ಕಾಡಿದ ಗಜಲ್
ಅರವಳಿಕೆ ತಜ್ಞರು,ಗಜಲ್ ಕಾರರಾದ ಡಾ ಗೋವಿಂದ ಹೆಗಡೆರವರು ನನ್ನ ಗಜಲ್ ಗುರುಗಳು.
ನನ್ನ ಗಜಲ್ ಗುರುಗಳ ಎಲ್ಲಾ ಗಜಲ್ ಗಳು ಇಂದಿಗೂ ನನ್ನ ಕಾಡಿವೆ ಕಾಡುತ್ತಲಿವೆ.
ಹೀಗೆ ಅತಿಯಾಗಿ ಕಾಡಿದ ಗಜಲ್ ಇದು.
*ಗಜಲ್*
ಇರುವೆಯ ಇರುವು ಗಮನಕ್ಕೇ ಬರುವುದಿಲ್ಲ
ಗೆದ್ದ ಎತ್ತನ್ನೇ ಹಿಂಬಾಲಿಸುವುದು ಜಗವೆಲ್ಲ
ಅಳಿಲನ್ನು ಗುರುತಿಸಲು ರಾಮನಿಗಷ್ಟೇ ಸಾಧ್ಯ
ಲೋಕಕ್ಕೆ ಅಷ್ಟೆಲ್ಲ ಪುರುಸೊತ್ತು ಇರುವುದಿಲ್ಲ
ತಮ್ಮ ಪುಂಗಿಯನ್ನು ಊದುತ್ತಲೇ ಇರುತ್ತಾರೆ
ನಿಶ್ಶಬ್ದ ಗೈಮೆಯನ್ನು ಯಾರೂ ಕೇಳುವುದಿಲ್ಲ
ಮೊಳಕೆ ತೆನೆಯಾಗಿ ಊಡುತ್ತಲೇ ಇರುತ್ತದೆ
ಹೊಟ್ಟೆ ತುಂಬಿದರಾಯ್ತು- ಬೇರೆ ಪರಿವೆಯಿಲ್ಲ
ಲೋಕದ ಡೊಂಕಿಗೆ ಕಣ್ಮುಚ್ಚು 'ಜಂಗಮ'
'ತನು, ಮನವ ಸಂತೈಸು' - ಹಿರಿಯರಿಗೆ ಎದುರಿಲ್ಲ
★ ಡಾ. ಗೋವಿಂದ ಹೆಗಡೆ
ಜಗತ್ತೇ ಹಾಗೆ ದೊಡ್ಡದು, ದೊಡ್ಡವರು, ಸಿರಿವಂತರು ,ಉಳ್ಳವರ ಕಂಡರೆ ಅತಿಯಾದ ಆದರ ಮತ್ತು ಅಭಿಮಾನ. ಚಿಕ್ಕದು, ಬಡವರ ಕಂಡರೆ ಎನೋ ತಾತ್ಸಾರ.ಅಲಕ್ಷ್ಯ.
ಗಜಲ್ ಕಾರರಾದ ಗೋವಿಂದ ಹೆಗಡೆರವರು ಇದೇ ಆಶಯದಲ್ಲಿ ಇರುವೆಯ ಇರವು ಯಾರ ಗಮನಕ್ಕೂ ಬರುವುದಿಲ್ಲ. ನಾವೆಲ್ಲರೂ ದೊಡ್ಡದಾದ ವಸ್ತು, ಪ್ರಾಣಿಗಳ ಕಡೆ ಗಮನಹರಿಸಿ ಗೆದ್ದೆತ್ತಿನ ಬಾಲ ಹಿಡಿಯುವವರು ಎಂದು ನಮ್ಮ ಗುಣಗಳ ಎತ್ತಿ ಹಿಡಿಯುತ್ತಾ ಮತ್ಲಾದಲ್ಲಿ ನವಿರಾದ ಚಾಟಿ ಬೀಸಿದ್ದಾರೆ.
ಎರಡನೇ ಶೇರ್ ನಲ್ಲಿ ರಾಮಾಯಣದ ಹಿನ್ನೆಲೆಯಲ್ಲಿ
ಸೀತಾ ಮಾತೆಯ ಬಂಧನದಿಂದ ಬಿಡಿಸಲು ಅಳಿಲೂ ಸಹ ತನ್ನದೇ ಚಿಕ್ಕ ಸಹಾಯ ಮಾಡಿದ್ದನ್ನು ಶ್ರೀರಾಮರು ಗುರ್ತಿಸಿದ್ದರು.ಚಿಕ್ಕವರ ಚಿಕ್ಕ ಸಹಾಯವನ್ನು ಗುರ್ತಿಸುವುದು ದೊಡ್ಡ ಮನಸ್ಸಿನ ರಾಮನಿಗೆ ಮಾತ್ರ ಸಾಧ್ಯ. ಅಂತಹ ವಿಶಾಲ ಮನಸ್ಸು ನಮ್ಮದಾಗಬೇಕಿದೆ ಎಂಬ ಭಾವ ನನಗೆ ಬಹಳ ಹಿಡಿಸಿತು.
ಮೂರನೇ ಶೇರ್ ನಲ್ಲಿನ ಆಶಯ ಎಂತವರನ್ನು ಚಿಂತನೆಗೆ ಹೆಚ್ಚುತ್ತದೆ.
ನಾವೆಲ್ಲರೂ ಮೂಲತಃ ಹೊಗಳಿಕೆ ಪ್ರಿಯರು.ಬಸವಣ್ಣನವರು ನನ್ನ ಹೊಗಳಿ ಹೊನ್ನ ಶೂಲಕ್ಕೇರಿಸಬೇಡಿ ಎಂದು ಕರೆ ಕೊಟ್ಟು ನಮಗೆ ಬುದ್ದಿ ಹೇಳಿದರೂ ನಾವು ಮಾತ್ರ ಹೊಗಳಿಕೆಗೆ ಹಾತೊರೆವ ಜನರು. ಯಾರೂ ಹೊಗಳದಿದ್ದರೂ ತಮ್ಮ ಬೆನ್ನ ತಾವೇ ತಟ್ಟಿಕೊಳ್ಳುವ ಮಹನೀಯರು ಮತ್ತೊಂದು ಕಡೆ.ಇಂತಹವರ ನಡುವೆ ಸುಮ್ಮನೇ ತಮ್ಮ ಪಾಡಿಗೆ ತಾವು ಕಾಯಕ ನಿರತರಾದ ಅಸಂಖ್ಯ ಜೀವಗಳಿವೆ.ಅವರನ್ನು ಗೌರವಿಸೋಣ ಅಂತವರು ನಮಗೆ ಆದರ್ಶವಾಗಲಿ ಎಂಬ ಸಾಲುಗಳು ಅರ್ಥಪೂರ್ಣವಾಗಿವೆ.
ನಾಲ್ಕನೇ ಶೇರ್ ನಲ್ಲಿ ಒಂದು ಕಾಳಾಗಲು ಅದು ಮೊಳಕೆಯಿಂದ ಹೇಗೆ ಹಂತ ವಾಗಿ ಬೆಳೆದು ಹಾರೈಕೆಹೊಂದಿ ಒಂದು ರುಪ ತಾಳಿ ನಮ್ಮ ಹೊಟ್ಟೆ ತಣಿಸಲು ಸಿದ್ದವಾಗುತ್ತದೆ. ಆದರೆ ತಿನ್ನುವವರಿಗೆ ಇದಾವುದರ ಪೂರ್ವಾಪರ ಪರಿಚಯ ಬೇಕಿರುವುದಿಲ್ಲ ಅವರಿಗೆ ಹೊಟ್ಟೆ ತುಂಬಿದರಾಯಿತು ಅಷ್ಟೇ.
ಮುಕ್ತಾದಲ್ಲಿ ಹೆಗಡೆರವರು ಅವರಿವರ ದುರ್ಗುಣಗಳ ಬದಲಾಯಿಸಲು ಪ್ರಯತ್ನ ಮಾಡುವುದು ಗೋರ್ಕಲ್ಲ ಮೇಲೆ ನೂರ್ಕಾಲ ಮಳೆ ಸುರಿದಂತೆ ಎಂಬ ಮಾತಿನಂತೆ ತಮ್ಮ ಶೇರ್ ನಲ್ಲಿ ಲೋಕದ ಡೊಂಕಿಗೆ ಕಣ್ಮುಚ್ಚು ಜಂಗಮ
ತನು, ಮನವ ಸಂತೈಸು ಹಿರಿಯರಿಗೆ ಎದುರಿಲ್ಲ ಎಂದು ಮಾರ್ಮಿಕವಾಗಿ ಅಭಿವ್ಯಕ್ತಿಸಿದ್ದಾರೆ.
ಒಟ್ಟಾರೆ ಗೋವಿಂದ ಹೆಗಡೆರವರ ಈ ಗಜಲ್ ನನ್ನ ಕಾಡಿದೆ.ಅವರ ಮುಂದಿನ ಗಜಲ್ ಓದಲು ಕಾತನಾಗಿರುವೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment