07 July 2023

ಕೆಂಬಳಲಿನಲ್ಲಿ ಅರಳಿದ ಸುಮ


 


ಕೆಂಬಳಲಿನಲ್ಲಿ ಅರಳಿದ ಸುಮ...


ಭಾನುವಾರ ಹಿಂದೂ ಪತ್ರಿಕೆ ಓದುವಾಗ ಒಬ್ಬ ವಿದ್ಯಾರ್ಥಿ ಹತ್ತತರ ನಾಲ್ಕು ಕೋಟಿ ಫೆಲೋಶಿಪ್ ಪಡೆದು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಮಾಡಲು ಆಯ್ಕೆಯಾಗಿರುವುದು ಕೇಳಿ ಬಹಳ ಸಂತಸವಾಗಿ ಲೇಖನ ಓದಿದಾಗ ಆ ಹುಡುಗ ಕೆಂಬಳಲು ಗ್ರಾಮದವನು ಎಂದು ಗೊತ್ತಾಗಿ ನನ್ನ ಸಹೋದ್ಯೋಗಿಗಳಾದ ಕೋಟೆ ಕುಮಾರ್ ರವರು  ಅದೇ ಗ್ರಾಮದವರೆಂದು ನೆನಪಾಗಿ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಯಶವಂತ್ ಮಹೇಶ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.ಜೊತೆಗೆ ನಮ್ಮ ಊರು ಮತ್ತು ನಾಡಿಗೆ ಕೀರ್ತಿ ತಂದ ಯುವಕನ ಸಾಧನೆಗೆ ಅವರು  ಹೆಮ್ಮೆ ಪಟ್ಟರು.


ಕರ್ನಾಟಕದ ಈ  ವಿದ್ಯಾರ್ಥಿಯ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ತುಮಕೂರಿನ ಯಶವಂತ್ ಮಹೇಶ್ ಇದೀಗ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಜೈವಿಕ ಇಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಅಧ್ಯಯನಕ್ಕಾಗಿ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ.  ಸದ್ಯ ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಂಶೋಧನಾ ಸಹಾಯಕರಾಗಿರುವ ಮಹೇಶ್ ಯಶವಂತ್, ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ಜೈವಿಕ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ 

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಅಮೆರಿತ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಒಂದು. ಇದು ಅಮೆರಿಕದ ಅತ್ಯಂತ ಹಳೆಯ ಸಂಸ್ಥೆಯಾಗಿದೆ.  ಇದೇ ವಿಶ್ವವಿದ್ಯಾಲಯದಲ್ಲಿ ಕೋವಿಡ್ ವೈರಸ್ ವಿರುದ್ದ ಸಮರ್ಥವಾಗಿ ಹೋರಾಡಬಲ್ಲ MRNA ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಇದೇ ವಿಶ್ವವಿದ್ಯಾಲದಲ್ಲಿ ಡಾಕ್ಟರೇಟ್ ಅಧ್ಯಯನಕ್ಕೆ ಯಶವಂತ್ ಮಹೇಶ್ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ. ಕ್ಯಾನ್ಸರ್ ಸಿಸ್ಟಮ್ಸ್ ಬಯಾಲಜಿ ಲ್ಯಾಬೊರೇಟರಿನಲ್ಲಿ ಸಂಶೋಧನೆ ಮಾಡುತ್ತಿರುವ ಯಶವಂತ್ ಮಹೇಶ್, ಇದೀಗ ಈ ಅವಕಾಶಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. "ಜೈವಿಕ ಎಂಜಿನಿಯರಿಂಗ್‌ನಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ. ಈ ಕೋರ್ಸ್ 5 ವರ್ಷವಿದೆ. ಇದೀಗ ನೇರವಾಗಿ ನಾನು ಪಿಹೆಚ್‌ಡಿಗೆ ಆಯ್ಕೆಯಾಗಿದ್ದೇನೆ. ಅದರಲ್ಲೂ ಸಂಪೂರ್ಣ ಫೆಲೋಶಿಪ್ ಲಭ್ಯವಾಗಿದೆ "ಎಂದಿದ್ದಾರೆ. 


ಯಶವಂತ್ ಮಹೇಶ್ ರೈತ ಕುಟುಂಬದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿ. ತುಮಕೂರಿನ ಸಿದ್ದಗಂಗಾದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಯಶವಂತ್ ಮಹೇಶ್ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಕೆಂಬಾಳು ಗ್ರಾಮದ ನಿವಾಸಿಯಾಗಿರುವ ಯಶವಂತ್ ಮಹೇಶ್ ಅಧ್ಯಯನದಲ್ಲಿ ಹಲವು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇನಿಶಿಯೇಟಿವ್ ಫಾರ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್ ಸೈನ್ಸ್ (IRIS), ನ್ಯಾಷನಲ್ ಸೈನ್ಸ್ ಫೇರ್ 2012ರ ಯೋಜನೆಯಲಲ್ಲಿ ಯಶವಂತ್ ಮಹೇಶ್ ಚಿನ್ನದ ಪದಕ ಪಡೆದಿದ್ದಾರೆ. ಅಮೆರಿಕದ  ಫೀನಿಕ್ಸ್‌ನಲ್ಲಿ ವಾರ್ಷಿಕ ಇಂಟೆಲ್ ಇಂಟರ್‌ನ್ಯಾಶನಲ್ ಸೈನ್ಸ್ ಆಫ್ ಎಂಜಿನಿಯರಿಂಗ್ ಫೇರ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕಿರಿಯ ವಿದ್ಯಾರ್ಥಿ ಅನ್ನೋ ಹೆಗ್ಗಳಿಕೆಗೂ ಯಶವಂತ್ ಮಹೇಶ್ ಪಾತ್ರರಾಗಿದ್ದರು. ಕರ್ನಾಟಕದ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನೀಡುವ ಜ್ಯೂನಿಯರ್ ವಿಜ್ಞಾನಿ ಪ್ರಶಸ್ತಿಯನ್ನು ಯಶವಂತ್ ಮಹೇಶ್ ಪಡೆದುಕೊಂಡಿದ್ದಾರೆ. ಇದೀಗ ಮಹೇಶ್ ಸಾಧನೆಯನ್ನು ಪೋಷಕರು, ಕುಟುಂಬಸ್ಥರು ಕೊಂಡಿದ್ದಾರೆ. ಅಮೆರಿಕದಲ್ಲಿ ಡಾಕ್ಟರೇಟ್ ಅಧ್ಯಯನದ ಖರ್ಚು ವೆಚ್ಚ ಸಂಪೂರ್ಣವಾಗಿ ಇದೇ ಫೆಲೋಶಿಪ್‌ನಿಂದ ಸುಲಭವಾಗಲಿದೆ.


ಛಲಬಿಡದೆ ತಮ್ಮ ಗುರಿಯೆಡೆಗೆ ಸಾಗಿದರೆ ಸಾಧನೆ ಅಸಾಧ್ಯವಲ್ಲ ಎಂಬುದನ್ನು ಯಶವಂತ್ ಮಹೇಶ್ ತೋರಿಸಿಕೊಟ್ಟಿದ್ದಾರೆ.ಇಂದಿನ ಯುವಕರಿಗೆ ಮತ್ತು ಶಾಲಾ ಮಕ್ಕಳಿಗೆ ಯಶವಂತ್ ಮಾದರಿಯಾಗಲಿ ಎಂಬುದೇ ನಮ್ಮ ಆಶಯ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


No comments: