02 December 2021

ಅನಾಮಿಕ ಯಾರು? ಕಥೆ


 


ಆ ಅನಾಮಿಕ ಯಾರು?



ಎರಡು ಬಾರಿ ನನ್ನವಳ ಬಳಿ ಬೈಸಿಕೊಂಡಿದ್ದೇನೆ ಇದೇ ವಿಚಾರಕ್ಕೆ ,ಇಂದು ಅವಳು ನನ್ನ ಜೊತೆಗಿದ್ದಿದ್ದರೆ ಖಂಡಿತಾ ಇಷ್ಟೊತ್ತಿಗೆ ಸಹಸ್ರನಾಮ , ಅರ್ಚನೆ, ಮಂಗಾಳಾರತಿ ಎಲ್ಲಾ ಆಗಿರುತ್ತಿತ್ತು! ಸೂರ್ಯ ಮುಳುಗಿ ಒಂದು ಗಂಟೆಯಾಗಿರುವುದಕ್ಕೆ ಕತ್ತಲೆ ನಿಧಾನವಾಗಿ ಆವರಿಸುತ್ತಿರುವುದು ಸಾಕ್ಷಿಯಾಗಿತ್ತು, ಅದರ ಜೊತೆಗೆ ಗೆಳೆಯ ಜಬಿ ಹೇಳಿದ ಮಾತು ಯಾಕೋ ನೆನಪಾಯಿತು," ಆ ಕಣಿವೆಯಲ್ಲಿ ಇಪ್ಪತ್ತು ‌ಕಿಲೋಮೀಟರ್ ಹುಷಾರು ಕಣೊ, ಎರಡು ‌ಮೂರು ಬಾರಿ ದರೋಡೆ ಆಗಿದೆ" ಛೇ... ಇವತ್ತೇ ಹೀಗೆ ಆಗಬೇಕಿತ್ತೇ ? ಮನೆಯಿಂದ ಮುನ್ನೂರು ಮೀಟರ್ ಹತ್ತಿರ ಇರುವ ಪೆಟ್ರೋಲ್ ಹಾಕಿಸಲು ನಾನೇಕೆ ಇಷ್ಟು ಸೋಮಾರಿಯಾದೆ?  ನನ್ನವಳು ಪದೇ ಪದೇ ಜ್ಞಾಪಿಸಿದರೂ ನನಗೇಕೆ ಈ ವಿಚಾರದಲ್ಲಿ ನಿರ್ಲಕ್ಷ್ಯ? ನನ್ನ ನಿರ್ಲಕ್ಷ್ಯಕ್ಕೆ ಸಾಕಷ್ಟು ಬಾರಿ ಇದೇ ರೀತಿಯಲ್ಲಿ ತೊಂದರೆ ಅನುಭವಿಸಿರುವೆ ,ಹೋದ ವಾರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತ ಹೋದಾಗ ಹೀಗೆಯೇ ಹಾಕಿತ್ತು, ಪುಣ್ಯಕ್ಕೆ  ಪೆಟ್ರೋಲ್ ಬಂಕ್  ಒಂದು ಕಿಲೋಮೀಟರ್  ಇರುವಾಗ ಪೆಟ್ರೋಲ್ ಖಾಲಿಯಾಗಿತ್ತು, ಅಂದು ನನ್ನವಳ ಜೊತೆಗೆ ನನ್ನ ಅಪ್ಪ, ಅಮ್ಮ, ಸೇರಿ ಅಷ್ಟೋತ್ತರ ಮಾಡಿದ್ದರು ಸಾಲದ್ದಕ್ಕೆ ನನ್ನ ಮಕ್ಕಳು ಜೋಕ್ ಮಾಡಿ ನಕ್ಕಿದ್ದರು. ಆದರೂ ನಾನು ಜಾಗೃತನಾಗಲೇ ಇಲ್ಲ. ಈಗ ಈ ಕಣಿವೆಯಲ್ಲಿ ಏನು ಮಾಡಲಿ? ಇಲ್ಲೇ ಕಾರ್ ಬಿಟ್ಟು ಹೋಗೋಣವೆ? ಅದೇಗೆ ಸಾದ್ಯ? ಗೆಳೆಯ ಹೇಳಿದಂತೆ ಈ ಜಾಗ ಸರಿ‌ ಇಲ್ಲ , ಯಾರಿಂದಲಾದರೂ ಸಹಾಯ ಪಡೆದು ಕಾರು ತೆಗೆದುಕೊಂಡು ಹೋಗಲು ತೀರ್ಮಾನಿಸಿದೆ.


ಕತ್ತಲು ಹೆಚ್ಚಿದಂತೆ ಕಣಿವೆಯಲ್ಲಿ ವಿಚಿತ್ರವಾದ ಪ್ರಾಣಿಗಳ ಸದ್ದು, ಬೀಸುವ ಬಲವಾದ ಗಾಳಿಗೆ ಮರಗಳ ಕೊಂಬೆಗಳು ಮುರಿದ ಸದ್ದು ,ದೂರದಲ್ಲಿ ನರಿ ಊಳಿಡುವ ಸದ್ದು ಕೇಳಿ ಯಾಕೋ ಸಣ್ಣಗೆ ನಡುಕು ಶುರುವಾಯಿತು . ಸಂಕಟ ಬಂದಿರುವುದು ಪಕ್ಕಾ ಆಗಿ  ಮನದಲ್ಲೇ  ವೆಂಕಟರಮಣನ ನೆನೆದು ಧೈರ್ಯ ತಂದುಕೊಂಡೆ.ಸಹಾಯಕ್ಕಾಗಿ ಎದುರುನೋಡುತ್ತಾ ರಸ್ತೆಯ ಪಕ್ಕದಲ್ಲಿ ನಿಂತೆ, ಮುಕ್ಕಾಲು ಗಂಟೆಯ ನಂತರ ದೂರದಲ್ಲಿ ಬೆಳಕು ಕಾಣಿಸಿತು, ಹತ್ತಿರ ಬರು ಬರುತ್ತಾ ಒಂದೆಡೆ ಸಂತಸ ,ಮತ್ತೊಂದೆಡೆ ಭಯ ಶುರುವಾಯಿತು, ಭಯಕ್ಕೆ ಕಾರಣ ಒಂದು ಜಬಿ ಹೇಳಿದ ಮಾತು ಮತ್ತು ಮೂರು ದಿನದ ಹಿಂದೆ ರಾತ್ರಿಯಲ್ಲಿ ಹೆದ್ದಾರಿ ದರೋಡೆ ಮಾಡಿ ಕಾರು ಚಾಲಕನನ್ನು ಕೈ ಕಾಲು ಕಟ್ಟಿ ಚರಂಡಿ ಯಲ್ಲಿ ಎಸೆದು  ಹೋದ ಕಳ್ಳರ ಬಗ್ಗೆ ಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು. 


ಅಳುಕಿನಿಂದಲೇ ಬೈಕ್ ಗೆ ಕೈ ಅಡ್ಡ ಹಾಕಿದೆ, "ಓ ಏನ್ ಸಾರ್ ಇಲ್ಲಿ" ಪರಿಚಿತ ಧ್ವನಿ! ಬೈಕ್ ಹೆಡ್ ಲೈಟ್ ಪೋಕಸ್ ಗೆ ಮುಖ ಕಾಣಲಿಲ್ಲ, ಕೈ ಅಡ್ಡ ಹಿಡಿದು ನೋಡಿದೆ. ನಮ್ಮ ಮನೆಯ ಮುಂದಿನ ನಮ್ಮ ಆತ್ಮೀಯರಾದ ನಂಜುಂಡಪ್ಪ ಸರ್. 

" ಸರ್ ಹೇಳಲು ನಾಚಿಕೆ ಆಗುತ್ತದೆ ಸರ್, ಪೆಟ್ರೋಲ್ ಖಾಲಿಯಾಗಿದೆ ಜೇಬಲ್ಲಿ ದುಡ್ಡಿದೆ, ಕ್ರೆಡಿಟ್ ಕಾರ್ಡ್ ಇದೆ, ಆದರೂ ಪೆಟ್ರೋಲ್ ಗಾಗಿ ಪರದಾಡುವ  ಪರಿಸ್ಥಿತಿ ನೋಡಿ " ಎಂದು ಇನ್ನೂ ನಾನು ಮಾತು ಮುಗಿಸಿರಲಿಲ್ಲ

" ಸಾರ್ ಜೋರಾಗಿ ದುಡ್ಡು, ಕಾರ್ಡ್ ಅನ್ನಬೇಡಿ ,ಸುಮ್ಮನಿರಿ, ಈ ಜಾಗ ಸರಿ ಇಲ್ಲ, ಆದಷ್ಟು ಬೇಗ ಇಲ್ಲಿಂದ ಹೊರಡಬೇಕು, ಹಾಂ.. ನಿಮ್ ಕಾರಲ್ಲಿ ಬಾಟಲ್ ಇದ್ರೆ ಕೊಡಿ, ನನ್ ಬೈಕಲ್ಲಿ ಪೆಟ್ರೋಲ್ ತೆಗೆದು ಕೊಡುವೆ" ಎಂದರು

"ಸಾರ್ ನಿಮಗೆ ಯಾಕೆ ತೊಂದ್ರೆ ,ನಿಮ್ ಬೈಕ್ ಕೊಡಿ ,ನೀವು ಇಲ್ಲೇ ಇರಿ ನಾನು ಇಲ್ಲಿಂದ ಇಪ್ಪತ್ತು ‌ಕಿಲೋಮೀಟರ್ ದೂರದ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ತರ್ತೀನಿ" ಎಂದೆ 

"ಸಾರ್ ನಾನು ಬೆಳಿಗ್ಗೆ ಪುಲ್ ಟ್ಯಾಂಕ್  ಮಾಡಿಸಿದ್ದೆ ,ನೀವೇನೂ ಯೋಚನೆ ಮಾಡಬೇಡಿ "ಎಂದು ಅವರೇ ಕಾರ್ ಬಳಿ ಬಂದು ಬಾಟಲ್ ಗಾಗಿ‌ ತಡಕಾಡಿದರು ಕೊನೆಗೆ ನಾನೇ ಬಾಟಲ್ ಕೊಟ್ಟೆ ,

ಪೆಟ್ರೋಲ್ ಹಾಕಿಕೊಂಡು ಅವರಿಗೆ ಧನ್ಯವಾದ ಹೇಳಿ ನಾಳೆ ಸಿಗುವೆ ಎಂದು ಕಾರ್ ಸ್ಟಾರ್ಟ್ ಮಾಡಿ ಹೊರಟೆ , ಮಾರ್ಗ ಮಧ್ಯದಲ್ಲಿ ನನ್ನವಳ ಪೋನ್ ಯಾಕೆ ಲೇಟ್? ಯಾವಾಗ ಬರ್ತೀರಾ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದಳು,  ಏನೋ ಕಾರಣ ಹೇಳಿದೆ ,ಪೆಟ್ರೋಲ್ ವಿಷಯ ಬಿಟ್ಟು. ನಾಲ್ಕೈದು ಕಿಲೋಮೀಟರ್ ಸಾಗಿದ ಬಳಿಕ ಅಪ್ಪ ಪೋನ್ ನಲ್ಲೆ ನಿಧಾನವಾಗಿ ಗದರಿದರು " ಅದೇನು ಕೆಲಸಾನೋ ನಿಂದು ,ಬೆಳಕಿದ್ದಾಗಲೆ ಮನೆ ಸೇರೋಕ್ಕಾಗಲ್ವೆ? ಹೇಳೋ ಕೇಳೋ ಕಾಲ್ದಾಗೆ" ಎಂದು ಪೋನ್ ಕಟ್ ಮಾಡಿದರು.


ಬೆಳಿಗ್ಗೆ ವಾಕಿಂಗ್ ಹೊರಟೆ, ಎದುರಿಗೆ ವಾಕ್ ಮಾಡುತ್ತಾ ಬಂದ ನಂಜುಂಡಪ್ಪ ಸರ್  ದಂಪತಿಗಳು   ಸಿಕ್ಕಿದರು ನಗುತ್ತಲೆ "  ಗುಡ್ ಮಾರ್ನಿಂಗ್ ಸರ್  ರಾತ್ರಿ ನಿಮ್ಮಿಂದ    ನನಗೆ ಬಹಳ ಅನುಕೂಲ ಆಯ್ತು ಸರ್ ಒಳ್ಳೆಯ ಟೈಮ್ ಗೆ ಮದಲಿಂಗನ ಕಣಿವೆ ನಲ್ಲಿ ಬೈಕ್ ನಲ್ಲಿ ಬಂದು ಪೆಟ್ರೋಲ್ ಕೊಟ್ಟಿರಿ ಇಲ್ಲ ಅಂದಿದ್ರೆ ನಾನು ರಾತ್ರಿ ಪೂರಾ ಅಲ್ಲೇ ಭಯದಲ್ಲೇ ಕಾಲ ಕಳಿಬೇಕಾಗಿತ್ತು" ಎಂದು ಕೃತಜ್ಞತೆ ಸಲ್ಲಿಸಿದೆ, 

ನಂಜುಂಡಪ್ಪ ಸರ್ ಧರ್ಮಪತ್ನಿ "ಅಯ್ಯೋ ನೀವ್ ಒಬ್ರು, ಸರ್ ಇವ್ರ ಬೈಕ್ ಪಂಚರ್ ಆಗಿ ಮೂರ್ ದಿನ ಆಯ್ತು ,ಪಂಚರ್ ಹಾಕುಸ್ರೀ ಅಂದ್ರೆ ಇವತ್ತು ನಾಳೆ ,ಅಂತಾರೆ 

ನೀವ್ ನೋಡಿದ್ರೆ ಬೈಕ್ ನಲ್ಲಿ ರಾತ್ರಿ ಬಂದ್ರು ಅಂತಿರಾ, ಬಹುಶಃ ಇವ್ರು ಕನಸಲ್ಲಿ ಬಂದಿರಬೇಕು " ಎಂದು ಅವರ ಗಂಡನ ಕಡೆ ತಿರುಗಿ ಕಣ್ಣು ಕೆಂಪಗೆ ಮಾಡಿದರು.

" ಈಗ ನಿನಗೆ ಸಮಾಧಾನ ಆಯ್ತಾ ಸರ್? ಅಂತೂ ಬೆಳಿಗ್ಗೆ ನನಗೆ ಸುಪ್ರಭಾತ ಸೇವೆ ಆಯ್ತು " ಎಂದು ನಗುತ್ತಾ ಹೊರಟರು.


ನಾನು ಆಶ್ಚರ್ಯದಿಂದ ನನಗೇ ಪ್ರಶ್ನೆ ಮಾಡಿಕೊಂಡೆ,ಹಾಗಾದರೆ ರಾತ್ರಿ ಮದಲಿಂಗನ ಕಣಿವೆಯಲ್ಲಿ ನನಗೆ ಸಹಾಯ ಮಾಡಿದ ಅನಾಮಿಕ ಯಾರು?

ಬೆಳಗಿನ   ವಾಕ್ ನಿಂದ ಹಣೆಯ ಮೇಲಿನ    ಸಣ್ಣ ಮಟ್ಟದ ಬೆವರ ಹನಿಗಳು ಬರು ಬರುತ್ತಾ ದೊಡ್ಡದಾದವು....


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ