05 ಜುಲೈ 2018

ಎಂತಾ ಚೆನ್ನಾಗಿದ್ದೀಯಾ? (ಕವನ)


*ಎಂತಾ ಚೆಂದಾಗಿದ್ದೀಯಾ?*

ಬೊಚ್ಚುಬಾಯಿ ಬಿಟ್ಟು
ಹಾಲುಗಲ್ಲ ತೋರಿ
ಎಂತಾ ಚೆಂದಾಗಿದ್ದೀಯಾ
ಕಂದ ನೀ ಎಂತಾ ಚೆಂದಾಗಿದ್ದೀಯ

ಆಡಂಬರವು ಇಲ್ಲ
ಅಲಂಕಾರಗಳಿಲ್ಲ
ಲಕ್ಷ ಲಕ್ಷದ ಬೆಲೆಯ
ಬಟ್ಟೆ ಆಭರಣವಿಲ್ಲ
ಆದರೂ ನೀ ಎಂತಾ ಚೆನ್ನಾಗಿದ್ದೀಯಾ

ಬಟ್ಟಲುಗಣ್ಣು ಬಿಟ್ಟು
ಗಿಣಿಮೂಗು ತೋರುತ್ತ
ಮಂದಹಾಸ ಬೀರುತ
ಅಂದಕೆ ಹೆಸರಾದ ನೀ
ಎಂತಾ ಚೆನ್ನಾಗಿದ್ದೀಯಾ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



04 ಜುಲೈ 2018

★★★ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ★★★(ಸಂಗ್ರಹ ಲೇಖನ)

★★★ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ★★★

"ಜಪ"
★ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ನಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ.

★ಈ ಕಾರಣದಿಂದಲೇ ಇವರು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ.

★ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ.

★ "ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ,  ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ.

          “   "ಜ" ಕಾರೋ ಜನ್ಮ ವಿಚ್ಚೇಧನ
              "ಪ" ಕಾರೋ ಪಾಪನಾಶಕ
               ತಸ್ಮಾಜ್ಯಪ ಇತಿಪ್ರೊಕ್ತೋ
               ಜನ್ಮ ಪಾಪ ವಿನಾಶಕ          “

"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ
"ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ,
ಜನ್ಮ ಪವಿತ್ರವಾಗಬೇಕಾದರೆ "ಜಪ" ಅವ್ಶಕವೆಂದಾಗುತ್ತದೆ.

★"ಜಪ" ಅಂದರೇನು?
 ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸನಲ್ಲಾಗಲಿ ಧ್ಯಾನಿಸುವುದೇ "ಜಪ",

 ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೆ  ಕೇಳಿಸುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೋರಕುತ್ತದೆ.

★ಜಪಿಸುವ ಮಂತ್ರ ಬೀಜಮಂತ್ರವಾಗಲೀ, ತಾರಕ ಮಂತ್ರವಾಗಲೀ ಅಥವಾ ಇಷ್ಟ ದೇವತಾ ಮಂತ್ರವಾಗಲೀ ಗುರುಗಳಿಂದ ಉಪದೇಶ ಪಡಯಬೇಕೆಂಬ ನಿಯಮವಿದೆ.

★ಜಪದಲ್ಲಿ ಮೂರು ವಿಧಾನಗಳಿವೆ.

"ವಾಚಿಕ" - ಬೇರೆಯವರ ಕಿವಿಗೆ ಕೇಳಿಸುವಂತೆ ಪಠಿಸುವುದು.

"ಉಪಾಂಶು" - ತುಟಿಗಳು ಅಲುಗಾಡುತ್ತಿದ್ದರೂ ಶಬ್ದವು ಹೊರಗೆ ಕೇಳಿಸದಂತೆ ಜಪ ಮಾಡುವುದು

"ಮಾನಸಿಕ  - ಮನಸ್ಸಿನಲ್ಲಿ ಧ್ಯಾನಿಸುವುದು.

★ "ವಾಚಿಕ" ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾಂಶು", ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, "ಮಾನಸಿಕ ಜಪ ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ.

★★★ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ★★★

*★★★ಗುರು ಎಂಬ ಶಬ್ದಕ್ಕೆ ಅರ್ಥ ★★★

★ "ಗು" ಎಂದರೆ ಕತ್ತಲು ಅಥವ ಅಜ್ನಾನ
★"ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ.ಗುರುಉಪದೇಶ ಮಾಡುವುದರ ಜೊತೆಗೆಆಶಿರ್ವಾದವನ್ನೂ  ಮಾಡುತ್ತಾನೆ.

★ಜಪಸರದಲ್ಲಿ ೧೦೮ ಮಣಿಗಳಿರಬೇಕೆಂಬ ನಿಯಮವಿದೆ.

★ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ.

★ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ.

ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು.

★★★ಜಪದಲ್ಲಿ ವಿಧಗಳಿವೆ★★★

★ ನಿತ್ಯಜಪ

★ ವೈಯಕ್ತಿಕ ಜಪ

★ ಪ್ರಾಯಶ್ಚಿತ ಜಪ

★ಅಚಲ ಜಪ

★ಜಲ ಜಪ

★ ಅಖಂಡ ಜಪ

★ ಪ್ರದಕ್ಷಿಣ ಜಪ

★ ಲಿಖಿತ ಜಪ

★ ಕಾಮ್ಯ ಜಪ

ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂರ್ಧಭಗಳಲ್ಲಿ ಪಠಿಸಲಾಗುತ್ತದೆ.

★★★ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ.★★★

 ಅವುಗಳೆಂದರೆ,
★ಜಪ ಮಾಡುವ ಸ್ಥಳವು ಪರಿಶುದ್ದವಾಗಿರಯೂ, ಶಾಂತ ವಾತಾವರಣದಿಂದ ಕೂಡಿರಬೇಕು.

★ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು.
ಮರದ ಮಣೆ, ಅಥವ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋದ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸಬೇಕು.

★ ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು.
★ ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ.
★ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು. "ಅಸಂಖ್ಯಾ ಮಸುರಂ ಯಸ್ಮಾತ್, ತಸ್ಮಾದತೆ ಗಣೀಯತೆ ದೈವಂ" ಎಂಬುದಾಗಿ ತಿಳಿಸಲಾಗಿದೆ.

★ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರಬೆಕು.★

★★ಪ್ರತಿನಿತ್ಯವೂ ಜಪ ಮಡುವುದರಿಂದ ★★

★ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ.

★ಮನಸ್ಸನ್ನು ಭಗವಂತನ ಕಡೆಗೆ ಒಲೆಯುವಂತೆ ಮಾಡು ತ್ತದೆ.

★ ದುಷ್ಕಾರ‍್ಯಗಳನ್ನು ಮಾಡದಂತೆ ತಡೆಹಿಡಿಯುತ್ತದೆ.

★ ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿಯೊಂದು  ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ.

★ರಜೋಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ.

★ ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ.

★ ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.

★ ಆದರೆ ತೋರಾಣಿಕೆಗಾಗಿ ಮಾಡುವ ಜಪದಿಂದ ಯಾವುದೇ ಪುಣ್ಯಾವಾಗಲೀ, ಪುರುಷಾರ್ಥವಾಗಲೀ ದೊರಕುವುದಿಲ್ಲ.

★ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.★

★ಎಲ್ಲಾ ನದಿಗಳೂ ಸಮುದ್ರವನ್ನು ಸೇರುವಂತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಯಾವುದೆ ಹೆಸರಿನಿಂದಿರಲಿ, ಎಲ್ಲವೂ ಸರ್ವಶಕ್ತನಾದ ಭಗವಂತನಿಗೇ ಸಲ್ಲುತ್ತದೆ.

ಸಂಗ್ರಹ : ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಜಗದ ಜನ ( ಕವನ)

*ಜಗದ ಜನ*

ನಾವೆಲ್ಲರೂ ದೇಶದಲಿರುವ  ಜಗದ ಜನ
ಮಾಡಲು ಪಣತೊಡೋಣ ಜಗವ ಹೂಬನ

ಬಿಳಿ‌‌ ಕರಿ ಬಣ್ಣಗಳೆನೇ ಇರಲಿ
ಉದ್ದ ಗಿಡ್ಡ  ಅಕಾರಗಳ ಗೊಡವೆಯೇಕೆ?
ಗಡಿಗಳ ಗೊಡವೆಯೇತಕೆ ಬೇಕು
ನಮ್ಮ ಮದ್ಯೆ ಜಗಳಗಳು ಬೇಕೆ?

ಇರಲಿ ನಮ್ಮ ದೇಶದ ಮೇಲೆ ಅಭಿಮಾನ
ಮರೆಯದಿರೋಣ ನಾವು ಜಗದ ಜನಗಳ
ನಮ್ಮ ಧರ್ಮ ನಮಗೆ ಮೇಲು
ಗೌರವಿಸೋಣ ಬೇರೆ ಧರ್ಮಗಳ

ಭಯೋತ್ಪಾದನೆ, ಪ್ರಾಂತೀಯತೆ  ತರವಲ್ಲ
ಪ್ರೀತಿ ವಿಶ್ವಾಸ ಮರೆವುದು ಬೇಕಿಲ್ಲ
ಜೊತೆಯಾಗಿ ಸಾಗೋಣ ಬೆಳೆಯೋಣ
ಭುವಿ ನಂದನವನ‌ ಮಾಡಿ ತಿನ್ನೋಣ ಸವಿ ಬೆಲ್ಲ

ಸ್ವರ್ಗ ಸಮಾನ ಜಗದ ಕನಸ ಕಾಣೋಣ
ಮಾನವ ಸಂಪನ್ಮೂಲ ಬೆಳೆಸೋಣ
ವಸುಧೈವಕುಟುಂಬ ಪರಿಕಲ್ಪನೆ ಬೆಳೆಸಿ
ಸರ್ವ ಜನಹಿತ ಕೋರೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


03 ಜುಲೈ 2018

ಹುಚ್ಚು ಬಿಡಿಸು(ಕವನ)

*ಹುಚ್ಚು ಬಿಡಿಸು*

ಸಂಜೆಯ  ವೇಳೆಯಲಿ
ಸಾಗರತೀರದಿ ನಡೆವಾಗ
ಸೂರ್ಯಾಸ್ತವಾದಾಗ
ನಿನ್ನ ನೆನಪಾಗುವುದು

ಬೇಸಿಗೆ ಕಾಲದಲಿ
ಮೈ ಬಿಸಿಯಾದಾಗ
ನನ್ನ ಪಕ್ಕದಲ್ಲಿ ನೀನಿರುವಂತೆ
ನಿನ್ನ ನೆನಪಾಗುವುದು

ಮಳೆ  ಬಿಲ್ಲು ಕಂಡಾಗ
ಮಳೆಯಲ್ಲಿ ನೆನೆದಾಗ
ಇಳೆಯು ತಂಪಾದಾಗ
ನಿನ್ನ ನೆನಪಾಗುವುದು

ಶಿಲಾಬಾಲಿಕೆಯರ ನೋಡಿದಾಗ
ಕಲೆಯ ಚಿತ್ರಪಟದಲೂ ನೀನೆ
ಭುವನಸುಂದರಿ ನೋಡಿ
ನಿನ್ನ ನೆನಪಾಗುವುದು

ಹಗಲಿರುಳು ನಿನದೇ ಕನವರಿಕೆ
ಮರುಳನಾಗಿರುವೆ ನಿನ್ನ ನೋಡದೆ
ಬಂದು ಸೇರು ನನಗೆ ಮೋಸ ಮಾಡದೆ
ಪ್ರೀತಿ ತೋರಿ  ನನ್ನ ಹುಚ್ಚು ಬಿಡಿಸು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

02 ಜುಲೈ 2018

ನನಸಾದೀತೇ?(ಭಾವಗೀತೆ)

*ನನಸಾದೀತೆ?*

ಹಸಿವಿನಿಂದ ಸಾಯುವರು ಲಕ್ಷ
ಅಜೀರ್ಣದಿಂದ ಸಾಯವರು ಲಕ್ಷ
ಆಹಾರದ ಪೋಲಾಗುತಿದೆ ಲಕ್ಷ ಲಕ್ಷ
ಆದರೂ ನಾವು ನೀಡಿಲ್ಲ ಅದರೆಡೆ ಲಕ್ಷ್ಯ

ಉದರ ನಿಮಿತ್ತ ಬಹುಕೃತ ವೇಷ
ಕೆಲ ನೀತಿ ನಿಯತ್ತು ಪ್ರಮಾಣಿಕ
ಮತ್ತೆ ಕೆಲವು .ಅನ್ಯಾಯ  ಅಕ್ರಮ
ಇವರ ಕುಲದೇವರೇ ವಂಚಕ

ಅನ್ನದ ಬೆಲೆ ತಿಳಿಯದೆ ಕಾಲಕಸವಾಗಿ
ನೋಡಿ  ತಿಪ್ಪೆಗೆ ಎಸೆಯುತಿಹರು
ಅನ್ನದಾತನು ಒಂದಗಳ ಪಡೆಯಲು
ಪಟ್ಟ ಕಷ್ಟಗಳ ಮರೆಯುತಿಹರು

ಹಸಿವು ಮುಕ್ತ ಕನಸು ನನಸಾದೀತೆ?
ಹಸಿವಿನಿಂದಾಗುವ ಸಾವುಗಳು ನಿಂತೀತೆ  ?
ಸಮುದಾಯಕೆ ಬುದ್ದಿ ಬಂದೀತೆ ?
ಸ್ವಂತಕ್ಕೆ ಸ್ವಲ್ಪ ಜಗಕೆ ಸರ್ವಸ್ವ ಅಂದೀತೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*