ಶಿಕ್ಷಣ ಶ್ರೀನಿಧಿ ಕೆ ಬಿ ಜಯಣ್ಣ.
ಕೆಬಿಜೆ ಎಂದೇ ಜನಮಾನಸದಲ್ಲಿ ನೆಲೆಸಿರುವ ಕೆ ಬಿ ಜಯಣ್ಣ ರವರ ಸೇವೆಯನ್ನು ತುಮಕೂರಿನ ನಾಗರೀಕರು ಸದಾ ಸ್ಮರಿಸುತ್ತಲೇ ಇರುತ್ತೇವೆ. ಶಿಕ್ಷಣ ,ಕಲೆ ಸಂಸ್ಕೃತಿ ನಾಡು ನುಡಿಗೆ ಅವರ ಕೊಡುಗೆ ಅಪಾರ.
ಇಂತಹ ಮಹಾನ್ ಚೇತನಕ್ಕೆ ವಂದನೆ ಸಲ್ಲಿಸುವ ಅವಕಾಶವನ್ನು ನೀಡಿದ ಕೆ ಎಸ್ ಉಮಾಮಹೇಶ್ ಸರ್ ರವರಿಗೆ ಮತ್ತು ಈ ಅಭಿನಂದನಾ ಗ್ರಂಥದ ಸಂಪಾದಕರಾದ ನನ್ನ ಗುರುಗಳಾದ ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ಗುರುಗಳಿಗೆ ಮೊದಲು ನನ್ನ ನಮನಗಳನ್ನು ಸಲ್ಲಿಸುವೆ.
ವಿದ್ಯಾವಾಹಿನಿ ಕಾಲೇಜ್ ಎಂದರೆ ಥಟ್ಟನೆ ನೆನಪಾಗುವ ಹೆಸರೆ ಕೆ ಬಿ ಜೆ . ಶಿಕ್ಷಣ ಕ್ಷೇತ್ರದಲ್ಲಿ ಬೋಧಕರಾಗಿ, ಶಿಕ್ಷಣ ತಜ್ಞರಾಗಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ಕೆ.ಬಿ.ಜಯಣ್ಣ ಅವರು ಕನ್ನಡ ನಾಡು ಕಂಡ ಸಾಧಕರತ್ನವಾಗಿದ್ದಾರೆ. ತುಮಕೂರು ನಗರದಲ್ಲಿ ವಿದ್ಯಾವಾಹಿನಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ, ತನ್ಮೂಲಕ ವಿದ್ಯಾವಾಹಿನಿ ಮತ್ತು ವಿದ್ಯಾನಿಧಿ ಪದವಿ ಪೂರ್ವ ಕಾಲೇಜುಗಳ ಮುಖಾಂತರ ಸಲ್ಲಿಸಿರುವ ಸೇವೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ನಾನಾ ಬಗೆಯ ಶಿಕ್ಷಣ ಶಾಖೆಗಳನ್ನು ತೆರೆದು ವಿದ್ಯಾರ್ಥಿಸ್ತೋಮಕ್ಕೆ ಮಹದುಪಕಾರವೆಸಗಿದ್ದಾರೆ. ಶ್ರೀಯುತರು ಕಲೆ,ಸಾಹಿತ್ಯ,ಸಾಂಸ್ಕೃತಿಕ,ಕ್ರೀಡೆ ಹಾಗೂ ಲಲಿತಕಲೆಗಳನ್ನು ಪೋಷಿಸುವಲ್ಲಿ ಬದುಕಿನುದ್ದಕ್ಕೂ ಶ್ರಮಿಸಿದ್ದಾರೆ.
ಇತ್ತೀಚೆಗೆ ಎರಡು ಸಮಾರಂಭಗಳಲ್ಲಿ ನಾನು ಕೆ ಬಿ ಜೆ ರವರ ಮಾತುಗಳನ್ನು ಕೇಳಿದೆ. ಒಂದು ಸೋಮೇಶ್ವರ ಶಾಲೆಯ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ, ಮತ್ತೊಂದು ವಿದ್ಯಾನಿಧಿ ಕಾಲೇಜಿನ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ. 78 ರ ಇಳಿವಯಸ್ಸಿನಲ್ಲೂ ಅವರ ಪ್ರಖರ ಚಿಂತನೆಯ ಮಾತುಗಳು ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದವು. ನಾಡು ನುಡಿ ಶಿಕ್ಷಣದ ಬಗ್ಗೆ ಅವರ ಮನ ಮಿಡಿಯುವುದು ಅವರ ಭಾಷಣದಲ್ಲಿ ಎದ್ದು ಕಾಣುತ್ತಿತ್ತು.
ತುಮಕೂರಿನ ಕ್ಯಾತ್ಸಂದ್ರದಲ್ಲಿ
01-06-1946 ರಲ್ಲಿ
ಶ್ರೀ ಪಟೇಲ್ ಬಸಪ್ಪನವರು ಶ್ರೀಮತಿ ಸರೋಜಮ್ಮನವರು ಸುಪತ್ರರಾಗಿ ಜನಿಸಿದ ಕೆ ಬಿ ಜೆ ರವರು ಕ್ಯಾತ್ಸಂದ್ರ ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಶಾಲೆಯಲ್ಲಿ ಪ್ರೌಢಶಾಲೆ ವ್ಯಾಸಂಗ ಮಾಡಿದರು.
ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು,
ಶ್ರೀ ಸಿದ್ಧಗಂಗಾ ವಿಜ್ಞಾನ, ಕಲೆ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದಿದ ಇವರು
ಮೈಸೂರಿನ ಮಾನಸ ಗಂಗೋತ್ರಿಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ
ಎಂ ಎಸ್ಸಿ, ಬೆಂಗಳೂರಿನ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಎಡ್ ಪದವಿ ಪಡೆದರು.
ಮಾಗಡಿ ತಾಲೂಕಿನ ತಿಪ್ಪಸಂದ್ರದ ಖಾಸಗಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಕೆ ಬಿ ಜಯಣ್ಣರವರು ನಂತರ
ತಾವು ಓದಿದ ಶ್ರೀಮಠದ ಸಿದ್ಧಲಿಂಗೇಶ್ವರ ಸನಿವಾಸ ಉನ್ನತ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಭಾಗ್ಯ ಲಭಿಸಿತು.
ಶಿಕ್ಷಣದ ಬಗ್ಗೆ ಅಪಾರ ಒಲವಿದ್ದ ಕೆ ಬಿ ಜೆ ರವರು ಶಿಕ್ಷಣ ಸಂಸ್ಥೆಗಳನ್ನು ಅರಂಭಿಸಲು ತೀರ್ಮಾನಿಸಿ ಒಂದು ಸಂಸ್ಥೆ ಆರಂಭಿಸಿದರು ಅದು ಕ್ರಮೇಣವಾಗಿ ಎರಡು,ನಾಲ್ಕು, ಹೀಗೆ ದ್ವಿಗುಣಗೊಂಡು ಪ್ರಸ್ತುತ 6000 ವಿದ್ಯಾರ್ಥಿಗಳು ಕೆ ಬಿ ಜೆ ರವರ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ! ಎಂದರೆ ಅವರ ಕೊಡುಗೆಯನ್ನು ನೀವೇ ಅರ್ಥೈಸಿಕೊಳ್ಳಬಹುದು.
ಅವರು ಸ್ಥಾಪಿಸಿದ ಕೆಲ ಶೈಕ್ಷಣಿಕ ಸಂಸ್ಥೆಗಳಲ್ಲಿ
ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜು, ವಿದ್ಯಾವಾಹಿನಿ ಕೈಗಾರಿಕಾ ತರಬೇತಿ ಕೇಂದ್ರ, ಸುಮತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ,
ವಿದ್ಯಾವಾಹಿನಿ ನರ್ಸಿಂಗ್ ಕಾಲೇಜು, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು,ವಿದ್ಯಾನಿಧಿ ಪದವಿ ಪೂರ್ವ ಕಾಲೇಜು,
ವಿದ್ಯಾವಾಹಿನಿ ಪ್ಯಾರಾ ಮೆಡಿಕಲ್ ಕಾಲೇಜು, ಪ್ರಮುಖವಾಗಿವೆ.
ಕೇವಲ ಶಿಕ್ಷಣ ಕ್ಷೇತ್ರವಲ್ಲದೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ಕಾಗಿ ಕೆ ಬಿ ಜೆ ರವರ ಸ್ಮರಿಸಲೇ ಬೇಕು.
ಪ್ರತಿವರ್ಷ ಡಾ. ಜಿ.ಪರಮೇಶ್ವರ ಅಭಿಮಾನಿ ಬಳಗದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಸೆಕೆಂಡರಿ ಶಿಕ್ಷಕರ ಸಂಘದ ವತಿಯಿಂದ ಪ್ರತಿ ವರ್ಷ 10 ತಾಲ್ಲೂಕಿನ ಪ್ರೌಢಶಾಲೆ ಮತ್ತು ಪದವಿ ಪೂರ್ವ
ಕಾಲೇಜು ಹಾಗೂ ಪದವಿ ಕಾಲೇಜುಗಳ ಒಟ್ಟು 90 ರಿಂದ 100 ಜನ ಸಂಪನ್ಮೂಲ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಸನ್ಮಾನ ಮಾಡಿ ಪ್ರೋತ್ಸಾಹ ಮಾಡುತ್ತಾ ಬಂದಿದ್ದಾರೆ.
ಸೆಕೆಂಡರಿ ಶಿಕ್ಷಕರ ಸಂಘದ ವತಿಯಿಂದ ಪ್ರತಿವರ್ಷ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದಾರೆ.
ತುಮಕೂರು ನಗರ ಹಾಗು ಸುತ್ತಲಿನ ಗ್ರಾಮಗಳಲ್ಲಿ ನಡೆಯುವ ಕ್ರೀಡೆ, ಜಾತ್ರೆ, ಉತ್ಸವ, ಹಬ್ಬಹರಿದಿನಗಳು, ದೇವಾಲಯಗಳ ಅಭಿವೃದ್ಧಿ, ಸಾಮೂಹಿಕ ವಿವಾಹ, ಗಣೇಶೋತ್ಸವ ಇತ್ಯಾದಿಗಳಿಗೆ ಉದಾರ ನೆರವು ನೀಡುತ್ತಾ ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸಲು ನೆರವಾಗುತ್ತಿದ್ದಾರೆ.
ಸಾಹಿತ್ಯ ಸಮ್ಮೇಳನ, ನಾಟಕೋತ್ಸವ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯಾವಾಹಿನಿ ಸಂಸ್ಥೆಯ ಸಹಯೋಗ ಹಾಗೂ ಪ್ರೋತ್ಸಾಹ ನೀಡುವಲ್ಲಿ ಕೆ ಬಿ ಜೆ ಎತ್ತಿದ ಕೈ.
ಪ್ರತಿವರ್ಷ ತಮ್ಮ ಕಾಲೇಜಿನ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವಗಳಿಗೆ ರಾಜ್ಯದ ಪ್ರಸಿದ್ಧ ಗಾಯಕರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಪ್ರಶಸ್ತಿ ಪುರಸ್ಕೃತರು, ಕ್ರೀಡಾಪಟುಗಳು, ವಿಜ್ಞಾನಿಗಳು ಹಾಗೂ ಚಲನಚಿತ್ರ ನಟರನ್ನು ಆಹ್ವಾನಿಸಿ ಗೌರವ ಸಮರ್ಪಣೆ ಮಾಡುತ್ತಾ ಬಂದಿದ್ದಾರೆ.
ಪ್ರತಿವರ್ಷ ತಮ್ಮ ಕಾಲೇಜಿಗೆ ದಾಖಲಾಗುವ ನೂರಾರು ಬಡವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮೂಲಕ ಅವರ ವಿದ್ಯಾಭ್ಯಾಸ ಮುಂದುವರೆಸಲು ಹಾಗೂ ಸ್ವಂತ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡುತ್ತಿದ್ದಾರೆ.
ವೃತ್ತಿ ರಂಗಭೂಮಿಯ ಬಗ್ಗೆ ಹಾಗೂ ವೃತ್ತಿ ರಂಗ ಕಲಾವಿದರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ತುಮಕೂರಿನಲ್ಲಿ ವೃತ್ತಿ ರಂಗಭೂಮಿಯ ನಾಟಕಗಳು ನಡೆಯಲು ಉತ್ತೇಜನ ನೀಡುತ್ತಿದ್ದಾರೆ.
ಕೆ.ಬಿ.ಜೆ. ಅಭಿಮಾನಿ ಬಳಗದ ಮೂಲಕ ಪ್ರತಿವರ್ಷ ಶ್ರೀ ಸಿದ್ದಗಂಗಾ ಮಠದ ಜಾತ್ರೆ ಹಾಗೂ ಶ್ರೀಗಳ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಉಚಿತ ಸೇವೆ ಸಲ್ಲಿಸಲಾಗುತ್ತಿದೆ.
ಕೆ ಬಿ ಜಯಣ್ಣ ರವರ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಲವಾರು ಪುರಸ್ಕಾರಗಳು ಇವರನ್ನು ಹರಸಿ ಬಂದಿವೆ.
ಅಮೇರಿಕಾದ ವಿಶ್ವವಿದ್ಯಾಲಯ, 1997ರಲ್ಲಿ ಮ್ಯಾನ್ ಆಫ್ ದಿ ಇಯರ್ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.
ಶೈಕ್ಷಣಿಕ ಸೇವೆಗಾಗಿ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ಬಿಜಾಪುರದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸ್ವೀಕರಿಸಿದ್ದಾರೆ.
ತುಮಕೂರಿನ ಶ್ರೀ ಸಿದ್ಧಗಂಗಾ ಮಠವು ನೀಡುವ ಪ್ರತಿಷ್ಠಿತ ಬಸವ ಪ್ರಶಸ್ತಿಯನ್ನು ಕೆ ಬಿ ಜೆ ರವರು ಸ್ವೀಕರಿಸಿದ್ದಾರೆ.
ತುಮಕೂರಿನ ಜಿಲ್ಲಾಡಳಿತವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
2009 ರಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯು ಉತ್ತಮ ಸಾಧಕ ಪ್ರಶಸ್ತಿ ನೀಡಿದೆ.
ಇವರ ಸಾಮಾಜಿಕ ಸೇವೆಯನ್ನು ಗುರ್ತಿಸಿ ಕ್ಯಾತ್ಸಂದ್ರ ದ ಕೆ.ಬಿ.ಜೆ. ಅಭಿಮಾನಿ ಬಳಗವು ಪುರಸ್ಕಾರ ನೀಡಿ ಗೌರವಿಸಿದೆ.
ಕವಿತಾಕೃಷ್ಣ ಸಾಹಿತ್ಯ ಮಂದಿರವು ಶಿಕ್ಷಣ ಶ್ರೀನಿಧಿ ಎಂಬ ಬಿರುದು ನೀಡಿ ಸನ್ಮಾನಿಸಿದೆ.
ಇದರ ಜೊತೆಗೆ ವಿವಿಧ ಕನ್ನಡ ಪರ ಸಂಘಟನೆಗಳು, ಕ್ರೀಡಾ ಹಾಗೂ ಕಲಾಸಂಘಗಳು, ಶಾಲಾ ಕಾಲೇಜುಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿಕ್ಷಕರ ಸಂಘಟನೆಗಳ ಗೌರವಗಳು. ಸಂದಿವೆ.
ಅವರ ಧರ್ಮಪತ್ನಿ ಶ್ರೀಮತಿ ಡಿ.ಆರ್.ಪೂರ್ಣಿಮಾ ಜಯಣ್ಣನವರು ಕೆ ಬಿ ಜೆ ರವರ ಎಲ್ಲಾ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ.
ಸಂಘಟನೆ, ಹೋರಾಟ ಮತ್ತು ಶಿಕ್ಷಣ ಇವು ವ್ಯಕ್ತಿಯ ವ್ಯಕ್ತಿತ್ವದ ನಿರ್ಣಾಯಕ ಅಂಶಗಳು. ಕೆ ಬಿ ಜೆ ರವರು ಈ ಮೂರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಶ್ರೀಯುತರಿಗೆ ಭಗವಂತ ಆಯುರಾರೋಗ್ಯ ಕರುಣಿಸಲಿ ಎಂದು ಮನದುಂಬಿ ಹಾರೈಸುವೆನು.
ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು ಮತ್ತು ಸಾಹಿತಿಗಳು
ತುಮಕೂರು
9900925529
No comments:
Post a Comment