ವಿಶ್ವ ಆರೋಗ್ಯ ದಿನ. ನನ್ನ ಆರೋಗ್ಯ ನನ್ನ ಹಕ್ಕು.
ಮಾನವನ ಜೀವಿತ ಸರಾಸರಿ ಆಯುಷ್ಯ ಹೆಚ್ಚಾಗಿರುವುದು ಇತ್ತೀಚಿನ ಸಮೀಕ್ಷೆಯಿಂದ ಸಾಬೀತಾಗಿದೆ. ಆದರೂ ಜಾಗತಿಕ ತಾಪಮಾನ ಮತ್ತು ಇತರ ಕಾರಣದಿಂದಾಗಿ ವಿವಿಧ ರೋಗಗಳಿಂದ ಬಳಲುವವರೂ ಹೆಚ್ಚಾಗಿದ್ದಾರೆ.
ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು. 1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.
1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ. ಪ್ರತಿ ವರ್ಷ ಒಂದೊಂದು ಥೀಮ್ ಆಧರಿಸಿ ಈ ದಿನವನ್ನು ಆಚರಿಸಲಾಗುತ್ತದೆ. "ನನ್ನ ಆರೋಗ್ಯ ನನ್ನ ಹಕ್ಕು" ಇದು 2024 ರ ಥೀಮ್! ಹೌದು ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಹಕ್ಕೂ ಹೌದು ಕರ್ತವ್ಯ ಕೂಡ.
ಆರೋಗ್ಯದ ಕಾಳಜಿಯ ಕುರಿತಾದ ವಿಷಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ. ವಿಷಯದ ಕುರಿತಾದ ಪ್ರಸ್ತುತಿಗಳು ಇಡಿಯ ವರ್ಷ ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.
ಅರಿವಿಲ್ಲದೇ ಜನತೆ ಆಚರಿಸುತ್ತಾ ಬಂದಿರುವ ಅನಾರೋಗ್ಯಕರ ಮತ್ತು ಪಿಡುಗುಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ಸರಿದಾರಿಗೆ ತರಲು ಪ್ರಯತ್ನಪಡುತ್ತಾರೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ. ನಮ್ಮ ಆರೋಗ್ಯ ಕಾಪಾಡಿಕೊಂಡು ಸಮಾಜದ ಆರೋಗ್ಯ ಉತ್ತಮಗೊಳಿಸುವ ಪ್ರಯತ್ನಕ್ಕೆ ನಾವೂ ಕೈಜೋಡಿಸೋಣ ತನ್ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪಣ ತೊಡೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment