30 ಜೂನ್ 2019

ಎಲ್ಲೆಡೆ ಬಾ ಮಳೆಯೇ(ಕವನ)

 *ಎಲ್ಲೆಡೆ ಬಾ ಮಳೆಯೇ*

ಮಲೆನಾಡಿನಲಿ ಶುರುವಾಗಿದೆ
ಮಳೆ ಹಾಡು
ನೋಡಲು ‌ಕಣ್ಣಿಗೆ ಹಬ್ಬದ
ಮಳೆ ಕಾಡು
ತಂಗಾಳಿ ಬೀಸುತ
ಮರದ ನಡುವೆ ನುಸುಳಿ
ಬೀಳುವ ಹನಿಗಳು
ಎಲೆಗಳ ಮೇಲೆ ಬಿದ್ದು
ತೊಳೆದು ಸ್ವಚ್ಚಗೊಳಿಸಿ
ಸ್ವಚ್ಚತಾ ಅಭಿಯಾನ ಮಾಡಿ
ಚಿಟ ಪಟ ಚಿಟ ಪಟ
ಸದ್ದು ಮಾಡುವ ಕಾಡುವ
ಮಳೆರಾಯ  ಬರೀ ಕಾಡಲೇ
ಬರ ಬೇಡ
ಬರದಿಂದ  ಕಂಗೆಟ್ಟ ನಾಡಿಗೂ
ಬಾ
ಸಿಡಿಲು ಬಡಿದು ಗುಡು ಗುಡಿಗಿ
ಬರುವ ವರ್ಷವೇ
ಬರಸಿಡಿಲಿನಾಘಾತ ತಪ್ಪಿಸಲು
ಈಗಲೇ ಎಲ್ಲೆಡೆ ಬಾ

*ಸಿ ಜಿ ವೆಂಕಟೇಶ್ವರ*

26 ಜೂನ್ 2019

*ಜೀವಿಸು* (ಇಂದು ವಿಶ್ವ ಮಾದಕವಸ್ತು ವಿರೋಧಿ ದಿನ)

*ಜೀವಿಸು*
(ಇಂದು ವಿಶ್ವ ಮಾದಕವಸ್ತು ವಿರೋಧಿ ದಿನ)

ನಶೆಯಲೇ ತೇಲುತಾ ಬದುಕಬೇಕೆ?
ಉಷೆಯ ಬೆಳಕಿನ‌ಆನಂದ ಬೇಡವೆ?
ಖುಷಿಯಲಿ ಬದುಕ ಸಾಗಿಸಲು
ಪಶುಪತಿಯ ನೀ ನೆನೆ ಸಾಕು

ಕ್ಷಣಿಕ ಸುಖಕೆ ಹಾತೊರೆಯಬೇಡ
ಪ್ರಾಣ ತೆಗೆವ ಚಟಕೆ ಬಲಿಯಾಗಬೇಡ
ಮಾದಕ ವಸ್ತುಗಳಿಂದ ದೂರವಿರು
ಮೋದಕಪ್ರಿಯನಲಿ‌ ಮನಸಿಡು

ದೇಹವ ಹಿಂಡುವ ಆತ್ಮವಿಶ್ವಾಸ ಅಳಿವ
ಮೋಹವೇಕೆ ಅಮಲೇರಿಸುವ ವಸ್ತುವಿಗೆ
ಕಾಯಕದ ಮೇಲೆ ಮನಸಿಡು ನೀನು
ಪವಿತ್ರವಾದ ಆತ್ಮವ ನೆನೆದು ಜೀವಿಸು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


22 ಜೂನ್ 2019

ಯೋಗಾಯೋಗ ಪಡೆಯೋಣ(ಕವನ)

*ಯೋಗಾಯೋಗ ಪಡೆಯೋಣ*

ಯೋಗವ  ಮಾಡೋಣ ಬನ್ನಿ
ಯೋಗಾಯೋಗ ಪಡೆಯೋಣ ಬನ್ನಿ

ದೇಹವ ದಂಡಿಸಿ ಮನವ
ನಿಯಂತ್ರಿಸಿ ಆಸನ‌ ಹಾಕುತ
ಪ್ರಾಣಾಯಾಮ ಧ್ಯಾನವ ಮಾಡಿ
ಯೋಗವ ಮಾಡೋಣ ಬನ್ನಿ

ಕಾಯಕವೇ ಕೈಲಾಸವೆಂದು
ಕರ್ತವ್ಯಗಳನ್ನು ಮಾಡುತ
ಗಡಿಯಾರದಂತೆ ಕೆಲಸವಮಾಡಿ
ಕರ್ಮ ಯೋಗವ ಮಾಡೋಣ ಬನ್ನಿ

ನಹಿ ಜ್ಞಾನೇನ ಸದೃಶಂ ಎಂದು
ಜ್ಞಾನವ ಪಡೆಯುತ ಹಂಚುತ
ಜ್ಞಾನಿಗಳಾಗಿ  ಸುಜ್ಞಾನವ ಪಡೆಯಲು
ಜ್ಞಾನ ಯೋಗವ ಮಾಡೋಣ ಬನ್ನಿ

ಭಕ್ತಿಯಿಂದ ಬೇಡಿ ದೈವವ
ಶಕ್ತಿಯ ಪಡೆದು ನಮ್ಮಾತ್ಮವು
ಪರಮಾತ್ಮನಲಿ ಲೀನವಾಗುವವರಗೆ
ಭಕ್ತಿ ಯೋಗ ಮಾಡೋಣ ಬನ್ನಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

22 ಮೇ 2019

ನಾನು ಬದಲಾಗುತ್ತಿದ್ದೇನೆ (ಕವನ)

*ನಾನು ಬದಲಾಗುತ್ತಿದ್ದೇನೆ*

ಹೌದು ನಾನು ಬದಲಾಗುತ್ತಿದ್ದೇನೆ
ಅಪ್ಪ, ಅಮ್ಮ ಅಣ್ಣ ತಮ್ಮ
ಬಂಧು ,ಬಳಗವನ್ನು ಪ್ರೀತಿಯಿಂದ
ನೋಡಿಕೊಂಡೆನು .
ನಾನು ಈಗ ನನ್ನನ್ನೂ ಪ್ರೀತಿಸಲು
ಕಲಿಯುತ್ತಿದ್ದೇನೆ

ಹೌದು ನಾನು ಬದಲಾಗುತ್ತಿದ್ದೇನೆ
ನಾನು ,ನನ್ನಿಂದ ನಾನು‌ಇದ್ದರೆ ಮಾತ್ರ
ನನ್ನ ಸಂಸಾರ, ನನ್ನ ಊರು,ಎಂಬ ಸಂಕುಚಿತ ಮನೋಭಾವ ಬದಲಾಗಿದೆ
ಪ್ರಪಂಚದ ಭಾರ ಹೊರಲು ನಾನು
ಅಟ್ಲಸ್ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ತರಕಾರಿ ,ಹಣ್ಣು ,ಮಾರುವ ಬಡವರೊಂದಿಗೆ ಚೌಕಾಸಿ ಮಾಡಿರುವೆ.
ಚಿಲ್ಲರೆ ಹಣಕ್ಕಾಗಿ ಟ್ಯಾಕ್ಸಿ ಚಾಲಕನೊಂದಿಗೆ ಜಗಳವಾಡಿರುವೆ.
ಚೌಕಾಸಿ ಮಾಡದೆ ಕೊಟ್ಟ ಹಣದಿಂದ ಅವರ ಮಕ್ಕಳ ಶಿಕ್ಷಣ ಬೆಳಗುವುದ ಕಂಡು
ಸಂತಸ ಪಡುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ಅಹಂ ನಿಂದ ಬ್ರಹ್ಮನೂ ಕೆಟ್ಟ
ಎಂದು ತಿಳಿದಿದ್ದರೂ ಒಣ ಪ್ರತಿಷ್ಠೆ
ಅಹಂಕಾರದಿಂದ ಸಂಬಂಧಗಳ
ಕಳೆದುಕೊಂಡ ಮೇಲೆ
ಈಗ ಸಂಬಂಧಗಳ ಉಳಿಸಿ
ಬೆಳೆಸಲು ಅಹಂ ಕಡಿಮೆ
ಮಾಡಿಕೊಳ್ಳಲು ಕಲಿಯುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ಬೇರೆಯರೊಂದಿಗೆ ಹೋಲಿಕೆ
ಮಾಡಿ, ಬಟ್ಟೆಯ ಒಂದು ಕಲೆ
ನೋಡಿ‌ ಬೇಸರ ಪಟ್ಟಿರುವುದನ್ನು
ಮರೆತು ಬಟ್ಟೆಗಿಂತ ನಾನು ನಡೆಯುವಬಟ್ಟೆ ಮತ್ತು ವ್ಯಕ್ತಿತ್ವ ಮುಖ್ಯ
ಎಂಬುದನ್ನು ಅರಿಯುತ್ತಿದ್ದೇನೆ.

ಹೌದು ನಾನೂ ಬದಲಾಗುತ್ತಿದ್ದೇನೆ
ನನ್ನ ಸಂತೋಷವನ್ನು ಬೇರೆಯವರು
ನಿರ್ಧರಿಸಯವ ಕಾಲವಿತ್ತು
ಪ್ರತಿದಿನವೂ ಜೀವಿಸುವ
ಬಾಹ್ಯಸಂತೋಷಕ್ಕಿಂತ
ಆಂತರಿಕ ಸಂತೋಷ ಮುಖ್ಯ
ನನ್ನ ಸಂತೋಷಕ್ಕೆ ನಾನೇ ಕಾರಣ
ಎಂಬ ಸತ್ಯ ಅರಿಯುತ್ತಿದ್ದೇನೆ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*













11 ಮೇ 2019

ಬೇಗ (ಹನಿ)

*ಬೇಗ*

ಮುಗಿಲ ಮಲ್ಲಿಗೆ
ಗಗನದ ತಾರೆ
ಕಡಲ ಮುತ್ತು
ಏನೇನೋ ತಂದು
ಕೊಡುವ ವಾಗ್ದಾನ
ಮಾಡಿದ್ದ ಹುಡುಗ .
ಅವಳು ಮದುವೆಯಾಗು
ಎಂದಾಗ ಹೋರಟೇಬಿಟ್ಟ
ಬರುವೆನೆಂದು ಬೇಗ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*