25 June 2024

ಮಾನವೀಯ ಮೌಲ್ಯಗಳು

 


ಮಾನವೀಯ ಮೌಲ್ಯಗಳು 


ಇಂದಿನ ಆಧುನಿಕ ಪ್ರಪಂಚದಲ್ಲಿ ಚಾರ್ವಾಕ ಸಂಸ್ಕೃತಿಯ ಪರಿಣಾಮವಾಗಿ ಭೌತಿಕ ಸುಖ ಸಂತೋಷಕ್ಕೆ ಹೆಚ್ಚು ಮಾನ್ಯತೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಕುಸಿತವಾಗುತ್ತಿವೆ. ಹೀಗೆಯೇ ಮುಂದುವರೆದರೆ ಮುಂದಿನ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ.


ಮಾನವನು ಬದುಕಬೇಕೆಂದಾದರೆ ಪ್ರತಿ ನಿತ್ಯವೂ ಉತ್ತಮ ಆಹಾರ ಸೇವನೆ ಮಾಡಬೇಕು. ಬದುಕು ಸಾಗಿಸಬೇಕೆಂದರೆ ಕೇವಲ ಆಹಾರ ಮಾತ್ರ ಸಾಕಾಗುವುದಿಲ್ಲ. ಶರೀರದ ಮೇಲೆ ಉನ್ನತ ಸ್ತರದ ಉಡುಗೆ ತೊಡುಗೆಗಳೂ, ಆಕರ್ಷಕವಾದ ಮುತ್ತು, ರತ್ನ, ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯದ ಆಭರಣಗಳೂ ಇರಬೇಕೆಂದು ಬಯಸುತ್ತಾರೆ. ಆದರೆ ವಾಸ್ತವದಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳಿಂದಲೂ ಶ್ರೇಷ್ಠವಾದುದು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳು ಹಾಗೂ ನೈತಿಕತೆ ಎಂಬುದನ್ನು    ನಿರೂಪಿಸುವ ಒಂದು ಪ್ರಸಂಗ ಹೀಗಿದೆ.


ಮಧ್ಯಪ್ರಾಚ್ಯದ ಸುಪ್ರಸಿದ್ಧ ನಗರವಾದ ಬಗ್ದಾದ್‌ನ ಆಡಳಿತಗಾರನನ್ನು ಖಲೀಫರೆಂದು ಕರೆಯುತ್ತಾರೆ. ಈ ಖಲೀಫರ ಬಳಿ ಒಬ್ಬ ಗುಲಾಮನಿದ್ದ. ನೋಡಲು ಅತ್ಯಂತ ಕುರೂಪಿಯಾಗಿದ್ದ. ಈ ಗುಲಾಮನ ಹೆಸರು ಹಾಶಮ್‌. ಏನೇನೂ ಆಕರ್ಷಣೆಯಿಲ್ಲದ ಈತನ ಬಗ್ಗೆ ಇತರ ಗುಲಾಮರು ನಕ್ಕು ತಮಾಷೆ ಮಾಡುತ್ತಿದ್ದರು. ಆದರೆ ಅತ್ಯಂತ ಬಡವನಾಗಿದ್ದ ಹಾಶಮ್‌, ಅವರ ತಮಾಷೆಯನ್ನು ಲೆಕ್ಕಿಸದೆ, ತನ್ನಷ್ಟಕ್ಕೆ ತಾನೇ ಇರುತ್ತಿದ್ದ ಹಾಗೂ ಖಲೀಫರ ಬಗ್ಗೆ ಸ್ವಾಮಿ ಭಕ್ತಿಯುಳ್ಳವನಾಗಿದ್ದ.


ಅವರ ಎಲ್ಲ ಆಜ್ಞೆಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ. ಒಂದು ಸಲ ಈ ಖಲೀಫರು ಒಂದು ಕುದುರೆ ಗಾಡಿಯನ್ನೇರಿ, ನಗರ ಸಂಚಾರಕ್ಕೆ ಹೊರಟಿದ್ದರು. ಹಿಂದಿನಿಂದ ಹಿಂಬಾಲಿಸುತ್ತಿದ್ದ ಗುಲಾಮರ ಜತೆಗೆ ಹಾಶಮನೂ ಇದ್ದನು. ಅಕಸ್ಮಾತ್ತಾಗಿ ದಾರಿಯಲ್ಲಿ ಖಲೀಫರ ಕುದುರೆಯ ಕಾಲು ಕೆಸರಲ್ಲಿ ಜಾರಿಬಿಟ್ಟಿತು.


ಆ ಖಲೀಫರ ಕೈಯಲ್ಲಿ ಮುತ್ತು, ವಜ್ರಗಳುಳ್ಳ ಒಂದು ಪೆಟ್ಟಿಗೆಯಿತ್ತು. ಕುದುರೆಯ ಕಾಲು ಜಾರಿದಾಗ, ಖಲೀಫರ ಕೈ ನಡುಗಿ ವಜ್ರದ ಪೆಟ್ಟಿಗೆಯೂ ಜಾರಿ ಉರುಳಿತು. ಮುತ್ತು, ವಜ್ರಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯ ಮೇಲೆ ಬಿದ್ದವು. ಇದನ್ನು ಕಂಡು ಖಲೀಫರು ತಮ್ಮ ಗುಲಾಮರೊಡನೆ 'ರಸ್ತೆಯಲ್ಲಿ ಬಿದ್ದ ಮುತ್ತು, ವಜ್ರಗಳನ್ನು ಆರಿಸಿಕೊಳ್ಳಿ. ಅವು ನಿಮ್ಮದೆಂದೇ ಭಾವಿಸಿ ಆರಿಸಿಕೊಳ್ಳಿರಿ' ಎಂದಾಗ, ಎಲ್ಲರೂ ರಸ್ತೆಯಿಂದ ಆರಿಸಿ, ಸಂತೋಷಪಟ್ಟರು.


ಆದರೆ ಹಾಶಮ್‌ ಖಲೀಫರ ಬಳಿಯೇ ನಿಂತಿದ್ದ. ಖಲೀಫರು ಅವನೊಡನೆ ''ನೀನೇಕೆ ಅಮೂಲ್ಯ ಮುತ್ತು, ವಜ್ರಗಳನ್ನು ಆರಿಸಿಕೊಂಡಿಲ್ಲ?,'' ಎಂದು ಪ್ರಶ್ನಿಸಿದರು. ಆಗ ಹಾಶಮ್‌ ನುಡಿದ ''ನನ್ನ ಮಟ್ಟಿಗೆ ಅಮೂಲ್ಯ ವಜ್ರವೆಂದರೆ ತಾವೇ ಆಗಿದ್ದೀರಿ. ಹಾಗಿರುವಾಗ ತಮ್ಮನ್ನು ಬಿಟ್ಟು ನಾನೆಂತು ಹೋದೇನು?,''


ಹಾಶಮನ ಉತ್ತರ ಕೇಳಿ ಪ್ರಸನ್ನರಾದ ಖಲೀಫರು ಬಹು ಸಂತುಷ್ಟರಾಗಿ, ತಕ್ಷ ಣವೇ ಹಾಶಮ್‌ನನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಿಬಿಟ್ಟರು. ಅನಿರೀಕ್ಷಿತವಾಗಿ ಹಾಶಮನಿಗೆ ಬಹುಶ್ರೇಷ್ಠ ಬಹುಮಾನ ದೊರಕಿತ್ತು.



ಸಿಹಿಜೀವಿ ವೆಂಕಟೇಶ್ವರ

ತುಮಕೂರು


No comments: