ಪುಸ್ತಕ ವಿಮರ್ಶೆ...
ಕುರುವ್ಗಲ್ಲು...
ಹಾಲ್ಪ್ ಸರ್ಕಲ್ ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಡಾ ಮಾರುತಿ ಎನ್ ಎನ್ ರವರ "ದ್ಯಾಮವ್ವನ ಮಗ" ಕಥೆ ಕೇಳಿ ಅವರ ಪರಿಚಯ ಮಾಡಿಕೊಂಡು ಕುರುವ್ಗಲ್ಲು ಪುಸ್ತಕ ತಂದು ಓದಿದೆ.
ಸಪ್ನಾ ಬುಕ್ ಹೌಸ್ ನವರು ಪ್ರಕಟಿಸಿದ ಕುರುವ್ಗಲ್ಲು ವಿಭಿನ್ನವಾದ ಶೀರ್ಷಿಕೆಯಿಂದ ಗಮನಸೆಳೆವ ಕಥಾಸಂಕಲನ. ಈ ಪುಸ್ತಕವು ಓದುಗರನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂದು ಹೇಳಬಹುದು.ಇಲ್ಲಿ ಗ್ರಾಮೀಣ ಸಮಾಜದ ಚಿತ್ರಣವಿದೆ. ನಗರದ ಸಂಕೀರ್ಣವಾದ ಬದುಕಿನ ನೋಟವಿದೆ. ಶತಮಾನಗಳಿಂದ ಅಳಿಯದೇ ಈಗಲೂ ಸಮಾಜದಲ್ಲಿ ಅಲ್ಲಲ್ಲಿ ಕಾಡುವ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ನೋವಿನ ಕಥೆಯಿದೆ.
ಡಾ. ಮಾರುತಿ ಎನ್.ಎನ್ ರವರು ಹುಟ್ಟಿದ್ದು, ಬೆಳೆದಿದ್ದು ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿ, ಪದವಿ ಪೂರ್ವ ಶಿಕ್ಷಣಕ್ಕೆಂದು ತುಮಕೂರು ನಗರಕ್ಕೆ ಬಂದವರು ಇಪ್ಪತ್ತೆರಡು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಉನ್ನತ ಶಿಕ್ಷಣವನ್ನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪಡೆದ ಇವರು ರಸಾಯನಶಾಸ್ತ್ರದಲ್ಲಿ, ಮನೋವಿಜ್ಞಾನದಲ್ಲಿ, ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕ್ಷಣದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ ಇವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರವೂ ಲಭಿಸಿದೆ. ಮನೋವಿಜ್ಞಾನದ ವಿಷಯದಲ್ಲಿ ಸಂಶೋಧನೆಯಲ್ಲೂ ತೊಡಗಿಕೊಡಿದ್ದಾರೆ. ಪ್ರಸ್ತುತ ಪ್ರತಿಷ್ಠಿತ ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಹೊಂದಿರುವ,
ಶೈಕ್ಷಣಿಕ ಮನೋವಿಜ್ಞಾನ ಮತ್ತು ಶೈಕ್ಷಣಿಕ ತಂತ್ರಶಾಸ್ತ್ರದಲ್ಲಿ ಹೆಚ್ಚಿನ ಒಲವಿರುವ ಇವರು ನೂರಾರು ವಿಚಾರ ಸಂಕಿರಣ, ಪುನಶ್ವೇತನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಪ್ರಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿದ್ದಾಗ ಶ್ರೀಯುತರು ಅನೇಕ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಗಳನ್ನು ಸಂಘಟಿಸಿರುತ್ತಾರೆ.
ಹೊಸದನ್ನು ಕಲಿಯಬೇಕು, ಇತರರಿಗೆ ಕಲಿಸಬೇಕು ಎಂಬ ಮಹದಾಸೆಯಿಂದ ಪ್ರತಿದಿನ ತುಡಿಯುವ ಇವರು ಯೂಟ್ಯೂಬ್ ಚಾನೆಲ್ ಮೂಲಕ ವಿಚಾರಧಾರೆಗಳನ್ನು ಕಲಿಕಾಸಕ್ತರಿಗೆ ಪಸರಿಸುತ್ತಿದ್ದಾರೆ.
ಇವರ ಚೊಚ್ಚಲ ಕಥಾ ಸಂಕಲನ "ನಿಗೂಢ ನಿಶಾಚರಿಗಳು" ಓದುಗರಿಂದ ಮೆಚ್ಚುಗೆ ಪಡೆದ ಕೃತಿಯಾಗಿದೆ.
ಪ್ರಸ್ತುತ ಕಥಾ ಸಂಕಲನದಲ್ಲಿ ಒಟ್ಟು ಒಂಭತ್ತು ಕಥೆಗಳಿವೆ. ಎಲ್ಲಾ ಕಥೆಗಳು ಉತ್ತಮವಾಗಿವೆ
ಮೂರು ಅನುಮಾನ,ಹಳೇಪಾತ್ರೆ ರಾಮ್ಯಾ,ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು, ಕರುವಲ್ಲು ಇವು ನನ್ನನ್ನು ಕಾಡಿದ ಕಥೆಗಳು.
ಈ ಕೃತಿಗೆ ಇಜಯ ಖ್ಯಾತಿಯ ಪೂರ್ಣಿಮಾ ಮಾಳಗಿಮನಿ ರವರು ಮುನ್ನುಡಿ ಬರೆದಿದ್ದು ನಾಡೋಜ ಕಮಲಾ ಹಂಪನಾ ಬೆನ್ನುಡಿ ಬರೆದಿದ್ದಾರೆ.
ಡಾ.ಮಾರುತಿ ರವರು ತಮ್ಮ ಕರುವ್ಗಲ್ಲು ಕಥಾ ಸಂಕಲನ ಓದುವಾಗ ಅದೇ ಮಾದರಿಯ ನನ್ನ ಬಾಲ್ಯದ ಯರಬಳ್ಳಿಯಲ್ಲಿ ಕಂಡ "ಬಿದ್ ಕಲ್ ರಂಗಪ್ಪ "ನ ನೆನಪಾಯಿತು.
ಈ ಕಥಾ ಸಂಕಲನದ ಪ್ರತಿಯೊಂದು ಕಥೆಯೂ ವಿಭಿನ್ನವಾಗಿ ಮೂಡಿ ಬಂದಿವೆ.
"ದ್ಯಾಮವ್ವನ ಮಗ" ಕಥೆಯನ್ನು ಓದಿದಾಗ ಇತ್ತೀಚಿಗೆ ಪತ್ರಿಕೆಯಲ್ಲಿ ದೇವದಾಸಿ ಪದ್ಧತಿ ಬಗ್ಗೆ ಓದಿದ ನೆನಪಾಯಿತು. ದೇವರ ಹೆಸರಿನಲ್ಲಿ ಶೋಷಣೆ ಮಾಡುವ, ಊರಿನ ಕಾಮುಕರ ದೌರ್ಜನ್ಯಕ್ಕೊಳಗಾಗಿ, ಮುತ್ತು ಕಟ್ಟಿಸಿಕೊಳ್ಳುವ ಸಂಪ್ರದಾಯಕ್ಕೆ ಬಲಿಯಾಗುವ ದ್ಯಾಮವ್ವನ ನತದೃಷ್ಟ ಮಗನ ಕಥೆಯನ್ನು ಕಥೆಗಾರರು ಚೆನ್ನಾಗಿ ಚಿತ್ರಿಸಿದ್ದಾರೆ .
ದಾಯಾದಿ ಮತ್ಸರವು ಅನಾದಿ ಕಾಲದಿಂದಲೂ ಇದ್ದದ್ದೆ, ಅಧಿಕಾರಕ್ಕಾಗಿ, ಆಸ್ತಿಗಾಗಿ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯಬಹುದೆನ್ನುವ ಕಟು ಸತ್ಯದ ಅನಾವರಣವನ್ನು "ಹೊಸ ಶಿಕಾರಿ" ಕಥೆಯಲ್ಲಿ ಚಿತ್ರಿಸಿದ್ದಾರೆ.
ರೇಲ್ವೆ ಹಳಿಯ ಪಕ್ಕ ಸ್ಲಮ್ ನಲ್ಲಿ ವಾಸಿಸುವ, ತಮಿಳು ನಾಡಿನಿಂದ ವಲಸೆ ಬಂದ ಕಾರ್ಮಿಕರ ಹೃದಯಸ್ಪರ್ಶಿ ಕಥೆಯಾದ "ಚಿನ್ನ ತಂದವರು" ಕಥೆಯಲ್ಲಿ ಬಡ ಕೂಲಿ ಕಾರ್ಮಿಕರ ಜೀವನಕ್ಕೆ ಹೋರಾಟ ಮಾಡುವ ಪರಿ ಪೋಲೀಸ್ ವ್ಯವಸ್ಥೆಯ ಅಣಕ ಮುಂತಾದವುಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಅಲ್ಲಿಯ ಪಾತ್ರದಾರಿಗಳು ಚಿನ್ನ ತಂದರೆ? ನೀವು ಕಥಾ ಸಂಕಲನ ಓದಿಯೇ ತಿಳಿಯಬೇಕು.
"ಆನಂತ್ಯ"ಕಥೆಯಲ್ಲಿ ಚರಂಡಿ ಶುಚಿ ಮಾಡುವ ಕಾರ್ಮಿಕನ ಧಾರುಣ ಕಥೆಯನ್ನು ಕಟ್ಟಿ ಕೊಟ್ಟಿರುವ ಮಾರುತಿ ರವರು ಸಮಾಜವನ್ನು ಸೂಕ್ಷ್ಮ ವಾಗಿ ಗಮನಿಸಿ ಅವರ ಬದುಕಿನ ಕಷ್ಟಗಳನ್ನು ನಮ್ಮ ಮುಂದೆ ಅನಾವರಣ ಮಾಡಿದ್ದಾರೆ.
''ಮೂರು ಅನುಮಾನ" ಕಥೆಯ ಬಗ್ಗೆ ಹೇಳುವುದಾದರೆ... ಒಂದು ದೇಹ ಬಿದ್ದಿದೆ. ಅದು ಕೊಲೆಯೋ, ಆಕಸ್ಮಿಕ ಸಾವೋ, ಯಾಕೆ, ಹೇಗೆ, ಎಲ್ಲಿ? ಯಾವಾಗ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ನೀವೇ ಆ ಕಥೆಯನ್ನು ಓದಬೇಕಿದೆ.
"ಹಳೇ ಪಾತ್ರೆ ರಾಮ್ಯ"ಕಥೆಯ ಬಗ್ಗೆ ಹೇಳುವುದಾದರೆ ರಾಮ್ಯ ಸೈಕಲ್ ಮೇಲೆ ಪಾತ್ರೆಗಳ ಬುಟ್ಟಿಯನ್ನಿಟ್ಟುಕೊಂಡು ಊರೂರು ತಿರುಗುತ್ತ ಜೀವನ ಸಾಗಿಸುವ ನಿರುಪದ್ರವಿ ಅಲೆಮಾರಿ. ರಾಮ್ಯಾ ತನ್ನ ಅಣ್ಣ ಮತ್ತು ಅತ್ತಿಗೆಯರಿಗಾಗಿ ಪಡುವ ಕಷ್ಟ, ಮಾಡುವ ತ್ಯಾಗ, ಒಂಟಿಯಾಗೇ ಇರುತ್ತೇನೆಂದರೂ ಬಿಡದ. ಬಂಧು ಬಳಗದ ಒತ್ತಾಯಕ್ಕೆ ಮಣಿದು ಮದುವೆಯಾಗಿ, ಮಡದಿಯ ಅನೈತಿಕ ಸಂಬಂಧದಿಂದ ಅವನ ಜೀವನ ಹೇಗೆ ಜೀವನ ಜಟಿಲವಾಗುತ್ತಲೇ ಹೋಗುವುದನ್ನು ಓದುವ ನಮಗೆ ರಾಮ್ಯಾನ ಬಗ್ಗೆ ಅನುಕಂಪ ಹುಟ್ಟದೇ ಇರದು.
"ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು" ಕಥೆಯಲ್ಲಿ ಊರವರ ಚುಡಾಯಿಸುವುದರಿಂದ ನೊಂದು ಕೊಳ್ಳುತ್ತಿದ್ದ ಸೂರಣ್ಣ ಕ್ರಮೇಣ ತೃತೀಯ ಲಿಂಗಿಯಾಗಿ ತೆರೆದುಕೊಳ್ಳುವ ಬಗೆ ಮತ್ತು ತೃತೀಯ ಲಿಂಗಿಗಳ ತಳಮಳಗಳನ್ನು ಉತ್ತಮವಾಗಿ ಚಿತ್ರಿಸಿದ್ದಾರೆ.
ಒಟ್ಟಾರೆ ಹೇಳುವುದಾದರೆ ವಿಭಿನ್ನ ಕಥಾ ವಸ್ತುಗಳಿಂದ ಕೂಡಿದ ಮಾರುತಿ ರವರ ಈ ಕಥಾಸಂಕಲನ ಓದುಗರ ಮನಗೆಲ್ಲುತ್ತಲಿದೆ.ನೀವು ಒಮ್ಮೆ ಈ ಕಥೆಗಳನ್ನು ಓದಿಬಿಡಿ.
ಮಾರುತಿಯವರ ಬರಹ ಪಯಣ ಮುಂದುವರೆಯಲಿ ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಹಾರೈಸುವೆ...
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
No comments:
Post a Comment