06 September 2021

ಪಾಪ ಪುಣ್ಯ .ಲೇಖನ


 ಹೌದು ..

ಧರ್ಮ ,ಅದ್ಯಾತ್ಮ, ಒಳಿತು ಕೆಡುಕಿನ ಬಗ್ಗೆ ನಂಬಿಕೆ ಇರುವ ನಾನು ಪಾಪ ಪುಣ್ಯ ಗಳನ್ನು ನಂಬುತ್ತೇನೆ .

ಒಳಿತು ಮಾಡಿದರೆ ಪುಣ್ಯ ಸಂಪಾದನೆ ಕೆಡುಕುಗಳು ಪಾಪಕ್ಕೆ ಕಾರಣ ಎಂದು ನಂಬಿರುವ ಸನಾತನ ಪರಂಪರೆಯನ್ನು ನಾವು ಗೌರವಿಸಲೇಬೇಕು. ಅರಿಷಡ್ವರ್ಗಗಳ ನಿಯಂತ್ರಣ ದಲ್ಲಿ ಇಟ್ಟು ಕೊಂಡು ,ಧರ್ಮ ಅರ್ಥ ಕಾಮ ಮೋಕ್ಷ ಮಾರ್ಗ ಅನುಸರಿಸಿದರೆ ಪುಣ್ಯ ಸಂಪಾದನೆ ಸಾದ್ಯ.   ಇದಕ್ಕೆ ಪರೋಪಕಾರ   ದಾನ ಧರ್ಮ, ಸತ್ಸಂಗ ಮುಂತಾದವು ಸಹ ಸಹಕಾರಿ .


ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು, ಹಿಂಸೆ ,  ಪರಪೀಡನೆ, ಪರನಿಂದೆ ಮುಂತಾದವು ಪಾಪದ ಕೊಡ ತುಂಬಲು ಕಾರಣವಾಗುತ್ತವೆ.


ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮ ಶಿಕ್ಷಕರು ನಾವು ಒಳ್ಳೆಯ ಕೆಲಸ ಮಾಡಿದರೆ ನಮ್ಮ ಬಲ ಭುಜ ದಲ್ಲಿ ಇರುವ ದೂತರು ‌ಲೆಕ್ಕ ಇಟ್ಟುಕೊಳ್ಳುವರು ಪಾಪಕಾರ್ಯ ಮಾಡಿದರೆ ಎಡಭುಜದ ದೂತರು ಲೆಕ್ಕ ಇಟ್ಟುಕೊಂಡು ಯಮನಿಗೆ ವರದಿ ನೀಡುವರು. ಪಾಪ ಜಾಸ್ತಿಯದರೆ ಕುದಿಯುವ ಎಣ್ಣೆ ಬಾಣಲೆಯಲ್ಲಿ ನಮ್ಮನ್ನು ತೇಲಿಸುವರು ಎಂದು ಹೇಳುತ್ತಿದ್ದುದು ನೆನಪಾಗುತ್ತದೆ.


ಜನರು ಅನೈತಿಕ ಚಟುವಟಿಕೆಗಳಲ್ಲಿ ಅಧರ್ಮದ ಕಾರ್ಯದಲ್ಲಿ ತೊಡುಗುವುದನ್ನು ತಡೆಯಲು ಇಂತಹ ಕಥೆಗಳು ಸ್ವಲ್ಪ ಮಟ್ಟಿಗಾದರೂ ಸಹಾಯಕ ಎಂಬುದರಲ್ಲಿ ಸಂದೇಹ ವಿಲ್ಲ. ಇತ್ತೀಚೆಗೆ ಅಧರ್ಮಿಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗಿ, ಪಾಪಕಾರ್ಯಗಳು ಹೆಚ್ಚಾಗುತ್ತಿವೆ ಎನಿಸುತ್ತದೆ. ಇದಕ್ಕೆ ಪೂರಕವಾಗಿ ನಾಸ್ತಿಕರ ವಾದ ಮುಗಿಲು ಮುಟ್ಟುತ್ತದೆ. ಅನ್ಯಾಯ ಅಕ್ರಮ ಮಾಡಿದವರು ಬಹಳ ಸುಖವಾಗಿರುವರು ಎಂಬ ಒಣ ಸಮರ್ಥನೆ ನೀಡುವರು. ಅದಕ್ಕೆ ಪ್ರತಿವಾದವಾಗಿ ಅವರು ಯಾವಾಗಲೋ ಮಾಡಿದ ಪುಣ್ಯ ಕಾರ್ಯಗಳು ಅವರ ಕಾಪಾಡುವವು ಎಂಬ  ಪ್ರತಿವಾದವೂ ಚಿಂತನಾರ್ಹ


ನಾಸ್ತಿಕರಿಗೆ ದೇವರು ಧರ್ಮ ಪಾಪ ಪುಣ್ಯ ದ  ಬಗ್ಗೆ  ನಂಬಿಕೆ ಇರದಿದ್ದರೆ 

ಸ್ವಾಮಿ ವಿವೇಕಾನಂದರ ವಾಣಿಯಂತೆ ಪರೋಪಕಾರವೇ ಪುಣ್ಯ ಪರಪೀಡನೆಯೇ ಪಾಪ  ಎಂಬ ಭಾವನೆ ಹೊಂದಿದರೆ ಸಮಾಜದ ಅಕ್ರಮಗಳು ಅನೈತಿಕ ಚಟುವಟಿಕೆಗಳು ಕಡಿಮೆಯಾಗಿ ಸರ್ವರೂ  ನೆಮ್ಮದಿಯ ಜೀವನ ನಡೆಸಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: