ಸ್ವರ್ಗ ನಿಸರ್ಗ . ವಿಮರ್ಶೆ.
ನಿಸರ್ಗದ ಚೆಲುವನ್ನು ವರ್ಣಿಸುವುದೇ ನನ್ನ ಕಾಯಕವೆಂದು ಪ್ರತಿದಿನವೂ ಜಪದಂತೆ ರೂಢಿಸಿಕೊಂಡಿರುವ ನೇಸರ ದಿನೇಶ್ ರವರ ಚೊಚ್ಚಲ ಕೃತಿ ಸ್ವರ್ಗ ನಿಸರ್ಗ ಓದುಗರ ಮನಸೆಳೆಯುತ್ತದೆ .ಪ್ರಕೃತಿ ಪ್ರಿಯರಿಗೆ ಇಲ್ಲಿನ ಕವಿತೆಗಳು ಬಹಳ ಇಷ್ಟವಾಗುತ್ತವೆ.ಬಹುತೇಕ ಗೀತೆಗಳು ಗೇಯತೆ ಹೊಂದಿರುವುದರಿಂದ ಓದುಗರು ಹಾಡಿನ ರೂಪದಲ್ಲಿ ಗುನುಗಿಕೊಳ್ಳುವರು.
ಹಾಸನದ ಕಾರ್ಯಕ್ರಮದಲ್ಲಿ ಪ್ರಾತಿನಿಧಿಕ ಚೊಚ್ಚಲ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪರಿಚಿತವಾದ ಸಹೃದಯ ದಿನೇಶ್ ರವರು ಸರಳ ಸಜ್ಜನ ಪ್ರತಿಭೆ . ನಮ್ಮ ಸ್ನೇಹ. ಈಗಲೂ ಮುಂದುವರೆದಿದೆ. ಈ ಪುಸ್ತಕದಲ್ಲಿ ನನ್ನ ಹೆಸರನ್ನು ಸಹ ನಮೂದು ಮಾಡಿರುವುದು ಅವರ ದೊಡ್ಡತನ .
ದಿನೇಶ್, ಎನ್, ಮಡಿವಾಳ ಅಮ್ಮಿನಳ್ಳಿರವರು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಮಿನಳ್ಳಿಯವರು .
ಓದಿದ್ದು ಹತ್ತನೆಯ ತರಗತಿಯಾದರೂ ಕವನ, ಕಥೆ, ಲೇಖನ, ಗಝಲ್, ಹನಿಗವನ, ನ್ಯಾನೊ ಕಥೆ, ಚುಟುಕು, ರುಬಾಯಿ, ಹಾಯ್ಕು, ಟಂಕಾ, ಮತ್ತು ಭಾವಗೀತೆಗಳ ರಚನೆಯಲ್ಲಿ ಅವರ ಪ್ರಬುದ್ಧತೆ ನೋಡಿದರೆ ಯಾವ ವಿದ್ವಾಂಸರಿಗೂ ಕಮ್ಮಿಯಿಲ್ಲ ಎನಿಸುತ್ತದೆ.
ಇವರ ಸಾಹಿತ್ಯ ಕೃಷಿ ಗುರ್ತಿಸಿ
ಕನ್ನಡ ಕವಿವಾಣಿ ಮಾಸಪತ್ರಿಕೆ ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಂದ ಸಾಹಿತ್ಯ ಮಂದಾರ ಪ್ರಶಸ್ತಿ.
ನವಪರ್ವ ಫೌಂಡೇಶನ್ (ರಿ.) ಬೆಂಗಳೂರು ಇವರಿಂದ ಜನಪದ ಕಾವ್ಯ ಪುರಸ್ಕಾರ
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚಿಂತಾಮಣಿ ಇವರಿಂದ ಕರುನಾಡು ಚುಟುಕು ಶ್ರೀ ಪ್ರಶಸ್ತಿ
ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ (ರಿ.) ಬೆಂಗಳೂರು ಇವರಿಂದ ಉತ್ತಿಷ್ಟ
ಕನ್ನಡ ಕವನ ಪ್ರಶಸ್ತಿ. ನೀಡಿ ಗೌರವಿಸಿವೆ .
ಇವರ ರಚನೆಗಳು
ನಿರಂತರ, ನಿಮ್ಮೆಲ್ಲರ ಮಾನಸ, ಕರ್ಮವೀರ, ತರಂಗ, ಸಂಪದ ಸಾಲು, ಮಾಸಪತ್ರಿಕೆಗಳು, ವಿಜಯವಾಣಿ, ಸಂಯುಕ್ತ ಕರ್ನಾಟಕ, ಜನಮಾಧ್ಯಮ, ಲೋಕಧ್ವನಿ, ಪ್ರಜಾಪ್ರಗತಿ, ಜನಮಿಡಿತ, ಬದಲಾವಣೆ, ಹೀಗೆ ಹಲವು ಮಾಸಪತ್ರಿಕೆಗಳು ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೂಡಬಿದಿರೆಯ "ಕಾಲ" ಎಂಬ ದೂರದರ್ಶನ ಚಾನೆಲ್ ಹಾಗೂ ಆಕಾಶವಾಣಿ ಕೇಂದ್ರ ಮಂಗಳೂರು ಮತ್ತು ಕಾರವಾರ ಇಲ್ಲೆಲ್ಲ ಸಾಹಿತ್ಯದ ಕಂಪು ಹರಡಿದೆ.
ಈ ಸಂಕಲನಕ್ಕೆ ಮುನ್ನುಡಿ ಬರೆದ ಕವಯತ್ರಿ ಮತ್ತು ವಿಮರ್ಶಕರಾದ ವಾಣಿ ಭಂಡಾರಿ ರವರ ಮಾತುಗಳಲ್ಲಿ ಹೇಳುವುದಾದರೆ
ರವಿಯು ನಿತ್ಯವೂ ಬೆಳಗುತಿರಲು ಪ್ರಕೃತಿಯ ಒಡಲಾಳದಲ್ಲಿ ಇರುವ ಲಕ್ಷಾಂತರ ಜೀವಜಂತುಗಳಿಗೆ ಭಾಸ್ಕರನ ಹೊಂಗಿರಣಗಳಿಂದಾಗಿ ಬಾಡಿದ ಮೊಗದಲ್ಲಿ ಹಿಡಿಯಷ್ಟಾದರೂ ನಗೆಮೊಗ್ಗು ಚೆಲ್ಲಲಿ ಎಂಬ "ನಿಸರ್ಗಕವಿ" ಗಳ ಮಹೋನ್ನತವಾದ ಅಶಯವು ತಮ್ಮ ಬೆಳಗಿನ ಕವಿತೆಗಳ ಮೂಲಕ ಸಹೃದಯರನ್ನು ತಲುಪುತ್ತಾ ಕವಿ ಮನಗಳಲ್ಲಿ ಸಂಭ್ರಮವನ್ನುಂಟು ಮಾಡುತ್ತದೆ.
ಹೀಗೆ ದಿನ ದಿನವೂ ಬೆಳಗಿನ ನವಿರು ಕಿರಣಕ್ಕೊಂದು ಹೊಸ ಕವಿತೆ ಎಂಬಂತೆ ನವನೂತನತೆಯಲ್ಲಿ ನಿಸರ್ಗವನ್ನು ಆಸ್ವಾದಿಸುತ್ತಾ, ರವಿಯನ್ನು ಧ್ಯಾನಿಸುತ್ತಾ, ಆರಾಧಿಸುತ್ತಾ, ಮೌನದೊಳಗೆ ಧ್ಯಾನಿಯಾಗಿ ಸಹೃದಯ ರಸಿಕರನ್ನು ರಂಜಿಸುವ ಕವಿಹೃದಯವು ನಿಸರ್ಗ ಕವಿಗಳಾಗಿ ಹೊರಹೊಮ್ಮಿರುವುದು ಅವರ ನೈಜ ಕಾವ್ಯ ಸಂಪತ್ತಿನ ದ್ಯೋತಕವೆನ್ನಬಹುದು. ಹಚ್ಚ ಹಸಿರಿನ ಬೆಚ್ಚನೆಯ ಸಿರಿ-ಝರಿ, ಕೆರೆ-ತೊರೆ. ಹಳ್ಳ-ಕೊಳ್ಳ, ಬನ-ವನಗಳ ನಡುವೆ ಕಾವ್ಯಕುಸುಮವಾಗಿ ಕಂಗೊಳಪ ದಿನೇಶ್ ಅವರು ನಾ ಕಂಡಂತೆ ಈಗಾಗಲೇ ಬೆಳಗಿನ ಕುರಿತಾಗಿಯೆ ಬರೆದಿರುವ ಕವಿತೆಗಳ ಸಂಖ್ಯೆ ಒಂದು ಸಾವಿರಕ್ಕಿಂತಲೂ ಮಿಗಿಲಾಗಿದೆ ಎಂಬುದು ಹೆಮ್ಮೆಯ ವಿಷಯ.
ಅವರ ನಿಸರ್ಗ ವರ್ಣನೆ ಯ ಕೆಲ ಸಾಲುಗಳು ಹೀಗಿವೆ..
ಹಾಡ್ಯಾವೊ ಬೆಳ್ಳಿ ಕಿರಣ ಓಡೋಡಿ ಬಂದು ನಿಂದು..
ಹೊಳ್ಳೆತೆ ಮೊಗವು ಚೆಂದ ನಗಿಗಡಲು ಉಕ್ಕಿ ಮೆರ್ದು..
ಹೊಳೆವ ಬೆಳ್ಳಿ ತಾರೆ ಅಲ್ಲಿ ಬಾನ ಮಡಿಲು ಚೆಂದ..
ನಲಿವ ಬಳ್ಳಿ ಬಳುಕಿ ಇಲ್ಲ. ಇಳೆಯ ಗುಡಿಗೆ ಅಂದ..
ಹೀಗೆ ಪ್ರತಿ ಪದ್ಯ ಓದುವಾಗ ನಿಸರ್ಗ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.
ಬೆನ್ನುಡಿ ಬರೆದ ದತ್ತಗುರು ಕಂಠಿ ರವರ ಮಾತಿನಂತೆ
ನಮ್ಮ ಸಾರಸ್ವತ ಲೋಕದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ದಿನೇಶ.ಎನ್.ಅಮ್ಮಿನಳ್ಳಿ ಯವರು, ಮೃದು ಸ್ವಭಾವ, ಮಿತ ಭಾಷಿ, ಅವರ ಪ್ರಥಮ ಕವನ ಸಂಕಲನ 'ಸ್ವರ್ಗ ನಿಸರ್ಗ ದಲ್ಲಿ ಸೌಮ್ಯ-ಸಂಸ್ಕಾರಯುತ ಕಾವ್ಯಧಾರೆ ಸ್ಪುರಣಗೊಂಡಿದೆ. ಸಂಪದ್ಭರಿತ ಬೆಳಗಿನ ಮಡಿಲ ಬೆಡಗಿನ ಹಾಡುಗಳು ಅನಾವರಣಗೊಂಡಿವೆ. ಬಡತನದ ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಇಂದಿನ ಕಾಲಕ್ಕನುಗುಣವಾಗಿ ಕಲಿತದ್ದು ಕಡಿಮೆಯೆನಿಸಿದರೂ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಪಾಂಡಿತ್ಯ, ಶಬ್ಧಗಳನ್ನು ದುಡಿಸಿಕೊಳ್ಳುವ ಕೌಶಲ್ಯತೆ ದಿನೇಶರಿಗಿದೆ. ನನಗೆ ತಿಳಿದ ಹಾಗೆ ದಿನೇಶರ ಕಾವ್ಯ ಸಂಪತ್ತು ಈಗಾಗಲೇ ನೂರಾರು ಕವಿಗೋಷ್ಠಿಗಳಲ್ಲಿ ಆಕಾಶವಾಣಿಯಲ್ಲ, ದೂರದರ್ಶನದಲ್ಲಿ ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಒಮ್ಮೆಲೆ ಹತ್ತು ಸಂಕಲನಕ್ಕಾಗುವಷ್ಟು ಕಾವ್ಯ ಸರಕು ಅವರಲ್ಲಿದ್ದರೂ ಸದ್ಯ ಒಂದಕ್ಕೆ ಮಾತ್ರ ಬಿಡುಗಡೆಯಾಗುವ ಸುಯೋಗ. ಸಾಹಿತ್ಯದ ಬಹುತೇಕ ಎಲ್ಲ ಪ್ರಾಕಾರಗಳಲ್ಲಿ ಕೈಯಾಡಿಸಿದರೂ ಕಾವ್ಯ ರಚನೆಯೆಂದರೆ, ಅಪರಿಮಿತ ಆಸಕ್ತಿ ಮತ್ತು ಸಾಹಿತ್ಯ ಭಕ್ತಿ, ಇಂದಿನ ಯುವ ಬರಹಗಾರರಿಗೆಲ್ಲ ಮಾದರಿಯೆನಿಸುವ ಅವರ ಕೈಂಕರ್ಯ ಅಮೋಘ ಮತ್ತು ಅದ್ಭುತ.
ನೇಸರ ದಿನೇಶ್ ರವರ ಈ ಕೃತಿ ಕಂಡು ಮೊದಲು ಸಂತಸಗೊಂಡವನು ನಾನು .ಇವರ ಪುಸ್ತಕವು ಕನ್ನಡ ಪುಸ್ತಕ ಪ್ರಾಧಿಕಾರ ದ ಸಹಾಧನ ಪಡೆದ ಕೃತಿಯಾಗಿದೆ.ಕನ್ನಡಿಗರು ಇವರ ಪುಸ್ತಕ ಕೊಂಡು ಓದಬೇಕಿದೆ.ಈ ವರ್ಷ ಅವರ ಹಲವು ಕೃತಿಗಳು ಬೆಳಕು ಕಾಣಲಿ ಎಂದು ಹಾರೈಸುವೆ.
ಪುಸ್ತಕದ ಹೆಸರು: ಸ್ವರ್ಗ ನಿಸರ್ಗ
ಕವಿ:ದಿನೇಶ್ ಎನ್ ಮಡಿವಾಳ
ಪ್ರಕಾಶನ: ದಿನಾ ಪ್ರಕಾಶನ .ಅಮ್ಮಿಹಳ್ಳಿ
ಬೆಲೆ: ೧೦೦
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment