01 June 2021

ಸೈಕಲ್ ಪುರಾಣ ಕಥೆ


 ಅದೂ ದೊಡ್ಡದೂ ಅಲ್ಲದ ಅತೀ ಚಿಕ್ಕದೂ ಅಲ್ಲದ ಸೈಕಲ್ , ಸತೀಶ  ಸೈಕಲ್ ತುಳಿಯುವುದನ್ನು ಕಲಿಯಲು ಆರಂಭ ಮಾಡಿ ಒಂದು ವಾರವಾಗಿತ್ತು ,  ಅಮ್ಮನ ಕಾಡಿ ಬೇಡಿ ದಿನಕ್ಕೆ ಐವತ್ತು ಪೈಸೆ ಪಡೆದು ಹುಸೇನ್ ಸಾಬ್ ಬಾಡಿಗೆ ಸೈಕಲ್ ಶಾಪ್ ಬಳಿ ದಿನವೂ ಒಂದು ಗಂಟೆ ಸೈಕಲ್ ತುಳಿಯುವ ಅಭ್ಯಾಸ ಮಾಡುತ್ತಿದ್ದ, ಮೊದಲು ಊರ ಹೊರಗೆ ಯಾರೂ ಇಲ್ಲದ ರಸ್ತೆಯಲ್ಲಿ ಅಭ್ಯಾಸ ಮಾಡಲು ಹೊರಟ, ಕ್ರಮೇಣವಾಗಿ ಆತ್ಮವಿಶ್ವಾಸ ಬಂದು ಜನ ಕಡಿಮೆ ಇರುವ ಬೀದಿಗಳಲ್ಲಿ ಸೈಕಲ್ ತುಳಿಯುವ ಧೈರ್ಯ ಬಂದಿತ್ತು . ಜೊತೆಗೆ ಯಾವುದೋ ಹಳೆಯ ಹಾಡನ್ನು ಗುನುಗುತ್ತಾ ಸೈಕಲ್ ತುಳಿಯುವಾಗಲೇ ಸೋಮ

" ನಾನು ಬರುವೆ ಕಣೋ ಸೈಕಲ್ ಹತ್ತುವೆ"

ಎಂದಾಗ ಧೈರ್ಯ ಮಾಡಿ ಸೈಕಲ್ ನ ಕ್ಯಾರಿಯರ್ ಮೇಲೆ ಕೂರಿಸಿಕೊಂಡು ,ಇನ್ನೂ ಆತ್ಮವಿಶ್ವಾಸದೊಂದಿಗೆ ಮತ್ತೂ ಜೋರಾಗಿ ಹಾಡು ಹಾಡುತ್ತಾ ವೇಗವಾಗಿ ಸೈಕಲ್ ತುಳಿದ.

ಸತೀಶನಿಗಿಂತ ನಾಲ್ಕು ವರ್ಷ ಕಿರಿಯ ಸೋಮ  ಸತೀಶನಿಗಿಂತ ಖುಷಿಯಾಗಿ ತಾನೆ ಸೈಕಲ್ ತುಳಿದವನಂತೆ ಸಂಭ್ರಮಿಸಿ ಕೇಕೇ ಹಾಕಿದ್ದ, 

"ಅಣ್ಣ... ಇನ್ನೂ.. ಜೋರು  ... ತುಳಿ....ತುಳಿ.... ಜೋರು ಹೋಗಲಿ..."  ಎಂದದ್ದು ಸತೀಶನಿಗೆ ಸ್ಪೂರ್ತಿಯಾಗಿ ಅತೀ ವೇಗವಾಗಿ ಬೀದಿಗಳಲ್ಲಿ ಸೈಕಲ್ ಓಡಿಸಿದ ,

ಆಗಲೇ ಆಗಬಾರದ್ದು ಆಗಿದ್ದು,

ನ್ಯಾಯಬೆಲೆ ಅಂಗಡಿಯ ಮರಿದಾಸಪ್ಪನ ಮೂರು ವರ್ಷದ   ಮಗಳು ಆಡುತ್ತಾ ರಸ್ತೆಯ ಮಧ್ಯ ಭಾಗಕ್ಕೆ ಬಂದುಬಿಟ್ಟಿದ್ದಳು, ಸತೀಶನಿಗೆ ಗಾಬರಿಯಾಗಿ ಬ್ರೇಕ್ ಹಾಕುವುದನ್ನು ಮರೆತಿದ್ದ, ಜೋರಾಗಿ ಬಂದು ಸೈಕಲ್ ಆ ಹುಡುಗಿಗೆ ಗುದ್ದಿ ,ಅವಳ ತಲೆಯಲ್ಲಿ ರಕ್ತ ಸುರಿಯಲಾರಂಭಿಸಿತು , ಸೈಕಲ್ ಅಲ್ಲೇ ಬಿಟ್ಟ ಸತೀಶ ಮತ್ತು ಸೋಮ ಪೇರಿ ಕಿತ್ತರು . ಸತೀಶ

ಸೈಕಲ್ ಬಾಡಿಗೆ ಹಣವನ್ನು ‌ನೀಡದೇ ಮನೆಗೆ ಓಡಿದ. 


ಎರಡು ಗಂಟೆಯಾದರೂ ಬಾಡಿಗೆ ಸೈಕಲ್ ತೆಗೆದುಕೊಂಡು ಹೋದ ಹುಡುಗ ಬಾರದಿದ್ದು ಕಂಡ ಸೈಕಲ್ ಶಾಪ್ ಮಾಲಿಕ ಹೊರಗೆ ಬಂದಾಗ " ನಿಮ್ ಸೈಕಲ್ ನಲ್ಲಿ ಯಾರೋ ಹುಡುಗ ಆಕ್ಸಿಡೆಂಟ್ ಮಾಡಿದಾನಂತೆ" ಎಂದಾಗ ಸ್ಥಳಕ್ಕೆ ಓಡಿಹೋದವನಿಗೆ ಮರಿದಾಸಪ್ಪನ ಉಗ್ರಾವತಾರ ದರ್ಶನಾವಾಯಿತು " ಏ ಸಾಬಿ ಸೈಕಲ್ ಬರದಿರೋ ಹುಡುಗ್ರಿಗೆಲ್ಲ ಸೈಕಲ್ ಕೊಡ್ತಿಯಾ? ನೋಡು ಇಲ್ಲಿ ನಮ್ಮ ಮಗು ತಲೇಲಿ ತೂತು ಆಗಿ ರಕ್ತ ಬರ್ತಾ ಇದೆ, ಏ ಆ ಸೈಕಲ್ ಒಳಗಾಕು, ಆಸ್ಪತ್ರೆಗೆ ಹೋಗಿ ಬತ್ತೀನಿ ,ಬರ್ತಾ ಅಂಗೇ ಹೊರಕೇದೇಪುರದ್ ಸ್ಟೇಶನ್ ನಲ್ಲಿ ಕಂಪ್ಲೇಂಟ್ ಕೊಟ್ ಬತ್ತೀನಿ" ರೇಗಾಡಿದರು.


" ಇಲ್ಲ ಅಣ್ಣ... ಆ ಹುಡ್ಗುಂಗೆ ಊರ್ ಒಳ್ಗೆ  ಬರ್ಬ್ಯಾಡ , ನಿಂಮ್ದೂಕಿ ಸರಿಯಾಗಿ ಇನ್ನೂ ಸೈಕಲ್ ತುಳಿಯಾಕ್ ಬರಲ್ಲ ಅಂತ , ಅದು ನಿಮ್ದು ಮನೆ ಹತ್ರ ಬಂದು ಇಂಗ್ ಮಾಡಿದೆ   ,ಇದ್ರಲ್ಲಿ ನಂದು ತಪ್ಪು ಇಲ್ಲ ಮಾಪ್ ಕರೋ ಅಣ್ಣ " ಎಂದನು ಹುಸೇನ್ ಸಾಬ್ 


" ನೀನು ಇಲ್ಲೇ ಇದ್ದರೆ ಏಟು ನಿನಗೆ ಬೀಳ್ತಾವೆ " ಗದರಿದರು ಮರಿದಾಸಪ್ಪ.

ಅವರ ಕೋಪ ಕಂಡ ಸಾಹೇಬರು ಸತೀಶನ ಮನೆ ಕಡೆ ಹೊರಟರು.

No comments: