ಸೈಬರ್ ಕಳ್ಳರಿಂದ ರಕ್ಷಿಸಿಕೊಳ್ಳೋಣ.
ಮೊನ್ನೆ ರಾತ್ರಿ ಎಂಟು ಮೂವತ್ತರ ಸುಮಾರಿಗೆ ಪೋಷಕರೊಬ್ಬರು ಕರೆ ಮಾಡಿ " ಯಾರೋ ಪೋನ್ ಮಾಡಿ ನಿಮ್ ಮಗಳಿಗೆ ಸ್ಕಾಲರ್ಶಿಪ್ ಕೊಡ್ತೀವಿ, ಒಂದೂವರೆ ಸಾವ್ರ ನಿಮ್ ಅಕೌಂಟ್ ನಿಂದ ಟ್ರಾನ್ಸ್ಪರ್ ಮಾಡಿ ಅಂತಾರೆ ,ಏನ್ ಮಾಡ್ಲಿ ಸರ್ " ಅಂತ ಕೇಳಿದರು. ನನಗೆ ಒಂದೆಡೆ ಖುಷಿ ಮತ್ತೊಂದು ಕಡೆ ಬೇಸರವಾಯಿತು.ಖುಷಿ ಯಾಕೆಂದರೆ ನಮ್ಮ ಶಾಲೆಯ ಮಕ್ಕಳಿಗೆ ಆರ್ಥಿಕ ಸಾಕ್ಷರತೆ ಬಗ್ಗೆ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಹಾಗೂ ಪಾಠದ ಮಧ್ಯ ಆಗಾಗ್ಗೆ ಮಾಹಿತಿ ನೀಡುವಾಗ ಇಂತಹ ಸೈಬರ್ ಕ್ರೈಮ್ ಬಗ್ಗೆ ಉದಾಹರಣೆ ಸಮೇತ ಮಾಹಿತಿ ನೀಡಿ ಜಾಗೃತರಾಗುವಂತೆ ತಿಳಿಸಿದ್ದೆವು.ಆ ವಿದ್ಯಾರ್ಥಿನಿ ಇಂತಹ ಕರೆ ಬಂದಾಗ ತನ್ನ ಪೋಷಕರಿಗೆ ನನಗೆ ಕರೆ ಮಾಡಲು ತಿಳಿಸಿದ್ದಳು ಇದರಿಂದ ಆನ್ಲೈನ್ ಆರ್ಥಿಕ ವ್ಯವಹಾರದ ವಂಚನೆಯಿಂದ ಪಾರಾಗಿದ್ದರು.
ಬೇಸರದ ಸಂಗತಿಯೇನೆಂದರೆ,ಇಷ್ಟು ದಿನ ಸಂಪಾದನೆ ಮಾಡುವ ಟೆಕ್ಕಿಗಳು,ಗೃಹಿಣಿಯರು ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಆಧಾರ್ ,ಓಟಿಪಿ, ಫಿಷಿಂಗ್, ವಿಷಿಂಗ್ , ಮುಂತಾದ ಮಾರ್ಗಗಳಲ್ಲಿ ಜನರ ಹಣಕ್ಕೆ ಕನ್ನ ಹಾಕಿದ್ದ ಖದೀಮರು ಈಗ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳಿಗೆ ಕರೆ ಮಾಡಿ ಸ್ಕಾಲರ್ಶಿಪ್ ಹಣದ ಆಮಿಷ ನೀಡಿ ವಂಚಿಸುವ ಕಾಯಕಕ್ಕೆ ಇಳಿದಿದ್ದಾರೆ.
ಪೋಷಕರ ಜೊತೆಗೆ ಮಾತಾನಾಡಿದ ಸೈಬರ್ ಕಳ್ಳರ ಸಂಭಾಷಣೆಯ ರೆಕಾರ್ಡಿಂಗ್ ಅನ್ನು ಪೋಷಕರು ನನಗೆ ಕಳಿಸಿದರು. ಅದನ್ನು ಕೇಳಿದಾಗ ಅವರ ಮಾತುಗಾರಿಕೆ, ಸುಳ್ಳು ಹೇಳುವ ಕೌಶಲ್ಯ, ಕಂಡು ನಾನೇ ದಂಗಾದೆ. ಆ ಕಡೆಯಿಂದ ಮಾತನಾಡಿದ ಸೈಬರ್ ವಂಚಕಿಯ ಮಾತುಗಳ ಪ್ರಕಾರ ಸರ್ಕಾರ ಹೊಸದಾಗಿ ಮಕ್ಕಳಿಗೆ ನೇರವಾಗಿ ಗೂಗಲ್ ಪೇ ಅಥವಾ ಪೋನ್ ಪೇ ನಲ್ಲಿ ಮಾತ್ರ ಸ್ಕಾಲರ್ಶಿಪ್ ಹಣ ಹಾಕುತ್ತಾರಂತೆ. ಮಕ್ಕಳು 1500 ಹಣ ಹಾಕಿದರೆ ಅದೂ ಗೂಗಲ್ ಪೇ ನಲ್ಲಿ ಹಾಕಿದರೆ ಮಾತ್ರ ಆ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಲಿಂಕ್ ಓಪನ್ ಆಗುತ್ತಂತೆ. ವಿದ್ಯಾರ್ಥಿಗಳು ಈ ಆಫರ್ ತಿರಸ್ಕರಿಸಿದರೆ ಅಂತಹ ವಿದ್ಯಾರ್ಥಿಗಳನ್ನು ರೆಡ್ ಲಿಸ್ಟ್ ಗೆ ಸೇರಿಸುತ್ತಾರಂತೆ.ಅವರಿಗೆ ಲೈಪ್ ನಲ್ಲಿ ಸ್ಕಾಲರ್ಶಿಪ್ ಬರೋದೆ ಇಲ್ವಂತೆ.ಹೀಗೆ ರೈಲು ಬಿಡುತ್ತಾ ಮಕ್ಕಳ ಮತ್ತು ಪೋಷಕರನ್ನು ಭಾವನಾತ್ಮಕ ಬ್ಲಾಕ್ ಮೇಲೆ ಮಾಡಿದ್ದಳು ಸೈಬರ್ ಅಮ್ಮಣ್ಣಿ.
ನಾನು ಆ ಪೋಷಕರಿಗೆ ಯಾವುದೇ ಕಾರಣಕ್ಕೆ ಹಣ ಕೊಡಬೇಡಿ ಎಂದು ಸಲಹೆ ನೀಡಿದೆ.ಜೊತೆಯಲ್ಲಿ ಎಲ್ಲಾ ಸ್ಕಾಲರ್ಶಿಪ್ ಡಿ ಬಿ ಟಿ ಅಂದರೆ ನೇರವಾಗಿ ನಿಮ್ಮ ಮಕ್ಕಳ ಖಾತೆಗೆ ಹಣ ಬರುತ್ತದೆ. ಗೂಗಲ್ ಪೇ ನಲ್ಲಿ ಅಲ್ಲ ಎಂದು ಮನವರಿಕೆ ಮಾಡಿದೆ.
ಆ ಪೋಷಕರು ಹಣ ನೀಡದಿದ್ದಾಗ ಮತ್ತೊಮ್ಮೆ ಕರೆ ಮಾಡಿದ ವಂಚಕರು ಪೋಷಕರು ಮತ್ತು ಸಲಹೆ ನೀಡಿದ ಶಿಕ್ಷಕರನ್ನೇ ಬೈಯ್ದಿದ್ದಾರೆ.
ಈ ಪ್ರಕರಣದ ತರುವಾಯ ನಮ್ಮ ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರು ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ. ಶಾಲಾ ಪ್ರಾರ್ಥನಾ ಅವಧಿಯಲ್ಲಿ ಸುರಕ್ಷಿತ ಬ್ಯಾಕಿಂಗ್, ಸುರಕ್ಷಿತ ಮೊಬೈಲ್ ಬಳಕೆ ಮತ್ತು ಆರ್ಥಿಕ ಸಾಕ್ಷರತೆ ಬಗ್ಗೆ ಮಾಹಿತಿ ನೀಡಿದ್ದೇವೆ.ಪೋಷಕರಿಗೂ ಶಾಲಾ ವಾಟ್ಸಪ್ ಗುಂಪಿನ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಜಾರಿಯಲ್ಲಿದೆ.
ಸ್ಕಾಲರ್ಶಿಪ್ ಕೊಡುವುದಾಗಿ, ಹಣದ ಸಹಾಯ ಮಾಡುವುದಾಗಿ ನಿಮ್ಮ ನಂಬಿಸಿ, ನಿಮ್ಮಿಂದ ನಿಮ್ಮ ಅಕೌಂಟ್ ನಿಂದ ಹಣ ದೋಚುವ ಸೈಬರ್ ಕಳ್ಳರ ಬಗ್ಗೆ ಸದಾ ಜಾಗೃತರಾಗಿ ಎಚ್ಚರಿಕೆ ವಹಿಸಿ.ಕಷ್ಟಪಟ್ಟು ಗಳಿಸಿದ ಹಣ ಖದೀಮರ ಪಾಲಾಗಲು ಬಿಡಬೇಡಿ.
ಜಾಗೃತರಾಗಿ..
ಇಂತಹ ಮೋಸದ ಕರೆಗಳು ಬಂದಾಗ
ಸೈಬರ್ ಕ್ರೈಮ್ ಪೋಲಿಸರಿಗೆ ಮಾಹಿತಿ ನೀಡಿ.ಮಕ್ಕಳಿಗೆ ಜಾಗೃತಿ ಮೂಡಿಸಿ.ಮಕ್ಕಳ ಕೈಗೆ ಅನವಶ್ಯಕವಾಗಿ ಪೋನ್ ಕೊಡದಿರಿ.ಇದು ಮಕ್ಕಳ ಮತ್ತು ಪೋಷಕರ ಹಿತಾಸಕ್ತಿಯ ಭಾಗವಾಗಿ ಆರ್ಥಿಕ ಸಾಕ್ಷರತೆ ಮತ್ತು ಜಾಗೃತಿ ಮೂಡಿಸುವ ಅಭಿಯಾನ.ಬನ್ನಿ ಎಲ್ಲರೂ ಕೈಜೋಡೊಸೋಣ.
ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು ಮತ್ತು ಲೇಖಕರು
ತುಮಕೂರು
9900925529
No comments:
Post a Comment