07 November 2022

ನುಡಿತೋರಣ ನುಡಿ ಜಾತ್ರೆ....


 


ನುಡಿತೋರಣದ ನುಡಿ ಜಾತ್ರೆ. 


ಸಾಮಾಜಿಕ ಮಾಧ್ಯಮಗಳು ನಮ್ಮ ಯುವಪೀಳಿಗೆಯನ್ನು ಹಾಳು ಮಾಡಿವೆ .ನಮ್ಮ ಸಂಸ್ಕೃತಿ ಪರಂಪರೆಯ ನಾಶಕ್ಕೆ ಅವುಗಳೂ ಕಾರಣ ಎಂದು ಆಗಾಗ್ಗೆ ನಾವೆಲ್ಲರೂ ಮಾತನಾಡುತ್ತಾ ಸಮಾಜ  ಮತ್ತು ನಮ್ಮ ಪರಂಪರೆಯ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಮಾತನಾಡುತ್ತೇವೆ ಈ ವಿಷಯದಲ್ಲಿ ಸತ್ಯ ಇದ್ದರೂ ಪೂರ್ಣವಾಗಿ ಸಾಮಾಜಿಕ ಮಾಧ್ಯಮಗಳಿಂದಲೇ  ಜನ ಹಾಳಾಗುತ್ತಿದ್ದಾರೆ ಸಂಸ್ಕೃತಿಯ ನಾಶವಾಗುತ್ತಿದೆ ಎಂದು ಒಪ್ಪಲಾಗದು. ಒಂದು ಚಾಕುವನ್ನು ಹಣ್ಣು ಕತ್ತರಿಸಲೂ ಬಳಸಬಹುದು ಕ್ರೂರ ಚಟುವಟಿಕೆಗಳಿಗೂ ಬಳಸಬಹುದು ಅದು ನಮ್ಮ ವಿವೇಚನೆ ಅವಲಂಬಿಸಿದೆ. 

ಸಾಮಾಜಿಕ ಮಾಧ್ಯಮ ಮನಸ್ಸು ಮಾಡಿದರೆ ನಮ್ಮ ನಾಡು ನುಡಿ ಸಂಪ್ರದಾಯ, ಸಂಗೀತ, ಸಾಹಿತ್ಯ, ಕಲೆ  ,ಅಧ್ಯಾತ್ಮ ಮುಂತಾದ ವಿಷಯಗಳನ್ನು ಚರ್ಚಿಸಿ ತನ್ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬಹುದು ಎಂದು ಹಲವಾರು ಸಾಮಾಜಿಕ ಮಾಧ್ಯಮಗಳು ಕಾರ್ಯಕ್ರಮ ರೂಪಿಸಿ ಕಾರ್ಯ ಪ್ರವೃತ್ತವಾಗಿ  ತಮ್ಮ ಬದ್ಧತೆಯನ್ನು ತೋರುತ್ತಾ ಬಂದಿವೆ.


ಇದಕ್ಕೆ ಉದಾಹರಣೆ ನಾನು ಸದಸ್ಯನಾಗಿರುವ "ನುಡಿ ತೋರಣ" ವಾಟ್ಸಪ್ ಬಳಗ. ಈ ಬಳಗದಲ್ಲಿ ನಮ್ಮ ನಾಡು ನುಡಿಯ ಬಗ್ಗೆ ಅಂಕಣಗಳಿವೆ ,ನಮ್ಮ ತಿಂಡಿ ತಿನಿಸು, ಆಚಾರ ವಿಚಾರ ,ಸಂಗೀತ, ಹಾಸ್ಯ, ಮುಂತಾದ ವಿಷಯಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯುತ್ತದೆ ಆಗಾಗ್ಗೆ ಗೂಗಲ್ ಮೀಟ್ ಬಳಸಿ ಒಂದೆಡೆ ಸೇರಿ ವಿಚಾರ ವಿನಿಮಯ ನಡೆಯುತ್ತದೆ. 


ನಿನ್ನೆ ಭಾನುವಾರ ನನ್ನ ತುರ್ತು ಕಾರ್ಯ ಮುಗಿಸಿ  ಸಂಜೆ  ಮನೆಗೆ ಬಂದು ನುಡಿತೋರಣ ಬಳಗದ ಗೂಗಲ್ ಮೀಟ್ ಲಿಂಕ್ ಒತ್ತಿ ಒಳಪ್ರವೇಶಿಸಿದರೆ ಅಲ್ಲಿ ಜಾನಪದ ಜಾತ್ರೆಯ ಸಡಗರ ರಂಗೇರಿತ್ತು. 

ಮುಂಬೈನಲ್ಲಿ ನೆಲೆಸಿರುವ ಕನ್ನಡತಿ ಮಧು ವಸ್ತ್ರದ್ ರವರು ತಿಂಗಳಿನಿಂದ ತಯಾರಿ ಮಾಡಿಕೊಂಡು ಅಚ್ಚುಕಟ್ಟಾಗಿ  ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಏನುಂಟು ಏನಿಲ್ಲ? ಜನಪದ ಹಾಡುಗಳ ಕಲರವ ,ನಮ್ಮ ಜನಪದ ಉಡುಪುಗಳ ಹಬ್ಬ, ಒಡಪುಗಳ ಸದ್ದು, ಜನಪದ ಹಾಡುಗಳ ಸಂಗೀತ, ಗೀಗಿಪದಗಳ ಸದ್ದು, ಇನ್ನೂ ಎನೇನೋ ...ಒಟ್ಟಾರೆ ಅದೊಂದು ಜನಪದ ಲೋಕ...


ನುಡಿ ತೋರಣ ಬಳಗದ ವತಿಯಿಂದ ಅಂದು  ಜರುಗಿದ ಜಾನಪದ ಜಾತ್ರೆಯು ಮೂರು ಗಂಟೆಗಳಿಗೂ ಅಧಿಕ ಸಮಯವನ್ನು ನಮಗರಿವಿಲ್ಲದೆಯೇ ಪಡೆದು ಯಶಸ್ವಿಯಾಯಿತು ಎನ್ನಬಹುದು.

ಎಷ್ಟು ಜನ ಸೇರಿದ್ದರು ಎಂಬುದು ಮುಖ್ಯವಲ್ಲ ಅದರ ಪರಿಣಾಮ ಮತ್ತು ಪ್ರಯತ್ನ ಪ್ರಶಂಸನೀಯ 

ಮೂವತ್ತಕ್ಕೂ ಅಧಿಕ ಸದಸ್ಯರು ಅತಿ ಸಂಭ್ರಮದಿಂದ ದೇಸೀ ದಿರಿಸುಗಳಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮದ ಯಶಸ್ಸನ್ನು ರುಜುವಾತು ಮಾಡಿದಂತೆನಿಸಿತು. ಎಲ್ಲರೂ ಬಣ್ಣ ಬಣ್ಣದ ವೇಷಭೂಷಣಗಳಿಂದ, ಮುಖದ ತುಂಬ ಸಂತಸದ ನಗೆಯಿಂದ ಕಂಗೊಳಿಸುತ್ತಿದ್ದರು. ಇದು ಕಾರ್ಯಕ್ರಮವು ತನ್ನ ಗಮ್ಯವನ್ನು ಸೇರಿತೆಂಬ ಸಾರ್ಥಕ ಭಾವನೆಯನ್ನು ತಂದಿತು.

ಬಳಗದ ಹೆಮ್ಮೆಯ ಸದಸ್ಯರಾದ 

ಶೈಲಾ ಜಯಕುಮಾರರ ಪ್ರಾಸ್ತಾವಿಕ ನುಡಿಗಳು ನೆನಪಿಟ್ಟುಕೊಳ್ಳುವಷ್ಟು ಸತ್ವಯುತವಾಗಿದ್ದವು. ಅತಿಥಿಗಳಾಗಿ ಬಂದ ಗೌರಮ್ಮನವರು ಮತ್ತು ಆಶಾ ಯಮಕನಮರಡಿಯವರ ಜಾನಪದ ಗಾಯನ ಮೆರುಗು ತಂದಿತು.


ಸುಮನಾ ಹೇರ್ಳೆಯವರ ತಾಳಮದ್ದಳೆಯ ಕುರಿತಾದ ಮಂಡನೆ, ಮಾಧುರಿ ದೇಶಪಾಂಡೆಯವರ ಮಾತುಗಳು, ಈಶ್ವರ ಸಂಪಗಾವಿಯವರ ಒಡಪುಗಳ ಬಗ್ಗೆ ವ್ಯಾಖ್ಯಾನ ಇಷ್ಟವಾದವು. ಕವಿಕುಟುಂಬ, ಶ್ಯಾಮಸುಂದರ್ಜಿ,  ಗಿರಿಜಾ ಇಟಗಿ, ಬನಾಸು, ಸುಮಾ ಸೂರ್ಯ, ಸ್ವರ್ಣ ರಂಗನಾಥ್, ಸಿಹಿಜೀವಿ, ಡಾ. ರುಕ್ಮಿಣಿ, ಜಯಶ್ರೀ ರಾಜು,  ರತ್ನ ಬಡವನಹಳ್ಳಿ, ಕ್ಷಮಾ ರಘುರಾಮ್, ಮಾನಸಾ ಮುಂತಾದವರ ಪ್ರಸ್ತುತಿಗಳು ಗಮನಸೆಳೆದವು. ಚಿನ್ನುಪ್ರಿಯ, ಜಯಶ್ರೀ ರಾಜು ಮುಂತಾದವರ ಉಪಸ್ಥಿತಿ ಜಾತ್ರೆಯ ಮೆರಗು ಹೆಚ್ಚಿಸಿತು.


ಕಿರಣ್ ಹಿರಿಸಾವೆ, ರವರು ಮತ್ತು ಶ್ರೀಕಾಂತ್ ಪತ್ರೆಮರ ರವರ ನೇತೃತ್ವದ ಸಂಚಾಲನ ಸಮಿತಿಯ ಮಾರ್ಗದರ್ಶನದಲ್ಲಿ ಸಾಗುವ ನುಡಿತೋರಣ ಬಳಗದಲ್ಲಿ ನಾನೂ ಒಬ್ಬ ಹೆಮ್ಮೆಯ ಸದಸ್ಯ ಎಂದು ಹೇಳಿಕೊಳ್ಳಲು ಸಂತಸವಾಗುತ್ತದೆ.

ಮೇಲ್ನೋಟಕ್ಕೆ ಇದು ವಾಟ್ಸಪ್ ಬಳಗದ ಕಾರ್ಯಕ್ರಮ ಆದರೂ ಅದರ ಪರಿಣಾಮ ವಿಸ್ತಾರವಾದುದು. ಈ ಕಾರ್ಯಕ್ರಮಕ್ಕೆ ವಾರದಿಂದ ತಯಾರಿ ಮಾಡಿಕೊಳ್ಳುವಾಗ ಸ್ಪರ್ಧಿಗಳ ಅಭ್ಯಾಸ .ಮಾಡುವಾಗ ಜನಪದ ಗೀತೆಗಳು, ಕಂಜರ,ಡೋಲಕ್, ಚಕ್ಕೆ ಮುಂತಾದ ವಾದ್ಯಗಳ ಪರಿಚಯ ಮನೆಯ ಮಕ್ಕಳಿಗೆ ಆಗಿರುತ್ತದೆ, ಬರೀ ಸಿನಿಮಾ ಹಾಡುಗಳನ್ನೇ ಸಂಗೀತ ಎಂಬ ನಮ್ಮ ಮಕ್ಕಳ ಮನೋಭಾವ ಬದಲಾಗಲು ಇಂತಹ ಕಾರ್ಯಕ್ರಮ ಸಹಾಯಕ .ಇನ್ನೂ ಜನಪದ ಉಡುಪುಗಳು ನಮ್ಮ ಪರಂಪರೆಯ ಪ್ರತೀಕ ನಮ್ಮ ಮುಂದಿನ ಪೀಳಿಗೆಗೆ ಇದರ ಪರಿಚಯ ಮಾಡಿಸಿದ್ದು ಬಳಗದ ಮತ್ತೊಂದು ಪರೋಕ್ಷವಾದ ಯಶಸ್ಸು  ದೂರಗಾಮಿ   ಸಕಾರಾತ್ಮಕ ಹಾಗೂ ಉತ್ತಮ ಪರಿಣಾಮ ಬೀರುತ್ತವೆ  ಎಂಬುದೇ ನನ್ನ ಭಾವನೆ.

 

ಸದಸ್ಯರು, ಅಧ್ಯಕ್ಷರು ಮುಂತಾದ ಪದವಿಗಳನ್ನು ಹೊತ್ತು ನೂರಾರು ಕೋಟಿ ಹಣ ವ್ಯಯ ಮಾಡುವ ಅಕಾಡೆಮಿಗಳು  ಪರಿಷತ್ತುಗಳು  ಮಾಡುವ ಕನ್ನಡ ಕಟ್ಟುವ ಮತ್ತು ಸಂಸ್ಕೃತಿ ಉಳಿಸುವ ಕೆಲಸವನ್ನು ಒಂದು ವಾಟ್ಸಪ್ ಬಳಗ ಸದ್ದಿಲ್ಲದೇ  ಮಾಡುತ್ತಿರುವುದು ಪ್ರಶಂಸನೀಯ. ಬಳಗ ಇಂತಹ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಸಂಘಟಿಸಲಿ . ನಾಡು ನುಡಿ ಸಂಸ್ಕೃತಿ ಉಳಿಸಲು ಯಾವಾಗಲೂ  ಇನ್ನೊಬ್ಬರು ಮಾಡಲಿ   ಎಂಬ ಭಾವನೆಗಳನ್ನು ಬಿಟ್ಟು ನಮ್ಮ ಕೈಲಾದ ಕೆಲಸ ಮಾಡೋಣ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗಗೆ ವರ್ಗಾಯಿಸೋಣ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


  

No comments: