31 July 2023

ಪಿ ಎಚ್ ಡಿ ಪಡೆದ ಕೃಷಿ ಕಾರ್ಮಿಕ ಮಹಿಳೆ..


 


ಪಿಹೆಚ್ಡಿ ಪಡೆದ ಕೃಷಿ ಕಾರ್ಮಿಕ ಮಹಿಳೆ.


ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ,ಎಷ್ಟೇ ಜನಜಾಗೃತಿ ಮೂಡಿಸಿದರೂ ಸಮಾಜದಲ್ಲಿ ಬಾಲ್ಯ ವಿವಾಹಗಳು ಇಂದಿಗೂ ನಡೆಯುತ್ತಲೇ ಇವೆ. ತನ್ಮೂಲಕ ಏನೇನೂ ಆಸೆ ಆಕಾಂಕ್ಷೆಗಳನ್ನು ಹೊತ್ತ  ಮಹಿಳೆಯರು ಪ್ರತಿಭೆಯಿದ್ದರೂ ಅವನ್ನು ಹೊರಗೆ ಹಾಕಲು ಅವಕಾಶ ಸಿಗದೆ ಸಂಸಾರದಲ್ಲಿ ಬಂಧಿಯಾಗಿ ಜೀವನ ಸಾಗಿಸುವುದು ಸಾಮಾನ್ಯವಾಗಿಬಿಟ್ಟಿದೆ.
ಆದರೆ ಇಲ್ಲೊಬ್ಬ ಶಾಲೆ ಬಿಟ್ಟ ವಿದ್ಯಾರ್ಥಿನಿ ಬಾಲ್ಯವಿವಾಹವಾದರೂ ತನ್ನ ಗುರಿಸಾಧಿಸುವ ಹಂಬಲ, ನಿರಂತರ ಪ್ರಯತ್ನ, ಕುಟುಂಬದ ಸಹಕಾರದಿಂದ ಪಿ ಎಚ್ಡಿ ಪದವಿ ಪಡೆದು ಸಹಾಯಕ ಪ್ರೊಫೆಸರ್ ಆಗುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಅನಂತಪುರ ಜಿಲ್ಲೆಯ ನಾಗುಲಗುಡ್ಡೆ ಗ್ರಾಮದ ಯುವತಿ ಸಾಕೆ ಭಾರತಿಯವರು ಯಶಸ್ಸು ಬೇರೆಲ್ಲೂ ಇಲ್ಲ ನಮ್ಮ ಕೈಯಲ್ಲೇ ಇದೆ ಎಂದು ತೋರಿದ ದಿಟ್ಟ ಮಹಿಳೆ.
ಬಡತನದ ಹಿನ್ನೆಲೆಯಿಂದ ಬಂದ
ಭಾರತಿಯವರು ಬಾಲ್ಯದಿಂದಲೇ ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರಾದರು. ಮೂರು ಮಕ್ಕಳಲ್ಲಿ ಹಿರಿಯಳಾದ ಆಕೆ ಹನ್ನೆರಡನೇ ತರಗತಿಯವರೆಗೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಓದಿದ್ದಳು.

ಆಕೆಯ ಕುಟುಂಬದ ಆರ್ಥಿಕ ಅಡಚಣೆಗಳಿಂದಾಗಿ ಆಕೆಯು ತನ್ನ ಪಿ ಯು ಸಿ  ಮುಗಿಸಿದ ನಂತರ ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯ ಸಂಬಂಧಿಯೊಬ್ಬರನ್ನು  ವಿವಾಹವಾದರು. ಮತ್ತು ಶೀಘ್ರದಲ್ಲೇ ಅವರು ಮಗುವಿನ ತಾಯಿಯಾದರು. ಇಷ್ಟೆಲ್ಲ ಅಡಚಣೆಗಳ ಮಧ್ಯೆ ಭಾರತಿಯವರ ಶಿಕ್ಷಣದ ಬಗ್ಗೆ ತುಡಿತ ಕಡಿಮೆಯಾಗಿರಲಿಲ್ಲ.

ಕೂಲಿ ಕೆಲಸ ಮಾಡುತ್ತಲೇ ತನ್ನೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ
ಅನಂತಪುರದ ಎಸ್ ಎಸ್ ಬಿ ಎನ್ ಪದವಿ ಮತ್ತು ಪಿಜಿ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. 

ಪ್ರತಿದಿನ ಮುಂಜಾನೆ ಬೇಗ ಎದ್ದು  ತನ್ನ ಮನೆಕೆಲಸಗಳನ್ನು ಮುಗಿಸಿದ ನಂತರ  ತನ್ನ ಹಳ್ಳಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತನ್ನ ಕಾಲೇಜಿಗೆ ಬಸ್ ಹಿಡಿಯಲು ಅವಳು ಹಲವಾರು ಮೈಲುಗಳಷ್ಟು ನಡೆಯಬೇಕಾಗಿತ್ತು.  ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿ ಸ್ನಾತಕೋತ್ತರ ಪದವಿ ಪಡೆದ ಭಾರತಿಯ ಇಚ್ಛಾಶಕ್ತಿ ಗಮನಿಸಿದ ಪ್ರೊಫೆಸರ್ ಒಬ್ಬರು ಪಿ ಎಚ್ ಡಿ  ಪದವಿ ಪಡೆಯಲು ಸಲಹೆ  ನೀಡಿದರು. ಅದರಂತೆ  ಶ್ರೀ ಕೃಷ್ಣ ದೇವರಾಯ  ವಿಶ್ವವಿದ್ಯಾನಿಲಯದಲ್ಲಿ ಪಿ ಎಚ್ಡಿ ಕೋರ್ಸ್ ಗೆ   ದಾಖಲಾಗಿ ಇತ್ತೀಚಿಗೆ ಡಾಕ್ಟರೇಟ್ ಪಡೆದರು. ಭಾರತಿಯವರ ಈ ಸಾಧನೆಯ ಹಿಂದೆ  ಭೂರಹಿತ ಕೃಷಿ ಕಾರ್ಮಿಕರಾಗಿರುವ ಅವರ ಪತಿ ಶಿವಪ್ರಸಾದ್ ರವರ ಬೆಂಬಲವನ್ನು ಮರೆಯುವಂತಿಲ್ಲ.
ಪ್ರೊಫೆಸರ್ ಆಗುವ ಭಾರತಿಯವರ ಕನಸಿಗೆ ನಿಮ್ಮ ಹಾರೈಕೆಯಿರಲಿ ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

No comments: