30 September 2021

ಕೊಳ್ಳುಬಾಕರಾಗದಿರೋಣ .


 


ಕೊಳ್ಳುಬಾಕ ಸಂಸ್ಕೃತಿ ತ್ಯಜಿಸೋಣ 


ಇಷ್ಟು ಇದ್ದರೆ ಮತ್ತಷ್ಟು ಬೇಕು, ಒಂದು ಕಾರು ಸಾಲದು ಮತ್ತೊಂದು ಬೇಕೇೆ ಬೇಕು  ಹೊಸ ಮಾಡೆಲ್ ವಾಷಿಂಗ್ ಮೆಷಿನ್ ಕೊಳ್ಳೋಣ , ಈಗ ಎರಡು ಆಂಡ್ರಾಯ್ಡ್ ಪೋನ್ ಇವೆ, ಇರಲಿ ಒಂದು ಐ ಪೋನ್ ಕೊಳ್ಳೋಣ, ಪಕ್ಕದ ಮನೆಯವನು ಬುಲೆಟ್ ಬೈಕ್ ತಂದ, ನನ್ನ ಹೀರೋ ಹೊಂಡಾ ಜೊತೆಗೆ ನಾನು ಒಂದು ಬುಲೆಟ್ ಬುಕ್ ಮಾಡುವೆ ....ಹೀಗೆ ಪಟ್ಟಿ ಬೆಳೆಯುತ್ತದೆ.

ಈ ರೀತಿಯಲ್ಲಿ ಬೇಕಿದ್ದರೂ ಬೇಡದಿದ್ದರೂ ಅನವಶ್ಯಕವಾಗಿ ತೋರ್ಪಡಿಕೆಗೆ ಮತ್ತು ಅಗತ್ಯವಿಲ್ಲದಿದ್ದರೂ  ಕೊಳ್ಳುವ ಕೆಟ್ಟ ಚಟವೇ ಕೊಳ್ಳುಬಾಕ ಸಂಸ್ಕೃತಿ .


ಕೆಲವೊಮ್ಮೆ ಅವನು

ಕೊಂಡ ವಸ್ತುಗಳ ಉಪಯೋಗ

ತಿಳಿಯದೇ ಅವನೇ ಪ್ರಶ್ನೆ ಮಾಡಿಕೊಂಡ ನಾನು ಈ

ವಸ್ತು ಕೊಂಡಿದ್ದು ಯಾಕ?|

ಇಂತವರಿಗೆ ನಮ್ಮ ಪರಮೇಶಿ

ಕರೆಯುವನು ಕೊಳ್ಳುಬಾಕ||


ಅವಶ್ಯಕತೆ ಇಲ್ಲದಿದ್ದರೂ ಅನುಕರಣೆ, ವಿದೇಶಿ ಸಂಸ್ಕೃತಿಗಳ ಪ್ರಭಾವ ,ಮಾಧ್ಯಮಗಳ ಜಾಹಿರಾತಿನ  ಭರಾಟೆ , ವಿವೇಚನೆಯ ಕೊರತೆ, ಸಂಪತ್ತು ಮತ್ತು ಪ್ರತಿಷ್ಠೆಯ ತೋರ್ಪಡಿಕೆ ಇವುಗಳು ಕೊಳ್ಳುಬಾಕ ಸಂಸ್ಕೃತಿಗೆ ನಾಂದಿ ಹಾಡಿವೆ .


ಜಾಹೀರಾತುಗಳಲ್ಲಿ ಹೊಸ

ವಸ್ತುಗಳು ಯಾವುದೇ ಬರಲಿ

ಖರೀದಿಸುವಳು ಚಿಂತಿಸದೇ

ಎಷ್ಟೇ ಆದರೂ ದುಬಾರಿ|

ಯಾಕೆಂದರೆ ನನ್ನವಳು

ಕೊಳ್ಳುಬಾಕ ಸಂಸ್ಕೃತಿಯ

ಅಂತರರಾಷ್ಟ್ರೀಯ ರಾಯಭಾರಿ||


ಕೊಳ್ಳುಬಾಕ ಸಂಸ್ಕೃತಿ ಮತ್ತು ಮಿತಿ ಮೀರಿದ ನಿರೀಕ್ಷೆಗಳನ್ನು ಹೊಂದುತ್ತಿರುವ ಮನುಷ್ಯ ಇಂದು ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಳೆದುಕೊಂದು ಖಿನ್ನತೆಗೆ ಒಳಗಾಗುತ್ತಿದ್ದೇವೆ.ಇದು ಕೌಟುಂಬಿಕ ಕಲಹಗಳಿಗೂ ಕಾರಣವಾಗುತ್ತದೆ

.

ಕೊಳ್ಳುಬಾಕ ಸಂಸ್ಕೃತಿಯು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಉದಾಹರಣೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೆಲೆಯ   ಒಂದು ಫೋನ್ ಕೊಂಡು ಒಂದು ವರ್ಷದ ಬಳಿಕ ನಾವು ಮಾರಲು ಹೋದರೆ ಸಾವಿರ ರೂಗೂ ಮಾರಲು ಆಗುವುದಿಲ್ಲ. ಅಷ್ಟು ಹಣ ನಮಗೆ ನಷ್ಟ ,ಆದರೂ ಅದು ಸುಸ್ಥಿತಿಯಲ್ಲಿದ್ದರೂ ಅದನ್ನು ಕೊಟ್ಟು ಮತ್ತೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೆಲೆಯ ಪೋನ್ ಕೊಳ್ಳುತ್ತೇವೆ ಹೇಗೂ ಡೆಬಿಟ್ ,ಕ್ರೆಡಿಟ್ ಕಾರ್ಡ್ ಇರುತ್ತವೆ ಉಜ್ಜಿ ತೆಗೆದುಕೊಂಡು ಬಿಲ್ ಕಟ್ಟಲು ಮತ್ತೆ ಸಾಲ ಮಾಡುವೆವು . ಇ. ಎಮ್.ಐ  ಕಟ್ಟಲು ಒದ್ದಾಡುವೆವು , ಆ ಸಾಲ ತೀರಿಸಲು  ಕ್ರಮೇಣ ಓ.ಟಿ ಮಾಡುವುದು ,ಚಿಂತೆ ಮಾಡುವುದು ,ಖಿನ್ನತೆಗೆ ಜಾರುವುದು ಇದರ ಪರಿಣಾಮವಾಗಿ ಬಿ. ಪಿ ಶುಗರ್ ಆಗಮನ !ಇದು  ಕೊಳ್ಳುಬಾಕ ಸಂಸ್ಕೃತಿಯ ವಿಷವರ್ತುಲ.


ಹಾಗಾದರೆ ಈ ರೋಗದಿಂದ ಹೊರಬರಲು ಸಾದ್ಯವಿಲ್ಲವೇ? 


ಏಕಿಲ್ಲ ಮನಸ್ಸಿದ್ದರೆ ಮಾರ್ಗ ಭಾರತೀಯ ಸನಾತನ ಪರಂಪರೆಯಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತತ್ವ ಇದೆ ಅದನ್ನು ಪಾಲಿಸಿದರೆ ಸಾಕು. ನಮ್ಮ ಅಂಕೆ ತಪ್ಪಿದ ಮನಸ್ಸಿನ ನಿಯಂತ್ರಣ ಮಾಡಿಕೊಳ್ಳಬೇಕು. ಆರ್ಥಿಕ ಶಿಸ್ತು ಬೆಳಸಿಕೊಳ್ಳಬೇಕು. ಸರಳತೆಯಲ್ಲಿ ಸೌಂದರ್ಯವಿದೆ ಎಂಬುದನ್ನು ಅರಿಯಬೇಕು.ಅಂಧವಾಗಿ ಇತರರ ಅನುಕರಿಸುವ ಗುಣವನ್ನು ಬಿಟ್ಟು ಸ್ವಂತ ಯೋಚಿಸಿ ನಿರ್ದಾಕ್ಷಿಣ್ಯವಾಗಿ ಉತ್ತಮ ತೀರ್ಮಾನ ತೆಗೆದುಕೊಳ್ಳುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.


 ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧ ಜಾಗೃತಿ ಮೂಡಿಸಿ ಅದನ್ನು ವಿರೋದಿಸುವೆವು ಅಂದ ಮಾತ್ರಕ್ಕೆ ಕಂಜೂಸ್ ಕೂಡಾ ಆಗಬಾರದು. ಯಾವುದು ಅಗತ್ಯ ಅದನ್ನು ಕೊಳ್ಳಲೇಬೇಕು .ಅಗತ್ಯ ಮತ್ತು ಅನಗತ್ಯದ ಮಧ್ಯದ ಸೂಕ್ಷವಾದ ಗೆರೆಯನ್ನು ಯಾರು ಚೆನ್ನಾಗಿ ಅರ್ಥ ಮಾಡಿಕೊಳ್ಳವರೋ ಅಂತವರು ಕೊಳ್ಳುಬಾಕರಾಗುವುದಿಲ್ಲ.

ಆದ್ದರಿಂದ ನಾವೆಲ್ಲರೂ ಕೊಳ್ಳುಬಾಕರಾಗದೇ ಬುದ್ದಿವಂತರಾಗೋಣ ಆರ್ಥಿಕ ಶಿಸ್ತು ರೂಢಿಸಿಕೊಂಡು ನೆಮ್ಮದಿಯ ಜೀವನ ಸಾಗಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: