06 June 2024

ನನ್ನಮ್ಮ ನಮ್ಮೂರ ಪ್ಲಾರೆನ್ಸ್ ನೈಟಿಂಗೇಲ್...ಪುಸ್ತಕ ಪರಿಚಯ..

 

[06/06, 8:59 am] ಸಿಹಿಜೀವಿ ವೆಂಕಟೇಶ್ವರ: ಕುಣಿಗಲ್ ನುಡಿತೋರಣ ಸಮ್ಮೇಳನದಲ್ಲಿ ಸಿ ಬಿ ಶೈಲಾ ಜಯಕುಮಾರ್ ಮೇಡಂ ರವರಿಗೆ ನನ್ನ "ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್" ಪುಸ್ತಕ ನೀಡಿದ್ದೆ.  ಪುಸ್ತಕ ಓದಿ ಮೆಚ್ಚುಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಧನ್ಯವಾದಗಳು🙏🙏 ಮೇಡಂ...


ನೀವು ಕೂಡಾ ಅವರ ಈ ಲೇಖನ ಓದಿ..

[06/06, 8:59 am] ಸಿಹಿಜೀವಿ ವೆಂಕಟೇಶ್ವರ: ಕೃತಿ- ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್

ಕರ್ತೃ- ಸಿ ಜಿ ವೆಂಕಟೇಶ್ವರ

ಮೊದಲ ಮುದ್ರಣ-೨೦೨೧

ದ್ವಿತೀಯ ಮುದ್ರಣ- ೨೦೨೨

ಪುಟಗಳು- ೦೪+೧೦೪

ಬೆಲೆ- ₹೧೨೦/-

ಸಿಹಿಜೀವಿ ಪ್ರಕಾಶನ,ಗೋಕುಲ ಬಡಾವಣೆ, ತುಮಕೂರು.


ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯ ರೈತ ಕುಟುಂಬದ ಸಿ ಜಿ ವೆಂಕಟೇಶ್ವರ ಪ್ರೌಢಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಕವನ, ಕಥೆ, ಪ್ರಬಂಧ, ಲೇಖನ, ಅಂಕಣಗಳು ಪ್ರಕಟವಾಗಿವೆ. ರಂಗಭೂಮಿಯ ಕಲಾವಿದರೂ ಹೌದು. 

ಸಾಲು ದೀಪಾವಳಿ ( ಕವನ ಸಂಕಲನ) ಸಿಹಿಜೀವಿಯ ಗಜಲ್( ಗಜಲ್ ಸಂಕಲನ) ಇವರ ಪ್ರಕಟಿತ ಕೃತಿಗಳು. ಕಾವ್ಯ ಚಿಂತಾಮಣಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಕೂಡ. 


ವೆಂಕಟೇಶ್ವರ ಅವರ ಮೂರನೇ ಕೃತಿ 'ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್'. ವಿವಿಧ ಪತ್ರಿಕೆಗಳಿಗಾಗಿ ಬರೆದಿರುವ ಮೂವತ್ತೈದು ಪ್ರಬಂಧ ಮಾದರಿಯ ಗದ್ಯ ಬರಹಗಳಿವೆ.


ಬರವಣಿಗೆ ನನ್ನ ಜೀವನದ ಅವಿಭಾಜ್ಯ ಅಂಗವೆನ್ನುವ ವೆಂಕಟೇಶ್ವರ ಅವರಿಗೆ ಬದುಕಿನ ಅನುಭವವೇ ಅಭಿವ್ಯಕ್ತಿ ಮೂಲ!  ಸಮಾಜದಲ್ಲಿ ಕಾಣುವ ಧನಾತ್ಮಕ ಹಾಗೂ ಋಣಾತ್ಮಕ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದನ್ನು ಬರಹ ರೂಪದಲ್ಲಿ ಇಲ್ಲಿ ದಾಖಲಿಸಿದ್ದಾರೆ. ಆತ್ಮಸಂತೋಷಕ್ಕಾಗಿ  ಬರೆದ ಬರಹಗಳೂ ಇಲ್ಲಿವೆ.


ಬಾಲ್ಯದಲ್ಲೇ  ತಂದೆಯನ್ನು ಕಳೆದುಕೊಂಡು, ತಾಯಿಯ ಆರೈಕೆಯಲ್ಲಿ , ಬಡತನದಲ್ಲೇ ಬೆಳೆದ ವೆಂಕಟೇಶ್ವರ ಅವರಿಗೆ ತಮ್ಮ ಅಮ್ಮನ ಬಗ್ಗೆ ಅಪಾರ ಗೌರವ, ಪ್ರೀತಿಯಿದೆ. ಅಲ್ಲದೆ ಆ ತಾಯಿಯೂ ಸಹನಾಮಯಿ! ಹೊಲದಲ್ಲಿ ಗೇದು ಬಂದರೂ ದಣಿವರಿಯದೆ ಇತರರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರೆಂದೂ, ತಡ ರಾತ್ರಿಯಲ್ಲೂ ಸೂಲಗಿತ್ತಿಯ ಕಾರ್ಯ ನಿರ್ವಹಿಸಲು ತೆರಳಿತ್ತಿದ್ದರೆಂದು ಲೇಖಕರು ಬರೆಯುತ್ತಾರೆ.

 

ಗೆಳೆಯರಿಬ್ಬರು ಮಾತನಾಡುವಾಗ , "ನನ್ನ ಬಳಿ ಮೂರು ಬೆಲೆ ಬಾಳುವ ಬಂಗ್ಲೆಗಳು, ನಾಲ್ಕು ದುಬಾರಿ ಕಾರುಗಳು,  ಅಪಾರ ಬ್ಯಾಂಕ್ ಬ್ಯಾಲೆನ್ಸ್ ಇದೆ, ನಿನ್ನ ಬಳಿ ಏನಿದೆ? " ಒಬ್ಬ  ಪ್ರಶ್ನಿಸಿದ. ಮತ್ತೊಬ್ಬನೆಂದ, "ನನ್ನ ಬಳಿ ತಾಯಿಯಿದ್ದಾಳೆ". ತಾಯಿಯೇ ಎಲ್ಲವುದಕ್ಕಿಂತ ಮಿಗಿಲು ಎನ್ನುವ ಭಾವವಿಲ್ಲಿದೆ. 


ಲೌಕಿಕ ಆಡಂಬರಕ್ಕಿಂತ "ತಾಯಿಯೇ ಎಲ್ಲವೂ"  ಎನ್ನುವ ವೆಂಕಟೇಶ್ವರ ಅವರು "ನನ್ನ ದೇವತೆ ನನ್ನೊಂದಿಗಿರುವುದು ನನ್ನ ಹೆಮ್ಮೆ" ಎನ್ನುತ್ತಲೇ  ಈ ಪುಸ್ತಕವನ್ನು ತಾಯಿ  ಶ್ರೀದೇವಮ್ಮನಿಗೆ ಅರ್ಪಿಸಿದ್ದಾರೆ. ತಾಳ್ಮೆಯ ಪ್ರತಿರೂಪದಂತಿರುವ ಮಗಳನ್ನೂ ತಾಯಿಯೆಂದೇ ಗೌರವಿಸುತ್ತಾರೆ.

ಇಂತಹದೊಂದು ಅಮೂಲ್ಯ ಮೌಲ್ಯ ನಮ್ಮ ವರ್ತಮಾನದ ಪೀಳಿಗೆಯಲ್ಲಿ ಬೆಳೆಯಬೇಕಿದೆ.


ಕೋಟ್ಯಾಧೀಶನೆಂದರೆ ಕೋಟಿಗಟ್ಟಲೆ ದುಡ್ಡಿರುವವ ಎಂದಲ್ಲ; ರಾತ್ರಿಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡುವವ ಎನ್ನುವ ಇವರ  ವ್ಯಾಖ್ಯಾನ ಖುಷಿ ಕೊಡುತ್ತದೆ. 


ಈ ಬರಹಗಳಲ್ಲಿ ಗಂಭೀರ ವಿಷಯಗಳಿಗಿಂತ ಹೆಚ್ಚಾಗಿ ಗಂಭೀರ ಮನಸ್ಥಿತಿಯಿದೆ, ಕರ್ತವ್ಯ ಪ್ರಜ್ಞೆಯಿದೆ, ಯುವಕರಿಗೆ ಕಿವಿ ಮಾತುಗಳಿವೆ, ನೆನಪುಗಳಿವೆ, ವಿದ್ಯಾರ್ಥಿ ಚಿಂತನೆಗಳಿವೆ,  ಸದಾಶಯಗಳಿವೆ, ಮಾನವೀಯ ತುಡಿತಗಳಿವೆ. 

ಸಾಮಾಜಿಕ ಜಾಲತಾಣಗಳ ಪ್ರಭಾವ, ಮತ ಚಲಾವಣೆ ಮತ್ತು ಕೊರೋನಾ ಕಾಲದ ಜವಾಬ್ದಾರಿಗಳನ್ನು ತಿಳಿಸುವ ಲೇಖನಗಳು ಗಮನ ಸೆಳೆಯುತ್ತವೆ. 

ಸರಳವಾದ ಬರಹ ಗಹನ ಚಿಂತನೆಗೂ ಅನುವು ಮಾಡಿಕೊಡುತ್ತದೆ. 


 ನೀವೂ ಓದಿ.


ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

No comments: