12 March 2022

ಶ್ರೀದೇವಿ ಮಹಾತ್ಮೆ ನಾಟಕ ಪ್ರಸಂಗ .ಉದಕದೊಳಗಿನ ಕಿಚ್ಚು.ಭಾಗ ೨೦



ನಾಟಕ ಪ್ರಸಂಗ ದೇವಿ ಮಹಾತ್ಮೆ


" ಓಂ ನಮೋ ಭಾವಾನಿ ತಾಯೆ....ಒಂ ನಮೋ ಶಿವಶಕ್ತಿ ಕಾಯೆ....... ಓಂ ನಮೋ ಭವಭಕ್ತಿ ಕಾಯೆ........ ತಮೋ ನಿವಾರಿಣಿ ಶಕ್ತಿ ಶರಣೆ ಜಗಪಾಲಿನಿ...... ಒಂ ನಮೋ ಅಸುರಕುಲನಾಷಿನಿ ...... ಒಂ ನಮೋ ನಮೋ ಸಹಕಾರಣಿ........"
ಹಾರ್ಮೋನಿಯಂ ಶೃತಿಗೊಳಿಸುತ್ತಾ  ಆಲೂರು ಬಸವಾಚಾರ್ ತಲೆ ಅಲ್ಲಾಡಿಸುತ್ತಾ ಎಡಗೈ ಕಿರುಬೆರಳು ಇಲ್ಲದಿದ್ದರೂ ಶುದ್ದ ಶೃತಿಯಲ್ಲಿ ಸಂಗೀತ ಬಾರಿಸುತ್ತಾ ರಾಗವಾಗಿ, ಭಕ್ತಿಪೂರಕವಾಗಿ ಹಾಡುತ್ತಾ ,ಕೆಲವೊಮ್ಮೆ ನಿಂತಿರುವವರ ನೋಡಿ ,ಕಣ್ಣುಗಳಲ್ಲೇ ಏನೋ ಹೇಳುತ್ತಾ, ಕೆಂಪನೆಯ ಸಣ್ಣ ಟವಲ್ ನಿಂದ ಆಗಾಗ್ಗೆ ಬರುವ ಬೆವರನ್ನು ಒರೆಸುತ್ತಾ, ಲೆಗ್ ಹಾರ್ಮೋನಿಯಂ ನ್ನು ಎರಡೂ ಕಾಲಗಳಲ್ಲಿ ತುಳಿಯುತ್ತಾ, ಹಾಡನ್ನು ಮುಂದುವರೆಸಿ , ಕೈಯ ಒಂಭತ್ತೂ ಬೆರಳುಗಳನ್ನು ಬಿಳಿ,ಕಪ್ಪು ಮನೆಗಳ ಮೇಲೆ ಒಮ್ಮೆಲೆ ಇಟ್ಟು ಪಿಂ........ ಎನಿಸಿ ಲೆಗ್ ಹಾರ್ಮೋನಿಯಂ ಅನ್ನು ಒತ್ತುವುದನ್ನು ನಿಲ್ಲಿಸಿ ,
" ನೋಡ್ರಪ ಇದು ಅಮ್ಮನ ಪ್ರಾರ್ಥನೆ ,ಇದನ್ನು ಪ್ರತಿ ದಿನ ದೇವಿ ಪೋಟೋಗೆ ಭಕ್ತಿಯಿಂದ ಪೂಜೆ ಮಾಡಿ ಎಲ್ಲ ಪಾತ್ರಧಾರಿಗಳು ಸಾಲಾಗಿ ನಿಂತು ಭಕ್ತಿಯಿಂದ ಹೇಳ್ಬೇಕು ,ಕೊನೆಗೆ ನಿಮ್ ಸಂಘ ಅದ್ಯಾವದ್ ಅದು. ಆ.... ಅದೇ ಅಂಬಿಕಾ ಕಲಾ ಸಂಘಕ್ಕೆ ಅಂತ. ಒಬ್ಬರು ಅನ್ನಬೇಕು ಉಳಿದವರು. ಜೈ ಅನ್ನಬೇಕು.ಅರ್ಥ ಆಯ್ತಾ"  ಎಂದು ಕೆಂಪನೆಯ ಟವಲ್ ನಿಂದ ಹಣೆಯ ಮೇಲೆ ,ಕತ್ತಿನ ಮೇಲೆ ಕರೆಸಿಕೊಳ್ಳುತ್ತಾ ದೀರ್ಘವಾದ ವಿವರಣೆಯನ್ನು ಕೊಟ್ಟರು ನಾಟಕದ ಮಾಸ್ಟರ್ ಆಲೂರು ಬಸವಾಚಾರ್ .
ವಯಸ್ಸಿನಲ್ಲಿ ಬಸವಾಚಾರ್ ಅವರಿಗಿಂತ ದೊಡ್ಡವರು ಮೂರ್ನಾಲ್ಕು ಜನ ಉಳಿದವರು ಅವರಿಗಿಂತ ಚಿಕ್ಕವರು ಆದರೂ ಶಾಲೆಯಲ್ಲಿ ಶಿಕ್ಷಕರ ಮುಂದೆ ನಿಲ್ಲುವ ವಿಧೇಯ ವಿದ್ಯಾರ್ಥಿಗಳ ತರ ಕೈಕಟ್ಟಿ ನಿಂತಿದ್ದರು ಶ್ರೀ ದೇವಿ ಮಹಾತ್ಮೆ ನಾಟಕದ ಭಾವಿ ಪಾತ್ರಧಾರಿಗಳು  .

ಪ್ರತಿ ವರ್ಷವೂ ಜಾತ್ರೆಗೆ ಅಥವಾ ಬೇಸಿಗೆ ಕಾಲದಲ್ಲಿ ಕನಿಷ್ಟ ಮೂರ್ನಾಲ್ಕು ನಾಟಕಗಳನ್ನು ಆಡುವ ಯರಬಳ್ಳಿಯ ಗ್ರಾಮಸ್ಥರು  "ಸರ್ಪಸಾಮ್ರಾಜ್ಯ" ನಾಟಕವು ಬಹಳ ಸಲ ಪ್ರದರ್ಶನ  ಮಾಡಿದ್ದರು, "ಮೂರುವರೆ ವಜ್ರ "ಎಂಬ ದೊಂಬಿ ನಾಟಕ ಆಗೊಮ್ಮೆ ಈಗೊಮ್ಮೆ ಪ್ರದರ್ಶನ ಮಾಡಿದ್ದರು, ಕುರುಕ್ಷೇತ್ರ ನಾಟಕ ಆಡಲು ಬಹುಬಾರಿ ತಯಾರಿ ಮಾಡಿಕೊಂಡರೂ ಯಾಕೋ ಪ್ರದರ್ಶನ ಭಾಗ್ಯ ಕಂಡಿರಲಿಲ್ಲ.

ಹದಿನೈದು ದಿನಗಳ ‌ಹಿಂದೆ ರಂಗೇನಹಳ್ಳಿಯಲ್ಲಿ " ಶಾಂಭವಿ ಮಹಾತ್ಮೆ" ನಾಟಕ ನೋಡಲು ಹೋದ ಕೆಲ ಯುವಕರು ನಮ್ಮ ಊರಲ್ಲಿ ದೇವಿ ಮಹಾತ್ಮೆ ನಾಟಕ ಆಡಲು ತೀರ್ಮಾನ ಮಾಡಿ ಒಂದು ರಾತ್ರಿ ರಂಗಪ್ಪನ ಗುಡಿಯಲ್ಲಿ ಎಲ್ಲರೂ ಕಲೆತು ಈ ಬಗ್ಗೆ ಮಾತನಾಡಲು ಶುರು ಮಾಡಿದರು.
" ಶುಂಭ ನಿಶುಂಭರ ದರ್ಭಾರ್ ಪ್ಲಾಟ್ ಬಾಳ ಸೆಂದಾಗೈತೆ ದೇವಿ ಕಥೆ ಈ ಸಲ ನಮ್ಮೂರಾಗೆ ಆಡಾನ " ಮಹಲಿಂಗಪ್ಪ ನುಡಿದರು.
" ಏ ಆಲೂರು ಬಸವಾಚಾರ್ ಅವರೆ ಬರ್ದು ಅವರೇ ನಿರ್ದೇಶನ ಮಾಡುವ "ಶ್ರೀದೇವಿ ಮಹಾತ್ಮೆ" ಅರ್ಥಾತ್ ರಕ್ತಬಿಜಾಸುರ ವಧೆ ನಾಟಕ ಹೋದ ವಾರ ನಾನು ಕಳವಿಭಾಗಿನಲ್ಲಿ ನೋಡಿದೆ ಸಕ್ಕತ್ ಆಗೈತೆ ,ಹಾಡುಗಳು ಡೈಲಾಗ್ ಒಂದಕ್ಕಿಂತ ಒಂದು ಸೂಪರ್ ಆಗ್ಯಾದೆವೆ" ಪೂಜಾರ್ ಮಂಜ ಹೇಳಿದ .
ಈಗೆ ಒಬ್ಬೊಬ್ಬರು ಒಂದೊಂದು ಪ್ಲಾಟ್ ಬಗ್ಗೆ ಒಲವು ತೋರಿಸುತ್ತಾ ಅದೇ ನಾಟಕ ಬೇಕು ಎಂದು ಸಮರ್ಥನೆ ಮಾಡಲು ಇಳಿದರು .
" ಆತು ಈಗ ಈ ವರ್ಸ ದೇವಿ ನಾಟ್ಕ ಆಡೋದು ಪಕ್ಕಾ ಅಂತ ಆತು ಅಲ್ವೇನ್ರಪ್ಪ ,ಆದರೆ ಪ್ಲಾಟ್ ಯಾವ್ದು ಅನ್ನೋದು ತೀರ್ಮಾನ ಆಗಬೇಕು ,ಒಂದ್ ಕೆಲ್ಸ ಮಾಡಿ ,ನಾಳೆ ಇಷ್ಟೊತ್ತಿಗೆ ಶಾಂಭವಿ ಮಹಾತ್ಮೆ ,ಮತ್ತು ದೇವಿ ಮಹಾತ್ಮೆ ಎರಡೂ ಪ್ಲಾಟ್ ತಗಂಬರಿ ಆಮೇಲೆ ತೀರ್ಮಾನ ಮಾಡಾನ " ತೀರ್ಮಾನ ಹೇಳಿದರು ಕೆ ಜಿ ಕಾಟಯ್ಯ.
ಎಲ್ಲರೂ ಕಾರ ಮಂಡಕ್ಕಿ ತಿಂದು ಮನೆಯ ಕಡೆ ಹೊರಟರು.

ಆಲೂರು ಬಸವಾಚಾರ್ ರವರ ಶ್ರೀದೇವಿ ಮಹಾತ್ಮೆ ನಾಟಕವನ್ನೇ ಆಡಲು‌ ತೀರ್ಮಾನ ಮಾಡಿ ಅವರೇ ಪಾತ್ರಗಳನ್ನು ಹಂಚಿಕೊಂಡು ,ಎಷ್ಟು ದುಡ್ಡು ಖರ್ಚಾಗುತ್ತದೆ? ಯಾವ ಪಾತ್ರಕ್ಕೆ ಎಷ್ಟು ದುಡ್ಡು ?ಎಲ್ಲಾ ತೀರ್ಮಾನ ಮಾಡಿ ಕೆ ಜಿ ಕಾಟಯ್ಯ ರವರಿಗೆ ಇಡೀ ನಾಟಕದ ಜವಾಬ್ದಾರಿ ನೀಡಲಾಯಿತು.

" ಸ್ವಾಮಿ ಮುಂದಿನ್ ತಿಂಗ್ಳು ನಮ್ಮೂರಾಗೆ ನಾವು ನೀವ್ ಬರ್ದಿರೋ ದೇವಿ ಮಹಾತ್ಮೆ ನಾಟಕ ಆಡ್ಬೇಕು ಅದಕ್ಕೆ ನೀವೇ ಬಂದು ನಾಟಕ ಕಲಿಸಿಕೊಡ್ಬೇಕು" ವಿನಂತಿ ಮಾಡಿದರು ಕೆ ಜಿ ಕಾಟಯ್ಯ.
" ನೋಡಿ‌ ಇವ್ರೆ ನಿನ್ನೆ ಮೇಟಿಕುರ್ಕೆ ನವರು ಬಂದಿದ್ದರು ಅವರ ಊರಲ್ಲಿ ಮೂರನೆ ಸಲ ಈ ನಾಟಕ ಆಡ್ತಾರೆ ಅದಕ್ಕೆ ಬರಬೇಕು ಅಂತ ಕೇಳಿದರು ನಾನು ಒಪ್ಪಿಕೊಂಡು ಬಿಟ್ಟೆ ,ಒಂದ್ ದಿನ ಮೊದ್ಲೆ ಬರಬಾರ್ದಾಗಿತ್ತಾ? ಬಸವಾಚಾರ್ ನುಡಿದರು.
" ಸಾ ಆ ಊರ್ನವ್ರು ಈಗಾಗಲೇ ಎರ್ಡು ಸತಿ ದೇವಿ ಕಥೆ  ಆಡೆದಾರೆ ಅಂತ ನೀವೆ ಹೇಳಿದ್ರಿ ಇದೊಂದ್ ಸತಿ ಅವ್ರಿಗೆ ಯಾರಾದರೂ ನಿಮ್ ಶಿಷ್ಯರನ್ನು ಕಳಿಸಿ,
ದಯವಿಟ್ಟು ನಮ್ಮೂರಿಗೆ ನೀವು ಬರಲೇಬೇಕು, ಯಾಕಂದ್ರೆ ನಮ್ಮೂರಾಗೆ ಇದೆ ಮೊದ್ಲು ನಾವು ಅಮ್ಮನ ಕಥೆ ಆಡ್ತಾಇರೋದು" ದಯಾನೀಯವಾಗಿ ಬೇಡಿದರು ಕಾಟಯ್ಯ.
"ಒಳ್ಳೆ ಸಂದಿಗ್ದಕ್ಕೆ ಬಂತಲ್ಲ,,, ಆ , ನೀವು ನೋಡಿದರೆ ನಾನೇ ಬೇಕು ಅಂತೀರಾ ಅವರಿಗೆ ನಾನು ಮಾತು ಕೊಟ್ ಬಿಟ್ಟಿದಿನಿ,
ಒಂದ್ ಕೆಲ್ಸ ಮಾಡಿ ನಾಳೆ ನಿಮ್ಮಲ್ಲಿ‌ ಯಾರಾದರೂ ಒಬ್ಬರು ಬರ್ರಿ , ಮೇಟಿಕುರ್ಕೆಗೆ ಯಾರಾದರೂ ಅರ್ಜೆಸ್ಟ್ ಆದರೆ ,ನಾನು  ಹಾರ್ಮೋನಿಯಂ ಪೆಟ್ಟಿಗೆ ಹಾಕ್ಕೆಂಡು ನಿಮ್ಮೂರ್ಗೆ ಬತ್ತಿನಿ ,ಆವೂರ್ಗೆ ಯಾರೂ ಸಿಗಲಿಲ್ಲ ಅಂದ್ರೆ ಬೇಜಾರಾಗ್ ಬೇಡಿ " ಖಡಾಖಂಡಿತವಾಗಿ ಹೇಳಿದರು ನಾಟಕದ ಮಾಸ್ಟರ್.
" ಅಡ್ವಾನ್ಸ್ ಏನಾರಾ ಕೊಡಾನಾ ಸಾರ್ "
" ಅಯ್ಯೋ ದುಡ್ ಎಲ್ ಹೋಗುತ್ತಪ್ಪ  ಇರಲಿ ಇಟ್ಕಾ ನಾಳೆ ನೋಡಾನ"
ಕಾಟಯ್ಯ ನ‌ಜೊತೆ ಬಂದ ಇಬ್ಬರು ಟೀ ಕುಡಿದು ಯರಬಳ್ಳಿಯ ಕಡೆ ಹಿಂತಿರುಗಿದರು.

ಗುರುವಾರ ಸಂಜೆ ನಾಲ್ಕು   ಗಂಟೆಯಿಂದ ಐದು ಜನ ಊರ ಮುಂದೆ ನಿಂತು‌ ಹಿರಿಯೂರಿನ ಕಡೆಯಿಂದ ಬರುವ ಎಲ್ಲಾ ಬಸ್ಗಳನ್ನು ನೋಡುತ್ತಾ ಸಂತೆಗೆ ಹೋದ ಅಮ್ಮ ಕಾರ ಮಂಡಕ್ಕಿ ತರ್ತಾರೆ ಅಂತ ಕಾಯೋ ಚಿಕ್ಕ ಮಕ್ಕಳ ತರ ಕಾಯುತ್ತಿದ್ದರು ಕಾಟಯ್ಯ ಮತ್ತು ಸ್ನೇಹಿತರು.

ಅಂತೂ ಏಳು ಗಂಟೆಯ ಕರ್ನಾಟಕ ಬಸ್ಗೆ ಯಾವುದೋ ಪೆಟ್ಟಿಗೆ ಇಳಿಸುವ ದೃಶ್ಯ ಕಂಡು ಚಂಗನೆ ನೆಗೆದರು ಸದಾನಂದಯ್ಯ. ಅವರ ಕಾಯುವಿಕೆಗೆ ಮೋಸವಾಗಲಿಲ್ಲ
ಪೆಟ್ಟಿಗೆಯೊಂದಿಗೆ ಬಸವಾಚಾರ್ ಮಾಸ್ಟರ್ ಸಹ ಇಳಿದರು. ಕೆ ಜಿ‌ ಕಾಟಯ್ಯ ಮತ್ತು ಸ್ನೇಹಿತರ ಆನಂದಕ್ಕೆ ಪಾರವೇ ಇರಲಿಲ್ಲ ,ಅಂದೇ ನಾಟಕ ಆಡಿದಷ್ಟು ಖುಷಿಯಾಯಿತು.
" ಏ ಪಾತಲಿಂಗ ಬಾರೊ ಇಲ್ಲಿ ಈ ಹಾರ್ಮೋನಿಯಂ ಪೆಟ್ಟಿಗೆ ತಗಂಡೋಗಿ ರಂಗಪ್ಪನ ಗುಡಿ ಹತ್ರ ಇಡು ಪೂಜಾರ್ ಮಂಜುಗೆ ಹೇಳು ಅವನು ಒಳಗೆ ಇಟ್ಕಂತಾನೆ " ಅದೇಶ ನೀಡಿದರು ಕಾಟಯ್ಯ
" ಆತು ಗೌಡ ಎಂದು ತಲೆ ಮೇಲೆ ಟವಲ್ನಿಂದ ಸಿಂಬೆ ಮಾಡಿಕೊಂಡು ಮಣ ಭಾರದ ಲೆಗ್ ಹಾರ್ಮೋನಿಯಂ ಅನ್ನು ಹೊತ್ತು ರಂಗಪ್ಪನ ಗುಡಿಯ ಕಡೆ ನಡೆದ ಪಾತಲಿಂಗಪ್ಪ.
ನಾಳೆನೆ ಎಲ್ಲಾ ಪೋಟೋ ಪ್ರತಿಷ್ಟಾಪನೆ ಮಾಡಿ ಪ್ರಾಕ್ಟೀಸ್ ಸುರು ಮಾಡಿ ಬಿಡಾನ ಸರ್ , ನೀವು ನಮ್ಮ ಮನೇಲಿ ಇರಿ ನಮಗೇನು ತೊಂದರೆ ಇಲ್ಲ .ಎಂದು ಬಸವಾಚಾರ್ ರವರ ಜೊತೆ ಮಾತಾನಾಡುತ್ತಾ ಮಾರಮ್ಮನ ಗುಡಿಯ ಮುಂದೆ ನಡೆದು , ಊರ ಬಾಗಿಲ ದಾಟಿ ಅವರ ಮನೆಯ ಕಡೆ ನಡೆದರು ಕಾಟಯ್ಯ.

" ಆಂ  ಇನ್ನೊಂದು ಮಾತು, ದಿನ ರಾತ್ರಿ ಎಂಟು ಗಂಟೆಗೆ ಪ್ರಾಕ್ಟೀಸ್ ಶುರುವಾಗುತ್ತೆ ಎಲ್ಲಾ ಟೈಮಿಗೆ ಸರಿಯಾಗಿ ಬಂದು ಪ್ರಾರ್ಥನೆ ಇಂದ ಹಿಡಿದು ಅವತ್ತಿನ ಪ್ರಾಕ್ಟೀಸ್ ಮುಗಿಯವರೆಗೂ ಇರಬೇಕು, ನೀವು ಬಾಳ ಜನ ಓದಾಕ್ ಬರೆಯಾಕ್ ಬರದಿರೋ ಮೋಢರಿದಿರಿ ಅಂದರೆ ಅವ್ರು ಕಲೆಗಾರರು ಅಲ್ಲ ಅಂತ ಅಲ್ಲ, ಅಣ್ಣಾವ್ರು ಓದಿದ್ದು ಬರೆ ಮೂರ್ನೆ ಕ್ಲಾಸ್ ಆದರೂ ಅವ್ರ ನಟನೆ ? ಅದಕ್ಕೆ ಹೇಳ್ತಾ ಇದಿನಿ ಚೆನ್ನಾಗಿ  ಪ್ರಾಕ್ಟೀಸ್ ಮಾಡಿದರೆ ನಾಟಕ ಚೆನ್ನಾಗಿ ಆಗುತ್ತೆ ನಿಮಗೂ ಹೆಸ್ರು, ನನಗೂ ಹೆಸ್ರು, ಅಮ್ಮನ ನಾಟಕ ಆಡಿದ್ದು ನಮಗೆ ಅವ್ಳ ಆಶೀರ್ವಾದ ಸಿಗುತ್ತೆ, ಯಾರೂ ಯಾವುದೇ ಕಾರಣಕ್ಕೆ, ಬೀಡಿ‌ಸೇದಿ ,ಕುಡ್ಕಂಡೂ ಪ್ರಾಕ್ಟೀಸ್ ಮಾಡಕೆ ಬರಾಂಗಿಲ್ಲ ,ಗೊತ್ತಲ್ಲ ಇದು ದೇವಿ ನಾಟ್ಕ, ಇನ್ನೂ ನಾನು ನಿಮಗೆ ಹೇಳ್ಕೊಡೋವಾಗ ಆಗಾಗ ಬೈಯ್ಯಬಹುದು ಬೇಜಾರ್ ಮಾಡ್ಕೋಬಾರ್ದು. ......"ಹೀಗೆ ಏನು ಬೇಕು ಏನು ಬೇಡ ಎಂದು ಪಾತ್ರಧಾರಿಗಳಿಗೆ ಆಲೂರು ಬಸವಾಚಾರ್ ರವರು, ಹಾರ್ಮೋನಿಯಂ ಪೆಟ್ಟಿಗೆ ಮುಂದೆ ಕುಳಿತು ಎದೆಯುಬ್ಬಿಸಿ  ತಿಳುವಳಿಕೆ ಹೇಳುತ್ತಿದ್ದ ರೀತಿಯಲ್ಲಿ ನಾನು ಮಾಸ್ಟರ್ ಎಂಬ ಆತ್ಮವಿಶ್ವಾಸ ಇತ್ತು, ಅಲ್ಲಿಂದಲೇ ಪಾತ್ರಧಾರಿಗಳಿಗೆ ಅವರ ಬಗ್ಗೆ ಒಂದು ರೀತಿಯ ಭಯ ಮತ್ತು ಭಕ್ತಿ ಶುರುವಾಗಿತ್ತು. ಅವೆರಡಿದ್ದರೆ ಯಾವುದೇ ಕೆಲಸ ಸುಲಭವಾಗಿ ನೆರವೇರುತ್ತದೆ ಎಂದು ‌ಯಾರೋ ಹೇಳಿದ ನೆನಪಾಯಿತು.

" ಹೂಂ ಪ್ಲಾಟ್ ನೋಡೋರ್ಯಾರು? ಬಾ ತಗ ಪುಸ್ತಕ, ಮೊದಲ ಸೀನ್ ಕಶ್ಯಪ ಬ್ರಹ್ಮ ಬಾರೋ ಯಾರು?"
ಕುಂಬಾರ್ ರಾಮಣ್ಣ ಅಳುಕುತ್ತಲೆ ಬಂದು ಹಾರ್ಮೋನಿಯಂ ಪೆಟ್ಟಿಗೆ ಮುಂದೆ ನಿಂತು ,ಬಸವಾಚಾರ್ ರವರ ಕಾಲಿಗೆ ಬಿದ್ದು ,ಪೆಟ್ಟಿಗೆಗೆ ಕೈಮುಗಿದು ನಿಂತರು.
" ಓ ಜಗಜ್ಜಾಲಕ.. ಪೊರೆ ಅನಾಥ ರಕ್ಷಕ .....ಓ....ಜಗಜ್ಜಾಲಕ‌....." ಎಂದು ಹಾರ್ಮೋನಿಯಂ ನುಡಿಸುತ್ತಾ ಮಾಸ್ತರ್ ಹೇಳಿಕೊಟ್ಟರು .ಮಾಸ್ತರ್ ಮೂರು ಸಲ ಹೇಳಿದರೂ ರಾಮಣ್ಣ ಸುಮ್ಮನೆ ನಿಂತಿದ್ದರು ಹೇಳಪ್ಪ ಇದು ನಾಟಕದ ಮೊದಲನೆಯ ಹಾಡು ಮತ್ತು ನಿನ್ನ ಮೊದಲ ಹಾಡು.
ಬೇರೆ ಹುಡುಗರು ,ಸ್ನೇಹಿತರು ಏ ಹೇಳಲಾ ಎಂದು ಒತ್ತಡ ಹೇರಿದಾಗ
"ಓ..........ಜಗ ......ಜಗಲಕೆ ........."
" ಹೇ ಅದ್ಯಾದೋ ಜಗಲಕ ,ಬುಡ್ಡಲಕ? ಜಗಜ್ಜಾಲಕ ಅನ್ನು "
" ಮೇಷ್ಟ್ರೆ ಆಟುದ್ದ ಹೇಳಾಕೆ ಬರಲ್ಲ ಸ್ವಲ್ಪ ಸಣ್ ಹಾಡು ಹೇಳ್ಕೊಡಿ"
" ಲೇ ಇದೆ ಸಣ್ ಹಾಡು ,ಇನ್ನೂ ಮಹಿಷಾಸುರ ,ರಕ್ತಬೀಜ ,ದೇವಿ ಹಾಡು ಎಂತೆಂತ ದೊಡ್ಡ ಹಾಡು ಡೈಲಾಗ್ ಐದಾವೆ ಗೊತ್ತೇನೊ? ಹೇಳು ಓ .....ಜಗಜ್ಜಾಲಕ...
" ಓ.... ಜಗಾಲಕಲಕ" ಹಾಡಲು ಶುರು ಮಾಡಿದರು ರಾಮಣ್ಣ..
"ಹೇ ಕಾಟಯ್ಯ ಅದೆಲ್ಲಿ ಹಿಡ್ಕಂಬಂದ್ರೀ ಇವ್ನ ಮೊದಲನೇ ಪಾತ್ರ ,ಎಂಗ್ಮಾಡ್ಬೇಕು, ಇವುನೊಳ್ಳೆ, ತೊ ..ಎಂದು ಬೇಜಾರು ಮಾಡಿಕೊಂಡರು.
" ಹೇ ರಾಮ ಯಾಕಲ ಮೇಷ್ಟ್ರು ಹೇಳಿಕೊಟ್ಟಂಗೆ ಹೇಳಲ"
" ಯಾಕೋ ನ್ಯಾಲಿಗೆ ತಿರಗ್ತಾ ಇಲ್ಲ ಕಣಣ್ಣ ನಾಳೆ ಹೇಳ್ತಿನಿ" ಅಂದ ರಾಮಣ್ಣ
" ಹುಂ .ಹೋಗಲಿ ಮಾತು ಹೇಳು"
"ಮಾನವನು ....ಮಾನವನು ...ಮಾನವನು...ಅದೆಷ್ಟು ಮಾನವನು ಮುಂದಕ್ಕೇಳಪ್ಪ ಹೇ ಪ್ಲಾಟ್ ಮೇನೇಜರ್ ಎತ್ತಿ ಕೊಡಪ್ಪ
" ಮಾನವನು ತನ್ನ‌ ಆತ್ಮಶುದ್ದಿ ಪಡೆಯಬೇಕಾದರೆ ಕಾಯಾ, ವಾಚಾ, ಮನಸಾ ಈ ತ್ರಿ ಕರಣ ಗಳು ಶುದ್ಧವಾಗಿರಬೇಕು" ಹೇಳಿಕೊಟ್ಟರು ಪ್ಲಾಟ್ ಮೇನೇಜರ್.
ರಾಮಣ್ಣ ತಲೆ ಕೆರದುಕೊಂಡು ಹಿ...ಹಿ... ಮಾತು ಗಟ್ಟಿ ಮಾಡಿಲ್ಲ ಸಾರ್ ನಾಳೆ ಹೇಳ್ತಿನಿ." ಅಂದರು
" ಏನ್ ಕಾಟಯ್ಯ ಎಲ್ಲರಿಗೂ ಮಾತು ಬರುತ್ತೆ ಹಾಡು ಹೇಳ್ಕೊಡ್ಬೇಕು ಅಂದಿದ್ರಿ ಏನಿದು? " ಕೇಳಿದರು ಮೇಷ್ಟ್ರು
" ನಾಳೆ ಎಲ್ಲಾ ಹೇಳ್ತಾರೆ ಸಾ"
"ಅಂಗಾದರೆ ನಾಳೆ ಪ್ರಾಕ್ಟೀಸ್ ಮಾಡಾನ ,ಹಾರ್ಮೊನಿ‌ ಇಳಸ್ಲಾ?
" ಏ ಬ್ಯಾಡ ಸಾ, ಬ್ಯಾರೆ ಪಾತ್ರ ಪ್ರಾಕ್ಟೀಸ್ ಮಾಡ್ಸನಾ"
" ನಾರದ ಯಾರು ಬಾರಪ್ಪ "
ಕರೆದರು ಮೇಷ್ಟ್ರು
ಊರಲ್ಲಿ ಹತ್ತನೇ ಕ್ಲಾಸ್ ಓದಿರೊ ಕೆಲವರಲ್ಲಿ ಮುರಾರಿ ಕೂಡ ಒಬ್ಬ ಮೂರುವರೆ ವಜ್ರದಲ್ಲಿ ಒಂದು ಸಣ್ಣ ಪಾತ್ರ ಚೆನ್ನಾಗಿ ಮಾಡಿದ್ದ  ಅದಕ್ಕೆ ಈ ನಾಟಕದಲ್ಲಿ ಪ್ರಮೋಮೊಶನ್ ಕೊಟ್ಟು ,ನಾರದನ ಪಾತ್ರ ಕೊಟ್ಟಿದ್ದರು.
ಲುಂಗಿ ಮೇಲೆ ಕಟ್ಟಿಕೊಂಡು ,ಪೆಟ್ಟಿಗೆ ಮುಂದೆ ನಿಂತು ಮೇಷ್ಟ್ರು ಮತ್ತು ಪೆಟ್ಟಿಗೆಗೆ ಕೈಮುಗಿದು ನಿಂತರು
" ಲುಂಗಿ ಕೆಳಗೆ ಬಿಡಪ್ಪ ,ಏನ್ ಎಲ್ಲರಿಗೂ ತೋರುಸ್ತಿಯಾ? "  ನಗುತ್ತಲೆ ಹೇಳಿದರು ಮೇಷ್ಟ್ರು, ಎಲ್ಲರೂ ಗೊಳ್ ಎಂದು ನಕ್ಕರು.
" ಅದ್ಯಾಕ್ರಯ್ಯ ನಕ್ತಿರಾ , ನೀವು ಅಷ್ಟೇ ಯಾರೆ ಪಾತ್ರಧಾರಿಗಳು ಬಂದು ಪೆಟ್ಟಿಗೆ ಮುಂದೆ ನಿಂತಾಗ ಲುಂಗಿ‌ ಇಳಿಬಿಟ್ಟಿರಬೇಕು ,ಪಟಪಟಿ ನಿಕ್ಕರ್ನಾಗೊ,ಕಾಚಾದಾಗೋ ಬಂದ್ರೆ ನಾನ್ ಒಳಗೆ ಸೇರ್ಸಲ್ಲ "
ಮತ್ತೆ ಕಿಸಕ್ ಎಂದ ಶಬ್ದ ಕೇಳಿ ಯಾರದು? ಅಂದರು ಮೇಷ್ಟ್ರು ,
ಹೇ ಮೇಷ್ಟ್ರು ಬಾಳ ಕಟ್ನಿಟ್ಟು ಕಣಪ್ಪ ಎಂದು ಯಾರೊ ಮೆಲ್ಲಗೆ ಹೇಳಿದ ಮಾತು ಮೇಷ್ಟ್ರು ಕಿವಿಗೆ ಬಿದ್ದರೂ ಕೇಳಿಸದವರಂತೆ ಒಳಗೊಳಗೆ ಸಂತೋಷಪಡುತ್ತಾ
" ಹುಂ ಹಾಡು ಎತ್ಗೆಳಪ್ಪ ನಾರದ"
" ಕಲಹ.... ಪ್ರಿಯನೆಂದೆಲ್ಲ ....ಕರೆಯುವರು..... ನನ್ನ..... ಸಲಹೆಯನು ....ನೀಡುವ ‌
.. ನಾರದನ ದೂರುವರು ಎಲ್ಲಾ....... "
"ಹುಂ ಪರಾವಾಗಿಲ್ಲ ಸ್ವಲ್ಪ, ತಾಳ ,ಮತ್ತು ರಾಗದ ಕಡೆ ಗಮನ ಕೊಡು ,ಹಾರ್ಮೋನಿಯಂ ಕಡೆ ಗಮನ ಇರ್ಲಿ ,ಎಲ್ಲಿ ನಾರದನ ಕೈಯಲ್ಲಿ ‌ಚಕ್ಕೆ ನೆ ಇಲ್ಲ, "
" ನಾಳೆ ತತ್ತಿನಿ ಸಾರ್"
" ಇದೊಳ್ಳೆ ಕತೆ ಆತಲ್ಲಾ ಎಲ್ಲಾ ನಾಳೆನೆ ಅಂತಿರಾ. ನಾವು ಶುಕ್ರವಾರದ ಬದಲು ಶನಿವಾರ ಪ್ರಾಕ್ಟೀಸ್ ಶುರು ಮಾಡ್ಬೇಕಾಗಿತ್ತು. ಅಲ್ವೇನ್ರಯ್ಯ? ಅಂದರು ಮೇಷ್ಟ್ರು.
" ಮಾತ್ ಬತ್ತವೇನಯ್ಯ ನಾರದ "
"ಇನ್ನೂ ಕೆಲವು ಗಟ್ ಮಾಡ್ಬೇಕು ಸರ್"
" ನೋಡಪ್ಪ ದೇವಿ  ನಾಟ್ಕ ಸಕ್ಸಸ್ ಆಗ್ಬೇಕು ಅಂದರೆ ನಾರದ ಮುಖ್ಯ ಎಲ್ಲಾ ಹಾಡು ಮಾತು ಪಕ್ಕಾ ಇರಬೇಕು ಅರ್ಥ ಆತಾ?
" ಆತು ಸರ್ ನಾಳೆ ಗಟ್ ಮಾಡ್ಕೆಂಡು ಬತ್ತೀನಿ" ಎಂದರು ಮುರಾರಿ
ಆತು ಮುಂದ್ಲು ಪಾತ್ರ ದೇವೇಂದ್ರ ಯಾರು ಬಾರಪ್ಪ"
ಆರು ಅಡಿ ಎತ್ತರದ ದಪ್ಪ ದೇಹ ,ನಡೆಯುವಾಗ ,ಅಡ್ಡಡ್ಡ ನಡೆಯುವ, ಗಿರಿಜಾ ಮೀಸೆ ಬಿಟ್ಟ ವೈಟ್ ಅಂಡ್ ವೈಟ್ ಅಂಗಿ ಪಂಚೆ  ಹಾಕಿದ ಸದಾನಂದಪ್ಪ ಬಂದು ರಾಮಣ್ಣನಂತೆ ಮೇಷ್ಟ್ರು ಮತ್ತು ಪೆಟ್ಟಿಗೆಗೆ ಕೈ ಮುಗಿದು  ನಿಂತರು.
"ಹುಂ ನೀನೇನಪ್ಪ ದೇವೇಂದ್ರ ? ಮೊದಲನೆ ಹಾಡು ಇವತ್ತು ಹೇಳ್ ಕೊಡ್ತಿನಿ ಹೇಳು"  ಎಂದು ಹಾರ್ಮೋನಿಯಂ ನುಡಿಸುತ್ತಾ
"ಆರು ಸಮರು ಎನಗೆ ......ಈ ಧರೆಯೊಳಗಾರು ಸಮರು ನನಗೆ........." ಹುಂ ಹೇಳು ಅಂದರು ಮೇಷ್ಟ್ರು
" ಆರು ಸಾಂಬರು ನನಗೆ ... ಆರು ಸಾಂಬಾರು ನನಗೆ"
"ಹೇ... ಹೇ... ನಿಲ್ಸಯ್ಯ  ಎಲ್ಲೈತೆ ಸಾಂಬರ್ ? ಸಾಂಬಾರ್ ಅಲ್ಲ ಕಣಯ್ಯ ಅದು ಸಮರು . ಸಮ ..ಸಮ... ರು ಹೇಳು"
"ನಾನು ಓದಿಲ್ಕ ಮೇಷ್ಟ್ರೆ ನ್ಯಾಲಿಗೆ ತಿರ್ಗಲ್ಲ ನೀವೆ ನಿದಾನಕ್ಕೆ ಹೇಳ್ಕೊಡ್ಬೇಕು, ನಾನು ಬೇಕಾದರೆ ಹಗಲೊತ್ತು ಪ್ರಾಕ್ಟೀಸ್ ಮಾಡಾಕೆ ಬತ್ತಿನಿ , ಸಣ್ ಹುಡುಗ್ನಿಂದ ನಾಟ್ಕ ಆಡ್ಬೇಕು ಅಂತ ಆಸೆ ಸಾ ,ಈ ನಾಟ್ಕಕ್ಕೆ ನನ್ದು ಅಲ್ದೆ ಮೂರು ಜನಾ ಪಾತ್ರಧಾರಿಗಳ ದುಡ್ ನಾನೆ ಕೊಟ್ಟಿದಿನಿ ಸಾ,"ಎಂದು ವಿಧೇಯತೆಯಿಂದ ನುಡಿದಾಗ ,
"ಆತು ಕಣಯ್ಯ ನಿನಗೇನೊ ಆಸೆ ಇದೆ ,ಹಾಡೆ ಬರಲ್ಲ ಸರಿಯಾಗಿ, ಮೊದಲು ಪದಗಳ ಉಚ್ಚಾರ ಕಲ್ತುಕೋ ," ಎಂದರು ಮೇಷ್ಟ್ರು
" ಆ...ಹಾ ...ಹ ಎಂತಹ ಪಾತ್ರಾಧಾರಿಗಳ ಕಲ್ಸೆದಿರಾ ಕಾಟಯ್ಯ? ಯಾರಿಗೂ ಮಾತೆ ಬರಲ್ಲ, ಹಾಡು ಹೇಳೋ ಗಂಧ ಇಲ್ಲ, ಇವರನ್ನು ಕಟ್ಕೊಡು ಪೌರಾಣಿಕ ನಾಟಕ ಎಂಗ್ರಿ ಹಾಡ್ಸೋದು ? ಅದೂ ಇನ್ನೂ ಇಪ್ಪತ್ಮೂರು ದಿನ ಐತೆ ನಿವ್ ಪಿಕ್ಸ್ ಮಾಡಿರೋ ನಾಟಕ ಆಡೋ ದಿನ ಆಗುತ್ತೇನ್ರಿ ? ನನಗೇನೋ ಇವರನ್ನೆಲ್ಲ ತಿದ್ದೋಕೆ ಒಂದ್ ತಿಂಗಳಾದ್ರೂ ಬೇಕು ಅನುಸುತ್ತೆ ಕಣಯ್ಯ.
" ಅಂಗನ್ಬೇಡಿ ಸಾ , ಇವತ್ತು ಮೊದಲು ಅದಕ್ಕೆ , ನಾಳೆಯಿಂದ ಎಲ್ಲಾ ಚೆನ್ನಾಗಿ ಪ್ರಾಕ್ಟೀಸ್ ಮಾಡ್ತಾರೆ, ನಾಟ್ಕ ಮುಂದಕ್ಕೆ ಹಾಕಿದ್ರೆ ಮಳೆಗಾಲ ಬರುತ್ತೆ, ನಮಿಗೆ ಹೊಲ ಮನೆ ಕೆಲ್ಸ ಜಾಸ್ತಿ ,ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಇವ್ರಿಗೆ ನೀವೆ ಕಲ್ಸಬೇಕು ಸರ್ ಅದಕೆ ನಾವ್, ನೀವೇ ಬೇಕು ಅಂತ ನಿಮ್ ಹತ್ರ ಬಂದಿದ್ದು" ಒಂದೇ ಸಮನೆ ಬೇಡಿದರು ಕಾಟಯ್ಯ
ದೀರ್ಘವಾದ ನಿಟ್ಟುಸಿರು ಬಿಟ್ಟ ಮೇಷ್ಟ್ರು
" ಹುಂ ಆತು ನೋಡಾನಾ ಏ ಮುಂದಿನ ಪಾತ್ರ ಯಾರು ಬರ್ರಪಾ"
" ಅಣ್ಣ ಮಹಿಷಾಸುರ ಪಾತ್ರ ಮಾಡಿರೋ ಮಧು ಬಂದಿಲ್ಲ ಅಣ್ಣ" ಹೊರಕೇರಿ ಅಂದ
ಕಾಟಯ್ಯನಿಗೆ ಪದೇ ಪದೇ ಮೇಷ್ಟ್ರು ಸಿಟ್ಟಾಗುವುದು, ಪಾತ್ರಧಾರಿಗಳು ಸರಿಯಾಗಿ ಮಾತು ಹೇಳದಿರುವುದು , ಇದೆಲ್ಲದ್ದರಿಂದ  ಬೇಸರಗೊಂಡು ಒಮ್ಮೆಲೆ ಎಗರಿಬಿದ್ದರು
" ಕತ್ತೆ ಕಾಯೋಕ್ ಹೋಗ್ರಿ ನನ್ ಮಕ್ಕಳ ಒಬ್ಬನಿಗಾದರೂ ಜ‌ಬಾದಾರಿ ಇಲ್ಲ,"ಹೊರಕೇರಿ ಮೇಲೆ ರೇಗಿದರು
" ನಾನೇನು ಮಾಡ್ದೆ ಅಣ್ಣ "
"ನೀನಲ್ಲಲೆ ಅವನ್ ಮಧು  ಎಲ್ ಹಾಳಾಗೋದ?"
"ನಾನು ಎಷ್ಟಂತ ಒಬ್ಬನೇ ತಲೆ ಕೆಡಿಸ್ಕಳ್ಲೀ, ನೋಡ್ರಿ ಸಾ ಇವರನ್ನು ಕಟ್ಗಂಡು ಎಂಗೆ ನಾಟ್ಕ ಆಡ್ಸಾದು?
" ಅಣ್ಣಾ ಕಾಪಿ ಕಾಸ್ಕೆಂಡು ಬಂದಿದಿನಿ ಎಲ್ಲಿಡ್ಲಿ? ಸಿದ್ದಮಲ್ಲ ಕೇಳಿದ
" ನನ್ ತಲೆ ಮ್ಯಾಲೆ ಸುರಿ" ಮತ್ತೂ ರೇಗಿದರು ಕಾಟಯ್ಯ
" ಹೋಗ್ಲಿ ಬಿಡಯ್ಯ ಕಾಟಯ್ಯ ಅದ್ಯಾಕೆ ಸಿಟ್ಟಾಕ್ತಿಯಾ ಇವತ್ತು ಮೊದಲ ದಿನ ಸಾಕು ಇಲ್ಲಿಗೆ ನಿಲ್ಸಾನಾ ಪ್ರಾಕ್ಟೀಸ್ ನ ಏ ಕಾಪಿ ಲೋಟಕ್ಕೆ ಹಾಕಿ ತಾಂಬಾರ " ಎಂದರು ಮೇಷ್ಟ್ರು.
ಕಾಫಿ ಕುಡಿದು ಮೇಷ್ಟ್ರು ಹಾರ್ಮೋನಿಯಂ ಪೆಟ್ಟಿಗೆ ಇಳಿಸಿದಾಗ ರಾತ್ರಿ ಒಂದೂವರೆ .
ಎಲ್ಲಾ ಪಾತ್ರಧಾರಿಗಳು ಅವರವರ ಮನೆ ಕಡೆ ಹೊರಟರೆ
ಕಾಟಯ್ಯ ಮತ್ತು ಮೇಷ್ಟ್ರು ಕಾಟಯ್ಯನ ಮನೆ ಕಡೆ  ಹೆಜ್ಜೆ ಹಾಕಿದರು ಗೌಡರ ಮನೆ ಮುಂದಿನ ನಾಯಿ ಜೋರಾಗಿ ಬೊಗಳಲಾರಂಭಿಸಿತು
" ಹೇ ಮುಚ್ಚು ಬಾಯಿ " ಎಂದು ಗದರಿಸಿದರು ಕಾಟಯ್ಯ.
ನಾಯಿ ಇನ್ನೂ ಜೋರಾಗಿ ಬೊಗಳಲಾರಂಭಿಸಿತು.

"ಅವನ್ ಧಿಮಾಕು ಜಾಸ್ತಿ ಆತು,‌ ಅವನ್ ಇಲ್ಲ ಅಂದ್ರೆ ನಾಟಕ ಆಗಲ್ವಾ? ಇನ್ನೂ ಯಾರಾದ್ರೂ ಇದ್ರೆ ನೋಡ್ರಿ, ಎಂದು ಸಿಟ್ಟಿನಿಂದ ‌ಕೇಳಿದರು ಕಾಟಯ್ಯ, ಅಣ್ಣ ಇವನು ಮಾಡ್ತಾನೆ ಅಂತ ಸುಮ್ಮನೆ ಜೋಕ್ ಮಾಡಾಕೆ ಹೇಳಿದರು ಪ್ರಾಕ್ಟೀಸ್ ಮಾಡೋ ಹುಡುಗ್ರು
" ಯಾರು ? ಸತೀಶನ ? ಏನೋ ಮಾಡ್ತಿಯೇನೋ? " ಕೇಳಿದರು ಕಾಟಯ್ಯ.
ಸುಜಾತಳ ಕಾಣದೆ ಎಲ್ಲಿರುವಳು ಎಂದು ಮಾಹಿತಿ ಸಿಗದೆ ಯಾವಾಗಲೂ ಖಿನ್ನವಾಗಿ,ಕಲಿತಿರುವ ಚಟ ಬಿಡಲಾರದೇ ಚಡಪಡಿಸುವ ಅವನ ನೋಡಿ ,ಚಿದಾನಂದ ದಿನವೂ ನಾಟಕದ ಪ್ರಾಕ್ಟೀಸ್ ಹತ್ರ ಸತೀಶನ ಕರೆದುಕೊಂಡು ಬರುತ್ತಿದ್ದ. ಈ ಪ್ರಾಕ್ಟೀಸ್ ನೋಡಿಯಾದರೂ ಅವಳ ಮರೆಯಲಿ‌, ಎಂಬ ಆಶಯ ಅವನದು.ಸತೀಶ ಮಹಿಷಾಸುರ ನ  ಪಾತ್ರ ಮಾಡ್ತಾನೆ ಅಂತೆ ಹೇಳಿದ್ದೇ ಚಿದಾನಂದ್.
ಕಾಟಯ್ಯ ಇದ್ದಕ್ಕಿದ್ದಂತೆ ಸತೀಶನನ್ನು ಕೇಳಿದ ಪ್ರಶ್ನೆಗೆ ಏನು ಹೇಳಬೇಕೆಂದು ತೋಚಲಿಲ್ಲ ,ಇಲ್ಲ ಎನ್ನಲು ಧೈರ್ಯ ಬರಲಿಲ್ಲ ಏಕೆಂದರೆ ಇವನು ಹತ್ತನೆಯ ತರಗತಿಯಲ್ಲಿ ಹೆಚ್ಚು ಅಂಕ ಬಂದಾಗ ಮನೆಗೆ ಬಂದು ಹೂವಿನ ಹಾರ ಹಾಕಿ ಐದು ನೂರು ಹಣ ಕೊಟ್ಟು ನೀನು ನಮ್ ಊರ ಮರ್ಯಾದೆ ಹೆಚ್ಚು ಮಾಡಿದೆ ಕಣ ಹುಡುಗ ಎಂದು ಹೊಗಳಿ ಭೇಷ್ ಎಂದು ಬೆನ್ನು ತಟ್ಟಿದ್ದರು.ಅದರಿಂದ ಅವನು ಅಷ್ಟು ಬೇಗ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇದ್ದ
" ಸುಮ್ಮನೆ ಇದಾನೆ ಅಂದರೆ ಪಾತ್ರ ಮಾಡ್ತಾನೆ ಅಂತಾನೆ ಅರ್ಥ " ಹೇಳೆಬಿಟ್ಟ ಚಿದಾನಂದ್  ಬೇರೆಯವರಿಗೆ ಚಿದಾನಂದ್ ಜೋಕ್ ಮಾಡಿ ಸತೀಶನ ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಾನೆ ಎನಿಸಿದರೂ ,ಚಿದಾನಂದ್ ಸತೀಶನ ನಟನೆಯನ್ನು ಯೂನಿಯನ್ ಡೇ ದಿನ ನೋಡಿದ್ದ ,ಅದಕ್ಕಿಂತ ಮುಖ್ಯವಾಗಿ ಈ ಮೂಲಕವಾದರೂ ಸುಜಾತಳ ಮರೆಯಲಿ ಎಂಬ ಆಸೆ.
" ಆತು ಹೇಳಣ ಮಾಡ್ತಾನೆ, ಸತೀಶನ ಮಾವ ಮುರಾರಿ ಹೇಳೆಬಿಟ್ಟರು " ರೇಡಿಯೋದಲ್ಲಿ ಆಗಾಗ್ಗೆ ಬರುವ ಹಾಡುಗಳನ್ನು ಯಥಾವತ್ತಾಗಿ ಹೇಳುವುದನ್ನು, ನೋಡಿದ ಸಿನಿಮಾ ಡೈಲಾಗ್ ಸ್ಪಷ್ಟವಾಗಿ ಹೇಳುವ ಅವನ ಕಲೆಯನ್ನು ಮುರಾರಿ ಮನೆಯಲ್ಲಿ ಗಮನಿಸಿದ್ದರು .
" ಹುಂ ಇನ್ನೇನು ಮಾವ ನಾರದ ,ಅಳಿಯ ಮಹಿಷಾಸುರ ,ಇನ್ನೊಂದಿಬ್ಬರು ನೀವೇ ಯಾರಾರ ಆಡ್ರಪ್ಪ ನಾಟಕ ನಿಮ್ದೆ ಆಗುತ್ತದೆ " ಚಿದಾನಂದ್ ನಕ್ಕ ಎಲ್ಲರೂ ನಕ್ಕರು.
"ನಾಳೆ ಪ್ಲಾಟ್ ತಗಂಡು ಮಾತು ಹಾಡು ಬರ್ಕ ಎಂಗೂ ರಜ ಐತಲ್ಲ, ಚೆನಾಗಿ ಆಡ್ಬೇಕು ಕಣಪ್ಪ ಆ ನನ್ ಮಗ ಮಧು ಏನ್ ಅವ್ನೆ ದೊಡ್ಡ ನಟ ಅಂದ್ಕಂಡದಾನೆ ಎಂದು ಸತೀಶನ ಹತ್ತಿರ ಬಂದು ಎರಡನೇ ಸಲ ಬೆನ್ನು ತಟ್ಟಿದರು"
"ಆತಣ್ಣ ಟ್ರೈ ಮಾಡ್ತಿನಿ " ಎಂದ ಸತೀಶ.

ಮೂರು ದಿನಗಳ ನಂತರ ಮಾತು ಹಾಡು ಕಲಿತುಕೊಂಡು‌ ಪ್ರಾಕ್ಟೀಸ್ ಮಾಡಲು ಬಂದ ಸತೀಶ
"ಮಹಿಷೇಷನೆಂದೆನಿಸಿ  ಮಹಿಯೊಳಗೆ ಮೆರೆವೆ........ ಜೈಸುತಲಿ ವೈರಿಗಳ ಸೆರೆಪಿಡಿದು ತರುವೆ...,."
ಹಾರ್ಮೋನಿಯಂ ಮಾಸ್ತರ್ ಹಾಡು ನುಡಿಸುತ್ತಲೆ ರಾಗವಾಗಿ, ತಾಳವಾಗಿ ,ಸುಸೂತ್ರವಾಗಿ ಹಾಡಿದ ಸತೀಶ
ಪ್ರಾಕ್ಟೀಸ್ ನೋಡುವ ಜನರು ಶಿಳ್ಳೆ ಹೊಡೆದು ಚಪ್ಪಾಳೆ ಹೊಡೆದು ಇದು ನಾಟಕವೇನೋ ಎಂಬಂತೆ " ಒನ್ಸ್ ಮೋರ್ "ಎಂದರು
" ಇದು  ಕಲೆ ಅಂದ್ರೆ ನಾನು ಬಂದ್ ಒಂದ್ ವಾರ ಆತು ,ಹಾರ್ಮೋನಿಯಂಗೆ ಕರೆಕ್ಟ್ ಆಗಿ ಹಾಡಿದವನು ಈ ಹುಡ್ಗ ಒಬ್ಬನೆ ,ವೆರಿ ಗುಡ್ ಕಣೋ ಹುಡ್ಗ, ಇನ್ನೊಂದು ಸ್ವಲ್ಪ ದಪ್ಪ ಇದ್ದಿದ್ದರೆ ಈ ಪಾತ್ರ ಸೂಪರ್ ಆಗಿ ಒಪ್ಪಿರೋದು ನಿನಗೆ, ಇರಲಿ ಈಗಲೂ ಚೆನಾಗ್ ಬರುತ್ತೆ "
" ಅವರಪ್ಪನೂ ಕಲಾವಿದ ಸರ್ ಕುರುಕ್ಷೇತ್ರ ನಾಟಕದಾಗೆ ದುರ್ಯೋಧನನ ಪಾತ್ರ ಮಾಡ್ತಿದ್ರು" ಹೆಮ್ಮೆಯಿಂದ ಗತಿಸಿದ ಭಾವನ ನೆನೆದು ಗದ್ಗದಿತರಾದರು ಮುರಾರಿ.
"ಅದೇ ಮತೆ ,ಕಲೆ ಇವನ ರಕ್ತದಲ್ಲಿ ಇದೆ ಸ್ವಲ್ಪಮಟ್ಟಿಗೆ ಪ್ರೋತ್ಸಾಹ ಕೊಟ್ಟರೆ ಒಳ್ಳೆ ಕಲಾವಿದ ಆಗ್ತಾನೆ. ವೆರಿ ಗುಡ್" ಮೇಷ್ಟ್ರು ಸತೀಶನನ್ನು ಹತ್ತಿರ ಕರೆದು ಬೆನ್ನು ಸವರಿದರು .ಉಳಿದ ಪಾತ್ರಧಾರಿಗಳು ಒಳಗೊಳಗೆ ಹೊಟ್ಟೆ ಉರಿದುಕೊಳ್ಳುತ್ತಿದ್ದರು ,ಕಾರಣ ಮೇಷ್ಟ್ರು ಬಂದು ವಾರವಾಗುತ್ತಾ ಬಂದರೂ ಎಲ್ಲ ಪಾತ್ರಧಾರಿಗಳನ್ನು ವಾಚಾಮಗೋಚರವಾಗಿ ಬಯ್ಯುವುದೇ ಆಗಿತ್ತು, ಮೊದಲ ಬಾರಿಗೆ ಹೊಗಳಿಕೆ ನೋಡಿದ್ದರು.
" ಹುಂ ಮಾತು ಗಟ್ ಮಾಡಿದೆಯೇನಯ್ಯ ಹೇಳು ನೋಡೋಣ" ಎಂದು ಮೇಷ್ಟ್ರು ಹೇಳಿದ್ದೇ ತಡ
" ಬ್ರಹ್ಮಾಂಡವನ್ನೇ ಚೆಂಡಾಡಬಲ್ಲ ದಂಡನಾಯಕರ ಮಂಡಲದಿಂದ ಮಂಡಿತನಾಗಿ , ಹರಿಕುಲ ಕುಠಾರನೆ‌ನಿಸಿ, ಹರಬ್ರಹ್ಮರಿಂದ ಅಮೋಘ ವರಗಳನ್ನು ಪಡೆದಿರುವ ನನಗೆ , ಸಕಲ ಚರಾಚರ ರಾಕ್ಷಸರು ಕಪ್ಪ ಕಾಣಿಕೆಗಳನ್ನು ತಂದು ಒಪ್ಪಿಸುತ್ತಿಹರು.ಅವಿಧೇಯತೆಯಿಂದ ವರ್ತಿಸಿದವರನ್ನು ಸದೆ ಬಡಿದು ಏಕ ಚಕ್ರಾಧಿಪತ್ಯ ಪಡೆದಿರುವೆನು, ಅಂದ ಮೇಲೆ ನನ್ನ ಅಭ್ಯುದಯಕ್ಕೆ ಮೇರೆಯೇ ಇಲ್ಲ......."
ಪಟಪಟನೆ ಮಾತುಗಳನ್ನು ಒಪ್ಪಿಸಿದ ರೀತಿ ನೋಡಿ ಎಲ್ಲರೂ ದಂಗಾದರು.

"ಸಾರ್ ಮೂರು ದಿನದಿಂದ ಬ್ರಹ್ಮುಂದು ಪ್ರಾಕ್ಟೀಸ್ ಮಾಡ್ಸಿಲ್ಲ " ಬೇಕು ಅಂತಲೆ ಬ್ರಹ್ಮ ನ ಪಾತ್ರ ಮಾಡಿದ ರಾಜಪ್ಪನಿಗೆ ಹಾಡು ಮಾತು ಬರದಿರುವ ಅವನ ಅವಸ್ಥೆ ನೋಡಿ ಮಜಾ ತಗೋಳ್ಳಾಕೆ ಕಾಳಪ್ಪ  ಹೇಳಿದ
" ಹುಂ ಬಾರಪ್ಪ ಬ್ರಹ್ಮ  ನಿಂದ್ ಆದ ಮ್ಯಾಲೆ ಇವತ್ತಿನ ಪ್ರಾಕ್ಟೀಸ್ ನಿಲ್ಸಾಣಾ,"
ಬ್ರಹ್ಮನ ಪಾತ್ರಧಾರಿ ರಾಜಪ್ಪ ಬಂದು ಪೆಟ್ಟಿಗೆ ಮುಂದೆ ನಿಂತರು
" ಹರಿ ನಾರಾಯಣ..... ದುರಿತ ನಿವಾರಣ.....  ಪೊರೆ ಲಕ್ಷ್ಮಿ ರಮಣ, ನಾರಾಯಣ, ಹರಸು......"
ಮೇಷ್ಟ್ರು ಹೇಳಿಕೊಟ್ಟು ಹುಂ ಹೇಳಪ್ಪ ಅಂದರು
" ಹರಿ ನಾಯಾರಣ,.. ಹರಿ ನಯಾರಾಣ.. ......"
"ಏ ನಾಯಾರಣ ಅಲ್ಲಯ್ಯ  . ಹರಿ ನಾರಾಯಣ..."
" ಆತು ಸಾ ಹಾಡ್ತಿನಿ, ಹರಿ ನಯಾರಣ,....ಹರಿ ನಯಾರಣ
ಮೇಷ್ಟ್ರಿಗೆ ನಗು ಬಂದು ನಗುತ್ತಾ...
" ಏ ನಿನ್ ನಾಲಿಗೆ ತಗೊಂಡೋಗಿ ರಾಗಿ ಹುಲ್ಲ ತುಳುಸ್ತಾರಲ್ಲ ಆ  ರೋಣುಗಲ್ಲ ಕೆಳಗೆ ಇಡು ಎಂದು ಬೈಯ್ದರು
ಪ್ರಾಕ್ಟೀಸ್ ನೋಡಲು ಬಂದ ಕಾಳಪ್ಪ
" ಹರಿ ನಾರಾಯಣ ಐನೂರು ರುಪಾಯಿ ಹೋದ್ವಣ್ಣ " ಎಂದು ರಾಜಪ್ಪನ ಹಂಗಿಸಿದ
" ನೀನ್ಯಾವನಲೆ ಮಾತಾಡಕೆ ನಾಟ್ಕಕ್ಕೆ ನನ್ ಐನೂರು ಹೋಗ್ಲಿ ನಾನು ನಾಟ್ಕ ಆಡ್ತೀನಿ ನೋಡು ಎಂದು ಸಿಟ್ಟಿನಿಂದ ಹೇಳಿದ ,ಕಾಳಪ್ಪ ಓಡಿ ಹೋದ.
"ಸಾಕು ಇವತ್ತಿಗೆ ಇಲ್ಲಿಗೆ ನಿಲ್ಸಾಣಾ, ನಾಳೆ  ಮಾತು ಸರಿಯಾಗಿ ಕಲ್ತುಕೊಂಡು ಬರ್ರಿ" ಎಂದು ಪೆಟ್ಟಿಗೆ ಇಳಿಸಿ ಹೊರಟರು.

ಮಾರನೆ ದಿನ ಇಡೀ ಊರಲ್ಲೆ ಸತೀಶನ ಮಾತು ಎರಡನೆ ಬಾರಿಗೆ ಊರವರು ಸತೀಶನನ್ನು ಹೊಗಳಲು‌ ಶುರುಮಾಡಿದರು.

ಕೆಂಪು, ನೀಲಿ ಬಣ್ಣದ ಕರಪತ್ರಗಳನ್ನು ಅಲ್ಲಲ್ಲಿ ಅಂಟಿಸಲಾಗಿತ್ತು ಅದರಲ್ಲಿ ಎಲ್ಲಾ ಪಾತ್ರಧಾರಿಗಳ ಹೆಸರು ಅವರ ಪಾತ್ರ , ಹಾರ್ಮೋನಿಯಂ, ತಬಲ ಮ್ಯಾನೇಜರ್, ಮುಂತಾದ ವಿವರ ಇದ್ದವು .ತನ್ನ ಹೆಸರು ಓದಿದ ಸತೀಶ ಮನದಲ್ಲೇ ಸಂತಸಪಟ್ಟ.
" ನೀನು ಏನೇ ಹೇಳು ಕಾಟಯ್ಯ ಪಾಂಪ್ಲೇಟ್ ಎಲ್ಲಾ ಓಕೆ ಕೆಳಗೆ "ಲಕ್ಷ್ಮಿ ಬೀಡಿ ಸೇದಿರಿ "ಅಂತ ಇರೋದು ಅಬಾಸ" ಅಂದರು ಗುಂಡ್ ಶೆಟ್ಟರು
" ಶೆಟ್ರೆ ಪಾಂಪ್ಲೇಟ್ ಮಾಡ್ಸಾಕೆ ಲಕ್ಷ್ಮಿ ಬೀಡಿನಾರು ದುಡ್ ಕೊಟ್ಟದಾರೆ " ವ್ಯಂಗ್ಯವಾಗಿ ಹೇಳಿದರು ಕಾಟಯ್ಯ
" ಮುಂದಿನ ಸಲ ನಾಟಕ ಆಡ್ದಾಗ ಹೇಳಿ ಪಾಂಪ್ಲೇಟ್ ನಾನು ಮಾಡಿಸ್ತೀನಿ ನನ್ನ ಹೆಸರು ಹಾಕ್ಸಾದು ಬೇಡ" ಶೆಟ್ಟರ ಮಾತು ಕೇಳಿ ಕಾಟಯ್ಯ ನಿಗೆ ನಾಚಿಕೆಯಾದಂತಾಗಿ
ಆತು ಶೆಟ್ಟರೆ ಇಲ್ಲಿ‌ಇದನ್ನ ಅಂಟು ಹಾಕಿ ಎಂದು ಹೊರಟರು.

ಬ್ರಮ್ಮಿ ಹೋಟೆಲ್ ಹತ್ತಿರ ದೊಡ್ಡ ರಟ್ಟಿನ  ಪಾಂಪ್ಲೇಟ್ ಅಂಟಿಸಿದ್ದರು
" ಸೀನ್ ಯಾವೂರ್ದು ಕಾಟಣ್ಣ ? " ಬ್ರಮ್ಮಿ ಕೇಳಿದ
" ಏ ಹರ್ತಿಕೋಟೆ ರಾಯಣ್ಣನ ಸೀನ್ಸ್ ಕಣಪ್ಪ"
"ಒಂದ್ ಸತಿ ತರೂರು ಸೀನ್ಸ್ ತರ್ಸಣ, ಸಕತ್ ಆಗಿರುತ್ತೆ ಸೀನ್ , ನಾಟ್ಕನೂ ಸೂಪರ್ ಆಗಿರುತ್ತದೆ."
" ಸರಿ ನಾಟಕಕ್ಕೆ ಒಂದ್ ನೂರು ರುಪಾಯಿ ಕೊಡು "
" ಹೆ.....ನಾವ್ ಎಲ್ಲಿ ಅಷ್ಟು   ಕೊಡಾಕ್ ಆಗುತ್ತಣ್ಣ ತಲೆ ಕರೆದು ಕೊಂಡು ಹೇಳಿದ "
" ಅದಕ್ಕೆ ಮುಚ್ಕಂಡ್ ಟೀ ಕೊಡು ,ತರೂರ್ ಸೀನ್ ಅಂತೆ " ಹುರಿದುಬಿದ್ದರು ಕಾಟಯ್ಯ.

ನಾಟಕದ ದಿನ ಬಂದೇ ಬಿಟ್ಟಿತು .ರಾಕ್ಷಸನ ಪಾತ್ರವಾದರೂ ಸತೀಶ ಅಮ್ಮನ ಸಲಹೆಯ ಮೇರೆಗೆ ಉಪವಾಸ ಇದ್ದು ನಾಟಕ ಆಡಲು ಸಿದ್ದನಾದ .ಮಗನ ನಾಟಕ ಕಣ್ತುಂಬಿಕೊಳ್ಳಲು ಭೂದೇವಮ್ಮ ಚೌಡಗೊಂಡನಹಳ್ಳಿಯಿಂದ ಬಂದಿದ್ದರು .

ಗಣಸ್ತುತಿ ಮಾಡಿ , "ಓಂ ನಮೊ ಭವಾನಿ‌ ತಾಯೆ... " ಪ್ರಾರ್ಥನೆ ಆರಂಭವಾಯಿತು.
ನಾಟಕವು ಯಾರೂ ಊಹಿಸದಷ್ಟು ಸ್ವತಃ ಮೇಷ್ಟ್ರು ಗೆ ಆಶ್ಚರ್ಯ, ಜಗಲಕಕ ಎಂಬ ಕಶ್ಯಪ ಸ್ಪಷ್ಟವಾಗಿ ಮಾತಾಡುತ್ತಾನೆ .ದೇವೆಂದ್ರ ರಾಗವಾಗಿ ಹಾಡುತ್ತಾನೆ.
ಮೇಷ್ಟ್ರುಗೆ ಅರ್ಥವಾಯಿತು ಅಂದು ಪ್ರಾಕ್ಟೀಸ್ ನಲ್ಲಿ ಸತೀಶನ ಹೊಗಳಿದಾಗಿಂದ ಎಲ್ಲರೂ ಚಾಲೆಂಜ್ ಆಗಿ ತೆಗೆದುಕೊಂಡು ಪ್ರಾಕ್ಟೀಸ್ ಮಾಡಿದ್ದರು.

ನಾಟಕ ಸಾಗಿದಂತೆಲ್ಲ ರಕ್ತ ಬೀಜಾಸುರನ ಹುಟ್ಟು, ಬೆಳವಣಿಗೆ, ಅವನು ಬ್ರಹ್ಮ ,ವಿಷ್ಣು ಮಹೇಶ್ವರ ಇವರ ಸೆರೆಮನೆಯಲ್ಲಿ ಇಟ್ಟು ತೊಂದರೆಗಳನ್ನು ನೀಡುವುದು ,ನಂತರ ಶ್ರೀದೇವಿಯ ಪ್ರತ್ಯಕ್ಷ, ನೋಡೋಕೆ ಕಣ್ಣೆರಡು ಸಾಲವು. ರಂಗದಾಸಪ್ಪ ಎಂಬುವವರು ದೇವಿ ಪಾತ್ರ  ಮಾಡಿದರು ದೇವಿಯೇ ಉದ್ಭವಿಸಿದ ರೀತಿಯಲ್ಲಿ
" ವನವಿದು ರಾರಾಜಿಸುತಿಹುದೇ.... ಅಂದದಲಿ ಚೆಂದದಲಿ‌ ಶೋಭಿಸುತಿಹುದೆ...." ಹಾಡು.

"ವರಪುರುಷನ ಮಹಿಷನ ..... ವನವಿದಹ ...ವರಪುರುಷನ ಮಹಿಷನ..."
ಈ ಹಾಡು ಹೇಳುವಾಗ ಪ್ರೇಕ್ಷಕರು ತಮಗರಿವಿಲ್ಲದೆ ಎರಡೂ ಕೈಜೋಡಿಸಿ ಮುಗಿಯುತ್ತಿದ್ದರು.

ದೇವಿಯೊಂದಿಗೆ, ಸುಗ್ರೀವ ,ಚಂಡ ಚಾಮುಂಡ ಮುಂತಾದ ರಾಕ್ಷಸರ ಕಾಳಗ ಚೆನ್ನಾಗಿ ಮೂಡಿ ಬಂತು
ಶುಂಭ ,ನಿಶುಂಭರ ಕಾದಾಟ , ಅದರಲ್ಲೂ ಮಹಿಷಾಸುರನ ಆರ್ಭಟ ,ಹಾಡು ನಟನೆ ಕಂಡ ಬೇರೆ ಊರು ಜನರು ಬೇಷ್ ಎಂದರೆ ಕೆಲವರು ಮೆಡಲ್ ಹಾಕಲು ರಂಗಮಂದಿರಕ್ಕೆ ನುಗ್ಗಲು ಯತ್ನ ಮಾಡಿದರು .
" ಈಗ ಬ್ಯಾಡ ಇನ್ನೂ ಸ್ಯಾನೆ ನಾಟಕ ಐತೆ ಆಮೇಲೆ ಬೇಕಾದ್ರೆ ಅವಕಾಶವನ್ನು ಕೊಡ್ತೀವಿ "ಅಂದರು ಕಾಟಯ್ಯ

ಕೊನೆಯ ಸೀನ್ ನಲ್ಲಿ ದೇವಿಯು ರಕ್ತಬೀಜಾಸುರನ ವಧೆ ಮಾಡಿದಾಗ ಸೂರ್ಯ ನಿಧಾನವಾಗಿ ಕಣ್ತೆರೆಯುತ್ತಿದ್ದ
ಮಗನ ನಟನೆ ನೋಡಿದ ಜನರು ಬಂದು
ಭೂದೇವಮ್ಮ ನ ಬಳಿ ಹೇಳುವಾಗ ಗಂಡ ಬಾಲಾಜಿ ನೆ‌ನಪು ಬಂತು .ನಾಟಕ ಮುಗಿದು ಬಣ್ಣ ತೊಳೆಯಲು ಹೋದ ಸತೀಶನನ್ನು ಗೆಳೆಯರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಹೊತ್ತು ಕುಣಿಯುತ್ತಿದ್ದರು ,ಇದನ್ನು ಕಂಡ ಭೂದೇವಮ್ಮನ ಕಣ್ಣುಗಳಲ್ಲಿ ಆನಂದ ಬಾಷ್ಪ ಉದುರಿದವು.ಕ್ರಮೇಣವಾಗಿ ಸೂರ್ಯನ ಪ್ರಖರ ಬೆಳಕು ಹೆಚ್ಚಾಯಿತು.


ಸಿ‌ ಜಿ ವೆಂಕಟೇಶ್ವರ

 

No comments: