*ಓದು ವ್ಯಸನವಾಗಲಿ.*.
ಯಾವುದೇ ಕಂಪನಿಯ ಮತ್ತು ಸಂಸ್ಥೆಗಳ ಟ್ಯಾಗ್ ಲೈನ್ ನಾನು ಬಹಳ ಆಸಕ್ತಿಯಿಂದ ಗಮನಿಸುವೆ.ಆ ಲೈನ್ ಗಳು ಕಡಿಮೆ ಪದದಲ್ಲಿ ಹೆಚ್ಚು ಅರ್ಥಗಳನ್ನು ಧ್ವನಿಸುತ್ತವೆ ಕೆಲವೊಮ್ಮೆ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ಇತ್ತೀಚೆಗೆ ಅಂತಹ ಚಿಂತನೆಗೆ ಹಚ್ಚಿದ ಮತ್ತು ನನ್ನ ಸೆಳೆದ ಟ್ಯಾಗ್ ಲೈನ್ "ಚಂದ ಪುಸ್ತಕ " ಪ್ರಕಾಶನ ಸಂಸ್ಥೆಯ ಟ್ಯಾಗ್ ಲೈನ್ "ಓದಿ ಓದಿ ಮರುಳಾಗಿ!"
ಓದಿನ ಮಹತ್ವ ಕುರಿತಾಗಿ ನೂರಾರು ಪುಸ್ತಕಗಳು ಬಂದಿವೆ ಸಾವಿರಾರು ಉಪನ್ಯಾಸ ಕೇಳಿರುವೆವು. ಅವುಗಳೆಲ್ಲದರ ಸಾರಾಂಶ ಒಂದೇ ಓದು ನಮ್ಮ ಜೀವನಕ್ಕೆ ಮತ್ತು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಬಹಳ ಮುಖ್ಯ.
ಜೀವನದಲ್ಲಿ ಉನ್ನತವಾದ ಸಾಧನೆ ಮಾಡಿರುವವರು ಓದಿನ ಮಹತ್ವ ಅರಿತು ಇಂದಿಗೂ ಓದುತ್ತಿದ್ದಾರೆ ಅಂತಹ ಕೆಲ ಮಹನಿಯರ ಓದಿನ ಕ್ರಮ ತಿಳಿಯುವುದಾದರೆ
ಹನ್ನೆರಡನೇ ವಯಸ್ಸಿನಲ್ಲಿಯೇ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಶೇರ್ ಮಾರುಕಟ್ಟೆಯ ಶೇರ್ ಎಂದು ಹೆಸರಾದ ವಾರೆನ್ ಬಫೆಟ್ ರವರು ಸತತ ಇಪ್ಪತ್ತು ವರ್ಷಗಳಿಂದ ವಿಶ್ವದ ಟಾಪ್ ಟೆನ್ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗಲೂ ಅವರು ಪ್ರತಿದಿನ ಓದಲು ಹೆಚ್ಚು ಸಮಯ ಕಳೆಯುತ್ತಾರೆ. ವಾರ್ಷಿಕ ವರದಿಗಳು, ವ್ಯವಹಾರ ಪತ್ರಿಕೆಗಳು ಮತ್ತು ವ್ಯಾಪಕ ಶ್ರೇಣಿಯ ವಿಷಯಗಳ ಪುಸ್ತಕಗಳು, ವಿಶೇಷವಾಗಿ ಹೂಡಿಕೆ ಮತ್ತು ವ್ಯವಹಾರ ನಿರ್ವಹಣೆ ಸೇರಿದಂತೆ ವಿವಿಧ ಪುಸ್ತಕಗಳನ್ನು ಅವರು ಓದುತ್ತಾರೆ.
ಅಂತರರಾಷ್ಟ್ರೀಯ ಖ್ಯಾತ ನಿರೂಪಕಿಯಾದ ಓಪ್ರಾ ವಿನ್ಫ್ರೇ ಅತ್ಯಾಸಕ್ತಿಯ ಓದುಗರಾಗಿರುವರು. ಇವರು ಓದಿದ ಪುಸ್ತಕಗಳ ಬಗ್ಗೆ ತನ್ನ ಶೋಗಳಲ್ಲಿ ಅವರು ತನ್ನ ಪ್ರೇಕ್ಷಕರೊಂದಿಗೆ ಪುಸ್ತಕಗಳನ್ನು ಶಿಫಾರಸು ಮಾಡುತ್ತಾರೆ ಮತ್ತು ಚರ್ಚಿಸುತ್ತಾರೆ.
ಜಾಗತಿಕ ಶ್ರೀಮಂತರಲ್ಲಿ ಒಬ್ಬರಾದ ಎಲೋನ್ ಮಸ್ಕ್ ಚಿಕ್ಕ ವಯಸ್ಸಿನಿಂದಲೂ ಅತ್ಯಾಸಕ್ತಿಯ ಓದುಗ. ಅವರು ಬಾಲ್ಯದಲ್ಲಿ ದಿನಕ್ಕೆ 10 ಗಂಟೆಗಳ ಕಾಲ ಓದುತ್ತಿದ್ದೆ ಎಂದು ಸಂದರ್ಶನಗಳಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ತಮ್ಮ ವಿಶಾಲವಾದ ಜ್ಞಾನದ ಮೂಲವನ್ನು ಅವರ ವ್ಯಾಪಕವಾದ ಓದುವ ಅಭ್ಯಾಸವೇ ಕಾರಣವೆಂದು ಹೇಳುತ್ತಾರೆ.
ಬಿಲ್ ಗೇಟ್ಸ್ ಬಗ್ಗೆ ನಮಗೆಲ್ಲ ತಿಳಿದೇ ಇದೆ ಅವರೊಬ್ಬ ಅತ್ಯಾಸಕ್ತಿಯ ಓದುಗ ಎಂದು ಹೆಸರುವಾಸಿಯಾಗಿದ್ದಾರೆ ಮತ್ತು ಆಗಾಗ್ಗೆ ಅವರ ಓದಿದ ಪುಸ್ತಕಗಳ ಬಗ್ಗೆ ತಮ್ಮ ಬ್ಲಾಗ್ ಆದ ಗೇಟ್ಸ್ ನೋಟ್ಸ್ ನಲ್ಲಿ ಹಂಚಿಕೊಳ್ಳುತ್ತಾರೆ. ಅವರು ಎಲ್ಲಾ ರೀತಿಯ ಪುಸ್ತಕಗಳನ್ನು ಓದುತ್ತಾರೆ ತಂತ್ರಜ್ಞಾನ ಮತ್ತು ವಿಜ್ಞಾನದ ಬಗ್ಗೆ ನಾನ್ ಫಿಕ್ಷನ್ ಪುಸ್ತಕಗಳಿಂದ ಕಾದಂಬರಿಗಳು ಮತ್ತು ಜೀವನಚರಿತ್ರೆಗಳವರೆಗೆ ವ್ಯಾಪಕ ಶ್ರೇಣಿಯ ಪುಸ್ತಕಗಳನ್ನು ಅವರು ಈಗಲೂ ಓದುತ್ತಾರೆ.
ಫೇಸ್‌ಬುಕ್‌ನ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಅವರು ತಮ್ಮ ಶಿಸ್ತುಬದ್ಧ ಓದುವ ಹವ್ಯಾಸಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಪ್ರತಿದಿನ ಓದಲು ಸಮಯವನ್ನು ಮೀಸಲಿಡುತ್ತಾರೆ ಅವರು ಓದಿದ ಪುಸ್ತಕಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ.ಫೇಸ್‌ಬುಕ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಪ್ರತಿ ಎರಡು ವಾರಗಳಿಗೊಮ್ಮೆ ಪುಸ್ತಕವನ್ನು ಓದುವುದನ್ನು ವೈಯಕ್ತಿಕ ಸವಾಲಾಗಿ ಸ್ವೀಕರಿಸಿ ಆ ಸವಾಲಿನಲ್ಲಿ ಗೆದ್ದಿದ್ದಾರೆ. ಅವರು ವಾರ್ಷಿಕವಾಗಿ ತಮ್ಮ ಓದುವ ಪಟ್ಟಿಯನ್ನು ಹಂಚಿಕೊಳ್ಳುತ್ತಾರೆ ಮತ್ತು ಅವರ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಮೇಲೆ ಪುಸ್ತಕಗಳು ಬೀರಿದ ಪ್ರಭಾವವನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಕಾವ್ಯ ಮತ್ತು ಸಾಹಿತ್ಯದ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ನಾಯಕತ್ವದ ಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಾಹಿತ್ಯದಿಂದ ಕಲಿತ ಪಾಠಗಳನ್ನು ಹೆಚ್ಚಾಗಿ ಅನುಕೂಲಕರವಾಗಿವೆ ಎಂದು ಹೇಳುತ್ತಾರೆ
ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರು ಉತ್ತಮ ಓದುಗರಾಗಿದ್ದಾರೆ.ಅವರು ತಮ್ಮ ನಾಯಕತ್ವದ ಶೈಲಿ ಮತ್ತು ವ್ಯವಹಾರದ ವಿಧಾನವನ್ನು ರೂಪಿಸುವಲ್ಲಿ ಪುಸ್ತಕಗಳು ಬಹು ಮುಖ್ಯ ಪಾತ್ರವಹಿಸಿವೆ ಎಂದು ಹೇಳುತ್ತಾರೆ. ನಿರಂತರ ಕಲಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಮಾರ್ಗವಾಗಿ ಅವರು ತಮ್ಮ ಉದ್ಯೋಗಿಗಳಿಗೆ ಮತ್ತು ಗೆಳೆಯರಿಗೆ ಪುಸ್ತಕಗಳನ್ನು ಓದಲು ಶಿಫಾರಸು ಮಾಡುತ್ತಾರೆ.
ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಈ ಎಲ್ಲಾ ವ್ಯಕ್ತಿಗಳು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅಭ್ಯಾಸವಾಗಿ ಓದುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ. ಜೊತೆಗೆ ಒಬ್ಬರ ದೃಷ್ಟಿಕೋನಗಳು ಮತ್ತು ಜ್ಞಾನದ ನೆಲೆಯನ್ನು ವಿಸ್ತರಿಸಲು ಓದು ತನ್ನದೇ ಪಾತ್ರ ವಹಿಸುತ್ತದೆ.ಆದ್ದರಿಂದ
ಓದುವ ಅಭ್ಯಾಸವನ್ನು ರೂಢಿಸಿಕೊಂಡು ನಿಮ್ಮ ಜೀವನ ಮತ್ತು ವೃತ್ತಿಯನ್ನು ಉತ್ತಮಪಡಿಸಿಕೊಳ್ಳಿ.ಈ ವರ್ಷದ ಬೇಸಿಗೆ ರಜಾ ದಿನಗಳಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಪುಸ್ತಕಗಳನ್ನು ಪರಿಚಯಿಸಿ ಓದುವ ರುಚಿ ಹತ್ತಿಸೋಣ.
ಈ ಸಂದರ್ಭದಲ್ಲಿ
ಕನ್ನಡದ ಖ್ಯಾತ ಲೇಖಕರು ಮತ್ತು ಕಾದಂಬರಿಕಾರರಾದ ಸಂತೋಷ ಕುಮಾರ್ ಮೆಹಂದಳೆ ರವರು ಹೇಳುವ ಒಂದು ಮಾತು ನೆನಪಾಗುತ್ತದೆ ಓದು ವ್ಯಸನವಾಗಲಿ!
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
No comments:
Post a Comment