ಎಣ್ಣೆ ಬೆಲೆ ಯಾವಾಗ ಇಳಿವುದು?
ಮಾದ್ಯಮಗಳಲ್ಲಿ ಯಾವಾಗಲೂ ಎಣ್ಣೆಯದೇ ಸುದ್ದಿ . ಅದು ತಲೆಗೆ ಹಾಕುವ ಎಣ್ಣೆ ಆಗಬಹುದು, ಹೊಟ್ಟೆಗೆ ಹಾಕುವ ಎಣ್ಣೆ ಆಗಬಹುದು, ಅಡುಗೆ ಎಣ್ಣೆ ಆಗಬಹುದು ..
ಬಜೆಟ್ ಅನಂತರ ಎಣ್ಣೆ ಬೆಲೆ ಏರಿಕೆ ಸಾಮಾನ್ಯ. ಆದರೆ ಈಗ ಅಕಾಲಿಕವಾಗಿ ಅಡುಗೆ ಎಣ್ಣೆ ಬೆಲೆ ಗಗನಚುಂಬಿಯಾಗಿದ್ದು ಸಾರ್ವಜನಿಕ ಜೀವನದ ಮೇಲೆ ದುಷ್ಪರಿಣಾಮ ಬೀರಿದ್ದು ಸುಳ್ಳಲ್ಲ.
ಇತ್ತೀಚಿನ ದಿನಗಳಲ್ಲಿ
ಅಡುಗೆ ತೈಲ ಬೆಲೆ ಗಗನಕ್ಕೇರಲು ಮೊದಲ ಕಾರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಳೆ ಎಣ್ಣೆ ಬೆಲೆ ಏರಿಕೆ.
ಎರಡನೆಯ ಕಾರಣ ಭಾರತದ ಎಣ್ಣೆ ಕಾಳುಗಳ ಉತ್ಪಾದನೆ ಕಡಿಮೆ ಆಗಿರುವುದು.
ಮೂರನೆಯದಾಗಿ ತೈಲಕ್ಕೆ ಹೆಚ್ಚುತ್ತಿರುವ ಬೇಡಿಕೆ .
ಕೊನೆಯದಾಗಿ ಹಣದುಬ್ಬರ ಸಹ ತನ್ನ ಕೊಡುಗೆ ನೀಡಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತದ ತಾಳೆ ಎಣ್ಣೆಯ ಆಮದು 8300 ಮೆಟ್ರಿಕ್ ಟನ್ , ಇದು 1964 ರಲ್ಲಿ ಕೇವಲ 7 ಮೆಟ್ರಿಕ್ ಟನ್ ಎಂದರೆ ನಮ್ಮ ಎಣ್ಣೆಯ ಬೇಡಿಕೆ ಎಷ್ಟಿರಬಹುದು ಎಂಬುದು ತಿಳಿಯುತ್ತದೆ. ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಇಂಡೋನೇಷ್ಯಾ ದಂತಹ ರಾಷ್ಟ್ರಗಳು ಬೆಲೆ ಹೆಚ್ಚಳ ಮಾಡಿ ನಮ್ಮ ದೇಶದ ಅಡುಗೆ ಕೋಣೆಗಳಲ್ಲಿ ಪರೋಕ್ಷವಾಗಿ ಆತಂಕ ಮೂಡಿಸುತ್ತವೆ.
ಇದಕ್ಕೆ ಪರಿಹಾರವಾಗಿ ನಾವೇ ತಾಳೆ ಎಣ್ಣೆಯನ್ನು ಹೆಚ್ಚು ಉತ್ಪಾದನೆ ಮಾಡಬಹುದು ಎಂದು ಸಲಹೆ ನೀಡುವವರ ಸಂಖ್ಯೆ ಏನೂ ಕಡಿಮೆಯಿಲ್ಲ . ಅದಕ್ಕಾಗಿ ಈ ಅಂಕಿ ಅಂಶ ನೋಡಿ. ಭಾರತ ತಾಳೆ ಎಣ್ಣೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಹದಿನೇಳನೇ ಸ್ಥಾನ ಪಡೆದಿದೆ, ವರ್ಷಕ್ಕೆ 2 ಲಕ್ಷ ಟನ್ ತಾಳೆ ಉತ್ಪಾದನೆ ಮಾಡಿದರೂ ಅದು ಪ್ರಪಂಚದ ಉತ್ಪಾದನೆಯ 0.5 % ಎಂದರೆ ನಮಗೆ ಅರ್ಥವಾಗುತ್ತದೆ ನಾವು ವಿದೇಶಗಳ ಮೇಲೆ ಹೇಗೆ ಅವಲಂಬಿತವಾಗಿದ್ದೇವೆ ಎಂದು.
ಹಾಗಾದರೆ ನಮ್ಮ ದೇಶದಲ್ಲಿ ಇದರ ಉತ್ಪಾದನೆ ಯಾಕೆ ಹೆಚ್ಚಾಗಿಲ್ಲ ? ಸರ್ಕಾರಗಳು ಏಕೆ ಕ್ರಮ ಕೈಗೊಂಡಿಲ್ಲ ? ಎಂದು ವಿತಂಡವಾದ ಮಾಡುವ ವೀರರಿಗೆ ಈ ಅಂಕಿ ಅಂಶ ಉತ್ತರ ನೀಡುತ್ತದೆ.ತಾಳೆ ಗಿಡಗಳ ಪೋಷಣೆಗೆ ಪ್ರಖ್ಯಾತಿ ಪಡೆದಿರುವ ಇಂಡೋನೇಷ್ಯಾ, ಮಲೇಷ್ಯಾ ಗಳಲ್ಲಿ ವಾರ್ಷಿಕ ಮಳೆ ಪ್ರಮಾಣ2500 mm ಭಾರತದ ವಾರ್ಷಿಕ ಮಳೆ 1000 mm ಇಷ್ಟು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಹೆಚ್ಚು ತಾಳೆ ಉತ್ಪಾದನೆ ಅಸಾಧ್ಯ.
ಇನ್ನೂ ಬೇಡಿಕೆಯ ವಿಷಯಕ್ಕೆ ಬಂದರೆ 2002 ನೇ ಇಸವಿಯಲ್ಲಿ ತಾಳೆ ಎಣ್ಣೆ ಗೆ 25% ಬೇಡಿಕೆ ಇದ್ದು 2014 ರಲ್ಲಿ 50% ಏರಿತ್ತು ಈಗ ಇನ್ನೂ ಹೆಚ್ಚಾಗಿದೆ.
ಅರ್ಥಶಾಸ್ತ್ರದ ಮೂಲಸಿದ್ದಾಂತದ ಪ್ರಕಾರ ಬೇಡಿಕೆ ಹೆಚ್ಚಾದರೆ ಬೆಲೆ ಹೆಚ್ಚಾಗುತ್ತದೆ ಎಂಬುದನ್ನು ತಿಳಿದ ವಿದೇಶಗಳು ಲಾಭದ ಆಸೆಗಾಗಿ ಬೆಲೆ ಏರಿಸಿವೆ ಅದಕ್ಕೆ ನಾವು ಬೆಲೆ ತೆರುತ್ತಿದ್ದೇವೆ.
ಹಾಗಾದರೆ ಸರ್ಕಾರಗಳು ಬೆಲೆ ನಿಯಂತ್ರಣ ಮಾಡದೇ ಸುಮ್ಮನೆ ಕುಳಿತಿವೆಯೇ? ಜನರ ಜೀವನದ ಬಗ್ಗೆ ಕಾಳಜಿ ಇಲ್ಲವೆ ? ಎಂಬ ಪ್ರಶ್ನೆ ಏಳುವುದು ಸಹಜ .
ಈ ದಿಸೆಯಲ್ಲಿ ಸರ್ಕಾರಗಳು ಸಹ ಕಾರ್ಯ ಪ್ರವೃತ್ತವಾಗಿವೆ ಆದರೆ ಇನ್ನೂ ಹೆಚ್ಚಿನ ಗಮನ ನೀಡುವುದು ಅಗತ್ಯ.
ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಸಂದರ್ಭದಲ್ಲಿ ತಾಳೆ ಬೆಳೆಯುವ ಬೆಳೆಗಾರರಿಗೆ ಹಲವಾರು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದರ ಜೊತೆಗೆ ಸರ್ಕಾರಗಳು ಇತರೆ ಎಣ್ಣೆ ಕಾಳುಗಳ ಉತ್ಪಾದನೆ ಗೆ ರೈತರಿಗೆ ಪ್ರೋತ್ಸಾಹ ನೀಡಬೇಕಿದೆ.
ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ KOF(ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಲದ) ಕಾರ್ಯ ಶ್ಲಾಘನೀಯ. ಸರ್ಕಾರ ಇಂತಹ ಸಂಘಗಳಿಗೆ ಇನ್ನೂ ಹೆಚ್ಚಿನ ಬೆಂಬಲ ನೀಡಿ ಸೂರ್ಯಕಾಂತಿ, ಶೇಂಗಾ, ಕುಸುಬೆ , ಎಳ್ಳು ಮುಂತಾದ ಬೆಳೆಗಳನ್ನು ಹೆಚ್ಚು ಬೆಳೆಯಲು ಪ್ರೋತ್ಸಾಹ ಮಾಡಬೇಕು. ಇದರ ಜೊತೆಗೆ ಸರ್ಕಾರಗಳು ಹಣದುಬ್ಬರವನ್ನು ನಿಯಂತ್ರಿಸಲು ಸರ್ವ ಪ್ರಯತ್ನ ಮಾಡಬೇಕು. ಇದರ ಜೊತೆಗೆ ಸಾರ್ವಜನಿಕರಾದ ನಾವು ಯಾವುದೇ ವಸ್ತುಗಳ ಬೆಲೆ ಏರಿದಾಗ ಬರೀ ಸರ್ಕಾರಗಳ ಬಯ್ಯುತ್ತಾ ಕೂರದೆ ವಾಸ್ತವ ಪರಿಸ್ಥಿತಿ ಅರಿತು ಆ ಸಮಸ್ಯೆಗಳನ್ನು ಪರಿಹರಿಸಲು ನಾವೂ ಸಹ ಕೈಜೋಡಿಸಬೇಕಿದೆ.
ಒಟ್ಟಿನಲ್ಲಿ ಎಣ್ಣೆ ಸದಾ ಸುದ್ದಿಯಲ್ಲಿರುವುದು. ಖಾದ್ಯ ತೈಲ ಬೆಲೆ ಏರಿಕೆ ಯಿಂದ ಸುದ್ದಿ ಆಗದೆ ಇಳಿದು ಸುದ್ದಿಯಾಗಿ ನಮ್ಮ ಅರ್ಥವ್ಯವಸ್ಥೆಯು ವೃದ್ಧಿ ಆಗಲೆಂದು ಆಶಿಸೋಣ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment