28 September 2017

ಶ್ರೀ ದೇವಿ (ಕವನ)

                *ಶ್ರೀ ದೇವಿ*

ನೀ ನನ್ನ ಪಾಲಿನ   ದೈವ
ತ್ಯಾಗಮಯಿ  ಜೀವಿ ನಮ್ಮವ್ವ

ಹಾರೈಕೆಯಲಿ ಬತ್ತದ ಒರತೆ
ನೀಗಿಸಿದೆ ಅಪ್ಪನ ಕೊರತೆ
ತಾಳ್ಮೆಯಲಿ ನಿಜದಿ ಭೂಮಾತೆ
ಒಳ್ಳೆ  ಗುಣಗಳ ನಿನ್ನಿಂದ ಕಲಿತೆ  /

ಮಾಡಿದೆ ಕೂಲಿನಾಲಿಯ ಜೀವನ
ದುಡಿದೆ ಹಗಲಿರುಳು ಕ್ಷಣ ಕ್ಷಣ
ನೀ ಹೊಸ ಬಟ್ಟೆ ಉಡಲಿಲ್ಲ
ನನಗುಡಿಸುವುದ ಮರೆಯಲಿಲ್ಲ/

ನಾನು ಹೆಸರಿಗಷ್ಟೇ ಅಕ್ಷರಸ್ಥ
ನೀ ಜೀವನ ಪಾಸಾದ ಅನಕ್ಷರಸ್ಥೆ
ಹೆತ್ತು ಹೊತ್ತು ಸಲಹಿದೆ ನನ್ನ
ಹೇಗೆ ತೀರಿಸಲಿ ನಿನ್ನ ಋಣವನ್ನ./

ಬಾಳಿ ತೋರಿಸಿದೆ ಸರೀಕರೊಡನೆ
ತಗ್ಗಿ  ಬಗ್ಗಿ ನಡೆದೆ ಹಿರೀಕರೊಡನೆ
ನನಗೆ ನೀಡಿದೆ ಜೀವನದ ಸವಿ
ನೀನೇ ನನ್ನ ಪಾಲಿನ ಶ್ರೀ ದೇವಿ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: