06 May 2023

ಮತದಾರನೇ ಮಹಾಪ್ರಭು...

 



ನಮ್ಮ ರಾಜ್ಯದಲ್ಲಿ ಐದು ವರ್ಷಕ್ಕೊಮ್ಮೆ ಬರುವ ಮತದಾನದ ಜಾತ್ರೆ ಬಂದಿದೆ.ಈ ಜಾತ್ರೆಯಲ್ಲಿ ನಾವೆಲ್ಲರೂ ಸಂಭ್ರಮ ಸಡಗರದಿ ಪಾಲ್ಗೊಂಡು ಜಾತ್ರೆಯ ಯಶಸ್ವಿಯಾಗಿಸಬೇಕಿದೆ. ಇದು ಚುನಾವಣಾ ಹಬ್ಬವೂ ಹೌದು.ಹಲವಾರು ಜನ ಇದನ್ನು ಯುದ್ಧ ,ಕುರುಕ್ಷೇತ್ರ ಜಂಗೀಕುಸ್ತಿ ಎಂತಲೂ ಕರೆಯುತ್ತಾರೆ. ಯಾವ ಹೆಸರಿನಿಂದ ಕರೆದರೂ ಇದು ಪ್ರಜಾಪ್ರಭುತ್ವದ ಒಂದು ಮಹತ್ವದ ಘಟ್ಟ ಎಂಬುದನ್ನು ಮರೆಯಬಾರದು.
ಈ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರನೇ ಮಹಾಪ್ರಭು .ಇತ್ತೀಚಿನ ದಿನಗಳಲ್ಲಿ ಈ ಪ್ರಭು ಯಾವ ರೀತಿಯಲ್ಲಿ ಭ್ರಷ್ಟಾನಾಗಿದ್ದಾನೆಂದರೆ ಓಟು ಕೇಳುವ ಅಭ್ಯರ್ಥಿಗಳು ತಮ್ಮ ಊರು,ಮನೆಗೆ ಬಂದರೆ ಅವರ   ಕೈ ಬಾಯಿ ನೋಡುತ್ತಾರೆ .ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಕುಕ್ಕರ್, ಸ್ಟೋವ್, ಟೀವಿ,ಸೈಟ್, ಹಣ ಇತ್ಯಾದಿಗಳು ಮತದಾರರ ಕೈಸೇರಿವೆ ಎಂಬ ವರದಿ ಓದುತ್ತಿದ್ದೇವೆ.ಮತದಾರ ಮಹಾಪ್ರಭುವೆ ದಯವಿಟ್ಟು ನಿನ್ನನ್ನು ನೀ ಮಾರಿಕೊಳ್ಳದಿರು.

ಮಾರಿಕೊಳ್ಳದಿರು
ನೋಟಿಗಾಗಿ ನಿನ್ನ
ಓಟನ್ನು |
ಅರ್ಹ ಅಭ್ಯರ್ಥಿಗೆ
ತಪ್ಪದೇ ಒತ್ತು
ಇ. ವಿ .ಎಮ್
ಬಟನ್ನು ||

ನಮ್ಮ ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಅಮೃತಮಹೋತ್ಸವ ಆಚರಿಸುತ್ತಿರುವ ಈ ಪರ್ವ ಕಾಲದಲ್ಲಿ  ನೂರು ಪ್ರತಿಶತ ಇರಲಿ, ಶೇಕಡಾ75 ಮತದಾನ  ದಾಟದಿರುವುದು ಮತದಾನದ ಬಗ್ಗೆ ನಮ್ಮ ನಿರಾಸಕ್ತಿಯನ್ನು ತೋರಿಸುತ್ತದೆ.
ಮತದಾನದ ದಿನ ಸಾರ್ವತ್ರಿಕ ರಜೆಯ ಮಜ ಸವಿಯಲು ಮತದಾನದ ಬದಲು ಪ್ರವಾಸ ಹೋಗುವ ಮಹಾನುಭಾವರಿಗೇನು ಕಮ್ಮಿಯಿಲ್ಲ.

ಮಾಡೋಣ ನಾವೆಲ್ಲರೂ
ಕಡ್ಡಾಯವಾಗಿ
ಮತದಾನ|
ಎತ್ತಿ ಹಿಡಿಯೋಣ
ನಮ್ಮ ಸಂವಿಧಾನ||

ಇನ್ನೂ ಮತದಾನ ಮಾಡುವ ಕೆಲವರು ದುಡುಕಿ ಆಮಿಷಗಳಿಗೆ ಬಲಿಯಾಗಿ ತಮ್ಮ ಮತ ಮಾರಿಕೊಂಡು ಐದು ವರ್ಷಗಳ ಕಾಲ ಯಾಮಾರಿಬಿಟ್ಟಿರುತ್ತಾರೆ. ಅದಕ್ಕೆ ಹೇಳುವುದು ಮತ ಮಾರಬೇಡಿ.

ನಿಮ್ಮ ಮತವನ್ನು
ಯಾರಿಗೂ
ಮಾರಬೇಡಿ|
ಆಮಿಷಗಳಿಗೆ ಮರುಳಾಗಿ
ಯಾಮಾರಬೇಡಿ||

ಪ್ರಜಾಪ್ರಭುತ್ವದಲ್ಲಿ ನಮ್ಮ ಮತವು ಅಮೂಲ್ಯವಾದುದು ನಮ್ಮ ಸಂವಿಧಾನ ನೀಡಿದ ಹಕ್ಕುಗಳ ಪಡೆಯಲು ನಾವು ಕರ್ತವ್ಯ ಮಾಡಲೇಬೇಕು ಆದ್ದರಿಂದ ನಾವೆಲ್ಲರೂ ಮತದಾನದ ಕರ್ತವ್ಯ ಮಾಡಿ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕಿದೆ.

ಮತದಾನ ಮಾಡಿ,
ಮಾಡಿದರೆ ನಮ್ಮ
ಕರ್ತವ್ಯ|
ಸುಂದರವಾಗುವುದು
ನಮ್ಮ ಭವಿತವ್ಯ||

ಆದ್ದರಿಂದ ಸಬೂಬು ಹೇಳದೆ, ಮತದಾನದ ದಿನ ಮತಗಟ್ಟೆಗೆ ತೆರಳಿ ನಮ್ಮ ಮನಸ್ಸಾಕ್ಷಿಯ ಮತ ಹಾಕೋಣ ಉತ್ತಮ ನಾಯಕರ ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಯಶಸ್ಸು ಕೋರೋಣ.

ತಪ್ಪದೇ ನಾವು
ಚಲಾವಣೆ ಮಾಡಿದರೆ
ನಮ್ಮ ಮತ|
ಮುಂದೆ ನಮ್ಮ
ನಾಡಿಗಾಗುವುದು ಹಿತ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು
9900925529


No comments: