#ಆಗಸ್ಟ್_ಮಾಸದ_ನೆನಪುಗಳು
#ಭಾಗ_4
#ಬಳ್ಳಾರಿ_ಸಿದ್ದಮ್ಮ.
ಕಿತ್ತೂರುರಾಣಿ ಚನ್ನಮ್ಮ, ಬೆಳವಾಡಿ ಮಲ್ಲಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದ ಧೀರ ಮಹಿಳೆಯರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸೊಲ್ಲೆತ್ತಿ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಇವರಂತೆ ಸಾವಿರಾರು ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಸ್ವಾತಂತ್ರ್ಯಾನಂತರ ಫಲಾಪೇಕ್ಷೆಯಿಲ್ಲದೆ ತೆರೆ ಮರೆಗೆ ಸರಿದ ಧೀಮಂತ ಮಹಿಳೆಯರನ್ನು ಆಗಸ್ಟ್ ಮಾಸದಲ್ಲಿ ನೆನೆಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ.ಅಂತಹವರಲ್ಲಿ ಪ್ರಮುಖ ಮಹಿಳೆ ಎಂದರೆ 'ಬಳ್ಳಾರಿ ಸಿದ್ದಮ್ಮ'ನವರು.
ಮಹಾತ್ಮ ಗಾಂಧೀಜಿಯವರನ್ನು ನೋಡಲು ಕರ್ನಾಟಕದ ಬಳ್ಳಾರಿಯಿಂದ ಗುಜರಾತ್ ನ ಸಬರಮತಿ ಆಶ್ರಮಕ್ಕೆ ತೆರಳಿದ ದಿಟ್ಟ ಮಹಿಳೆ ನಮ್ಮ ಸಿದ್ದಮ್ಮ. ಶಿವಪುರ ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥ ಧ್ವಜ ಸತ್ಯಾಗ್ರಹ ಗಳಲ್ಲಿ ಮಹಿಳೆಯರನ್ನು ಹುರಿದುಂಬಿಸಿ ಸ್ವತಂತ್ರ ಚಳುವಳಿಯನ್ನು ಜನಾಂದೋಲನ ಮಾಡುವಲ್ಲಿ ಸಿದ್ದಮ್ಮ ನವರು ಪ್ರಮುಖ ಪಾತ್ರ ವಹಿಸಿದರು.
ಬಳ್ಳಾರಿ ಸಿದ್ದಮ್ಮನವರು ಬಳ್ಳಾರಿ ಜಿಲ್ಲೆ ಹಾವೇರಿ ತಾಲ್ಲೂಕಿನ ದುಂಡಸಿ ಗ್ರಾಮದ ಸಂಪ್ರದಾಯಸ್ಥ ಲಿಂಗಾಯತ ಸಮುದಾಯದ ಕುಟುಂಬದಲ್ಲಿ 1900ರಲ್ಲಿ ಜನಿಸಿದರು. ಇವರ ತಂದೆ ತಾಯಂದಿರು ಬಸೆಟಪ್ಪ ಮತ್ತು ಶಿವಮ್ಮ. ಬಸೆಟಪ್ಪನವರು ಮಧ್ಯಮ ಪ್ರಮಾಣದ ವ್ಯಾಪಾರಸ್ಥರು. ಸಂಪ್ರದಾಯಸ್ಥ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವ ಪದ್ದತಿ ಇರಲಿಲ್ಲ. ಅವರ ಕಲಿಕೆ ಏನಿದ್ದರೂ ಮನೆಯ ನಾಲ್ಕು ಗೋಡೆಗಳ ಮಧ್ಯೆ. ಸಿದ್ದಮ್ಮಳಿಗೆ ಕಲಿಯಬೇಕೆಂಬ ಇಚ್ಛೆಯಿದ್ದರೂ ತಂದೆತಾಯಂದಿರು ಅದಕ್ಕೆ ವಿರೋಧ ಮಾಡಿದರು. ಕದ್ದುಮುಚ್ಚಿ ನಾಲ್ಕನೆಯ ತರಗತಿಯ ತನಕ ವ್ಯಾಸಂಗ ಮಾಡಿದ್ದಾಯ್ತು. ಪ್ರಾಪ್ತ ವಯಸ್ಸಿಗೆ ಬರುತ್ತಲೇ ಬಳ್ಳಾರಿಯ ಮುರುಗಪ್ಪನವರೊಂದಿಗೆ ವಿವಾಹವಾಯ್ತು. ಸುಖ ದಾಂಪತ್ಯ ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಆಂದೋಲನವು ಇಡೀ ದೇಶವನ್ನು ವ್ಯಾಪಿಸಿತು. ಅದರಲ್ಲೂ ಮಹಾತ್ಮ ಗಾಂಧಿಯವರು ಪ್ರಭಾವದಿಂದಾಗಿ 1920 ರಲ್ಲಿ ಆಸಹಕಾರ ಚಳುವಳಿ,1939 ರಲ್ಲಿ ಉಪ್ಪಿನ ಸತ್ಯಾಗ್ರಹಗಳು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಛನ್ನು ಹೆಚ್ಚಿತ್ತು. ವಿದ್ಯಾವಂತರಲ್ಲದಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅವರ ಮನಸ್ಸು ತುಡಿಯುತ್ತಿತ್ತು. ತಿಲಕರ ಕೇಸರಿ, ಮರಾಠಿ ಪತ್ರಿಕೆಗಳು ಅವರ ಮೇಲೆ ಪ್ರಬಾವ ಬೀರಿದವು. ಮಹಾತ್ಮ ಗಾಂಧೀಜಿಯವರನ್ನು ನೋಡಿರದಿದ್ದರೂ ಅವರ ಪ್ರಭಾವ ಮುರುಗಪ್ಪ ದಂಪತಿಗಳ ಮೇಲೆ ಬಿದ್ದಿತು. ಸಿದ್ದಮ್ಮನವರಿಗೆ ಗಾಂಧೀಜಿಯವರನ್ನು ನೋಡಬೇಕು, ಆ ಮಹಾತ್ಮನೊಂದಿಗೆ ಮಾತನಾಡಬೇಕು, ಅವರು ಎಲ್ಲಿ ಇರುತ್ತಾರೆ?ಎಲ್ಲಿ ಸಿಗುತ್ತಾರೆ ?ಎಂಬ ಕುತೂಹಲ. ಗಾಂಧೀಜಿಯವರನ್ನು ನೋಡಬೇಕೆಂದರೆ ವಾರ್ದಾದ ಅವರ ಆಶ್ರಮಕ್ಕೆ ಹೋದರೆ ಸಿಗುತ್ತಾರೆ ಎಂದು ತಿಳಿಯಿತು.ಅಲ್ಲಿಗೆ ಹೋಗಿ ಬರಲು ಹಣ ಬೇಕು. ಕೆಲವು ಕಾಲ ಅಲ್ಲಿಯೇ ತಂಗಬೇಕು. ಇವೇ ಮುಂತಾದ ಪ್ರಶ್ನೆಗಳು ಬಂದಾಗ ಉತ್ತರ ಸಿದ್ದಮ್ಮನವರಲ್ಲಿತ್ತು. ಮನಸ್ಸಿದ್ದರೆ ಮಾರ್ಗ ಎಂಬಂತೆ ಗುಜರಾತಿನ ವಾರ್ದಾಕ್ಕೆ ತೆರಳಿದರು. ಸಿದ್ದಮ್ಮನವರು. ಗಾಂಧೀಜಿಯವರನ್ನು ನೋಡಿ ಅವರೊಂದಿಗೆ ಮಾತನಾಡಿದರು. ಆಶ್ರಮದಲ್ಲಿದ್ದ ಸಮಯದಲ್ಲಿ ಸ್ವಚ್ಛತಾ ಕೆಲಸ , ದವಸ ದಾನ್ಯಗಳಲ್ಲಿರುವ ಕಲ್ಲು, ಕಡ್ಡಿ ತೆಗೆಯುವುದು. ಮುಂತಾದ ಕೆಲಸಗಳನ್ನು ಮಾಡುತ್ತಾ ಇರುವಾಗಲೇ ನಾಯಕರಗಳಾದ ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜಗೋಪಾಚಾರಿ, ಕಾಮರಾಜ್ ಮುಂತಾದವರನ್ನು ಕಾಣುವ ಭಾಗ್ಯ ದೊರೆಯಿತು. ತಾನೂ ಅಂತಹ ನಾಯಕಿಯಾಗಬೇಕೆಂಬ ಹಂಬಲ ಸಿದ್ದಮ್ಮನವರಲ್ಲಿ ಮೂಡಿತು. ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂಬುದಾಗಿ ತೀರ್ಮಾನಿಸಿದರು. ಕರ್ನಾಟಕ ರಾಜ್ಯವು ಅಂದು ಹರಿದು ಹಂಚಿಹೋಗಿತ್ತು. ಒಂದೆಡೆ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಸ್ವಾತಂತ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಳೇ ಮೈಸೂರು ಭಾಗದಲ್ಲಿ ನಿರಂತರವಾಗಿ ಬ್ರಿಟಿಷರ ಹಾಗೂ ಆಳರಸರ ವಿರುದ್ದ ಚಳುವಳಿ ನಡೆಯುತ್ತಿತ್ತು.
ಬಳ್ಳಾರಿ ಸಿದ್ದಮ್ಮನವರು ಚಳುವಳಿಗಾರರನ್ನು ಹರಿದುಂಬಿಸುತ್ತಿದ್ದರು. ಪೋಲಿಸರಿಗೆ ಹೆದರದೆ ಭಾಷಣ ಮಾಡುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಕೈತಪ್ಪಿ ಹೋಗುತ್ತದೆ. ಅಂತಹ ಒಂದು ಅವಕಾಶ ಸಿದ್ದಮ್ಮನವರಿಗೆ ಲಭಿಸಿತು. ಅದೇ ಮಂಢ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹ. ಸಿದ್ದಮ್ಮನವರು ಬಳ್ಳಾರಿ ದಾವಣಗೆರೆ,ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಚಳುವಳಿಗಳು ಹರತಾಳಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಶ್ರೀಯುತರುಗಳಾದ ಎಸ್.ನಿಜಲಿಂಗಪ್ಪ, ಟಿ.ಸಿದ್ದಲಿಂಗಯ್ಯ, ಕೆ.ಎಸ್.ಪಾಲರು ಹಾಗೂ ಇನ್ನಿತರ ಮುಖಂಡರು ಚಳುವಳಿಯನ್ನು ಹಬ್ಬಿಸುತ್ತಿದ್ದರು. ಸಿದ್ದಮ್ಮನವರು ಈ ನಾಯಕರುಗಳಿಗೆ ಸಾತ್ ನೀಡುತ್ತಿದ್ದರು.
ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ದ್ವಜವನ್ನು ಸಾರ್ವಜನಿಕವಾಗಿ ಧ್ವಜಾರೋಹಣ ಮಾಡಲು ಒಂದು ಸ್ವಾಗತ ಸಮಿತಿಯನ್ನು ರಚಿಸಿಕೊಂಡರು. ಇದೊಂದು ಭಾರೀ ಪ್ರಮಾಣದ ಸಭೆಯಾದುದರಿಂದ ಹೆಚ್ಚಾಗಿ ಹಣಕಾಸಿನ ಅಗತ್ಯವಿದ್ದಿತು. ಆ ಕಾರಣದಿಂದಾಗಿಯೇ ಸಾಹುಕಾರ್ ಚನ್ನಯ್ಯನವರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಹೆಚ್.ಕೆ.ವೀರಣ್ಣ ಗೌಡರು ಕಾರ್ಯದರ್ಶಿಯಾಗಿದ್ದರು. ಕೊಪ್ಪದ ಜೋಗಿಗೌಡರನ್ನು ಖಜಾಂಚಿಯನ್ನಾಗಿಯೂ ಎಂ.ಎನ್.ಜೋಯಿಸ್ರವರನ್ನು ಜೆ.ಓ.ಸಿ.ಯನ್ನಾಗಿ ನೇಮಕ ಮಾಡಿರುವುದಗಿ ಪ್ರಕಟಿಸಿದರು. ಶಿವಪುರದಲ್ಲಿ ತಿರುಮಲೇಗೌಡರ ಜಾಗದಲ್ಲಿ ಧ್ವಜಾರೋಹಣ ಮಾಡಲು ತೀರ್ಮಾನಿಸಿದರು. ಸಭೆ ನಡೆಯುವ ಒಂದು ವಾರ ಮೊದಲೇ ಹೆಚ್.ಸಿ.ದಾಸಪ್ಪ, ಯಶೋಧರ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ತಾಯಮ್ಮ ವೀರಣ್ಣಗೌಡ, ವೆಂಕಮ್ಮ ಸೀತಾರಾಮಯ್ಯ ಇಂದಿರಾಬಾಯಿ ಕೃಷ್ಣಮೂರ್ತಿ ಇನ್ನೂ ಮುಂತಾದ ನಾಯಕರು ಶಿವಪುರಕ್ಕೆ ಬಂದಿಳಿದರು. ಮಹಿಳೆಯರು ಒಂದೊಂದು ತಂಡಗಳನ್ನಾಗಿ ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಗ್ರಾಮಗಳ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದರು. ಸಿದ್ದಮ್ಮನವರು ಬಳ್ಳಾರಿಯಿಂದ ಶಿವಪುರದಂತಹ ಹಳ್ಳಿಗೆ ಬಂದು ಜನರನ್ನು ಹುರಿದುಂಬಿಸುತ್ತಿರುವುದನ್ನು ನೋಡಿದ ಜನ ಸ್ವಇಚ್ಛೆಯಿಂದ ಚಳುವಳಿಗೆ ಧುಮುಕಿದರು. ಹೆಚ್.ಕೆ.ವೀರಣ್ಣಗೌಡ, ಹೆಚ್.ಸಿ.ದಾಸಪ್ಪ, ಸಾಹುಕಾರ್ ಚನ್ನಯ್ಯ ಇನ್ನೂ ಮುಂತಾದವರು ಟಿ. ಸಿದ್ದಲಿಂಗಯ್ಯನವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರು. ಇಂದಿನ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಶಿವಪುರದಲ್ಲಿ 1938 ಏಪ್ರಿಲ್ 11, 12, ಹಾಗೂ 13 ರಂದು ಕಾಂಗ್ರೆಸ್ ದ್ವಜವನ್ನು ಹಾರಿಸಲು ತೀರ್ಮಾನಿಸಿದರು.ಇದನ್ನು ಶಿವಪುರ ರಾಷ್ಟ್ರಕೂಟವೆಂದು ಕರೆದರು. 1938 ರ ಏಪ್ರಿಲ್ 11ನೇ ತಾರೀಖು ಶಿವಪುರದಲ್ಲಿ ಮೂವತ್ತು ಸಾವಿರ ಜನ ಸೇರಿದರು. ಜಿಲ್ಲಾ ಮ್ಯಾಜಿಸ್ಟ್ರೇಟರಾದ ಜಿ.ಎಂ.ಮೇಕ್ರಿಯವರು ಶಿವಪುರ ಸುತ್ತಮುತ್ತ ಧ್ವಜಾರೋಹಣ ಮಾಡದಂತೆ ನಿಷೇಧ ಹೇರಿದ್ದರು. ಅಂದು ಟಿ. ಸಿದ್ದಲಿಂಗಯ್ಯನವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಟಿ ಸಿದ್ದಲಿಂಗಯ್ಯನವರು ಧ್ವಜಾರೋಹಣ ಮಾಡಲಾಗಿ ಅವರನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ಸ್ತ್ರೀ ಮುಖಂಡರು ವೇದಿಕೆಯ ಮೇಲೆ ಕುಳಿತಿದ್ದರು. ಸಿದ್ದಲಿಂಗಯ್ಯನವರು ತರುವಾಯ ಹೆಚ್.ಸಿ.ದಾಸಪ್ಪನವರು, ಎಂ.ಎಸ್.ಜೋಯಿಸ್, ಯಶೋಧರ ದಾಸಪ್ಪನವರು, ನಂತರ ಬಳ್ಳಾರಿ ಸಿದ್ದಮ್ಮನವರು ಧ್ವಜಾರೋಹಣ ಮಾಡಿದರು. ಇವರುಗಳನ್ನು ಬಂಧಿಸಿ ಮಂಡ್ಯದ ಜಿಲ್ಲಾ ನ್ಯಾಯಾಲಯಕ್ಕೆ ಕರೆದೂಯ್ದರು. ಬಳ್ಳಾರಿ ಸಿದ್ದಮ್ಮನವರಿಗೆ ಶಿಕ್ಷೆಯಾಯಿತು.
ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹವು ಚಳುವಳಿಗಾರರಿಗೆ ಸ್ಫೂರ್ತಿಯಾಯಿತು. ತಮ್ಮ ತಮ್ಮ ಪಟ್ಟಣಗಳಲ್ಲಿ ಧ್ವಜಾರೋಹಣ ಮಾಡಲು ಜನ ಮುಂದಾದರು. ಅದೇರೀತಿ ಅಂದಿನ ಕೋಲಾರ ಜಿಲ್ಲೆ ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವಿದುರಾಶ್ವತ್ಥ ಎಂಬಲ್ಲಿ ಧ್ವಜಸತ್ಯಾಗ್ರಹ ಏರ್ಪಾಡಾಯಿತು. ಈಗಾಗಲೇ ತಿಳಿಸಿರುವಂತೆ ಶಿವಪುರ ರಾಷ್ಟ್ರಕೂಟದ ಪ್ರಭಾವದಿಂದಾಗಿ ಬಳ್ಳಾರಿ ಸಿದ್ದಮ್ಮನವರು ಸೇರಿದಂತೆ ಕೆಲವು ಮಹಿಳಾ ಮುಖಂಡರು ವಿದುರಾಶ್ವತ್ಥಕ್ಕೆ ಬಂದಿಳಿದು ಧ್ವಜಾರೋಹಣ ಮಾಡಿದರು. ಜಿಲ್ಲಾ ಮ್ಯಾಜಿಸ್ಟ್ರೇಟರ ಆಜ್ಞೆಯಂತೆ ಪೋಲಿಸರು ಚಳುವಳಿಕಾರರ ಮೇಲೆ ಗುಂಡು ಹಾರಿಸಿದರು. ಕೆಲವರು ಅಸುನೀಗಿದರು. ಗರ್ಭಿಣಿ ಸ್ತ್ರೀಯೊಬ್ಬಳು ಈ ಗೋಲಿಬಾರ್ನಲ್ಲಿ ಅಸುನೀಗಿದಳು ಎಂದು ಸುಳ್ಳು ಸುದ್ದಿ ಹರಡಿತು. ಜನ ರೊಚ್ಚಿಗೆದ್ದು ದಾಂದಲೆ ನಡೆಸಿದರು. ಇದು ರಾಷ್ಟೀಯ ಸುದ್ದಿಯಾಯಿತು. ಸ್ವಾತಂತ್ರ್ಯ ನಂತರ ದಾವಣಗೆರೆಯ ಶಾಸಕಿಯಾಗಿ ಆಯ್ಕೆಯಾದ ಸಿದ್ದಮ್ಮ ರವರು ಹಲವಾರು ಜನಪರ ಕಾರ್ಯಗಳಿಂದ ಜನಮನ ಗೆದ್ದರು. 1982 ನೇ ಇಸವಿಯಲ್ಲಿ ಅವರು ದೈವಾಧೀನರಾದರು. ಈ ಆಗಸ್ಟ್ ಮಾಸದಲ್ಲಿ ಆ ಮಹಾನ್ ಚೇತನಕ್ಕೆ ನಮ್ಮ ನಮನ ಸಲ್ಲಿಸೋಣ...
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
9900925529
No comments:
Post a Comment