07 January 2024

ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...

 


ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...


ಜಗತ್ತಿನಲ್ಲಿ ಇರೋದೆ ಕೆಲವು ಕಥೆಗಳು ಆ ಕಥೆಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವವನೇ ಉತ್ತಮ ಕಥೆಗಾರ. ಅಂತಹ ಕಥೆಗಳನ್ನು ಸಶಕ್ತವಾಗಿ ಚಿತ್ರರೂಪ ನೀಡಿ ನಿರ್ದೇಶನ ಮಾಡಿ ಗೆದ್ದ ಚಿತ್ರ ಕಾಟೇರ. ವಾರದಲ್ಲೇ ಶತಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗೋ ಚಿತ್ರದ ಸೂತ್ರದಾರ ತರುಣ್  ಸುಧೀರ್ .

ರೀನಾ ಡಿಸೋಜಾ ಪಾತ್ರದಲ್ಲಿ ಶ್ವೇತಾ ಪ್ರಸಾದ್ ರವರು ಪೋರೆನ್ಸಿಕ್ ತಂಡದ ಜೊತೆಗೆ ತಲೆಬುರುಡೆಯ ಬಗ್ಗೆ ಸಂಶೋಧನೆ ಮಾಡುವ ಶಾಟ್ ನೊಂದಿಗೆ ಆರಂಭವಾಗುವ ಚಿತ್ರದ ಕೊನೆಯ ಫ್ರೇಮ್ ವರಗೆ ಟೈಟಲ್ ಕಾರ್ಡ್ ನೋಡುವವರೆಗೆ ಉಸಿರು ಬಿಗಿ ಹಿಡಿದು ನೋಡುವ ಸಿನಿಮಾ ಕಾಟೇರ. ದರ್ಶನ್ ರವರ ಮಾಮೂಲಿ ಸಿನಿಮಾಕ್ಕೆ ಹೋಲಿಸಿದರೆ ಇಲ್ಲಿ ಬೇರೆ ರೀತಿಯ ದರ್ಶನ್ ರವರ ದರ್ಶನವಾಗುತ್ತದೆ.

ಭೀಮನಹಳ್ಳಿಯ ಕಬ್ಬಿಣ ಕಾಸಿ ಬಡಿದು ಹತಾರ ಮಾಡುವ  ಕಾಟೇರ ತನ್ನ ಹಳ್ಳಿಯ ರೈತರಿಗೆ ಭೂಸುಧಾರಣಾ ಕಾಯಿದೆಯನ್ನು ಜಾರಿಗೆ ತರಲು ರೈತರನ್ನು ಊಳಿಗಮಾನ್ಯ ಭೂಮಾಲೀಕರಾದ ದೇವರಾಯ ಮತ್ತು ಕಾಳೇಗೌಡರಿಂದ ಪಾರು ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಆ ಸವಾಲುಗಳನ್ನು ಕಾಟೇರ ಹೇಗೆ ಎದುರಿಸದ ಜಾತಿ ಪದ್ದತಿಗೆ ಹೇಗೆ ಸೆಡ್ಡು ಹೊಡೆದ  ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಬೇಕು.ಈ ಚಿತ್ರದಲ್ಲಿ ದರ್ಶನ್ ಅಭಿನಯ ಬೇರೆಯೇ ಲೆವೆಲ್ ನಲ್ಲಿದೆ. 

ನಾನು ಸಿನಿಮಾ ನೋಡಿದ್ದು ಐನಾಕ್ಸ್ ರಾಯಲ್ ಸೀಟ್ ನಲ್ಲಿ ನನ್ನ ಪಕ್ಕ ಆರಾಮಾಗಿ ಮಲಗಿ ಸಿನಿಮ ನೋಡುವ ಸುಮಾರು ಅರವತ್ತು ವರ್ಷ ವಯಸ್ಸಿನ ವ್ಯಕ್ತಿ ಸಿನಿಮಾ ಅರಂಭವಾದ ಹತ್ತು ನಿಮಿಷಕ್ಕೆ ಸೀಟಿನ ತುದಿಗೆ ಕುಳಿತು ನೋಡಲಾರಂಬಿಸಿದರು.ಈ ಉದಾಹರಣೆ ಸಾಕು ಸಿನಿಮಾದ ಗುಣಮಟ್ಟ ತಿಳಿಸಲು. ಮಾಸ್ತಿಯವರ ಸಂಭಾಷಣೆ ಚಿತ್ರವನ್ನು ಇನ್ನೂ ಕಳೆಗಟ್ಟಿಸಿದೆ" ಗಂಡ್ಸಾದವ್ನು ಕೆಲ್ಸ ಮಾಡಿ ಬೆವ್ರು ಸುರ್ಸುಬೇಕಲೇ, ಹೆಣ್ ನೋಡಿ  ಜೊಲ್ ಸುರ್ಸ್ ಬಾರ್ದು" ಮುಂತಾದ ಡೈಲಾಗ್ ಜನರ ಮನ ತಾಗುತ್ತವೆ.

ತಾರಾಗಣದಲ್ಲಿ ಅನುಭವಿ ನಟ ನಟಿಯರು ಚಿತ್ರದ ಘನತೆಯನ್ನು ಹೆಚ್ಚಿಸಿದ್ದಾರೆ.

ಕಾಟೇರನಾಗಿ ದರ್ಶನ್ ಎರಡು ಶೇಡ್ ಗಳಲ್ಲಿ ಅಭಿನಯಿಸಿರುವುದು ಅವರ ಅಭಿಮಾನಿಗಳಿಗೆ ಡಬಲ್ ಧಮಾಕ.

ಪ್ರಭಾವತಿ ಪಾತ್ರದಲ್ಲಿ ಆರಾಧನಾ ರಾಮ್ ಮೊದಲ ಚಿತ್ರದಲ್ಲೇ ಅಭಿನಯದಲ್ಲಿ ಸೆಂಚುರಿ ಹೊಡೆದಿರುವರು.

ದೇವರಾಯನಾಗಿ ಜಗಪತಿ ಬಾಬು ಉತ್ತಮ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.

ಮಹದೇವಣ್ಣ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಭಿನಯ ಸುಂದರ.

ಕಾಟೇರನ ಸಹೋದರಿ

ಕುಮಾರಿಯಾಗಿ ಶ್ರುತಿ ಅಭಿನಯ ಎಂದಿನಂತೆ ಉತ್ತಮ.

ಮಾತುಬಾರದ ನಾಟಕ ಕಲಾವಿದ 

ಚೋಂಗ್ಲಾ ಪಾತ್ರದಲ್ಲಿ ವೈಜನಾಥ ಬಿರಾದಾರ್ ಅಭಿನಯ ಕೆಲವೆಡೆ ನಗು ತಂದರೆ ಕೆಲವೆಡೆ ಕಣ್ಣು ತೇವವಾಗುತ್ತದೆ.

ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್ ಚುರುಕಾಗಿ ಅಭಿನಯಿಸಿದರೆ,

ಅವಿನಾಶ್ ಶಾನುಬೋಗನಾಗಿ ತಣ್ಣನೆಯ ವಿಲನ್ ಪಾತ್ರ ಮಾಡಿದ್ದಾರೆ.

ಕಾಳೇಗೌಡನಾಗಿ ವಿನೋದ್ ಕುಮಾರ್ ಆಳ್ವ ತೆರೆಯ ಮೇಲೆ ಮಿಂಚಿದ್ದಾರೆ.

ಸುಧಾಕರ್ ರವರ ಛಾಯಾಗ್ರಹಣ ಕಣ್ಣಿಗೆ ಹಬ್ಬ. ಸಂಕಲನಕಾರರಾದ ಕೆ ಎಮ್ ಪ್ರಕಾಶ್ ಚಿತ್ರ ವೇಗವಾಗಿ ಚಲಿಸಲು ತಮ್ಮದೇ ಯೋಗದಾನ ನೀಡಿದ್ದಾರೆ.ಹರಿಕೃಷ್ಣ ರವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.ಸಂಗೀತಕ್ಕೆ ತಕ್ಕ ಚೇತನ್ ಕುಮಾರ್, ಯೋಗರಾಜ್ ಭಟ್ ಹಾಗೂ ನನ್ನ ನೆಚ್ಚಿನ ಗೀತ ರಚನೆಕಾರ ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯ ಅತ್ಯುತ್ತಮ. 

ಈ ಚಿತ್ರ 70 ,80 ರ ದಶಕದ ಕಥೆ ಆಧಾರಿತ ಆದರೂ ಈಗಲೂ ಅಲ್ಲಲ್ಲಿ ಮರ್ಯಾದೆಗೇಡು ಹತ್ಯೆ, ಜಾತಿ ಪದ್ದತಿಯು ಆಚರಣೆ ನೋಡಿದರೆ ಇದು ಇಂದಿನ ಕಥೆಯೂ ಹೌದು.

 ಎಂಭತ್ತರ ದಶಕಕ್ಕೂ ಹಿಂದಿನವರು ಈ ಚಿತ್ರ ನೋಡಿ ತಮ್ಮ ಕಾಲದ ಜನ  ಜೀವನ ರಿವೈಂಡ್ ಮಾಡಿಕೊಳ್ಳಬಹುದು 

ಜಾತಿ ಪದ್ದತಿ, ಇಂದಿನ ಪೀಳಿಗೆಯ  ಯುವಕರು ಆ ಕಾಲದ ಜೀವನಪದ್ದತಿ ನೋಡಬಹುದು.ಒಟ್ಟಾರೆ ಇದು ಎಲ್ಲರೂ ನೋಡಬೇಕಾದ ಸಿನಿಮಾ ಕೊನೆಯದಾಗಿ ಇಂತಹ ಚಿತ್ರ ನಿರ್ಮಿಸಿದ ಧೀರ ರಾಕ್ಲೈನ್ ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸಲೇಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

No comments: