತೀಶ ಸೈಕಲ್‌ ಬಳಸಲು ಕಾರಣವಾಗಿತ್ತು.

ಬಣ್ಣ ಬಣ್ಣದ ವೈರ್ನಿಂದ ಮಾಡಿದ ಬ್ಯಾಗಿನಲ್ಲಿ ಬುತ್ತಿ ಕಟ್ಟುತ್ತಾ 

" ನಿನಗೂ ಅಲ್ಲೇ ಇಡಲೇನೋ ಬುತ್ತೀನ ? ನೀನು ಅಲ್ಲೇ ಉಮ್ತೀಯಾ? ಕೇಳಿದರು ತಿಮ್ಮಕ್ಕ

" ಬ್ಯಾಡಕ್ಕೋ, ನಾನ್ ಮನೆಗೆ ಬತ್ತೀನಿ ಬಿಳಿಮಾವನಿಗೆ ಮಾತ್ರ ಇಕ್ಕು ಸಾಕು" ಹೇಳಿದ ಸತೀಶ.


ಸಾಮಾನ್ಯವಾಗಿ ಊರ ಬಾಗಿಲಿನಿಂದ ಹೊಲಕ್ಕೆ ಹೋಗುವ ಮಾರ್ಗ ,ಆದರೆ ಸತೀಶ ಬೇಕಂತಲೆ ಬುತ್ತಿ ಇಟ್ಟುಕೊಂಡು ಸೈಕಲ್ಲನ್ನು ಮಾರಮ್ಮನ ಗುಡಿಯ ಕಡೆ ತಿರುಗಿಸಿ ಹೊರಟ .

ಇದನ್ನು ತಿಮ್ಮಕ್ಕ ಗಮನಿಸಿದರೂ ಎನೋ ಹುಡುಗಾಟ ಇರಲಿ ಬಿಡು ಒಟ್ಟಿನಲ್ಲಿ ನಾನು ಇಂದು ಎರಡು ಕಿಲೋಮೀಟರ್ ನಡೆದು ಬುತ್ತಿ ಕೊಡುವುದು ತಪ್ಪಿತಲ್ಲ ಎಂದು ಮನೆಯ ಒಳಗೆ ನಡೆದರು.


ಕಾರಣವಿಷ್ಟೇ ಸುಜಾತ ಇಂದಾದರೂ ಮನೆಗೆ ಬಂದಿರಬಹುದೆ ? ಇಂದಾದರೂ ನಾನು ಅವಳ ನೋಡಬೇಕು ಎಂಬ ಹಂಬಲ, ಕಡೆ ಪಕ್ಷ ಅವಳು ಇಲ್ಲದಿದ್ದರೂ  ಅವಳಿದ್ದ  ಮನೆಯನ್ನು ದಿನಕ್ಕೆ ಒಮ್ಮೆಯಾದರೂ ನೋಡಿದರೆ ಏನೋ ಮನಸಿಗೆ ನೆಮ್ಮದಿ,ಎಂದು ತಿಳಿದಿದ್ದ ಸತೀಶ.


" ಏ ಎದ್ದಾಳಪ್ಪ ಯಾರು ನೀನು? ಯಾವೂರು? ಯಾಕೆ ಇಲ್ಲಿ ಮಲಗಿದ್ದಿಯಾ?"


ಕಪ್ಪನೆಯ ಡಾಂಬರ್ ಕಾದು ರಸ್ತೆಯಿಂದ ಕೆಳಗಿಳಿಯುತ್ತಿತ್ತು,ಸ್ವಲ್ಪ ದೂರ ನೋಡಿದರೆ ಕಪ್ಪನೆಯ ರಸ್ತೆಯ ಮೇಲೆ ನೀರು ಕಂಡಂತಾಗುತ್ತಿತ್ತು, ಬಿಸಿಲಿನ ಜಳಕ್ಕೆ ರಸ್ತೆಯ ಪಕ್ಕದ ಮಾಗಿ ಮಾಡಿದ ಕೆಂಪುಮಣ್ಣು ಬಣ್ಣ ಕಳೆದುಕೊಂಡಿತ್ತು


ಮುಖದ ಮೇಲೆ ಹಾಕಿಕೊಂಡ ತೂತುಗಳಿರುವ ಬಣ್ಣ ಕಳೆದುಕೊಂಡ ಲುಂಗಿಯನ್ನು ಸರಿಸಿ ಮುಲುಕುತ್ತಾ, ಮಧ್ಯಾಹ್ನದ ಬಿರುಬಿಸಿಲಿನಲ್ಲೂ  ನಡುಗುತ್ತಾ  ಕಷ್ಟ ಪಟ್ಟು ಮೇಲೇಳಲು ಪ್ರಯತ್ನ ಪಟ್ಟರು ಆ ವ್ಯಕ್ತಿ,

ವಯಸ್ಸು ನಲವತ್ತರಿಂದ ಐವತ್ತು ಇರಬಹುದು, ಗಡ್ಡ ಮೀಸೆಗಳು ಉದ್ದವಾಗಿ ಬೆಳೆದಿದ್ದರಿಂದ ಮುಖದ ಆಕಾರ ಅಸ್ಪಷ್ಟ, ಕೆದರಿರುವ ಬಿಳಿಮಿಶ್ರಿತ  ಕಪ್ಪು ಕೂದಲನ್ನು ನೋಡಿದರೆ  ಎಷ್ಟೋ ದಿನಗಳಿಂದ ಸ್ನಾನ ಮಾಡಿಲ್ಲ ಎಂಬುದು ಗೊತ್ತಾಗುತ್ತಿತ್ತು.


ಚಿಗುರು ಮೀಸೆಯ, ಬೆಳ್ಳನೆಯ ಸುಂದರ ಮೈಕಟ್ಟಿನ, ಸಾಧಾರಣ ಆಳ್ತನದ ಸತೀಶನ ನೋಡಿ,

" ನಾನು ಮಾರಣ್ಣ ಕಣಪ್ಪ ನಮ್ಮ ಊರು ಬಳ್ಳಾರಿ ಹತ್ರ ತೋರಣಗಲ್ಲು ಕಣಪ್ಪ ."ಎಂದು ನಡುಗುತ್ತ ಉತ್ತರಿಸಿದ ಮಾರಪ್ಪ.

" ಅದು ಸರಿ ಈ ಬಿಸ್ಲಾಗೆ ಈ ಜಾಲಿ ಮರದ ಕೆಳಗೆ ಯಾಕೆ ಮಲ್ಗಿದಿಯಾ?

" ಅಯ್ಯೋ ನಮ್ಮಂತವ್ರಿಗೆ ಜಾಲಿ ಮರ ಅಲ್ದೆ ಇನ್ಯಾವ್ ಬಂಗ್ಲೆ ಸಿಗುತ್ತಪ್ಪ ಮಲ್ಗಾಕೆ" 

ನೋವಿನಿಂದ ಮುಲುಕುತ್ತಾ , ಜೀವನದ ಮೇಲೆ , ಪ್ರಪಂಚದ ಮೇಲಿನ ಜಿಗುಪ್ಸೆಯಿಂದ ನುಡಿದ ಮಾರಪ್ಪ"

" ಅಣ್ಣಾ ಬೆಳಿಗ್ಗೆ ಊಟ ಗೀಟ ಮಾಡಿದ್ಯಾ ಇಲ್ವೊ?" ಕೇಳಿದ ಸತೀಶ

" ಅಯ್ಯೋ ನಿನ್ನೆ ಸಂಜೆ ಹಿರಿಯೂರಿನ ಟಿ ಬಿ ಸರ್ಕಲ್ ಹತ್ರ ಯಾರೋ ಪುಣ್ಯಾತ್ಮ ಒಂದ್ ಪ್ಲೇಟ್ ಇಡ್ಲಿ ಕೊಡಿಸಿದ್ದ ಕಣಪ್ಪ, ಅದನ್ನು ತಿಂದದ್ದೆ ಕೊನೆ ,ಹರ್ತಿಕೋಟೆ ಹತ್ತಿರ ಜಗ್ಗ ನಲ್ಲಿಲಿ ಈ ನೀರು ತುಂಬಿಸಿಕೊಂಡು ಕುಡಿತಿದಿನಿ " ಎಂದು 

ಅರ್ಧದಷ್ಟು ತುಂಬಿದ   ನೀರಿನ ಬಾಟಲ್ ತೋರಿಸಿದರು ಮಾರಣ್ಣ.


"ಇಗ ಕೈ ತೊಳ್ಕ ಒಂದ್ ಅರ್ಧ ಮುದ್ದೆ ಸಾರು ಐತೆ ಉಣ್ಣು"  ಅಂದ ಸತೀಶ


" ಸತೀಶನ ಮಾವ ಬಿಳಿಯಪ್ಪ ಹೊಲದಲ್ಲಿ ನೇಗಿಲು ಹೊಡೆಯಲು ಬಂದಿದ್ದರು ಅವರಿಗೆ ಬುತ್ತಿ ತಂದಿದ್ದ ಸತೀಶ.ಹೊಲದಲ್ಲಿ ಉಳುವ ಕಷ್ಟಕರ ಕೆಲಸ ಮಾಡುವ ಬಿಳಿಯಪ್ಪ ಯಾವಾಗಲೂ ಮೂರು ಮುದ್ದೆ ಉಣ್ಣುತ್ತಿದ್ದರು, ಯಾಕೋ ಅಂದು ಎರಡೂವರೆ ಮುದ್ದೆ ಉಂಡು  

"ಸತೀಶ ನನಗೆ ಸಾಕು ನೀನೆ ಉಣ್ಣು" ಅಂದರಂತೆ 

"ಬ್ಯಾಡ ಮಾವ ನಾನು ಮನೇಲೆ ಉಣ್ತೀನಿ" ಎಂದು ಬುತ್ತಿಯ ವೈರ್ ಬ್ಯಾಗ್ ನಲ್ಲಿ ಇಟ್ಟುಕೊಂಡು ದಾರಿಯಲ್ಲಿ ಸೈಕಲ್‌ ಮೇಲೆ ಬರುವಾಗ ಮಾರಪ್ಪನ ಕಂಡ.

 

ಕಷ್ಟ ಪಟ್ಟು ಎದ್ದು ತನ್ನ ಕೈಚೀಲದಲ್ಲಿದ್ದ ಅಲ್ಯೂಮಿನಿಯಂ ತಟ್ಟೆ ತೆಗೆದು ಅದಕ್ಕೆ ಸ್ವಲ್ಪ ನೀರು ಹಾಕಿ ತೊಳೆವ ಶಾಸ್ತ್ರ ಮಾಡಿ  ಮುದ್ದೆ ಸಾರು ಹಾಕಿಸಿಕೊಂಡು ಒಂದೇ ಸಮನೆ ಗಬಗಬನೆ ತಿನ್ನಲು ಶುರುಮಾಡಿದರು ಮಾರಣ್ಣ.

ಇದನ್ನು ನೋಡಿದ ಸತೀಶನಿಗೆ ಮೊದಲ ಬಾರಿ ಹಸಿವನ್ನು  ನೋಡಿದಂತಾಯಿತು. ಅವನ ಮಾವ ಮುಕುಂದಯ್ಯನವರು ಸತೀಶ ಒಮ್ಮೆ ಕಲ್ಲಿನ ಮುಸುರೆ ಬಾನಿಗೆ ತಟ್ಟೆಯಲ್ಲಿ ಹೆಚ್ಚಾಗಿ ಬಿಟ್ಟ ಮುದ್ದೆ ಬಿಸಾಕುವಾಗ ಹೇಳಿದ ಮಾತು ನೆನಪಾಯಿತು. " ಎಷ್ಟೋ ಜನ ಈ ಪ್ರಪಂಚದಲ್ಲಿ ಒಂದೊತ್ತು ಊಟ ಇಲ್ದೆ ಮಲಗ್ತಾರೆ ಇಂಗೆ ಉಣ್ಣೋ ಅನ್ನ ಪೋಲು ಮಾಡಬೇಡ"


"ಅದ್ಸರಿ ಮಾರಣ್ಣ ಇಂಗ್ಯಾಕೆ ಇಲ್ಲಿ ಮಲ್ಕಂಡಿದಿರಾ? ಇದು ಬಳ್ಳಾರಿ ರೋಡ್ ಅಲ್ವ ಯಾವುದಾದರೂ ಬಸ್ ಹತ್ತಿ ನಿಮ್ಮೂರ್ಗೆ ಹೋಗಾದಲ್ವ?

" ಅಯ್ಯೋ ,ಅಪ್ಪ ಬಸ್ ಗೆ ಹೋಗಾಕೆ ನನಗೂ ಆಸೆ , ಬಸ್ ಚಾರ್ಜು ಬೇಕಲ್ಲ? , "

"ಈಗ ನೀವು ಎಲ್ಲಿಂದ ಬಂದ್ರಿ?"

" ಬೆಂಗಳೂರಿನಿಂದ! "

ಕೇಳುತ್ತಲೆ ದಂಗಾದ ಸತೀಶ , ಸರಿ ಸುಮಾರು ನೂರಾ ಎಂಭತ್ತು ಕಿಲೋಮೀಟರ್ !.

" ಅಷ್ಟು ದೂರದಿಂದ ನಡೆದೇ ಬಂದಿರಾ?"

ಹೌದು ಎಂಬಂತೆ ತಲೆ ಆಡಿಸಿದರು ಮಾರಣ್ಣ.

"ಅದ್ಯಾಕೆ ಹೀಗೆ ನಡದೇ ಬಂದಿರಿ ದುಡ್ ಇರಲಿಲ್ಲವೆ?

" ಅಯ್ಯೋ ಅದೊಂದು ದೊಡ್ಡ ಕಥೆ ಕಣಪ್ಪ , ನಮ್ದು ಊರಾಗೆ ಜಮೀನೆಲ್ಲ ಇತ್ತು ,ಮಳೆ ಬೆಳೆ ಚೆನ್ನಾಗೆ ಆಗ್ತಿತ್ತು, ನಾನು ಬೇಸಾಯ ಮಾಡ್ಕೊಂಡು ಹೆಂಡ್ತಿ ,ಒಬ್ಬಳು ಮಗಳು, ಸುಖವಾಗಿ ಇದ್ವಿ.  ನಮ್ಮೂರ್ನಾಗೆ ಮೂರ್ನಾಲ್ಕು ಜನ ಬೆಂಗಳೂರಿನಲ್ಲಿ ಕೆಲ್ಸ ಮಾಡಿ ಚೆನ್ನಾಗಿ ದುಡಿದು ತಮ್ಮ ಮನೆಯನ್ನು ರಿಪೇರಿ ಮಾಡ್ಸಿ , ಸ್ವಲ್ಪ ದುಡ್ ಅವರ ಅಪ್ಪ ಅಮ್ಮನ ಕೈಗೆ ಕೊಟ್ಟು ಹೋದರು, ಅದನ್ನು ನೋಡಿದ ನನ್ ಹೆಂಡತಿ ,ನೀನೂ  ಬೆಂಗಳೂರಿಗೆ ಹೋಗಿ ದುಡಿ ,ನನಗೆ ಬಂಗಾರದ ಒಡವೆ  ಮಾಡಿಸು, ಬೆಂಗಳೂರಿನಲ್ಲಿ ಚೆನ್ನಾಗಿ ದುಡಿದರೆ  ನಮ್ಮ ಮಗಳ  ಓದಿಗೆ ಅನುಕೂಲ ಆಗುತ್ತದೆ ಅಂದಳು. ನಾನು ಬೇಡ, ಇಲ್ಲೇ ನಮ್ಮ ಜಮೀನಿನ ಕೆಲಸ ಮಾಡುವೆ ದೇವರು ನಮಗೆ ಕೊಟ್ಟಿರೋದೆ ಸಾಕು ಎಂದರೂ ಕೇಳಲಿಲ್ಲ.


ಅಂತೂ ಬೆಂಗಳೂರು ಸೇರಿ ವಾಚ್ಮೆನ್ ಕೆಲಸಕ್ಕೆ ಸೇರಿ ಆರು ತಿಂಗಳಲ್ಲಿ ಎರಡು ಬಾರಿ ಊರಿಗೆ ಹೋಗಿ ಹಣ ಕೊಟ್ಟು ಬಂದಿದ್ದೆ ,ಹೆಂಡತಿಯೇನೋ ಸಂತಸ ಪಟ್ಟಳು ,ಮಗಳು ಮಾತ್ರ ಯಾಕೋ   "ಅಪ್ಪ ನೀನು ಬೆಂಗಳೂರಿಗೆ ಹೋಗ ಬೇಡ ಇಲ್ಲೇ ಇರು ಎಂದು ಕಣ್ಣೀರಾಕಿದ್ದಳು".


"ಅಯ್ತು ಮಗಳೆ   ಬೇಗ ಬರುವೆ "ಎಂದು ಪುನಃ ಬೆಂಗಳೂರಿಗೆ ಬಂದೆ .ನನ್ ಕೆಲಸ ನೋಡಿದ ಸಾವ್ಕಾರರು ನನಗೆ ಸಂಬಳ ಜಾಸ್ತಿ ಮಾಡಿ ,ಮೊದಲು ಕೆಲಸ ಮಾಡುವ ವಾಚ್ಮನ್ ಕೆಲಸದಿಂದ ತೆಗೆದರು.ಇದರಿಂದ ಸಿಟ್ಟಾದ ಆ ವಾಚ್ಮನ್ ನಾನಿಲ್ಲದಾಗ ನಮ್ ಕಂಪನಿಯಲ್ಲಿ ಕಳ್ಳತನ ಮಾಡಿ ಅದನ್ನು ನನ್ನ ಮೇಲೆ ಹೊರಿಸಿದ, ಸಾವ್ಕಾರರು  ನನ್ನನ್ನು ಕೆಲಸದಿಂದ ತೆಗೆದರು . 


ಬೇರೆ ಕೆಲಸ ನೋಡುತ್ತಾ ಅಲೆದೆ ಕೆಲಸ ಸಿಗಲಿಲ್ಲ ,ಕೈಯಲ್ಲಿದ್ದ ಕಾಸು ಖಾಲಿಯಾಯಿತು .ಊರಿಗೆ ಹೋಗೋಣ ಎಂದು ಮೆಜೆಸ್ಟಿಕ್ ಗೆ ಬಂದು ಒಂದಿಬ್ಬರನ್ನು ಬಸ್ ಚಾರ್ಜ್ ಗೆ ಹಣ ಕೇಳಿದೆ ಅವರು ನನಗೆ ಅವಮಾನ ಮಾಡಿದರು ,ಇದರಿಂದ ಬೇಸತ್ತು ಅಲ್ಲಿಂದಲೆ ನಡೆದು ನಮ್ಮೂರು ಸೇರಲು ತೀರ್ಮಾನ ಮಾಡಿ ,ನಡೆಯುತ್ತಾ ಯಾರಾದರೂ ಏನಾದರೂ ಕೊಟ್ಟರೆ ತಿನ್ನುವೆ ,ಇಲ್ಲ ಅಂದರೆ ಇದೋ" ಎಂದು ನೀರಿನ ಬಾಟಲ್ ತೋರಿಸಿದರು ಮಾರಣ್ಣ

ಅವರ ಕಥೆ ಕೇಳಿ ಸತೀಶನಿಗೆ ಬಹಳ ಬೇಸರವಾಯಿತು.


" ಅಣ್ಣ ನಾನು ಸೈಕಲ್‌ ತಂದಿರುವೆ ,ನಿಮ್ಮನ್ನು ಯರಬಳ್ಳಿ ವರೆಗೆ ಸೈಕಲ್‌ ನಲ್ಲಿ ಕರೆದುಕೊಂಡು ಹೋಗುವೆ ಬನ್ನಿ " ಎಂದ ಸತೀಶ 

 ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮತ್ತು   ಸಹಾಯ ಮಾಡುವ ಮಾಡುವ ಗುಣ ತಾಯಿ ಭೂದೇವಮ್ಮನಿಂದ ರಕ್ತಗತವಾಗಿ ಬಂದಂತಿತ್ತು ಸತೀಶನಿಗೆ.


ನಿಂತು‌ಕೊಳ್ಳಲು ಪ್ರಯತ್ನ ಪಟ್ಟ ಮಾರಣ್ಣ ನೋವಿಂದ ಬಳಲಿ ಬಿದ್ದರು ಅವರ ಎತ್ತಲು ಹೋದ ಸತೀಶ ನೋಡಿದ್ದು ಭಯಾನಕ, 

ತನಗರಿವಿಲ್ಲದೆ ಕಣ್ಣಲ್ಲಿ ನೀರು ಹರಿಯಲಾರಂಬಿಸಿದವು.

ಅಂಗಾಲುಗಳಲ್ಲಿ ರಕ್ತ ಜಿನುಗುತಿದೆ ,ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದೆ ,ಅಲ್ಲಲ್ಲಿ ಬೊಬ್ಬೆ ಬಂದಿವೆ ,ಕೆಲವೆಡೆ ಬಟ್ಟೆ ಕಟ್ಟಲಾಗಿದೆ.

" ಅಲ್ಲಾ ಅಣ್ಣ ಇಂತಹ ನೋವು ಎಂಗೆ ತಡ್ಕೊಂಡಿದಿರಿ "ಎಂದು ಬುತ್ತಿ ಬಟ್ಟೆ ಹರಿದು ಎರಡೂ ಕಾಲಿಗೆ ಕಟ್ಟಿ ಸೈಕಲ್ ಮೇಲೆ ಕೂರಿಸಿಕೊಂಡು ಯರಬಳ್ಳಿಯ ಮಾರಮ್ಮನ ಗುಡಿಯ ಬಳಿ ನಿಲ್ಲಿಸಿದ .


"ಯಾರಪ್ಪ ಸತೀಶ ಇವರು "

ಕೇಳಿದರು ಊರ ಪ್ರಮುಖ ಕಾಟಯ್ಯ

ಮಾರಣ್ಣನ ಕಥೆ ಕೇಳಿ ಆಗಲೆ ಯರಬಳ್ಳಿಯ ಆಸ್ಪತ್ರೆಗೆ ಸೈಕಲ್‌ ಮೇಲೆ ಕರೆದುಕೊಂಡು ಹೋಗಿ ಬ್ಯಾಂಡೇಜ್ ಹಾಕಿಸಿ ಇಂಜೆಕ್ಷನ್ ಕೊಡಿಸಿ , ಬಸ್ಚಾರ್ಜ್ ಗೆ ಸ್ವಲ್ಪ ಹಣ ಕೊಟ್ಟು , ಸಂಜೆಯ ಐದು ಗಂಟೆಯ  ನೀಲಕಂಠೇಶ್ವರ ಬಸ್ ಗೆ ಹತ್ತಿಸಿ 

" ಕಂಡಕ್ಟರ್ ಇವರನ್ನು ಬಳ್ಳಾರಿ ಗೆ ಇಳಿಸಿ"ಎಂದರು ಕಾಟಯ್ಯ.

ಸತೀಶನನ್ನು ಒಮ್ಮೆ, ಕಾಟಯ್ಯ ನನ್ನು ಒಮ್ಮೆ ನೋಡುತ್ತಾ ಗಳಗಳನೆ ಅಳಲಾರಂಬಿಸಿದರು ಮಾರಣ್ಣ.


ನೀಲಕಂಠೇಶ್ವರ ಬಸ್ ಹೊಗೆ ಉಗುಳುತ್ತಾ 

ಆಸ್ಪತ್ರೆಯ ದಿನ್ನೆ ಹತ್ತಿ ಚಳ್ಳಕೆರೆ ಕಡೆಗೆ ಚಲಿಸಿತು, ದೂರ ಹೋಗುವವರೆಗೂ ಕಿಟಕಿಯಾಚೆ ಮಾರಣ್ಣನ ಅಲ್ಲಾಡುವ ಕೈ ಕಾಣುತ್ತಿತು.....


"  ಮದ್ಯಾನ  ಬುತ್ತಿ ಕೊಡಾಕೋದಾನು ಈಗ ಬಂದೇನಪ್ಪ ಸಾವ್ಕಾರ ತಡಿ ಮಾವ ಬರ್ಲಿ ಹೇಳ್ತಿನಿ ,ಸೈಕಲ್‌ ಸಿಕ್ಕರೆ ಸಾಕು ಅದೇನ್ ಸುತ್ತಾಕೆ ಹೋಗ್ತಿಯೋ ಭಗವಂತನೆ ಬಲ್ಲ " 

ಸಂಜೆ ಐದೂ ಕಾಲು ಹೊತ್ತಿಗೆ ಮನೆಗೆ ಬಂದ ಸತೀಶನನ್ನು ಬೈಯಲು ಶುರು ಮಾಡಿದರು .

ಇದರ ಬಗ್ಗೆ ಪ್ರತಿಕ್ರಿಯೆ ನೀಡದೆ ಸಗಣಿ ತಟ್ಟಿ ತೆಗೆದುಕೊಂಡು ಸಗಣಿ ಬಾಸಾಕಲು ದನದ ಅಕ್ಕೆಗೆ ಹೋಗಿ ಅನ್ಯಮನಸ್ಕನಾಗಿ , ನನದೇ ಮಹಾಸಮಸ್ಯೆ ಎಂದು ಕೊಂಡಿದ್ದೆ ,ಇಂದು ಮಾರಣ್ಣನ ನೋಡಿ ನನ್ ಸಮಸ್ಯೆ ಏನೂ ಅಲ್ಲ ಅಲ್ಲವೆ? ದೇವರೆ ನನ್ನ ಸುಜಾತಳಿಗೆ ಇಂತಹ ಸಮಸ್ಯೆ ಬರದಿರಲಿ. ಮತ್ತೆ ಮನಸು ಅಲ್ಲಿಗೆ ಹೋಯಿತು.ಮಾರಣ್ಣ ಸುಖಿ ರೈತ ,ಯಾರದೊ ಆಸೆಗೆ ಬಲಿಯಾಗಿ, ಆಕರ್ಷಣೆ ಯಿಂದ ನಗರಕ್ಕೆ ಹೋಗಿ ಅನ್ನ ಕೊಡುವ ಕೈ ಅನ್ನ ಬೇಡುವ ಹೀನ ಸ್ಥಿತಿಯನ್ನು ಕಂಡು ಯಾಕೋ ಬೇಸರವಾಗುತ್ತದೆ, ಅಷ್ಟಕ್ಕೂ ಎಲ್ಲರೂ ಒದಿ ಕೆಲಸಕ್ಕೆ ಪಟ್ಟಣಕ್ಕೆ ಹೋದರೆ ಹಳ್ಳಿಯಲ್ಲಿ ದುಡಿಯುವರು ಯಾರು? ದೇಶಕ್ಕೆ ಅನ್ನ ನೀಡುವವರಾರು? ದೇಶಕ್ಕೆ ಬೆನ್ನೆಲುಬಾಗುವವರು ಯಾರು? ಕೃಷಿ ಮಾಡಿ ಗೌರವಯುತ ಜೀವನ ಸಾಗಿಸಲು ಸಾದ್ಯವಿಲ್ಲವೆ? 

ಮೊದಲ ಬಾರಿಗೆ ಸುಜಾತಳ ನೆನಪಿನ ಇತರ  ಜೀವನದಲ್ಲಿನ ಸಮಸ್ಯೆಗಳು ಮತ್ತು ರೈತರ ಬಗ್ಗೆ ಯೋಚಿಸಲಾರಂಬಿಸಿದ ಸತೀಶ .

ಒಂದು ರೀತಿಯಲ್ಲಿ ಮಾರಣ್ಣನ ಭೇಟಿ ಮಾಡಿದ ಮೇಲೆ ಸತೀಶನಿಗೆ ಬುದ್ದನಿಗೆ ಜ್ಞಾನೋದಯ ಆದಂತೆ ಅಲ್ಪಮಟ್ಟದ ಬದಲಾವಣೆಗಳನ್ನು ತಂದದ್ದು ಸುಳ್ಳಲ್ಲ

ಅದರ ಮುಂದಿನ ಸೂಚನೆ ಎಂಬಂತೆ ಮಂಗಳವಾರ ಬಿಳಿಯಪ್ಪ ಮಾವನ ಬದಲಿಗೆ ಇವನೆ ನೇಗಿಲು ಹೊಡೆಯಲು ಶುರು ಮಾಡಿದ ,ಬಿಳಿಯಪ್ಪ ‌ಇದೇ ಚಾನ್ಸು ಎಂದು ಶ್ರೀರಾಮಪ್ಪ ನಡೆಸುವ ಇಸ್ಪೀಟು ಕ್ಲಬ್ಗೆ ಹೋಗಿ ರಮ್ಮಿ ಹಾಡಲು ಕುಳಿತ...



ಮುಂದುವರೆಯುವುದು.....



ಸಿ ಜಿ ವೆಂಕಟೇಶ್ವರ







No comments: