17 January 2024

ಮಿಡಿವ ಮನವೇ ಮಗಳು


 


ಮಿಡಿವ ಮನವೇ ಮಗಳು..


ಇಂದಿನ ದಿನಗಳಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿವೆ.ಹೆತ್ತವರನ್ನು ಅವರ ಸಂಧ್ಯಾ ಕಾಲದಲ್ಲಿ ಗೌರವದಿಂದ ಕಾಣುವವರು ಕ್ರಮೇಣವಾಗಿ ಕಡಿಮೆಯಾಗುತ್ತಿದ್ದಾರೆ. ಇದಕ್ಕೆ ಅಪವಾದವೆಂಬಂತೆ ಗಂಡುಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳು ತಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ನಿದರ್ಶನಗಳು ನಮಗೆ ಬಹಳ ಸಿಗುತ್ತವೆ. ನ್ಯಾಯಾಲಯ ಮಗಳಿಗೂ ಅಪ್ಪನ ಆಸ್ತಿಯಲ್ಲಿ ಸಮಪಾಲಿದೆ ಎಂದು ಆದೇಶ ಮಾಡಿದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ವಾದ ಮಾಡಿ ಸಹೋದರಿಯ ಸಾಗ ಹಾಕುವ ಸಹೋದರರೇ ಅಧಿಕ. ನಮ್ಮ ಬಹುತೇಕ ಹೆಣ್ಣು ಮಕ್ಕಳು ಅಪ್ಪನೇ ಆಸ್ತಿಯೆಂಬ ವಿಶಾಲ ಮನೋಭಾವದಿಂದ ತನ್ನ ಹೆತ್ತವರ ಬಗ್ಗೆ ಅಪಾರ ಗೌರವದಿಂದ ಗಂಡನ ಮನೆಯ ದಾರಿ ಹಿಡಿಯುವಳು.ಎಷ್ಟೋ ಬಾರಿ ಅಣ್ಣಂದಿರ ಅಪ್ಪ ಅಮ್ಮ ನ ನೋಡಿಕೊಳ್ಳದೇ ಮನೆಯಿಂದ ಹೊರಹಾಕಿದಾಗ ಮಿಡಿವ ಮನವೇ ಮಗಳು.ಹೆಣ್ಣು ಭ್ರೂಣ ಹತ್ಯೆ ,ಹೆಣ್ಣು ಶಿಶು ಹತ್ಯೆ ಮಾಡುವ ಮೂಢರು ಈ ಕಥೆ ಓದಬೇಕು.


ಅದು ದೊಡ್ಡ ಶ್ರೀಮಂತ ಕುಟುಂಬ. ಶ್ರೀಮಂತನಿಗೆ ಪತ್ನಿ ನಾಲ್ಕು ಜನ ಗಂಡು ಮಕ್ಕಳು ಒಬ್ಬಳು ಮಗಳು ಇದ್ದಳು. ಶ್ರೀಮಂತ ನ್ಯಾಯವಾಗಿ ಸಂಪಾದನೆ ಮಾಡಿ ಆಸ್ತಿ ಗಳಿಸಿ ಊರಿನಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆ ಹೆಸರು ಪಡೆದಿದ್ದನು. ಕಷ್ಟ ಕಾಲ ಎಂದು ಬಂದವರಿಗೆ ಸಹಾಯ, ಕೆಲವರಿಗೆ ಸಾಲ ಕೊಡುತ್ತಿದ್ದನು. ಕುಟುಂಬದಲ್ಲಿ ಮಗಳನ್ನು ಒಳ್ಳೆಯ ಮನೆಗೆ ಕೊಟ್ಟು ವಿವಾಹ ಮಾಡಿದ್ದನು. ಮಾಡಿದ ಆಸ್ತಿಯನ್ನು  ನಾಲ್ಕು ಜನ ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಪತ್ನಿ ಎಲ್ಲರಿಗೂ ಸಮನಾಗಿ ಬರುವಂತೆ ವಿತರಣೆ ಮಾಡಿದ್ದನು. ಶ್ರೀಮಂತನು ವಯೊ ಸಹಜ ಕಾರಣದಿಂದ ಮೃತಪಟ್ಟನು. ಮುಂದಿನ ಸಂಸ್ಕಾರಕ್ಕಾಗಿ ತಯಾರು ಮಾಡುತ್ತಿದ್ದರು ಸಾಕಷ್ಟು ಬಂಧು ಬಳಗ, ಊರಿನವರು, ಮನೆ ಮಕ್ಕಳು ಎಲ್ಲಾ ನೆರದಿದ್ದರು. ಇಡೀ ಕುಟುಂಬ ದುಃಖದಲ್ಲಿ ಮುಳುಗಿತ್ತು. ಇನ್ನೇನು ಶವಯಾತ್ರೆ ಹೊರಡಬೇಕು ಅನ್ನುವ ಹೊತ್ತಿಗೆ ಒಬ್ಬ ಹಿರಿಯ ವ್ಯಕ್ತಿ ಬಂದು ಸ್ವಲ್ಪ ತಡೆಯಿರಿ ನನ್ನದೊಂದು ವಿನಂತಿ ಇದೆ ಕೇಳಿ ಎಂದಾಗ ಅಲ್ಲಿದ್ದವರ ಗಮನವೆಲ್ಲ 

ಏನು ಎಂಬಂತೆ ಅವನತ್ತ ಹರಿಯಿತು. 


ಬಂದ ವ್ಯಕ್ತಿ, ನೋಡಿ ಈ ಶ್ರೀಮಂತರು ಕೆಲವು ತಿಂಗಳ ಹಿಂದೆ ನನ್ನಿಂದ 25 ಲಕ್ಷ ಸಾಲ ಪಡೆದಿದ್ದರು. ಅದನ್ನು ಹಿಂತಿರುಗಿಸಿಲ್ಲ ಈ ದಿನ ಇವರು ಮೃತಪಟ್ಟರೆಂದು ತಿಳಿಯಿತು ಆದ್ದರಿಂದ ಸಾಲ ಪಡೆಯಲು ಬಂದಿದ್ದೇನೆ ನನ್ನ ಸಾಲ ಕೊಟ್ಟು ಮುಂದಿನ ಕಾರ್ಯ ಮಾಡಿ ಎಂದರು. ಆಗ ಕೆಲವು ಹಿರಿಯರು, ನೋಡಿ ಶವಸಂಸ್ಕಾರ ಮುಗಿದು ಬಿಡಲಿ ಆಮೇಲೆ ಮಾತುಕತೆ ಆಡೋಣ ಎಂದರು.

ಆ ವ್ಯಕ್ತಿ ಪಟ್ಟು ಬಿಡದಂತೆ ಇಲ್ಲ ನನಗೆ ಹಣವನ್ನಾದರೂ ಕೊಡಲಿ ಇಲ್ಲದಿದ್ದರೆ ಯಾರಾದರೂ ಕೊಡುವವರು ಜವಾಬ್ದಾರಿ ತೆಗೆದುಕೊಳ್ಳಲಿ ಎಂದರು. ಊರಿನವರೆಲ್ಲ ಆ ನಾಲ್ಕು ಗಂಡು ಮಕ್ಕಳ ಕಡೆ ದೃಷ್ಟಿ ಹರಿಸಿದರು. ಆದರೆ ಅವರ್ಯಾರು ತುಟಿ ಪಿಟಕ್ ಅನ್ನಲಿಲ್ಲ. ಹಾಗಾದರೆ ಯಾರು ಕೊಡುವವರು ಅದೇ  ಚರ್ಚೆಯಾಗಿ ಶವಸಂಸ್ಕಾರಕ್ಕೆ ವಿಳಂಬವಾಗುತ್ತಿತ್ತು. ಆಗ ಈ ಸುದ್ದಿ ಒಳಗಿದ್ದ ಹೆಂಗಸರು ಶ್ರೀಮಂತರ ಪತ್ನಿ ಮತ್ತು ಮಗಳ ಕಿವಿಗೂ ಬಿದ್ದಿತ್ತು. 


ಕೆಲವೇ ನಿಮಿಷಗಳಲ್ಲಿ, ದುಃಖ ತಪ್ತಳಾಗಿದ್ದ ಶ್ರೀಮಂತನ ಮಗಳು ಹೊರಗೆ ಬಂದು

ಒಂದು ಬಟ್ಟೆಯ ಗಂಟನ್ನು ತೆಗೆದು ಸಾಲ  ಕೊಡಬೇಕಾದ ವ್ಯಕ್ತಿಗೆ ಕೊಡುತ್ತಾ, ಇದು ನಮ್ಮ ತಂದೆ ಮಾಡಿಸಿಕೊಟ್ಟ ಒಡವೆಗಳು ಇದನ್ನು ತೆಗೆದುಕೊಂಡು ಶವಸಂಸ್ಕಾರಕ್ಕೆ ಅನುವು ಮಾಡಿಕೊಡಿ ನಮ್ಮ ತಂದೆ ಬಹಳ ಮರ್ಯಾದಸ್ತರು ಎಂದು ಕೈ ಮುಗಿದಳು. ಆ ವ್ಯಕ್ತಿ ಒಡವೆ ಗಂಟನ್ನು ತೆಗೆದುಕೊಂಡು ಹೋದರು. ಮತ್ತೆ ಮುಂದಿನ ಕಾರ್ಯವೆಲ್ಲವೂ ಮುಗಿಯಿತು.


ಮರುದಿನ   ಒಡವೆ ಗಂಟು ತೆಗೆದುಕೊಂಡು ಹೋಗಿದ್ದ  ವ್ಯಕ್ತಿ ಬಂದು ಒಡವೆ ಗಂಟನ್ನು ಶ್ರೀಮಂತನ ಮಗಳ ಕೈಗೆ ಕೊಟ್ಟು ಮಗಳೇ ಇದನ್ನು ನೀನು ತೆಗೆದುಕೋ ಇದು ನಿನ್ನದು, ಜೊತೆಗೆ ಈ 25 ಲಕ್ಷ ರೂಪಾಯಿಗಳು ನಿನಗೆ ಸೇರಿದ್ದು ಎಂದು ಕೊಟ್ಟರು.

ಎಲ್ಲರಿಗೂ ಆಶ್ಚರ್ಯವಾಯಿತು!ಇದು ಯಾವ ಹಣ? ಏಕೆ ಕೊಟ್ಟಿರಿ?ಎಂದು ಕೇಳಿದಾಗ, ಆ ಹಿರಿಯರು ಹೇಳಿದರು. ನಾನು ನಿಮ್ಮ ತಂದೆಗೆ ಸಾಲ ಕೊಟ್ಟಿಲ್ಲ.

ಅವರೇ ನನಗೆ 20 ಲಕ್ಷ  ಸಾಲ ಕೊಟ್ಟಿದ್ದರು. ನಾನು ಇನ್ನೆರಡು ಮೂರು ದಿನದಲ್ಲಿ ಕೊಡಬೇಕು ಎಂದುಕೊಂಡಿದ್ದೆ ಆದರೆ ಅಷ್ಟರಲ್ಲಿ ಮೃತರಾದ ಸುದ್ದಿ ಬಂದಿತು. ಹಣವನ್ನು ಯಾರಿಗೆ ಕೊಡಲಿ ಎಂಬ ಚಿಂತೆ ಶುರುವಾಯಿತು. ಅದಕ್ಕಾಗಿ ಈ ನಾಟಕ ಆಡಬೇಕಾಯಿತು ಎಂದರು.‌


ಅಲ್ಲಿ ಕುಳಿತಿದ್ದ ಗಂಡು ಮಕ್ಕಳೆಲ್ಲ ತಲೆ ತಗ್ಗಿಸಿದರು. ಬಾಕಿ ಇದ್ದವರೆಲ್ಲ ಹೆಣ್ಣು ಮಗಳ ಕಡೆ ಹೆಮ್ಮೆಯಿಂದ ನೋಡಿದರು. ಆ ಹೆಣ್ಣು ಮಗಳು ಆ ಹಣದಿಂದ ತಂದೆಯ ಸಂಸ್ಕಾರವನ್ನೆಲ್ಲ ಮಾಡಿಸಿ ಉಳಿದ ದುಡ್ಡನ್ನು ತಾಯಿಗೆ ಕೊಟ್ಟು ಗಂಡನ ಮನೆಗೆ ಹೊರಟು ಹೋದಳು.


No comments: