02 June 2021

ಮಹಿಮೆ ,ಕಥೆ


 


ಮಹಿಮೆ 


 ಕಥೆ 



ಮಗಳು ಮಲಗಿದ್ದಳು 

ಬೆಳಿಗ್ಗೆ ಎಂಟು ಗಂಟೆಯಾದರೂ ಎದ್ದಿರಲಿಲ್ಲ, ಸಾಮಾನ್ಯ ದಿನಗಳಲ್ಲಿ ಆರು,ಆರೂವರೆಗೆ ಎದ್ದು  ಅಮ್ಮನ ಮಾತು ದಿಕ್ಕರಿಸಿ, ಅಮ್ಮನಿಗೆ ಮನೆ ಅಂಗಳ ಗುಡಿಸಲು, ಮನೆ ಮುಂದೆ ನೀರು ಹಾಕಲು ಸಹಾಯ ಮಾಡುತ್ತಿದ್ದಳು ಗೌರಿ .


"ಈ ವರ್ಷ ಏಳನೇ ಕ್ಲಾಸ್ ಪಾಸಾಗಿದಿಯಾ, ಇನ್ನು ಎಂಟನೇ ಕ್ಲಾಸ್, ಸ್ಕೂಲ್ ಇನ್ನೂ ಓಪನ್ ಆಗಿಲ್ಲ, ಪಕ್ಕದ್ ಮನೆ ರಾಧಾ ಕೊಟ್ಟ ಹಳೇ  ಬುಕ್ ತೊಗೊಂಡ್  ಓದು ಹೋಗು" ಎಂದು ಗದರಿದರೂ ,

" ಓದ್ತಿನಿ ಇರಮ್ಮ ಹಗಲೊತ್ತು ಪೂರ್ತಿ ಟೈಮ್ ಇರುತ್ತೆ, ನೀ‌ನು ಪಾಪ ದಿನ ಪೂರ್ತಿ ಕೆಲಸ ಮಾಡಿ ಸುಸ್ತು ಆಗ್ತೀಯಾ ಅದಕ್ಕೆ ನಿನಗೆ ಸ್ವಲ್ಪ ಹೆಲ್ಪ್ ಮಾಡಿದೆ ಅಷ್ಟೇ " ಎಂದ ಮಗಳ ಮಾತ ಕೇಳಿ ತಾಯಿ ಒಳಗೊಳಗೆ ಖುಷಿ ಪಡುತ್ತಿದ್ದಳು.


ಅಂದೇಕೋ ಎಂಟಾದರೂ ಏಳದ ಮಗಳ ನೋಡಿ , ರಾತ್ರಿಯೆಲ್ಲಾ ತೋಟಕ್ಕೆ ನೀರು ಹಾಯಿಸಲು ಹೋದ ತಂದೆ , ಬೆಡ್ ಶೀಟ್ ತೆಗೆದು ಏಳಮ್ಮ ಚಿನ್ನು. ಎಂದು ಹಣೆ ಮೇಲೆ ಕೈಇಟ್ಟ, ಕಾದ ಕಾವಲಿಯಂತಾಗಿತ್ತು ಹಣೆ, ಗಾಬರಿಯಿಂದ ,ಏ ಇವಳೆ ಬಾರೆ ಇಲ್ಲಿ, ಚಿನ್ನುಗೇನೆ ಇಂಗೆ ಜ್ವರ ಬಂದಿದೆ? ನೋಡೋದಲ್ವ? ಬರೀ ನಿನಗೆ ಕಸ ಹೊಡೆಯೋದು, ನೆಲ ಗುಡಿಸೋದೆ ಕೆಲಸ"ಎಂದು  ಸಿಟ್ಟಿನಿಂದ ಆತಂಕದಿಂದ ನುಡಿದ ಜಗನ್ನಾಥ.


ಪೊರಕೆ ಬಿಸಾಕಿ ಓಡಿ ಬಂದ ತಾಯಿ ಮಗಳ ತಬ್ಬಿ ಅಯ್ಯೋ ಏನಮ್ಮ ಇದು ಮೈಯಿ ಕಾದ ಅಂಚಿನಂಗೈತೆ , ನಾನು ನೊಡ್ಲೇ ಇಲ್ಲ" ಎಂದು ಅಳುತ್ತಾ ಮಗಳ ತಬ್ಬಿಕುಳಿತಳು.


" ಅಳಬ್ಯಾಡ ಸುಮ್ನಿರು, ಆಸ್ಪತ್ರೆಗೆ ಕರ್ಕೊಂಡು ಹೋಗ್ತೀನಿ ಎಲ್ಲಾ ಸರಿಹೋಗುತ್ತೆ"  ಸಮಾಧಾನ ಹೇಳಿದ ಜಗನ್ನಾಥ .


ಎಂಟು ಮೈಲಿ ದೂರದಲ್ಲಿರುವ ಆಸ್ಪತ್ರೆಗೆ ಹೋಗಲು ಬಸ್ ಇರಲಿಲ್ಲ, ಪಕ್ಕದ ಬೀದಿಯ ದಾದು ಮನೆಗೆ ಹೋಗಿ , ಮಗಳ ಅನಾರೋಗ್ಯದ ಕಾರಣ ತಿಳಿಸಿ ಆಸ್ಪತ್ರೆಗೆ ಬರಲು ಕೇಳಿದ ಜಗನ್ನಾಥ,

"  ಅಣ್ಣ ಈಗ ಟೈಟ್ ಲಾಕ್ಡೌನ್ ಐತೆ,   ನಿ‌ನ್ನೆ ಇಂಗೆ ಹೋಗಿ ಪೋಲೀಸ್ ನವರ ಲಾಟಿ ಏಟು ತಿಂದು ,ಹಿಂಭಾಗದಲ್ಲಿ ನೀಲಿ ಬರೆ ಬಂದಿದೆ ನೋಡು "ಎಂದು ಬರ್ಮುಡ ಸರಿಸಿ ತೋರಿಸಿದ, 


ಬೇಸರದಿಂದ ಎದ್ದ ಜಗನ್ನಾಥ ದಾದು ಮನೆಯಿಂದ ಹೊರ ನಡೆದ , ಅಕ್ಕ ಪಕ್ಕದ ಮನೆಯವರ ಬೈಕ್ ನಲ್ಲಿ ತನ್ನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟ  ಯಾರೂ ಒಪ್ಪದಿದ್ದಾಗ ಮಗಳ ತಲೆಯ ಮೇಲೆ ಒಂದು ಟವಲ್ ಹಾಕಿ , ತನ್ನ ಹೆಗಲ ಮೇಲೆ  ಕೂರಿಸಿಕೊಂಡು ಎಂಟು ಮೈಲಿ ದೂರದಲ್ಲಿರುವ ಆಸ್ಪತ್ರೆಗೆ ನಡೆಯಲು ಶುರುಮಾಡಿದ , ಬಾಯಾರಿಕೆ ಯಾದಾಗ ಅಲ್ಲೇ ರಸ್ತೆಯ ಪಕ್ಕದಲ್ಲಿ ಇರುವ ಬೋರ್ ವೆಲ್ ನೀರು ಕುಡಿದು ಮತ್ತೆ ನಡೆಯಲು ಶುರುಮಾಡಿದ , ಅಂತೂ ಆಸ್ಪತ್ರೆ ತಲುಪಿದ ಅಲ್ಲಿ ಜನಜಾತ್ರೆ ,ಮಗಳು ಸುಸ್ತಾದಂತೆ ಕಂಡಳು , ಬೆಳಿಗ್ಗೆಯಿಂದ ಇಬ್ಬರೂ ಏನೂ ತಿಂದಿಲ್ಲದಿರುವುದು ನೆನಪಾಯಿತು, ಅಲ್ಲೇ ಹತ್ತಿರವಿರುವ ಅಂಗಡಿಯಲ್ಲಿ ಒಂದು ಬಿಸ್ಕತ್ತಿನ ಪೊಟ್ಟಣ ತಂದು ತಿನ್ನಿಸಿದನು, 


" ರಾತ್ರಿಯಿಂದ ಜ್ವರ ಸ್ವಾಮಿ, ನೋಡಿ ಮೈ ಸುಟ್ ಹೋಗ್ತೈತೆ, ಒಂದ್ ಬಾಟ್ಲಿ ಹಾಕಿ ,ಎರಡು ಇಂಜೆಕ್ಷನ್ ಹಾಕಿ ಸ್ವಾಮಿ " ಒಂದೇ ಸಮನೆ ಹೇಳಿದ ಭಯಗೊಂಡ ತಂದೆ


" ಇಲ್ಲಿ ಡಾಕ್ಟರ್ ನಾನೋ ,ನೀನೋ"


"ನೀವೇನೆ ಸಾ, ಹೋದ್ ಸಲ ನನಗಿ ಜ್ವರ ಬಂದಾಗ ನೀವು ಬಾಟ್ಲಿ ಹಾಕಿದ್ರಿ ಅದಕ್ಕೆ ಅಂಗಂದೆ ಸ್ವಾಮಿ"


" ಈಗ ಕೋವಿಡ್ ಇದೆ ,ಯಾರಿಗೂ ಬಾಟ್ಲಿ ಹಾಕಲ್ಲ, ಇಂಜೆಕ್ಷನ್ ಮಾಡಿ ,ಮಾತ್ರೆ ಕೊಡ್ತೀನಿ ಮೂರ್ ದಿನ ಬಿಟ್ ಬನ್ನಿ"  ಎಂದರು  ಡಾಕ್ಟರ್.


ಮಗಳನ್ನು ಹೆಗಲಮೇಲೆ ಹೊತ್ತು ಮನೆಗೆ ಹಿಂತಿರುಗುವಾಗ ದಾರಿಯುದ್ದಕ್ಕೂ ಮಗಳ ಮೈ ಮುಟ್ಟಿ ನೋಡಿ ಜ್ವರ ಕಡಿಮೆಯಾಗದಿದ್ದನ್ನು ಅರಿತು ,ಡಾಕ್ಟರ್ ನನ್ನ ಬೈಯಲು ಶುರುಮಾಡಿದರು. ಊರು ಹತ್ತಿರವಾದಂತೆ ಸೂರ್ಯದೇವ ಗುಡ್ಡಗಳ ಮರೆಯಲ್ಲಿ ಅವಿತುಕೊಳ್ಳಲು ಹವಣಿಸುತ್ತಿದ್ದ, ದೂರದ ದಾರಿ ನಡೆದಿದ್ದರೂ ಮಗಳು ಕತ್ತಲಾದರೆ ಹೆದರಬಹುದೆಂದು ದೊಡ್ಡ ಹೆಜ್ಜೆ ಹಾಕಿ ನಡೆದ ಅಂತೂ ಕತ್ತಲಾಗುವುದರೊಳಗೆ ಮನೆ ಮುಂದೆ ಬಂದು ನಿಂತ.


ತಲೆಬಾಗಿಲಿನಲ್ಲೆ ಕಾಯುತ್ತಿದ್ದ ತಾಯಿಹೃದಯ ಮಗಳ ತಬ್ಬಿಕೊಂಡು ಇನ್ನೂ ಮೈ ಬಿಸಿಇರುವುದನ್ನು ಕಂಡು ಅಳುತ್ತಾ, ಇದೇನಿದು ಇವಳಿಗೆ ಜ್ವರ ಸ್ವಲ್ಪನೂ ಕಮ್ಮಿ ಆಗಿಲ್ಲ ಎಂಗೆ ತೋರಿಸಿದಿರಿ ನೀವು" ಎಂದು ಕೇಳಿದಳು ಪುಟ್ಟಮ್ಮ.


ಮನೆಯ ಪಡಸಾಲೆಯಲ್ಲಿ ಚಾಪೆಯ ಮೇಲೆ ಮಗಳ ಮಲಗಿಸಿ ಆಗ ತಾನೆ ಕಾಸಿದ್ದ ಗಂಜಿ ತಂದು ಕುಡಿಸಿದಳು ,ತಕ್ಷಣ ಏನೋ ಹೊಳೆದವಳಂತೆ ಕೈಕಾಲು ಮುಖ ತೊಳೆದುಕೊಂಡು, ನೀವು ಇಲ್ಲೆ ಮಗುನ ನೋಡ್ಕೊಂಡ್ ಇರ್ರಿ ನಾನು ಬರ್ತಿನಿ ಎಂದು ಹೊರಟೇ ಬಿಟ್ಟಳು, ಜಗನ್ನಾಥ ಎಲ್ಲಿಗೆ ಎಂದು ಕೇಳಲಿಲ್ಲ.


" ನೀನ್ ಇಂಗ್ ಮಾಡಿದರೆ ಎಂಗವ್ವ? ನಾನ್ ಏನ್ ಕಮ್ಮಿ ಮಾಡಿದಿನಿ ನಿನಿಗೆ, ವಾರ ವಾರ. ಮಂಗಳವಾರ, ಶುಕ್ರವಾರ ,ಪೂಜೆ ಮಾಡ್ತಾ ಇದಿನಿ, ವರ್ಷಕೊಂದ್ ಕೋಳಿ  ಕೊಯ್ದು ಜಾತ್ರೆ ಮಾಡಿದಿವಿ ,ಇನ್ನೇನು ಬೇಕು ನಿನಿಗೆ, ನನ್ ಮಗ ಚೆನ್ನಾಗಿ ಆಗ್ಬೇಕು ಅಷ್ಟೇ, ಅವಳು ಬೇಗ ಗುಣ ಆಗ್ತಾಳೆ ಅಂದ್ರೆ ಬಲಕ್ಕೆ ಪ್ರಸಾದ ಕೊಡು , ಲೇಟ್ ಆಗುತ್ತೆ ಕಷ್ಟ ಆಗುತ್ತೆ ಅನ್ನಂಗಿದ್ರೆ ಎಡಕ್ಕೆ ಕೊಡು" ಎಂದು ಮೂರು ಬಾರಿ ಅಡ್ಡ ಬಿದ್ದು ಗ್ರಾಮದೇವತೆ ಚೌಡೇಶ್ವರಿ ಯನ್ನು ಕೇಳಿದಳು ಪುಟ್ಟಮ್ಮ.


  ಅಮ್ಮನ ನೆತ್ತಿಯ ಮೇಲಿನಿಂದ ಬಲಬಾಗಲ್ಲಿ ಹೂ ಕೆಳಗೆ ಬಿದ್ದಿತು,

ನನ್ ತಾಯಿ ನೀನ್ ನಮ್  ಕೈ ಬಿಡಲ್ಲ ಅಂತ ಗೊತ್ತು ಕಣವ್ವ ಎಂದು ಮತ್ತೆ ಅಡ್ಡ ಬಿದ್ದು, ಪೂಜಾರಪ್ಪನಿಂದ ಭಂಡಾರ ಪಡೆದು ಸೀರೆ ಸೆರಗಿನ ತುದಿಗೆ ಗಂಟುಹಾಕಿಕೊಂಡು ಮನೆಗೆ ಬಂದು ಭಂಡಾರ ಮಗಳ ಹಣೆಗೆ ಇಟ್ಟಾಗ ಜಗನ್ನಾಥನಿಗೆ ಇವಳು ದೇವಾಲಯಕ್ಕೆ ‌ಹೋಗಿದ್ದು ತಿಳಿಯಿತು.


" ಇನ್ನೇನು ತೊಂದ್ರೆ ಇಲ್ಲ ಅಮ್ಮ ,ಎಲ್ಲಾ ಒಪ್ಕೊಂಡೈತೆ ಬೇಗ ವಾಸಿಯಾಗುತ್ತೆ" ಎಂದು ಗಂಡ ಮತ್ತು ಮಗಳಿಗೆ ಧೈರ್ಯ ಹೇಳಿ ಅಡುಗೆ ಮನೆಗೆ ತೆರಳಿದಳು.


ಮಗಳನ್ನು ಹೆಗಲ ಮೇಲೆ ಹೊತ್ತು

ಹದಿನಾರು ‌ಮೈಲಿ ದೂರ ನಡೆದು ಸುಸ್ತಾದ ಜಗನ್ನಾಥ ಊಟದ ನಂತರ ನೆಲಕ್ಕೆ ತಲೆ ಇಟ್ಟ ತಕ್ಷಣ ಗೊರಕೆ ಹೊಡೆಯಲು ಶುರು ಮಾಡಿದ, ಪುಟ್ಟಮ್ಮ ಅರ್ಧ ಗಂಟೆಗೊಮ್ಮೆ ಮಗಳ ಹಣೆ ಮೇಲೆ ಕೈ ಇಟ್ಟು ನೋಡಿದರು ಜ್ವರ ಕಡಿಮೆಯಾದ ಲಕ್ಷಣಗಳು ಕಾಣಲಿಲ್ಲ, ಮತ್ತೆ ರಾತ್ರಿ ಹನ್ನೆರಡರ ಸಮಯದಲ್ಲಿ ,ಮನೆಯ ಹೊರಬಂದು ಚೌಡೇಶ್ವರಿ ದೇವಿ ಗುಡಿಯ ಕಡೆ ನಿಂತು ಮನದಲ್ಲಿ ಬೇಡಿಕೊಂಡು ಮಗಳ ಪಕ್ಕದಲ್ಲೇ ಮಲಗಿದಳು, ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ.


ಬೆಳಿಗ್ಗೆ ಆರು ಗಂಟೆಗೆ "ಅಮ್ಮ.. ಅಪ್ಪ... ಬೆಳಗಾಯ್ತು ಎದ್ದೇಳಿ" ಎಂದು ಮಗಳು ಕೂಗಿದಾಗ ಎದ್ದ ಪುಟ್ಟಮ್ಮ ಮೊದಲು ಮಗಳ ಹಣೆ ಮೇಲೆ ಕೈ ಇಟ್ಟು ನೋಡಿದಳು ಜ್ವರ ಇರಲಿಲ್ಲ... ಮಗಳ ಮುಖ ಗೆಲುವಾಗಿತ್ತು....



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು








No comments: