12 July 2024

ನಂಜುಂಡಪ್ಪನವರು


 


ಬೆನ್ನುಡಿ.


ನಂಜುಂಡಪ್ಪನವರು ಸರಳ ಸಜ್ಜನ ಅದ್ಯಾತ್ಮ ಸಾಧಕರು.ಕಳೆದ ಐದು ವರ್ಷಗಳ ಅವರ ಒಡನಾಟದಲ್ಲಿ ಅವರೊಂದಿಗೆ ಮಾತನಾಡುತ್ತಾ ಕುಳಿತರೆ ಅವರ ವ್ಯಕ್ತಿತ್ವ ಅನಾವರಣಗೊಳ್ಳುವುದು. ಅವರ ಮಾತುಗಳಲ್ಲಿ  ದೇಶಭಕ್ತಿ, ಯುವಕರ ಬಗ್ಗೆ ಕಾಳಜಿ, ಅದ್ಯಾತ್ಮದ ವಿಷಯಗಳು ಹೆಚ್ಚು ಕಂಡು ಬರುತ್ತವೆ.ಅವರೊಂದಿಗೆ ಮಾತನಾಡುತ್ತಿದ್ದರೆ ನಮ್ಮಲ್ಲಿ ಹೊಸ ಚಿಂತನೆಗಳು ಮೂಡುತ್ತವೆ.

ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಮೆಟ್ಟಿ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿ, ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಅವರ ಜೀವನವೇ ಒಂದು ಪವಾಡದಂತೆ ನನಗನ್ನಿಸುತ್ತದೆ.

ನಿವೃತ್ತ ಅಂಗ್ಲ ಉಪನ್ಯಾಸಕರಾದ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರದೊಂದಿಗೆ ಜ್ಞಾನವನ್ನು ನೀಡಿ ಅವರ ವ್ಯಕ್ತಿತ್ವ ಸುಧಾರಿಸಲು ಮಾರ್ಗದರ್ಶನ ನೀಡಿದ್ದಾರೆ. "ಪರೋಪಕಾರ್ಥಂ ಇದಮಿತ್ತಂ ಶರೀರಂ" ಎಂಬ ವಾಣಿಯಂತೆ ಪರೋಪಕಾರದಲ್ಲಿ ಇವರು ಎತ್ತಿದ ಕೈ. ದೇಶ ಸುತ್ತುವುದು ಕೋಶ ಓದುವುದು ಇವರ ಪ್ರಮುಖ ಹವ್ಯಾಸಗಳು.  ಇವರು ಪ್ರಸ್ತುತ ತಮ್ಮ ಚಾರ್ ಧಾಮ್ ಯಾತ್ರೆ ಮತ್ತು ಅಂಡಮಾನ್ ಪ್ರವಾಸ ಕಥನ ಬರೆದಿದ್ದಾರೆ. ಚಾರ್ ಧಾಮ್ ಯಾತ್ರೆಯ ಅವರ ಪ್ರವಾಸ ಕಥನ ಓದುವಾಗ ಒಬ್ಬ ಯೋಗಿಯ ಆತ್ಮಕಥೆ ಓದಿದ ಅನುಭವವಾಯಿತು.ಅಂತಹ ಸಾಧಕರ ಜೊತೆಯಲ್ಲಿ ಒಡನಾಡುವುದು ನಮ್ಮ ಭಾಗ್ಯ ಎಂದರೆ ಅತಿಶಯೋಕ್ತಿಯಲ್ಲ.

ನಾನು ಕಳೆದ ವರ್ಷ ಅಂಡಮಾನ್ ಗೆ ಅವರ ಜೊತೆಯಲ್ಲಿ ಪ್ರವಾಸ ಹೋಗಿದ್ದೆ. ಅವರ ಅಂಡಮಾನ್ ಪ್ರವಾಸದ ಅನುಭವಗಳನ್ನು ಓದುವಾಗ ನನ್ನ ಮನದ ಭಾವನೆಗಳೇನೋ ಎಂಬ ರೀತಿಯ ಸಾಮ್ಯತೆ ಕಂಡು ಸಂತಸವಾಯಿತು.ಅದರಲ್ಲೂ ಬಾರಾಟಂಗ್ ಐಲ್ಯಾಂಡ್‌ ನಲ್ಲಿ ಅವರಿಗಾದ ಅಲೌಕಿಕ ಅನುಭವಗಳನ್ನು ನಾವು ಓದಿಯೇ ತಿಳಿಯಬೇಕು. ಈಗಾಗಲೇ ಹಲವಾರು ಕವಿತೆ ಹಾಗೂ ಲೇಖನಗಳನ್ನು ಬರೆದಿರುವ ಇವರು ಅವುಗಳನ್ನು ಪ್ರಕಟ ಮಾಡಿರಲಿಲ್ಲ. ಗೆಳೆಯರ ಬಳಗದ ಒತ್ತಾಯದ ಮೇರೆಗೆ ಬರೆದ ಈ ಪ್ರವಾಸ ಕಥನ ಈಗ ಪ್ರಕಟವಾಗಿದೆ. ಇನ್ನೂ ಹೆಚ್ಚಿನ ಕೃತಿಗಳು ಇವರ ಲೇಖನಿಯಿಂದ ಹೊರಹೊಮ್ಮಿ ತಾಯಿ ಭುವನೇಶ್ವರಿಯ ಆಶೀರ್ವಾದ ಪಡೆಯಲಿ ಎಂದು ಮನಃಪೂರ್ವಕವಾಗಿ  ಹಾರೈಸುವೆ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು

ತುಮಕೂರು

9900925529


No comments: