16 ಮಾರ್ಚ್ 2025

ನಮ್ಮ ಪೂರ್ವಜರಿಗೆ ನಮನಗಳು

 


ನಮ್ಮ ಪೂರ್ವಜರಿಗೆ  ನಮನಗಳು.


ನಾವು ಭೂಮಿಗೆ ಬರಲು 

2 ಪೋಷಕರು

4 ಅಜ್ಜ-ಅಜ್ಜಿಯರು

8 ಮುತ್ತಜ್ಜಿಯರು

16 ಮುತ್ತಜ್ಜಿಯರು

32  3 ನೇ ಪೀಳಿಗೆ ತಾತ ಅಜ್ಜಿಯರು 

64 4 ನೇ ಪೀಳಿಗೆ ತಾತ ಅಜ್ಜಿಯರು

128 5 ನೇ ಪೀಳಿಗೆಯ ತಾತ ಅಜ್ಜಿಯರು

256 6 ನೇ ಪೀಳಿಗೆಯ ಪುರ್ವಜರು

512 7 ನೇ ಪೀಳಿಗೆಯ ಪೂರ್ವಜರು

1024 8 ನೇ ಪೀಳಿಗೆಯ ಪೂರ್ವಜರು

2048 9 ನೆಯ ಪೀಳಿಗೆಯ ಪೂರ್ವಜರು ಹೀಗೆ  ಮುಂದುವರೆಯುತ್ತದೆ..... ಇಲ್ಲಿಗೆ ಈ ಉದಾಹರಣೆ ನಿಲ್ಲಿಸಿ ನೋಡಿದರೆ.

ನಾವು ಭುವಿಗೆ ಬರಲು 

ಕಳೆದ 11 ತಲೆಮಾರುಗಳಲ್ಲಿ 4,094 ಪೂರ್ವಜರು ಬೇಕು.   ನೀವು ಅಥವಾ ನಾನು ಹುಟ್ಟುವ ಸುಮಾರು 300 ವರ್ಷಗಳ ಮೊದಲು!

ನಮ್ಮ ಪೂರ್ವಜರು ಎಷ್ಟು ಯುದ್ಧಗಳನ್ನು ಮಾಡಿದರು?

ಅವರು ಎಷ್ಟು ಹಸಿವನ್ನು ಸಹಿಸಿಕೊಂಡರು?

ನಮ್ಮ ಪೂರ್ವಜರು ಎಷ್ಟು ಕಷ್ಟಗಳನ್ನು ಅನುಭವಿಸಿದರು?

ಮತ್ತೊಂದೆಡೆ ಅವರು ನಮಗೆ ಎಷ್ಟು ಪ್ರೀತಿ, ಶಕ್ತಿ, ಸಂತೋಷ ಮತ್ತು ಪ್ರೋತ್ಸಾಹವನ್ನು ನೀಡಿದರು? 

ಅವರಲ್ಲಿ ಪ್ರತಿಯೊಬ್ಬರೂ ನಮ್ಮಲ್ಲಿ ಎಷ್ಟರ ಮಟ್ಟಿಗೆ ಬದುಕುವ ಇಚ್ಛೆಯನ್ನು ಬಿಟ್ಟು ಹೋಗಿದ್ದಾರೆ, ನಾವು ಇಂದು ಜೀವಂತವಾಗಿರಲು ಅವಕಾಶ ಮಾಡಿಕೊಟ್ಟಿದ್ದಾರೆ?


ಅದ್ದರಿಂದ ಅವರನ್ನು ಗೌರವಿಸುವ ಸಲುವಾಗಿ  ಜಗತ್ತಿನ ಎಲ್ಲಾ ದೇಶಗಳಲ್ಲಿ ಜನರು ತಮ್ಮ ಪೂರ್ವಜರನ್ನು ಆರಾಧಿಸುವ ವಿವಿಧ ಆಚರಣೆಗಳಲ್ಲಿ ತೊಡಗಿರುವುದನ್ನು  ಕಾಣುತ್ತೇವೆ.

ಇಂತಹ ಪರಂಪರೆಯನ್ನು ಹೊಂದಿರುವ ನಾವು ನಮ್ಮ ಪೂರ್ವಜರನ್ನು ಗೌರವಿಸುತ್ತಾ ಸಂಸ್ಕಾರಯುತ ಸಶಕ್ತ  ಮುಂದಿನ  ಪೀಳಿಗೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮದಾಗಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

15 ಮಾರ್ಚ್ 2025

ಎಚ್ಚರ ಗ್ರಾಹಕ ಎಚ್ಚರ...


 ಎಚ್ಚರ ಗ್ರಾಹಕ ಎಚ್ಚರ.


ಇಂದು ವಿಶ್ವ ಗ್ರಾಹಕರ ದಿನ..


ಗ್ರಾಹಕರೊಬ್ಬರಿಗೆ 50 ಪೈಸೆ ಬಾಕಿ ನೀಡದ  ಅಂಚೆ ಇಲಾಖೆಗೆ   ಕಾಂಚೀಪುರ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಪರಿಹಾರ ಸೇರಿ ಗ್ರಾಹಕರಿಗೆ ಒಟ್ಟು ₹15 ಸಾವಿರ ಪಾವತಿಸುವಂತೆ ಆದೇಶಿಸಿದ ಘಟನೆಯು ಎಚ್ಚತ್ತ ಗ್ರಾಹಕರಿಗೆ ಉದಾಹರಣೆಯಾಗಿದೆ.


50 ಪೈಸೆ ಚಿಲ್ಲರೆ ಮರಳಿಸದೇ ಗ್ರಾಹಕರಿಗೆ ಉಂಟು ಮಾಡಿದ್ದ ಮಾನಸಿಕ ನೋವು ಹಾಗೂ ನ್ಯಾಯಸಮ್ಮತವಲ್ಲದ ವಹಿವಾಟು ಕ್ರಮ, ಸೇವಾ ನ್ಯೂನತೆಗಾಗಿ ₹10 ಸಾವಿರ ಪರಿಹಾರ ನೀಡಬೇಕು ಹಾಗೂ ಮೊಕದ್ದಮೆ ವೆಚ್ಚವಾಗಿ ₹ 5 ಸಾವಿರ ಪಾವತಿಸಬೇಕು ಎಂದು ಆಯೋಗವು ಆದೇಶಿಸಿದೆ.

ದೂರಿನ ಪ್ರಕಾರ ಅರ್ಜಿದಾರರಾದ ಎ.ಮಾನಶಾ ಅವರು 2023ರ ಡಿಸೆಂಬರ್‌ನಲ್ಲಿ ರಿಜಿಸ್ಟ್ರರ್‌ ಅಂಚೆ ವೆಚ್ಚವಾಗಿ ₹ 30 ಪಾವತಿಸಿದ್ದರು. ₹29.50 ಪೈಸೆಗೆ ರಸೀದಿ ನೀಡಿದ್ದು, 50 ಪೈಸೆ ಚಿಲ್ಲರೆ ನೀಡಿರಲಿಲ್ಲ. 

ಯುಪಿಐ ಮೂಲಕ ನಿಖರ ಮೊತ್ತ ಪಾವತಿಸುತ್ತೇನೆ ಎಂದು ಅರ್ಜಿದಾರ ಹೇಳಿದ್ದರೂ ತಾಂತ್ರಿಕ ಕಾರಣ ನೀಡಿದ್ದ ಪೋಜಿಚಾಲುರ್ ಅಂಚೆ ಕಚೇರಿಯ ಸಿಬ್ಬಂದಿ ಅದಕ್ಕೆ ಅವಕಾಶವನ್ನು ನಿರಾಕರಿಸಿದ್ದರು.

ಅಂಚೆ ಇಲಾಖೆಯಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯಲಿದೆ. ಪೂರಕವಾಗಿ ದಾಖಲೆಗಳ ನಿರ್ವಹಣೆ ಆಗುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇದರಿಂದಾಗಿ ನನಗೆ ಮಾನಸಿಕವಾಗಿ ತೀವ್ರ ನೋವಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಅಂಚೆ ಇಲಾಖೆಯು ಇದಕ್ಕೆ ಪ್ರತಿಕ್ರಿಯಿಸಿ ತಾಂತ್ರಿಕ ಕಾರಣದಿಂದ ಯುಪಿಐ ಪಾವತಿಗೆ ಅವಕಾಶ ದೊರೆತಿಲ್ಲ. ಆದರೆ ಇಲಾಖೆಯಲ್ಲಿ ಅಳವಡಿಸಿಕೊಂಡಿರುವ ಸಾಫ್ಟ್‌ವೇರ್‌ನಲ್ಲಿ ಚಿಲ್ಲರೆಯು ಮುಂದಿನ ಮೊತ್ತಕ್ಕೆ ಸ್ವಯಂಚಾಲಿತವಾಗಿ ಸೇರ್ಪಡೆಯಾಗುತ್ತದೆ. ಇದಕ್ಕೆ ದಾಖಲೆಗಳಿವೆ ಎಂದಿತ್ತು.

ಉಭಯ ವಾದಗಳನ್ನು ಆಲಿಸಿದ ಆಯೋಗವು, ಸಾಫ್ಟ್‌ವೇರ್‌ ಕಾರಣ ನೀಡಿ ಅಂಚೆ ಇಲಾಖೆಯು ಹೆಚ್ಚುವರಿಯಾಗಿ 50 ಪೈಸೆ ವಸೂಲಿ ಮಾಡಿರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಪ್ರಕಾರ ನ್ಯಾಯಯುತ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿತು. 

50 ಪೈಸೆ ವಾಪಸು ಕೊಡಿಸಬೇಕು ಮತ್ತು ಆಗಿರುವ ಮಾನಸಿಕ ನೋವಿಗೆ ₹ 2.5 ಲಕ್ಷ ಪರಿಹಾರ, ಮೊಕದ್ದಮೆ ವೆಚ್ಚವಾಗಿ ₹ 10 ಸಾವಿರ ಕೊಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಆದರೆ ನ್ಯಾಯಲಯ 15000 ಪರಿಹಾರ ಕೊಡಿಸಿದೆ.


ಇದು ಇತರೆ ಎಲ್ಲಾ ಗ್ರಾಹಕರು ತಮ್ಮ ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿಯಾಗಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಸಹೃದಯ



 


ಸಹೃದಯ.


ಸಹೃದಯಿ ಎಂಬುದು ಸಮಾನ್ಯ ವಾಗಿ ನಾವು ಉತ್ತಮ ಗುಣ ನಡತ  ಹೊಂದಿದ ವ್ಯಕ್ತಿಯ ಕುರಿತ ಮಾತನಾಡುವಾಗ ಬಳಸುವ ಪದ  ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಅಥವಾ ಸಹೃದಯಿ ಎಂಬುದು ಒಂದು ಪ್ರಮುಖ ಪರಿಕಲ್ಪನೆ. ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯ. ಕಾವ್ಯವನ್ನು ಓದುವಾಗ ಕವಿಯ ಹೃದಯದೊಂದಿಗೆ ಇವನ ಹೃದಯವೂ ಸಮಾನವಾಗಿ ಮಿಡಿಯುತ್ತದೆ. ಇವನು ಕವಿಯ ಇಂಗಿತ, ಆಶಯಗಳನ್ನು ಸಹಾನುಭೂತಿಯಿಂದ ಅರಿತು ಕವಿಯ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ.


ಲೋಕ ವ್ಯಾಪಾರದಲ್ಲಿ ಸೌಂದರ್ಯಾನುಭವ ಹೊಂದಿ ತನ್ನ ವಿಶಿಷ್ಟ ಶಕ್ತಿಯಿಂದ ಕವಿಯು ಕೃತಿಯನ್ನು ರಚಿಸಿದರೆ ಅದು ಅರ್ಧ ಭಾಗದ ಕೆಲಸವಷ್ಟೇ ಆಗುತ್ತದೆ. ತೀವ್ರವಾದ ಆತನ ಅನುಭವಗಳು ಅನ್ಯಹೃದಯವೇದ್ಯವಾದಾಗ ಮಾತ್ರ ಅವನ ಕಾರ್ಯ ಪೂರ್ಣರೂಪ ಪಡೆದಂತೆ. ಇದು ಕವಿಯ ಮೂಲಭೂತ ಬಯಕೆ. ಕಾವ್ಯವನ್ನು ಓದಿ ಆ ಅನುಭವದ ಸುಖವನ್ನು ಪಡೆಯುವವರೇ ಇಲ್ಲದಿದ್ದರೆ ಆತನ ಕೃತಿ ವ್ಯರ್ಥ. "ಕಟ್ಟಿಯುಮೇನೊ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ" ಎಂದು ಕನ್ನಡ ಕವಿ ಜನ್ನ ಹೇಳಿದ್ದಾನೆ. ಕವಿ ಕಾವ್ಯದಲ್ಲಿ ಒಡಮೂಡಿಸಿದ ಸೌಂದರ್ಯಾನುಭವವನ್ನು ಕಾವ್ಯದ ಮೂಲಕ ಏರಿ ಸಹೃದಯ ಮುಟ್ಟುತ್ತಾನೆ. ಅಭಿನವಗುಪ್ತನ ಪ್ರಕಾರ ಕಾವ್ಯವರ್ತುಲದ ಪೂರ್ಣತೆಯಲ್ಲಿ ಕವಿ ಹೇಗೋಹಾಗೆ ಸಹೃದಯನೂ ಪ್ರಧಾನ ಕೊಂಡಿಯಾಗಿದ್ದಾನೆ. ಕಾವ್ಯಮೀಮಾಂಸಕರು ಕವಿಗೆ ಹೇಳಿರುವಂತೆಯೇ ಸಹೃದಯನಿಗೂ ಕೆಲವು ಲಕ್ಷಣಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಅತ್ಯಂತ ಗಮನೀಯವಾದದ್ದು ಅಭಿನವಗುಪ್ತನದು "ಯೇಷಾಂ ಕಾವ್ಯಾನುಶೀಲನಾಭ್ಯಾಸವಶಾತ್ ವಿಶದೀಭೂತೇ ಮನೋಮುಕುರೇ ವರ್ಣನೀಯ ತನ್ಮಯೀ ಭವನ ಯೋಗ್ಯತಾ ತೇ ಸ್ವಹೃದಯ ಸಂವಾದಭಾಜಃ ಸಹೃದಯಾಃ" ಅಂದರೆ ಕಾವ್ಯಾಭ್ಯಾಸದಿಂದ ಮನಸ್ಸೆಂಬ ಕನ್ನಡಿಯು ನಿರ್ಮಲವಾಗಿ ವರ್ಣನೀಯ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗಿದೆಯೋ ಅವರೇ ಕವಿಹೃದಯಕ್ಕೆ ಸಮಾನ ಹೃದಯಸಂವಾದವುಳ್ಳ ಸಹೃದಯರು.


ಮೂರ್ತಗೊಳಿಸಿದ್ದನ್ನು ಕೃತಿಯ ಮೂಲಕ ತನ್ನ ಅನುಭವವಾಗಿಸಿಕೊಳ್ಳುವ  ಸಹೃದಯರಿಗೂ  ಪ್ರತಿಭೆ ಅಗತ್ಯ. ಕವಿಯ ಸೂಕ್ಷ್ಮಾನುಭವಗಳು ಸೂಚ್ಯವಾಗಿ ಧ್ವನಿಪೂರ್ಣ ಶಬ್ದಗಳಲ್ಲಿ ಅಡಕಗೊಂಡಿರುತ್ತವೆ. ಆ ಮಾತುಗಳ ಶಕ್ತಿಯಿಂದ ಅನುಭವದ ಅನೇಕ ಪದರುಗಳನ್ನು ಗುರುತಿಸುವ ಇವನ ಆಸ್ವಾದನ ಕ್ರಿಯೆಯೂ ಸೃಷ್ಟಿಕ್ರಿಯೆಯಂತೆ ವಿಶಿಷ್ಟ ಶಕ್ತಿಯಿಂದ ಮಾತ್ರವೇ ಸಾಧ್ಯ ಎಂಬುದನ್ನು ಆನಂದವರ್ಧನ ಒತ್ತಿ ಹೇಳಿದ್ದಾನೆ. ಈ ಶಕ್ತಿಯನ್ನು ಅಭಿನವಗುಪ್ತ ಪ್ರತಿಭಾ ಎಂದು ಗುರುತಿಸುತ್ತಾನೆ. ಕವಿಪ್ರತಿಭೆಗೆ ಸಮಾನವಲ್ಲದಿದ್ದರೂ ಇದು ಸಹೃದಯನ ಆಸ್ವಾದನ ಸಾಮರ್ಥ್ಯಕ್ಕೆ ಸಹಾಯವಾದ ಅನುಸೃಷ್ಟಿಶೀಲ ಪ್ರತಿಭೆ ಎನಿಸಿಕೊಳ್ಳುತ್ತದೆ. ರಾಜಶೇಖರನೆಂಬ ಕಾವ್ಯ ಮೀಮಾಂಸಕ ಈ ಎರಡೂ ರೀತಿಯ ಪ್ರತಿಭೆಗಳನ್ನು ಗುರುತಿಸಿ ಕವಿಪ್ರತಿಭೆಯನ್ನು ಕಾರಯಿತ್ರೀ ಎಂದೂ ಸಹೃದಯನ ಪ್ರತಿಭೆಯನ್ನು ಭಾವಯಿತ್ರೀ ಎಂದೂ ಕರೆದಿದ್ದಾನೆ. ಪಾಶ್ಚಾತ್ಯ ಮೀಮಾಂಸಕರು ಕೊಡುವ ಓದುಗನ ಪರಿಕಲ್ಪನೆಯೂ ಸಹೃದಯ ಪರಿಕಲ್ಪನೆಗೆ ಸಂವಾದಿಯಾಗಿದೆ.


ಸಿಹಿಜೀವಿ ವೆಂಕಟೇಶ್ವರ


12 ಮಾರ್ಚ್ 2025

ಡೈರಿ ಮಿಲ್ಕ್ . ಹನಿಗವನ

 




ಡೈರಿ ಮಿಲ್ಕ್


ಲವ್ ಮಾಡುವಾಗ 

ಅವನು ಅವಳಿಗೆ

ದಿನವೂ ತಂದು ಕೊಡುತ್ತಿದ್ದ 

ಡೈರಿ ಮಿಲ್ಕು|

ಮದುವೆಯಾದ ನಂತರ 

ಈಗ ತಂದುಕೊಡುತ್ತಿದ್ದಾನೆ

ಡೈಲಿ ಮಿಲ್ಕು||


ಸಿಹಿಜೀವಿ ವೆಂಕಟೇಶ್ವರ

07 ಮಾರ್ಚ್ 2025

ಸಿಹಿಜೀವಿಯ ಹನಿ.

 

ಬೇರೆಯವರ ಜೀವನದಲ್ಲಿ ನೀವು

ನೀಡದಿದ್ದರೂ ಪರವಾಗಿಲ್ಲ ಅಕ್ಕರೆ|

ಆದರೆ ಉಳಿಸಿ ಹೋಗದಿರಿ ಮನದಲ್ಲಿ

ಮಾಯಲಾಗದ ಗಾಯದ ಬರೆ|