ಬುದ್ದನ ಚಿಂತನೆಗಳು...
ಧಾರ್ಮಿಕ ಮುಖಂಡರು ಹೇಗಿರಬೇಕು...
ಇತ್ತೀಚೆಗೆ ಪಾಲ್ ಕಾರಸ್ ರವರು ರಚಿಸಿರುವ "ಬುದ್ಧೋಪದೇಶ" ಪುಸ್ತಕ ಓದಿದೆ .ನೂರಾರು ಮರು ಮುದ್ರಣ ಕಂಡ ಈ ಕೃತಿಯನ್ನು ಎಲ್ಲರೂ ಪದೇ ಪದೇ ಓದಬೇಕಾದ ಪುಸ್ತಕ.
ಈ ಪುಸ್ತಕದ ಎಲ್ಲಾ ಅಧ್ಯಾಯಗಳು ಬಹಳ ಉತ್ತಮವಾಗಿದ್ದರೂ ಮೂವತ್ತಮೂರನೇ ಅಧ್ಯಾಯ ನನ್ನನ್ನು ಬಹಳ ಸೆಳೆಯಿತು.ಅದಕ್ಕೆ ಇತ್ತೀಚಿನ ದಿನಗಳಲ್ಲಿ ಕೆಲ ಧಾರ್ಮಿಕ ಕೇಂದ್ರಗಳ ಮತ್ತು ಕೆಲ ಧರ್ಮಗುರುಗಳ ನಡವಳಿಕೆಗಳು ಕಾರಣವಾಗಿದ್ದಿರಬಹುದು...
ಆ ಅಧ್ಯಾಯದಲ್ಲಿ ಭಿಕ್ಕುಗಳೆಲ್ಲ ಬುದ್ದನ ಬಳಿ ಬಂದು ಓ ಪ್ರಭುವೆ ಪ್ರಾಪಂಚಿಕ ಬದುಕನ್ನ ತೊರೆದವರು ಮಹಿಳೆಯರನ್ನು ಹೇಗೆ ನೋಡಬೇಕು ಎಂದು ಕೇಳಿದಾಗ ಬುದ್ದನ ಉತ್ತರ ಈ ಕೆಳಗಿನಂತೆ ಇದೆ....
ಮಹಿಳೆಯರತ್ತ ಗಮನಹರಿಯುವುದರ ವಿರುದ್ಧ ರಕ್ಷಿಸಿಕೊಳ್ಳಿ.
ಮಹಿಳೆಯರನ್ನು ನೋಡಿದರೂ ಸಹ ನೋಡದಂತಿರಬೇಕು ಮತ್ತು ಆಕೆಯೊಂದಿಗೆ ಸಂಭಾಷಣೆ ಸಲ್ಲದು.
ಒಂದೊಮ್ಮೆ ಆಕೆಯೊಂದಿಗೆ ಮಾತನಾಡಲೇ ಬೇಕಾದರೆ ಸ್ವಚ್ಛವಾದ ಮನಸ್ಸಿರಬೇಕು. ಈ. ಜಗತ್ತಿನಲ್ಲಿ ಕಮಲದ ಎಲೆಯಂತೆ ಕಳಂಕರಹಿತನಾಗಿರಬೇಕು ಮತ್ತು ಕೆಸರಿನಲ್ಲಿ ಬೆಳದಿದ್ದರೂ ನಿಷ್ಕಳಂಕತೆಯಿಂದಿರಬೇಕು ಎಂದು ಆಲೋಚಿಸಬೇಕು. ಮಹಿಳೆಗೆ ವಯಸ್ಸಾಗಿದ್ದರೆ ಆಕೆಯನ್ನು ನಿನ್ನ ತಾಯಿಯಂತೆ ಕಂಡು
ಗೌರವಿಸು.ಆಕೆ ಚಿಕ್ಕವಳಾಗಿದ್ದರೆ ನಿನ್ನ ತಂಗಿಯಂತೆ ನೋಡು, ಆಕೆ ಇನ್ನೂ
ಬಾಲಕಿಯಾಗಿದ್ದರೆ ನಿನ್ನ ಮಗುವಿನಂತೆ ನೋಡು.
ಸಾಧು ಸಂತರು ಮಹಿಳೆಯನ್ನು ಮಹಿಳೆಯೆಂದೇ ನೋಡಿದರೆ ಅಥವಾ ಅವಳನ್ನು ಮಹಿಳೆಯೆಂದೇ ಮುಟ್ಟಿದರೆ ತಾನು ಕೈಗೊಂಡ ಪ್ರಮಾಣವನ್ನು ಮುರಿದಂತೆ ಮತ್ತು ಆತ ತಥಾಗತನ ಶಿಷ್ಯನಾಗಿ ಇನ್ನೊಂದೂ ಉಳಿಯುವುದಿಲ್ಲ.
ಪುರುಷನಲ್ಲಿ ಕಾಮನೆಗಳ ಶಕ್ತಿ ಅತ್ಯಧಿಕ. ಅದೇ ಪ್ರಕಾರ ಅದಕ್ಕೆ ಹೆದರುತ್ತಾರೆ. ಆಗ ಶ್ರದ್ಧೆಯಿಂದ ದೃಢ ಮನಸ್ಸಿನ ಬಾಣವನ್ನು ತೆಗೆದುಕೊಳ್ಳಬೇಕು.ಆ ಬಾಣದ ಹರಿತವಾದ ತುದಿಯಲ್ಲಿ ಜ್ಞಾನವೆಂಬುದಿರಲಿ.
ನಿಮ್ಮ ಶಿರಗಳನ್ನು ಸತ್ಯಶೀಲ ಆಲೋಚನೆಗಳ ಶಿರಸ್ತ್ರಾಣದಿಂದ ಮುಚ್ಚಿಕೊಳ್ಳಿ
ಮತ್ತು ಪಂಚೇಂದ್ರಿಯಗಳ ವಿರುದ್ಧ ಇರುವ ಖಚಿತ ನಿಶ್ಚಯದೊಂದಿಗೆ ಹೋರಾಡಿ.
ಕಾಮಾಂಧತೆ ಪುರುಷನ ಹೃದಯವನ್ನು ಮರೆಮಾಚುತ್ತದೆ. ಮಹಿಳೆಯ ಸೌಂದರ್ಯದಿಂದ ಗೊಂದಲಗೊಂಡಾಗ ಮನಸ್ಸು ಮಂಕಾಗುತ್ತದೆ.
ನಿಮ್ಮ ಇಂದ್ರಿಯ ಬಯಕೆಗಳನ್ನು ಪ್ರೋತ್ಸಾಹಿಸುವ ಬದಲು ನಿಮ್ಮ ಎರಡೂ ಕಣ್ಣುಗಳನ್ನು ನಿಗಿನಿಗಿ ಕಾಯಿಸಿದ ಕಬ್ಬಿಣದ ಸಲಾಕೆಗಳಿಂದ ಇರಿದುಕೊಳ್ಳುವುದು ವಾಸಿ. ಮಹಿಳೆಯರನ್ನು ಕಾಮಾಂಧತೆ ವಿಷಯಾಸಕ್ತಿಯಿಂದ ನೋಡುವುದಕ್ಕಿಂತ ಈ ಪಶ್ಚಾತ್ತಾಪವೇ ಸರಿಯಾದ ಕ್ರಮ.
ಮಹಿಳೆಯೊಂದಿಗೆ ಮಲಗಿ ನಿಮ್ಮ ವಿಷಯಾಸಕ್ತ ಆಲೋಚನೆಗಳನ್ನು ಉದ್ದೀಪಿಸಿಕೊಳ್ಳುವ ಬದಲು ಹಸಿದ ಹೆಬ್ಬುಲಿಯ ಬಾಯಿಗೆ ಬೀಳುವುದು ವಾಸಿ ಅಥವಾ ಮರಣದಂಡನೆ ಕೊಡುವ ಹಂತಕನ ಕತ್ತಿಯ ಕೆಳಗೆ ಸಿಕ್ಕುವುದು ವಾಸಿ.
ಜಗದ ಮಹಿಳೆಯರಿಗೆ ತಮ್ಮ ರೂಪ ಸೌಂದರ್ಯ ತೋರಿಸಲು ಬಹು ಕುತೂಹಲ, ಅವರು ನಡೆಯುತ್ತಿರಲಿ, ನಿಂತಿರಲಿ, ಕುಳಿತಿರಲಿ ಅಥವಾ ಮಲಗಿರಲಿ. ಅದೇ ಅವರ ಹಂಬಲ, ಅವಳ ಚಿತ್ರ ತೆಗೆದಾಗಲೂ ತನ್ನ ಸೌಂದರ್ಯದ ರಮಣೀಯ ಆಕರ್ಷಣೆ ಆದರಲ್ಲಿ ಬಿಂಬಿಸಬೇಕೆಂಬುದೇ ಆಕೆಯ ಬಯಕೆ. ಇದರಿಂದ ಪುರುಷರ ಸ್ಥಿರ ಹೃದಯನ್ನು ಗೆಲ್ಲಬಹುದೆಂಬ ತವಕ
ಹಾಗಾದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಎಂದು ಬುದ್ದ ಬಿಕ್ಕುಗಳನ್ನು ಪ್ರಶ್ನಿಸುತ್ತಾ ಬುದ್ಧ ಹೀಗೆಂದರು..
ಅವಳ ಕಣ್ಣೀರನ್ನಾಗಲಿ ಅವಳ ನಗೆಯನ್ನಾಗಲಿ ಶತ್ರುವಿನಂತೆ ನೋಡಬೇಕು.
ಆಕೆಯ ಬಳುಕಿ ಬಾಗುವ ಆಕಾರ, ತೂಗಾಡುವ, ಮರುಳು ಮಾಡುವ ಬಾಹುಗಳು ಮತ್ತವಳ ಸಿಕ್ಕು ಬಿಡಿಸಿದ ಹರಿ ಬಿಟ್ಟ ಕೂದಲುಗಳು, ಪುರುಷನ ಹೃದಯವನ್ನು ಬಲೆಗೆ ಬೀಳಿಸುವ ಉದ್ದೇಶದಿಂದಲೇ ವಿನ್ಯಾಸಿಸಲಾಗಿದೆ ಎಂದೇ ಪರಿಗಣಿಸಿ. ಆದ್ದರಿಂದ ನಾನೇನು ಹೇಳುತ್ತೇನೆಂದರೆ ನಿಮ್ಮ ಮನಸ್ಸನ್ನು ನಿಯಂತ್ರಿಸಿ.
ಅದಕ್ಕೆ ಮಾತ್ರ ಲಗಾಮಿಲ್ಲದ ಪರವಾನಗಿಯನ್ನು ಕೊಡಬೇಡಿ...
ಬುದ್ಧನ ಈ ಸಂದೇಶ ಓದಿದಾಗ ಬೇಡ ಎಂದರೂ ಪ್ರಸ್ತುತ ಸಮಾಜದಲ್ಲಿನ ಕೆಲ ಧಾರ್ಮಿಕ ಮುಖಂಡರ ಚಿತ್ರಗಳು ಕಣ್ಣ ಮುಂದೆ ಬಂದವು...ನಿಮಗೂ ಬಂದಿರುತ್ತದೆ ಅಲ್ಲವೇ? ಮೇಲಿನ ಎಲ್ಲಾ ಸಲಹೆ ಸೂಚನೆಗಳನ್ನು ಸಾಮಾನ್ಯ ಜನರು ಪಾಲಿಸಿದರೂ ತಪ್ಪಿಲ್ಲ.ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುವ ಅನೈತಿಕ ಸಂಬಂಧಗಳ ಪರಿಣಾಮಗಳು, ಮಹಿಳೆಯ ಮೇಲೆ ನಡೆಯುವ ಅಮಾನುಷ ದೌರ್ಜನ್ಯಗಳನ್ನು ಗಮನಿಸಿದಾಗ ಸರ್ವರೂ ಬುದ್ಧನ ಈ ಮೇಲಿನ ಮಾತುಗಳನ್ನು ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಸಮಾಜ ಸ್ವಲ್ಪ ಮಟ್ಟಿಗಾದರೂ ಸುಧಾರಿಸಬಹುದೇನೋ ಎಂಬ ಆಶಾವಾದ ನನ್ನದು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
No comments:
Post a Comment