29 September 2021

ಇರುವುದೊಂದೇ ಹೃದಯ....


 



ಇರುವುದೊಂದೇ ಹೃದಯ.


ನಾವು ಜೀವಂತವಾಗಿರಲು 

ಸದಾ ಮಿಡಿಯುತಿರಬೇಕು 

ನಮ್ಮ ಹೃದಯ|

ಅದಕ್ಕೆ ಪ್ರತಿದಿನ ನಾವು

ದಂಡಿಸುತ್ತಿರಬೇಕು

ನಮ್ಮ ಕಾಯ ||


ಇಂದಿನ ಜೀವನ ಶೈಲಿ, ಆಹಾರ ಪದ್ಧತಿ ಇವುಗಳು ನಮ್ಮ ದೇಹದ ತೂಕದ ಮೇಲೆ ಗಣನೀಯವಾಗಿ ಪರಿಣಾಮ ಬೀರಿ ನಮ್ಮ ದೇಹ ಅಡ್ಡಡ್ಡ ಬೆಳೆಯಲು ಕಾರಣವಾಗಿವೆ .ಇದರ ಜೊತೆಯಲ್ಲಿ ನಾವೇ ಸೃಷ್ಟಿ ಮಾಡಿಕೊಂಡ ಅನವಶ್ಯಕ ಒತ್ತಡ ನಮ್ಮ ಹೃದಯ ಅಳುವಂತೆ ಮಾಡಿದೆ.ಇದು ಎಲ್ಲರಿಗೂ ಗೊತ್ತಿದ್ದೂ ಹೃದಯದ ಕರೆಗೆ ಕಿವುಡಾಗಿರುವೆವು ಇವೆಲ್ಲದರ ಪರಿಣಾಮ ಇಂದು ಭಾರತ ಹೃದಯಾಘಾತದ ರಾಜಧಾನಿಯಾಗಿ ಪರಿವರ್ತಿತವಾಗಿದೆ.


ಅಕಾಲಿಕವಾಗಿ ಯುವ ಮನಸುಗಳು ಹೃದಯ ಸ್ತಂಭನಕ್ಕೆ ಬಲಿಯಾಗುವ ಸುದ್ದಿ ಕೇಳಲು ಓದಲು ನಮ್ಮ ಹೃದಯಗಳು ಭಾರವಾಗುತ್ತವೆ .ಆ ಕ್ಷಣ ಮಾತ್ರ ನಮ್ಮ ಹೃದಯ ರಕ್ಷಣೆಗೆ ಪಣ ತೊಡುವವರಿಗೆ ಕಡಿಮೆಯೇನಿಲ್ಲ ಮರುಕ್ಷಣ .ಅದೆಲ್ಲ ಮರೆತು ಅದೇ ಕೆಟ್ಟ ಜೀವನ ಶೈಲಿ ,ಅವೇ ದುರಭ್ಯಾಸಗಳು, ಬೆಳಿಗ್ಗೆ ಎಂಟು ಗಂಟೆಯ ಮೇಲೆ ಏಳುವುದು, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚಿಂತೆ, ಅನವಶ್ಯಕ ಸ್ಪರ್ಧೆಗೆ ಇಳಿವುದು, ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಂದುವರೆದೇ ಇರುತ್ತದೆ. ಮತ್ತೊಮ್ಮೆ ನಮ್ಮ ಹೃದಯ ನಮಗೆ ನೆನಪಾಗುವುದು ನಮ್ಮ ಅತ್ಮೀಯರಿಗೆ ಯಾರಿಗಾದರೂ ಹೃದಯಾಘಾತ ಅದಾಗ ಅಥವಾ ಪತ್ರಿಕೆಯಲ್ಲಿ ವಿಶ್ವ ಹೃದಯ ದಿನ ಎಂಬ ಹೆಡ್ಲೈನ್ ಓದಿದಾಗ.


ಆತ್ಮೀಯರೆ ನಮ್ಮ ಹೃದಯ ನಮ್ಮ ಹೆಮ್ಮೆ .ನಮ್ಮ ಜೀವದ ಆಧಾರ. ತಿಳಿದು ತಿಳಿದೂ‌ ಇರುವ ನಮ್ಮ ಒಂದೇ ಹೃದಯವನ್ನು ‌ನಿರ್ಲಕ್ಷ್ಯ ಮಾಡದಿರೋಣ.

ದಿನದಲ್ಲಿ ಕನಿಷ್ಠ ಅರ್ಧ ಗಂಟೆ ದೈಹಿಕ ಚಟುವಟಿಕೆಗಳನ್ನು ಮಾಡೋಣ. ಅನವಶ್ಯಕ ಚಿಂತೆ ಮಾಡದಿರೋಣ ,ಹೃದಯ ಕಾಪಾಡುವ ಬಗ್ಗೆ, ನಮ್ಮ ಆರೋಗ್ಯ ಕಾಪಾಡುವ ಬಗ್ಗೆ ಚಿಂತನ ಮಂತನ ಮಾಡೋಣ.‌ಅನಾರೋಗ್ಯಕರ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳೋಣ. ಅನವಶ್ಯಕ ಒತ್ತಡ ಕಡಿಮೆ ಮಾಡಿಕೊಳ್ಳೋಣ. ಯೋಗ ಧ್ಯಾನದ ಕಡೆ ಮುಖ ಮಾಡೋಣ. ಸಮತೋಲನ ಮತ್ತು ಆರೋಗ್ಯಕರ ಆಹಾರದ ಕಡೆ ಮುಖ ಮಾಡೋಣ .ದುರಭ್ಯಾಸಗಳನ್ನು ತ್ಯಜಿಸೋಣ. ನಮ್ಮ ನಮ್ಮ ನಂಬಿದ ಹೃದಯಗಳೊಂದಿಗೆ  ದೀರ್ಘ ಕಾಲ ಬಾಳಿಗಾಗಿ, ಇರುವ ನಮ್ಮ ಹೃದಯ ಉಳಿಸಲು ಹೃದಯದ ಮಾತು ಕೇಳೋಣ .ಏಕೆಂದರೆ ನಮಗೆ ಇರುವುದೊಂದೇ ಹೃದಯ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: