04 June 2021

ಬಾಲಜಣ್ಣ .ಕಥೆ


 



*ಬಾಲಾಜಣ್ಣ*


ಕುಂಟ , ಶ್ಯವ್ಟಾ, ಲಂಗ್ಡಾ, ಎಳವ , ಹೀಗೆ ದಿನಕ್ಕೊಂದು ಹೆಸರಿನಿಂದ ಕರೆದು ಅವಮಾನವನ್ನು ಬಾಲಾಜಿಯು ಮೊದ ಮೊದಲು ಅಳುತ್ತಲೇ ಸ್ವೀಕರಿಸಿ, ಬರು ಬರುತ್ತಾ, ಅದು ಮಾಮೂಲಿಯಾಗಿ ತನ್ನ ಹೆಸರೇ ಅವನಿಗೆ ಮರೆತುಹೋಗಿತ್ತು, ತಂದೆಯಿಲ್ಲದ ಮಗನನ್ನು ಅಮ್ಮ ಕೂಲಿ ನಾಲಿ‌ಮಾಡಿ ಸಾಕುತ್ತಿದ್ದರು, 


ಒಂದು ದಿನ‌ ರಾತ್ರಿ ಮನನೊಂದ ಮಗ ಅಮ್ಮನ ಕೇಳಿಯೇ ಬಿಟ್ಟ " ಅಮ್ಮ ನನ್ನ ಒಂದು  ಕಾಲೇಕೆ ಹೀಗಾಗಿದೆ? ನನ್ನ ಗೆಳೆಯರು ಮತ್ತು ಊರವರು ನಾನು ನಡೆಯುವುದನ್ನು ಹಂಗಿಸುವರು, ಮತ್ತು ನನ್ನ ಹೆಸರು ಹಿಡಿದು ಕರೆಯದೇ ಕೆಟ್ಟ ಪದಗಳಿಂದ ಬೈಯುವರು. ಅದನ್ನು ಕೇಳಿ ನನಗೆ ಅಳು ಬರುವುದು " ಎಂದು ಕಣ್ಣಲ್ಲಿ ನೀರು ಹಾಕುತ್ತಲೇ ಕೇಳಿದ.


ಮಗನ ಕಣ್ಣೀರ ವರೆಸಿ ತಾನೂ ತನ್ನ ಕಣ್ಣಲ್ಲಿ ಬಂದ ನೀರನ್ನು ಸೆರಗಿನಿಂದ ವರೆಸಿಕೊಂಡು ಮಗನ ಸಮಾಧಾನ ಮಾಡುತ್ತಾ 

"ಅಳಬ್ಯಾಡ ಕಣೋ ನನ್ ಮಗನೆ, ಇದ್ರಲ್ಲಿ ನಿಂದೇನೂ ತಪ್ಪಿಲ್ಲ ಕಣಪ್ಪ,ನೀನು ಹುಟ್ಟಿದಾಗಿಂದ ಒಂದು ಕಾಲು ಐಬು ಕಣಪ್ಪ, ತಾಲೂಕ್ ಆಸ್ಪತ್ರೆ, ದೊಡ್ ಆಸ್ಪತ್ರೆ ಎಲ್ಲಾ ತೋರ್ಸಿದೆ ಕಣಪ್ಪ , ಆ ಡಾಕ್ಟ್ರು ಅದೆಂತದೋ, ಪೋಲಿಯಾ ಅಂದ್ರು, ಅದು ವಾಸಿ ಆಗಲ್ಲಂತೆ ಕಣಪ್ಪ, ...

ಯಾರಪ್ಪ ನಿನ್ನ ಬೈದೋರು? ನಾಳೆ ಅವರ್ನ ನನಿಗೆ ತೋರ್ಸು ,ಅವ್ರ ಗಾಚಾರ ಬಿಡಿಸ್ತಿನಿ, ನೀನೇನು ಅದ್ನ ತಲೆಗೆ ಹಚ್ಕಬ್ಯಾಡ ಇವತ್ತಿಂದ ಇನ್ನೂ ಸೆನಾಗಿ ಓದು, ನಿನ್ ಬೈಯ್ಯೋ ಜನ , ಹಂಗ್ಸೋ ಜನ ಬಾಯ್ ಮುಚ್ಕೆಂಪ್ತಾರೆ, ಎಂದು ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮತ್ತು ಧೈರ್ಯ ಹೇಳಿದರು ತಾಯಿ ದೇವಕ್ಕ  . ಅಮ್ಮನ ಧೈರ್ಯದ ಮಾತು ಕೇಳಿ ಮಗ ಹಾಗೆಯೇ ಅಮ್ಮನ ತೊಡೆಯ ಮೇಲೆ ನಿದ್ರೆಗೆ ಜಾರಿದ ಬಾಲಾಜಿ.


ಅಮ್ಮನಿಗೆ ನಿದ್ರೆ ಬರಲಿಲ್ಲ ಬದಲಿಗೆ ಪ್ರಶ್ನೆಗಳ ಸರಮಾಲೆ ಅವಳ ಮುಂದೆ ಬಂದು ನಿಂತಿತು, " ಸಿಕ್ ವಯಸ್ಸಲ್ಲೆ ಗಂಡನ್ ಕಳ್ಕೊಂಡು ಈ ಮಗನ್ ಸಾಕಕೆ ಕೂಲಿ ಮಾಡ್ಕಂಡು ಜೀವ್ನ ಮಾಡೋದು ನನ್ ತಪ್ಪೇ?

ನನ್ ಮಗಂಗೆ ಕಾಲ್ ಸೆನಾಗ್ ಇಲ್ದೇ ಇರೊಂಗಾಗಿದ್ ನಮ್ ತಪ್ಪೆ? 

ನಮ್ ಪಾಡಿಗೆ ನಾವ್ ಮರ್ವಾದೆಯಿಂದ ಜೀವ್ನ ಮಾಡ್ತಾ ಇದ್ರು ಈ ಜನ ಯಾಕ್ ನನ್ ಮಗನ್ನ ಇಂಗೆ ಮಾತಾಡ್ತಾರೆ? ಎಂದು ಮತ್ತೆ ಎರಡು  ಹನಿಗಳನ್ನು ಉದುರಿಸಿದರು,  ಆ ಹನಿಗಳು ಮಗನ ಕೈ ಮೇಲೆ ಬಿದ್ದು ನಿದ್ರೆಯಲ್ಲಿದ್ದ ಮಗ ಕೈ ಅಲುಗಾಡಿಸಿದ, ಮಗನನ್ನು ಎತ್ತಿ ಚಾಪೆಯ ಮೇಲೆ ಮಲಗಿಸಿ, ಉತ್ತರ ದಿಕ್ಕಿಗೆ ನಿಂತು " ತಾಯಿ ದೇವಸತ್ತಿ ಚೌಡವ್ವ ನನ್ ಮಗುಂಗೆ ,ನಂಗೆ ಯಾವ ತೊಂದ್ರೆ ಇಲ್ದೆ ಕಾಪಾಡವ್ವ ಎಂದು  ಕೈಮುಗಿದು ತನ್ನ ಬಲಗೈಯನ್ನು ಮಡಿಚಿ ತಲೆದಿಂಬಿನಂತೆ ತಲೆ ಕೆಳಗೆ ಇಟ್ಟುಕೊಂಡು ಮಗನ ಪಕ್ಕದಲ್ಲೇ ಮಲಗಿದರು ದೇವಕ್ಕ.


ಅಮ್ಮನ ಧೈರ್ಯದ ಮಾತುಗಳು, ಮಗನಿಗೆ ಮಾರ್ಗದರ್ಶನದಂತೆ ನಿಂತವು, ಆಗಾಗಾ ಜನರಾಡುವ ಕುಹಕದ ಮಾತುಗಳಿಗೆ ಬಾಲಜಿ ಕಿವುಡಾದ ಓದಿನ ಕಡೆ ಗಮನಹರಿಸಿದ.


" ನಾಲ್ಕನೇ ತರಗತಿಯಲ್ಲಿ ಈ ವರ್ಷ ಬಾಲಾಜಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆದಿರುವನು ಎಲ್ಲರೂ ಚಪ್ಪಾಳೆ ಹೊಡಿಯಿರಿ " ಎಂದು ಶಿಕ್ಷಕರಾದ ತಿಪ್ಪೇಸ್ವಾಮಿ ಹೇಳಿದಾಗ ಮಕ್ಕಳು ಜೋರಾಗಿ ಚಪ್ಪಾಳೆ ತಟ್ಟಿದರು ,ಬಾಲಾಜಿ ಗೆ ತನಗರಿವಿಲ್ಲದೇ ಕಣ್ಣಲ್ಲಿ ನೀರು ಜಿನುಗಿದವು ಆದರೆ ಈ ಬಾರಿ ಆನಂದದಿಂದ.


ರಿಸಲ್ಟ್ ಕಾರ್ಡ್ ಹಿಡಿದು ಅಮ್ಮನ ಬಳಿ ಬಂದು ಅದನ್ನು ತೋರಿಸಿ "ಅಮ್ಮ ನೋಡು ನಾನು ಇಡೀ ಸ್ಕೂಲ್ ಗೆ ಪಸ್ಟ್ ಬಂದಿದಿನಿ" ಎಂದು ಮೊಗದಲ್ಲಿ ನಗುತುಂಬಿಕೊಂಡು ತೋರಿಸಿದ.


ಅಮ್ಮ ಹಿರಿಹಿರಿ ಹಿಗ್ಗುತ್ತಾ" ಬಾಳ ಸಂತೋಸ ಕಣಪ್ಪ, ನನಗೆಲ್ಲಿ ಇದುನ್ನ ಓದಾಕೆ ಬರುತ್ತೆ ,ಆದ್ರೂ ನೀನಿಗೆ ಸೆನಾಗಿ ನಂಬ್ರು ಬಂದಿರೋದು ಬಾಳ ಸಂತೋಸ ಕಣಪ್ಪ ,ಆ ನಮ್ ಸತ್ತಿ ಚೌಡವ್ವ   ಕಣ್ ಬಿಟ್ಲು ಕಣಪ್ಪ  ನಾಳಿಕೆ ಸುಕ್ರುವಾರ ಅವ್ವನ್ ಗುಡಿಗೆ ಹೋಗಿ ಹಣ್ಣು ಕಾಯಿ ಮಾಡಿಸ್ಕೆಂಡು ಬಾ, ಇಂಗೆ ಸೆನಾಗಿ ಓದಿ ,ಗೌರ್ಮೆಂಟ್ ಕೆಲ್ಸ ತಗಾಳಪ್ಪ " ಎನ್ನತ್ತಾ ತನ್ನ ಎರಡೂ ಕೈಗಳಿಂದ ಮಗನ ಮುಖವ ನೇವರಿಸಿ ತಲೆಗೆ ಒತ್ತಿಕೊಂಡು ನೆಟಿಕೆ ಮುರಿದರು ದೇವಕ್ಕ.


ಬಾಲಾಜಿಯ ಶೈಕ್ಷಣಿಕ ಪ್ರಗತಿಯನ್ನು ಕಂಡ ಅವನ ಸ್ನೇಹಿತರು ಐದನೆಯ ತರಗತಿಯಲ್ಲಿ ಅವನಿಗೆ ಗೌರವ ಕೊಡಲಾರಂಭಿಸಿದರು, ಕುಂಟ ಬಾಲ, ಬಾಲ, ಎಂದು ಹಂಗಿಸುವವರು ಕ್ರಮೇಣ ,ಬಾಲಾಜಿ, ಎನ್ನಲು ಆರಂಭ ಮಾಡಿದರು, ಇದಕ್ಕೆ ಪೂರಕವಾಗಿ ತರಗತಿಯ ಶಿಕ್ಷಕರಾದ ತಿಪ್ಪೇಸ್ವಾಮಿ ಮಾಸ್ಟರ್ " ಮಕ್ಕಳೇ ಅಂಗವಿಕಲತೆ ಶಾಪವಲ್ಲ, ಅವರೂ ನಮ್ಮಂತೆ ಮನುಷ್ಯರು ಅವರಿಗೂ ಜೀವಿಸುವ ಹಕ್ಕಿದೆ" ಎಂಬ ಮಾತುಗಳು ಸಹ ಮಕ್ಕಳ ಮನ ಪರಿವರ್ತನೆ ಗೆ ಸಾಕ್ಷಿಯಾಗಿದ್ದವು.


ಬಾಲಾಜಿಯು ಓದಿನಲ್ಲಿ ಹಿಂತಿರುಗಿ ನೋಡಲೇ ಇಲ್ಲ, ಅದಕ್ಕೆ ತಕ್ಕಂತೆ ಅಮ್ಮ ಕೂಲಿನಾಲಿ ಮಾಡಿ ಮಗನ ಓದಿಸಿದರು, ಹತ್ತನೇ ತರಗತಿಯಲ್ಲಿ ಮಗ ಇಡೀ ತಾಲೂಕಿಗೆ ಹೆಚ್ಚು ಅಂಕ ಪಡೆದು ಪಾಸಾಗಿದ್ದ, ಪತ್ರಿಕೆಯಲ್ಲಿ ಅವನ ಪೋಟೋ ಬಂದಿದ್ದನ್ನು ಕಂಡ ಅಕ್ಕ ಪಕ್ಕದ ಜನ ದೇವಕ್ಕನ ಮನೆಗೆ ಬಂದು ಮಗನ ಸಾಧನೆ ಹೊಗಳಿದಾಗ ಅಮ್ಮನಿಗೆ ಒಳಗೊಳಗೆ ಮಗನ ಸಾಧನೆ ಕಂಡು ಹೆಮ್ಮೆ ಉಂಟಾಯಿತು.


ಪಿಯುಸಿ, ಡಿಗ್ರಿಯಲ್ಲಿ ,ಅಂಗವಿಕಲ ವಿದ್ಯಾರ್ಥಿ ವೇತನ ಮತ್ತು ಅಮ್ಮನ ‌ನೆರವಿನಿಂದ ಚೆನ್ನಾಗಿ ಓದಿದ ಬಾಲಾಜಿ ಡಿಗ್ರಿಯಲ್ಲಿ ಬಂಗಾರದ ಪದಕ ಪಡೆದು , ಬಿ ಎಡ್ ಮಾಡಿದ ಒಂದೇ ವರ್ಷಕ್ಕೆ ಸರ್ಕಾರಿ ಶಾಲೆಯ ಶಿಕ್ಷಕನಾದ ,


ಊರವರ ಬಾಯಲ್ಲಿ ಬಾಲಾಜಿ ಕ್ರಮೇಣ "ಬಾಲಾಜಣ್ಣ " ಆಗಿದ್ದ ಇಡೀ ಊರಿಗೆ ಮೊದಲ ಸರ್ಕಾರಿ ಉದ್ಯೋಗ ಪಡೆದ ಬಾಲಜಣ್ಣ ಊರಿನ ಓದುವ ಹುಡುಗರ ಮಾದರಿಯಾಗಿ ನಿಂತಿದ್ದ, 


ಕೋಲಾರಕ್ಕೆ ಶಿಕ್ಷಕನಾಗಿ ನಿಯೋಜಿತವಾದ ನೇಮಕ ಪತ್ರ ಪಡೆದ ಬಾಲಾಜಿ ಅಮ್ಮನ ಪಾದದ ಬಳಿ ಆ ಪತ್ರ ಇಟ್ಟು ಕಾಲಿಗೆರಗಿ ಆಶೀರ್ವಾದ ಪಡೆದ


"ಬಾಲಾಜಿ, ಇದಕ್ಕೆಲ್ಲ ಕಾರಣ ಆ ಮಾ ಸತ್ತಿ  ಚೌಡಮ್ಮ ಆಯಮ್ಮನ ಗುಡಿಗೋಗಿ ಇದಕ್ಕೆ ಪೂಜೆ ಮಾಡಿಸ್ಕೆಂಡು ನೀನು ದೂಟಿ ಗೆ ಹೋಗಪ್ಪ" ಎಂದರು ದೇವಕ್ಕ.


"ಅಮ್ಮಾ... ನಾನ್ ಒಬ್ಬನೇ ಹೋಗಲ್ಲ ನೀನು ನನ್ ಜೊತೆಗೆ ಬಾ, ಇಬ್ರು ಅಲ್ಲೇ ಇರಾನಾ, " ಎಂದು ಮಗ ಹೇಳುತ್ತಲೇ ಆಗಲಿ ಎಂದು ತಲೆಯಾಡಿಸಿದರು ಅಮ್ಮ.


ಒಂದು ತಿಂಗಳು ಶಿಕ್ಷಕನಾಗಿ ಸಂಬಳ ಪಡೆದ ಬಾಲಾಜಿ  ಅಮ್ಮನಿಗೆ ರೇಷ್ಮೆ ಸೀರೆ ತಂದು ಕೊಟ್ಟನು.

 ಅಮ್ಮನ ಬಹುದಿನದ ಬಯಕೆಯಂತೆ ತಿರುಪತಿ ಗೆ ಕರೆದುಕೊಂಡು ಹೋದನು. ವೆಂಕಟರಮಣಸ್ವಾಮಿಯ ದರ್ಶನದಿಂದ ಭಾವಪರವಶರಾದ ದೇವಕ್ಕ ತಮಗರಿವಿಲ್ಲದೇ ಜೋರು ಧ್ವನಿಯಲ್ಲಿ ಗೋವಿಂದಾ...... ಗೋವಿಂದಾ..... ಎಂದು ಕೂಗಲಾರಂಬಿಸಿದರು, ಅಮ್ಮನ ಧ್ವನಿಗೆ ಬಾಲಜಿಯೂ ಧ್ವನಿಸೇರಿಸಿದ ಅಕ್ಕಪಕ್ಕದವರೂ ಗೋವಿಂದಾ.... ಎಂದು  ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಿದ್ದರು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: