16 September 2024

ಮಹಾಶರಣ ಕಮ್ಮಾರ ಕಲ್ಲಯ್ಯ...ಪುಸ್ತಕ ಪರಿಚಯ..


 


ಕಮ್ಮಾರ ಕಲ್ಲಯ್ಯ.

ಮಾಹಾಶರಣರ ಬಗ್ಗೆ ಒಂದು ಸಂಶೋಧನಾ ಕೃತಿ


ಎಂದಿನಂತೆ ಮಗಳೊಂದಿಗೆ ವಾಕ್ ಮಾಡಿ ಬರುವಾಗ ಆತ್ಮೀಯರಾದ ಮಂಜಣ್ಣನವರು ಒಂದು ಪುಸ್ತಕ ನೀಡಿ  ಈ  ಪುಸ್ತಕ  ಓದಿ ಸರ್ ಎಂದರು. ಬಹುತೇಕ ನನ್ನ ಎಲ್ಲಾ  ಬರೆಹಗಳನ್ನು ಓದಿ ಪ್ರೋತ್ಸಾಹ ಮಾಡುವ ಮಂಜಣ್ಣನವರ ಸಾಹಿತ್ಯಾಭಿರುಚಿ ಕಂಡು ಅವರನ್ನು ಆಗಾಗ ಧನ್ಯವಾದಗಳನ್ನು ಹೇಳುತ್ತಲೇ ಬಂದಿರುವೆ.ಈಗ ಒಂದು ಕಿರುಹೊತ್ತಿಗೆ ನೀಡಿ ಹಿರಿದಾದ ಜ್ಞಾನವನ್ನು ಪಡೆಯಲು ಸಹಕಾರಿಯಾದ ಮಂಜಣ್ಣನವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಲೇಬೇಕು.

ಅಂದ ಹಾಗೆ ಅವರು ಅಂದು ನನಗೆ ನೀಡಿದ ಪುಸ್ತಕ  "ಮಹಾಶರಣ ಕಮ್ಮಾರ ಕಲ್ಲಯ್ಯ"


ಆಕಾಶದಲ್ಲಿ ನಕ್ಷತ್ರದಂತೆ ಮಿನುಗುತ್ತಾ ಬೆಳೆದು ಬಂದಂತಹ 12 ನೇ ಶತಮಾನದಲ್ಲಿ ಬೆಳಕಿಗೆ ಬಂದ ಸಂತತಿಯಲ್ಲಿ ಶರಣ ಬಸವಣ್ಣನವರ ಸಂಸ್ಕಾರ ದಡಿಯಲ್ಲಿ ಸಾವಿರಾರು ಶರಣರು ಬೆಳೆದು ಹೆಮ್ಮರವಾಗಿದ್ದಾರೆ.

ಎಲ್ಲಾ ವರ್ಗದ ಶರಣರನ್ನು ಸಮಾನವಾಗಿ ಕಂಡು ಪ್ರೋತ್ಸಾಹ ನೀಡಿ ಬೆಳೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು. ಈಗಾಗಲೇ ಹಲವಾರು ಶರಣರು ಲಭ್ಯ ವಚನಗಳ  ಆಧಾರದ ಮೇಲೆ ಜನಜನಿತರಾಗಿದ್ದಾರೆ.ಇನ್ನೂ ಕೆಲ ಶರಣರು ದಾಖಲೆಗಳ ಕೊರತೆಯಿಂದ  ಅಜ್ಞಾತವಾಗಿಯೇ ಉಳಿದಿದ್ದಾರೆ.ಅಂತಹವರಲ್ಲಿ  ಒಬ್ಬರು ಮಹಾ ಶರಣ ಕಮ್ಮಾರ ಕಲ್ಲಯ್ಯ‌.

 ಕಮ್ಮಾರಿಕೆ ಕುಲವೃತ್ತಿಯನ್ನು ಮಾಡುತ್ತಾ ದಾರ್ಶನಿಕರಾಗಿ ಜಗತ್ತಿನ ಶ್ರೇಷ್ಠ ಪಂಕ್ತಿಯಲ್ಲಿ ಬೆಳೆದಿರುವ ಶರಣರಲ್ಲಿ ನಿಜ ಶರಣ ಕಮ್ಮಾರ ಕಲ್ಲಯ್ಯನವರು

 ತಮ್ಮ ಜೀವನವನ್ನು ಪೂರ್ಣವಾಗಿ ಶರಣ ಸಂತತಿಯ ಬೆಳವಣಿಗೆಗೆ ಧಾರೆ ಎರೆದ ಮಹಾನುಭಾವರು. ಇಂತವರ ಬಗ್ಗೆ ಅನೇಕ ಗ್ರಂಥಗಳು ಬಹುತೇಕ ಕಡೆ ಹುಡುಕಿದರೂ ಸಿಗದಿರುವ ಅಪರೂಪದ ವಿಚಾರಗಳನ್ನು  ಅನೇಕ ಗ್ರಂಥಗಳನ್ನು ಪರಿಶೀಲಿಸಿ, ಜನಪದ ಆಕರಗಳನ್ನು ಬಳಸಿಕೊಂಡು ತಮ್ಮ ಬುದ್ದಿವಂತಿಕೆಯ ಚಾತುರ್ಯವನ್ನು ಕಮ್ಮಾರ ಸಮುದಾಯಕ್ಕೆ ದಾರಿದೀಪವಾಗುವಂತೆ ಆಧಾರವನ್ನಾಗಿಸುವ ಪ್ರಯತ್ನವನ್ನು ಮಾಡಿ ಡಾ. ಸೋಮನಾಥ ಯಾಳವಾರ  ಕಿರು ಹೊತ್ತಿಗೆ ರಚಿಸಿದ್ದಾರೆ.

ಹೊತ್ತಿಗೆ ಕಿರಿದಾದರೂ ಅದರಲ್ಲಿ ಸತ್ವಯುತವಾದ ವಿಚಾರವಿದೆ ಎಂಬುದು ನನ್ನ ಅಭಿಪ್ರಾಯ.


ಡಾ. ಸೋಮನಾಥ ಯಾಳವಾರರವರ ಅಧ್ಯಯನದ, ಹರವು ಬಹುವಿಸ್ತಾರ, ದೃಷ್ಟಿ ವಿಶಾಲ ಮತ್ತು ಬರವಣಿಗೆ ಪ್ರಖರವಾದದ್ದು, ಸಾಹಿತ್ಯದ ವಿವಿಧ ಘಟ್ಟಗಳು, ಪ್ರಕಾರಗಳು, ಆಯಾಮಗಳು ಅವರಿಗೆ ಕರತಲಾಮಲಕ ಜನಪದ, ತತ್ವಪದ, ಕೀರ್ತನ ಸಾಹಿತ್ಯ, ವಚನ ಸಾಹಿತ್ಯ ಮತ್ತು ಆಧುನಿಕ ಸಾಹಿತ್ಯವನ್ನು ಸೂಕ್ಷ್ಮ ಹಾಗೂ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿರುವ ಇವರು. ವಚನ ಸಾಹಿತ್ಯ ಕುರಿತಾಗಿ ಹೆಚ್ಚಿನ ಒಲವಿನಿಂದ  ಬಸವಾದಿ ಶರಣರ ಕುರಿತಾಗಿ ಅನೇಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಜಾನಪದರ ಹಾಡಿನ ಜಾಡು ಹಿಡಿದು ಆ ಹಾಡುಗಳ ಆಧಾರದ ಮೇಲೆ ಅವರು  ನಮಗೆ ಕಲ್ಲಯ್ಯನವರ ದರ್ಶನ ಮಾಡಿಸಿದ್ದಾರೆ. 


'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ  ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು. ಗೌರಮ್ಮ ಮಾದಾರ ಹಾಡಿರುವ  64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.ಇಂತಹ ಪ್ರಯತ್ನಗಳು ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ  ಎಲೆ ಮರೆ ಕಾಯಿಗಳಾಗಿರುವ ನೂರಾರು ಶರಣರ ಜೀವನ ಚರಿತ್ರೆಗಳು ಹೊರತರುವಲ್ಲಿ. ಕೆಲ ಸಂಘ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ.

ಲಿಂಗಾಯತ ವಿಶ್ವ ವಿದ್ಯಾಲಯದ ಪ್ರಸಾರಾಂಗವು   ಅನುಭವ ಮಂಟಪ ಶರಣಚರಿತಾಮೃತ ಮಾಲಿಕೆಯಡಿಯಲ್ಲಿ 39 ನೇ ಕೃತಿಯಾಗಿ ಪ್ರಕಟಿಸಿದ ಈ ಕೃತಿಯು ಮೌಲಿಕವಾದದ್ದು ಇಂತಹ ನೂರಾರು ಶರಣರ ಕೃತಿಗಳು ಪ್ರಕಟವಾಗಲಿ ಎಂಬುದೇ ನಮ್ಮ ಆಶಯ.



ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು.

ತುಮಕೂರು.

9900925529


No comments: