05 June 2021

ಸಾವು ಗೆದ್ದ ಸುನಿತಾ.ಕಥೆ .ಲೇಖನ


 

*ಸಾವು ಗೆದ್ದ ಸುನಿತ*

ಒಂಭತ್ತು ವರ್ಷದ ಸುನಿತ ಕೈಚೀಲ ಹಿಡಿದು ರಾಜ್ಯ ಹೆದ್ದಾರಿ ದಾಟಿ ಮತ್ತೊಂದು ಬದಿ ಇರುವ  ಶಾಲೆಯ ಕಡೆ ಓಡಿ ಬರುತ್ತಿದ್ದಳು, ರಸ್ತೆಯಲ್ಲಿ ವೇಗವಾಗಿ ಬಂದ ಲಾರಿಯ ಚಾಲಕ ಬ್ರೇಕ್ ಹಾಕಿದರೂ ,  ಆ ಬಾಲಕಿಗೆ ಡಿಕ್ಕಿ ಹೊಡೆದ.ಡಿಕ್ಕಿಯ ರಭಸಕ್ಕೆ ಅವಳು ರಸ್ತೆಯ ಮತ್ತೊಂದು ಬದಿಗೆ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಳು ,ರಸ್ತೆಯ ಪಕ್ಕದಲ್ಲೇ ಇರುವ ಶಾಲಾ ಕೊಠಡಿಯ ಮುಂದೆ ನಿಂತಿದ್ದ ನಾನು ಈ ಘಟನೆಯನ್ನು ನೋಡಿ, ಹೌಹಾರಿ ಸುನಿತಾಳತ್ತ ಓಡಿದೆ.

ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ 2001 ನೇ ಇಸವಿಯ ಜನವರಿ ತಿಂಗಳ ಒಂದು ಸೋಮವಾರದಂದು  ನಾನೂ ಮತ್ತು ಮಕ್ಕಳು ರಜದ ಮಜಾ ಸವಿದು ಶಾಲೆಗೆ ಬರುವಾಗ ನಡೆದ ಈ ದುರ್ಘಟನೆ ಕಂಡು ಎಲ್ಲರಿಗೂ ಭಯದೊಂದಿಗೆ ಏನು ಮಾಡಬೇಕೆಂದು ತೋಚದೇ ನೋಡುತ್ತಾ ನಿಂತೆವು.

ಲಾರಿಯವನು ರಸ್ತೆಯ ಬದಿಗೆ ನಿಲ್ಲಿಸಿದ , ತಪ್ಪಾಯಿತೆಂದು ಹೇಳುವ ಮೊದಲೇ  ಸಿಟ್ಟಿನಲ್ಲಿದ್ದ ಊರ ಜನರು ಅವನಿಗೆ ಧರ್ಮದೇಟು ನೀಡಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದರು.

ಆ ಬಾಲಕಿಯ ಕಡೆ ಯಾರಿಗೂ ಲಕ್ಷ್ಯ ಇಲ್ಲ
ನಾನು ಅವಳ ಬಳಿ ಹೋಗಿ ನೋಡಿದೆ ಉಸಿರಾಡುತ್ತಿದ್ದಳು, "ದಾದು ಬಾ ಇಲ್ಲಿ ಅಂದೆ" ನನ್ನ ಪರಿಚಿತ ಆಟೋ ಡ್ರೈವರ್ ಆಟೋ ತಂದ ,ನಾನೇ ಆ ಬಾಲಕಿಯನ್ನು ಆಟೋದಲ್ಲಿ ಕೂರಿಸಿಕೊಂಡು ನಮ್ಮ ಮುಖ್ಯ ಶಿಕ್ಷಕಿಯಾಗಿದ್ದ ಗಾಯತ್ರಿ ದೇವಿ ಮೇಡಂ ರವರ ಕಡೆ ನೋಡಿದೆ , ಅವರು ಸಹ ಬಂದು ಆಟೋ ದಲ್ಲಿ ಕುಳಿತರು, ಐದು ನಿಮಿಷಗಳಲ್ಲಿ ಹಿರಿಯೂರಿನ ತಾಲೂಕು ಆಸ್ಪತ್ರೆಗೆ ತಲುಪಿದೆವು, ಡ್ಯೂಟಿಯಲ್ಲಿದ್ದ ಡಾಕ್ಟರ್ ಕ್ಷಿಪ್ರವಾಗಿ ಸ್ಪಂದಿಸಿ ಬಾಲಕಿಗೆ ಚಿಕಿತ್ಸೆ ನೀಡಿದರು ,ನಮ್ಮ ಕಡೆ ತಿರುಗಿ ನೀವು ಅಂದರು?
"ಸರ್ ನಾನು ಶಿಕ್ಷಕ ,ಇವರು ನಮ್ಮ ಹೆಚ್, ಎಂ" ಅಂದೆ
" ನೀವು ಸಮಯಕ್ಕೆ ಸರಿಯಾಗಿ ಈ ಮಗುವನ್ನು ಕರೆದುಕೊಂಡು ಬಂದಿದ್ದೀರಿ ಇನ್ನೂ ಹತ್ತು ನಿಮಿಷ ಲೇಟ್ ಆಗಿದ್ರೆ ಈ ಮಗು ಜೀವಕ್ಕೆ ಅಪಾಯವಿತ್ತು, ಟ್ರಿಟ್ಮೆಂಟ್ ಕೊಟ್ಟಿದಿನಿ, ಈ ಡ್ರಿಪ್ ಮುಗಿಯೋ ಮುಂಚೆ ಪ್ರಜ್ಞೆ ಬರುತ್ತೆ , ನಥಿಂಗ್ ಟು ವರಿ" ಎಂದು ನನ್ನ ಭುಜ ತಟ್ಟಿ ಹೊರಟರು ಡಾಕ್ಟರ್,

ಇಪ್ಪತ್ತು ನಿಮಿಷಗಳ ನಂತರ ಸುನಿತಾ ಕಣ್ ಬಿಟ್ಟು ನನ್ನ ಮತ್ತು ನಮ್ಮ ಹೆಚ್. ಎಂ "ನೋಡಿ ನೀರು ಕುಡಿತಿನಿ ಸಾ" ಎಂದಳು
ನಾನು ಬೇಗ ಹೋಗಿ ಅಂಗಡಿಯಲ್ಲಿ ಒಂದು ಲೀಟರ್ ನೀರಿನ ಬಾಟಲ್ ತಂದು ಕೊಟ್ಟೆ ,ಸ್ವಲ್ಪ ಕುಡಿದು ಅಲ್ಲಲ್ಲಿ ಆಗಿದ್ದ ತರಚು ಗಾಯ ನೋಡಿಕೊಂಡು ಅಳಲು ಶುರುಮಾಡಿದಳು, ನಮ್ಮ ಹೆಚ್ ಎಂ ಮೇಡಂ ರವರು ಸಮಾಧಾನ ಮಾಡಿದರು.ಅಷ್ಟೊತ್ತಿಗೆ ವಿಷಯ ತಿಳಿದ ಅವರ ತಾಯಿ ಅಳುತ್ತಲೇ ಆಸ್ಪತ್ರೆಗೆ ಬಂದರು , ಮಗಳ ಸ್ಥಿತಿ ನೋಡಿ ಅಳಲು ಶುರುಮಾಡಿದರೂ ಜೀವಕ್ಕೇ ಏನೂ ತೊಂದರೆ ಇಲ್ಲವೆಂದು ತಿಳಿದು ಸ್ವಲ್ಪ ಸಮಾಧಾನದಿಂದ ನಮ್ಮಿಬ್ಬರ ಕಡೆ ಕೈಮುಗಿದು ಧನ್ಯವಾದ ಹೇಳಿದರು.

ಊರಿನ ಉದ್ರಿಕ್ತ ಜನರು ಲಾರಿಯವನ ವಿಚಾರಿಸಿದ ಬಳಿಕ ಆಸ್ಪತ್ರೆಗೆ ಲಗ್ಗೆ ಇಟ್ಟರು ಕೊಠಡಿಯ ತುಂಬಾ ಗಾಳಿಯಾಡದಂತೆ ನಿಂತರು ,ಇದನ್ನು ಕಂಡ ಡಾಕ್ಟರ್ ಬಂದು ಎಲ್ಲರೂ ಹೊರಹೋಗಲು ಹೇಳಿದರು.

ಹದಿನೈದು ದಿನಗಳ ನಂತರ ಸಂಪೂರ್ಣ ಗುಣಮುಖಳಾದ ನಂತರ  ಸುನಿತಾ ಳ ತಂದೆ ಮಗಳನ್ನು ಕರೆದುಕೊಂಡು ಬಂದು ಶಾಲೆಗೆ ಬಂದು ನನ್ನ ನೋಡಿ ಕೈ ಮುಗಿದು
" ನೀವು ನನ್ನ ಮಗಳ ಕಾಪಾಡಿದ ದೇವರು ಇದ್ದಂಗೆ ಸಾ, ನಿಮ್ ಋಣ ಎಂಗ್ ತೀರ್ಸ್ ಬೇಕೋ ಗೊತ್ತಾಗಲ್ಲ "ಎಂದರು
" ಅಂತ ದೊಡ್ ಮಾತು ಬೇಡ ಯಜಮಾನರೆ, ಅವಳು ನಮ್ಮ ಶಾಲೆ ಹುಡುಗಿ ಅವಳ ರಕ್ಷಣೆ ನಮ್ಮ ಹೊಣೆ " ಎಂದೆ .

"ಸಾ ,ನಿಮ್ದು ಯರಬಳ್ಳಿ ಅಂತೆ ಹೌದೆ , ಅಂಗಾದ್ರೆ ನೀವು ನಮ್ಮ ದೂರದ ಸಂಬಂಧ ಅಂತು ಗೊತ್ತಾತು " ಎಂದರು ಅವರು

" ಯಜಮಾನರೆ ನನ್ನ ಶಾಲೆಯ ಎಲ್ಲಾ ಶಿಕ್ಷಕರು, ಮತ್ತು ಮಕ್ಕಳು ನನ್ನ ಸಂಬಂಧಿಗಳೇ ಅಲ್ಲವೇ ?" ಎಂದೆ
"ಹೌದು ಸಾ ಅದು‌ ನಿಮ್ ದೊಡ್ ಗುಣ , ನಿಮ್ಮಂತಹ ಮೇಷ್ಟ್ರು ನಮ್ ಊರಿಗೆ ಬಂದಿದ್ದು ನಮ್ಮ ಪುಣ್ಯ " ಎಂದು ಹೇಳುವಾಗ ಅವರ ಕಣ್ಣುಗಳು ತೇವವಾಗಿದ್ದು ನನ್ನ ಗಮನಕ್ಕೆ ಬಂತು ಅದನ್ನು ನೋಡಿ ನಾನೂ ಭಾವುಕನಾಗಿ ಬಿಟ್ಟೆ ......

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

No comments: