15 May 2023

ವಿಶ್ವಗುರು ಭಾರತ...

 





ಭಾರತ ದೇಶವು ವಿಶ್ವಗುರುವಾಗಲು ಯತ್ನಿಸುತ್ತಿರುವ ಇಂದಿನ ಪರ್ವಕಾಲದಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆ .


ಅನಾದಿ ಕಾಲದಿಂದಲೂ ನಮ್ಮ ದೇಶವು ಇತರೆ ದೇಶಗಳಿಗೆ ಕಲೆ, ಸಂಸ್ಕೃತಿ, ಸಂಸ್ಕಾರ, ಶಿಕ್ಷಣ, ಮೌಲ್ಯ ಮುಂತಾದ ವಿಷಯಗಳಲ್ಲಿ ಮಾದರಿಯಾಗಿ ನಿಂತಿದೆ. ವಿದೇಶಿ ವಿದ್ವಾಂಸರು, ಕವಿಗಳು, ದಾರ್ಶನಿಕರು ನಮ್ಮ ದೇಶದ ಹಿರಿಮೆ ಗರಿಮೆ ಕಂಡು ಮುಕ್ತ ಕಂಠದಿಂದ ಹಾಡಿ ಹೊಗಳಿದರು. ಅಮೃತ ಆತ್ಮರು ಅಮೃತ ಪುತ್ರರಾದ ನಮ್ಮನ್ನು ಬ್ರಿಟೀಷರು  ನಮ್ಮ ಅಮೂಲ್ಯವಾದ ಶಿಕ್ಷಣ ಪದ್ದತಿ, ನಮ್ಮ ಸಂಪ್ರದಾಯ ,ಸಂಸ್ಕೃತಿಗಳ ನಾಶ ಮಾಡುತ್ತಾ ನಮ್ಮ ಬಗ್ಗೆ ಅವಹೇಳನ ಮಾಡುತ್ತಾ ನಮ್ಮನ್ನು ಕೀಳಾಗಿ ಕಂಡು ಪಾಶ್ಚಾತ್ಯ ದೇಶಗಳ ಸಂಸ್ಕೃತಿ ಹೆಚ್ಚು ಎಂದು ತೋರಿಸುವ ನಾಟಕವಾಡಿದರು. ಚಿನ್ನ ಎಂದಿದ್ದರೂ ಚಿನ್ನವೇ ಪಾಶ್ಚಿಮಾತ್ಯರು ತಮ್ಮ ಆಳ್ವಿಕೆಯನ್ನು ಅಂತ್ಯ ಮಾಡಿ ಅವರ ದೇಶಕ್ಕೆ ತೆರಳಿದ ಮೇಲೆ ಕ್ರಮೇಣವಾಗಿ ನಮ್ಮತನ ಬೆಳಕಿಗೆ ಬಂದು ಈಗ ಭಾರತವು ಪುನಃ ವಿಶ್ವ ಗುರುವಿನ ಸ್ಥಾನ ಅಲಂಕರಿಸಲು ಸಿದ್ದವಾಗಿದೆ. 

ದೇಶದ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ, ಆರೋಗ್ಯ, ಜೀವನಮಟ್ಟ , ತಲಾಆದಾಯ , ಜಿಡಿಪಿ , ಹ್ಯಾಪಿನೆಸ್ ಇಂಡೆಕ್ಸ್  ಮುಂತಾದ ಅಂಶಗಳು  ಯಾವುದೇ ದೇಶದ ಔನ್ನತ್ಯ ಸೂಚಿಸುವ ಅಂಶಗಳೆಂದು ಎಲ್ಲರೂ ಒಪ್ಪುತ್ತಾರೆ. ಅದರ ಜೊತೆಯಲ್ಲಿ ಸಾಹಿತ್ಯ ಸಂಸ್ಕೃತಿಗಳು ಸಹ ದೇಶವು ವಿಶ್ವಗುರುವಾಗಲು ನಿರ್ಧಾರಕ ಅಂಶಗಳು ಎಂದರೆ ತಪ್ಪಾಗಲಾರದು.

ವೇದಗಳ ಕಾಲದಿಂದಲೂ 

ನಮ್ಮ ದೇಶದ ಹಲವಾರು ಭಾಷೆಗಳಲ್ಲಿ ಉತ್ಕೃಷ್ಟ ಸಾಹಿತ್ಯ ರಚನೆಯಾಗಿರುವುದು ನಮ್ಮ ದೇಶದ ಹಿರಿಮೆಯನ್ನು ಸೂಚಿಸುತ್ತದೆ. ರವೀಂದ್ರನಾಥ ಟ್ಯಾಗೋರ್ ರವರಂಥವರು ಸಾಹಿತ್ಯಕ್ಕೆ ನೋಬಲ್ ತಂದುಕೊಟ್ಟಾಗ ವಿಶ್ವ ಮತ್ತೊಮ್ಮೆ ನಮ್ಮತ್ತ ನೋಡಿತು. ಆಧುನಿಕ ಕಾಲದಲ್ಲೂ ಹಲವಾರು ಕವಿಗಳು ಲೇಖಕರು ನಮ್ಮ ದೇಶದ ಜನಜೀವನವನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಡುತ್ತಿದ್ದಾರೆ. 

ಒಂದು ಕಾಲದಲ್ಲಿ ಪಾಶ್ಚಿಮಾತ್ಯರಿಗೆ ಭಾರತವೆಂದರೆ ಹಾವಾಡಿಗರ , ಬುದ್ಧಿರಹಿತ ಜನ ಎಂಬ ಭಾವನೆಗಳನ್ನು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ವಿದ್ವತ್ಪೂರ್ಣ ಭಾಷಣ ಮತ್ತು ಪುಸ್ತಕಗಳಿಂದ ಹೋಗಲಾಡಿಸಿ ಭಾರತೀಯರು ಅಮರ ಆತ್ಮರು  ಅಮೃತ ಪುತ್ರರು ಎಂದು ಸಾರಿದರು. 

ಸಾಹಿತ್ಯದ ಮೂಲಕ ಕಥೆ, ಕವನ, ಕಾದಂಬರಿಗಳ ರೂಪದಲ್ಲಿ ಸಾಹಿತಿಗಳು ನಮ್ಮ ನೆಲ ,ಜಲ , ಸಂಸ್ಕೃತಿ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ವಿಶ್ವವನ್ನು ತಲುಪಿ ನಮ್ಮ ದೇಶದ ಬಗ್ಗೆ ಹೆಮ್ಮೆಯ ಭಾವನೆ ಮೂಡುತ್ತದೆ. ಈ ಮೂಲಕ ಭಾರತವು ವಿಶ್ವಗುರುವಾಗಲು ಸಾಹಿತ್ಯವೂ ತನ್ನದೇ ಆದ ಯೋಗದಾನ ನೀಡುತ್ತದೆ ಎಂದು ಹೇಳಬಹುದು.



ಸಿ ಜಿ ವೆಂಕಟೇಶ್ವರ

ತುಮಕೂರು.


No comments: