ರಂಗಜ್ಜಿ ಮತ್ತು ಕೆಂಚಜ್ಜಿ
ಆಗ ನಮ್ಮೂರಿಂದ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಸಂಪರ್ಕ ಮಾಡಲು ಇದ್ದ ಬಸ್ ಎರಡೇ ಒಂದು ವಾಣಿ ಬಸ್ ಇನ್ನೊಂದು ಶಾಯಿನ್ ಬಸ್ . ಒಂದು ಬೆಳಿಗ್ಗೆ ಒಂದು ಸಂಜೆ... ನಮ್ಮೂರ ಗೇಟ್ ನಿಂದ ಇತ್ತ ಚಿತ್ರಳ್ಳಿ ವರೆಗೂ ಅತ್ತ ಐಮಂಗಲ ವರೆಗೂ ಮಣ್ಣಿನ ರಸ್ತೆ .ಒಮ್ಮೆ ಬಸ್ಸಿನಲ್ಲಿ ಹತ್ತಿ ಕೂತರೆ ಅದೇ ನಮಗೆಲ್ಲ ಉಚಿತವಾಗಿ ಪೌಡರ್ ಹಾಕುತ್ತಿತ್ತು. ರಸ್ತೆಯ ಗುಂಡಿಗಳ ನಡುವೆ ಧೂಳಿನ ರಸ್ತೆಯಲ್ಲಿ ಡ್ರೈವರ್ ಹರಸಾಹಸ ಪಟ್ಟು ಬಸ್ ಓಡಿಸುವುದನ್ನು ನೋಡಲು ನಾನು ಸೀದಾ ಡ್ರೈವರ್ ಬಳಿ ಹೋಗಿ ನಿಂತುಬಿಡುತ್ತಿದ್ದೆ. ಅದರಲ್ಲೂ ಆಗಿನ ಕಾಲದಲ್ಲಿ ರಿವರ್ಸ್ ಹೊಡೆಯುವ ಮತ್ತು ತಿರುವಿನಲ್ಲಿ ಅವನು ಸ್ಟೇರಿಂಗ್ ತಿರುಗಿಸುವ ರೀತಿ ನೋಡುತ್ತಾ ನಾನು ಮುಂದೆ ಡ್ರೈವರ್ ಆಗಿಬಿಡಬೇಕು ಎಂದು ಕೊಂಡಿದ್ದೆ.
ನಮ್ಮೂರು ಕೊಟಗೇಣಿಯಿಂದ ನಮ್ಮ ಮಾವನವರ ಊರು ಯರಬಳ್ಳಿಗೆ ಹೋಗಲು ನಮಗೆ ಇದೇ ಬಸ್ ಗಳು ಆಧಾರ. ಸಾಮಾನ್ಯವಾಗಿ ಸಾಯಂಕಾಲದ ನಾಲ್ಕು ವರೆಗೆ ನಮ್ಮ ಗೇಟ್ ಗೆ ಬರುತ್ತಿದ್ದ ವಾಣಿ ಬಸ್ ನಲವತ್ತು ಕಿಲೋಮೀಟರ್ ದೂರದ ಯರಬಳ್ಳಿ ಸೇರುತ್ತಿದ್ದದ್ದು ರಾತ್ರಿಯ ಏಳುಗಂಟೆಗೆ ಕೆಲವೊಮ್ಮೆ ಇನ್ನೂ ಲೇಟಾಗಿ ತಲುಪಿದ ಉದಾಹರಣೆ ಇದೆ.
ಒಮ್ಮೆ ಎಂಭತ್ತು ವರ್ಷಕ್ಕೂ ಹೆಚ್ಚು ವಯಸ್ಸಾದ ನಮ್ಮ ರಂಗಜ್ಜಿಯ ಜೊತೆಯಲ್ಲಿ ಯರಬಳ್ಳಿಗೆ ಹೋಗಲು ನಮ್ಮೂರ ಗೇಟ್ ಗೆ ಒಂದು ಕಿಲೋ ಮೀಟರ್ ನಡೆದುಕೊಂಡು ಬಂದು ಬಸ್ ಹತ್ತಿದೆವು . ಬಸ್ ಹತ್ತಿದ ತಕ್ಷಣ ಯಾರೋ ಅಜ್ಜಿಗೆ ಸೀಟ್ ಬಿಟ್ಟು ಕೊಟ್ಟರು. ನಾನು ಎಂದಿನಂತೆ ಡ್ರೈವರ್ ಪಕ್ಕದಲ್ಲಿ ನಿಂತೆ.
ಬಸ್ ಕೆರೆಯಾಗಳ ಹಳ್ಳಿ ಬಿಟ್ಟು, ತೇಕಲವಟ್ಟಿ ಗೊಲ್ಲರಹಟ್ಟಿ ದಾಟಿ ತೇಕಲವಟ್ಟಿಯಲ್ಲಿ ಎಲೆಪೆಂಡಿ ಮತ್ತು ಜನರ ಹತ್ತಿಸಿಕೊಂಡು ಕೊಳಾಳು ಕಡೆ ಧೂಳೆಬ್ಬಿಸುತ್ತಾ ಸಾಗಿತ್ತು. ಯಲಕೂರನಹಳ್ಳಿಯ ಬಳಿ ಬಂದಾಗ ಸೂರ್ಯ ನನ್ನ ಡ್ಯೂಟಿ ಮುಗೀತು ಎಂದು ಹೊರಟೇಬಿಟ್ಟ. ನಮ್ಮ ಬಸ್ ಕಣಿಮೆಕೆರೆಯ ಪಕ್ಕ ಚಲಿಸುವಾಗ ಕೆರೆಯ ನೀರು ಮಬ್ಬಾಗಿ ಕಪ್ಪಾಗಿ ಕಾಣುತ್ತಿತ್ತು. ಕೆರೆಯ ಏರಿಯ ಬಳಿ ಬಂದಾಗ ಡ್ರೈವರ್ ಬಸ್ ಇಂಜಿನ್ ಆಪ್ ಮಾಡಿ ಎಡಕ್ಕೆ ಬಾಗಿ ಕೈಮುಗಿದ ದೂರದಲ್ಲಿ ಕುಳಿತಿದ್ದ ಅಜ್ಜಿ ಭೂತಪ್ಪಗೆ ಕೈ ಮುಗಿಯೋ ಎಂದು ಸನ್ನೆ ಮಾಡಿ ಅವರು ಕೈಮುಗಿದರು.ಪಯಣದ ತೊಂದರೆಗಳನ್ನು ನಿವಾರಿಸಲು ಎಲ್ಲರೂ ಭೂತಪ್ಪನ ಕೈಮುಗಿದು ಆಶೀರ್ವಾದ ಪಡೆಯುವುದು ನಮ್ಮ ಸಂಪ್ರದಾಯವಾಗಿತ್ತು.ಅಂದು ಭೂತಪ್ಪನ ಆಶೀರ್ವಾದ ಪಡೆದರೂ ಅನಾಹುತ ಸಂಭವಿಸಿಯೇ ಬಿಟ್ಟಿತು. ಕೋವೇರಹಟ್ಟಿ ಗೇಟ್ ದಾಟಿ , ದಾಸಣ್ಣನ ಮಾಳಿಗೆ ಮೂಲಕ ಐಮಂಗಲ ತಲುಪಿದಾಗ ರಾತ್ರಿ ಏಳುಗಂಟೆಯಾಗಿತ್ತು. ಇಂಜಿನ್ ಪ್ರಾಬ್ಲಮ್ ಇದೆ ಬಸ್ ಮುಂದೆ ಹೋಗಲ್ಲ ಎಲ್ಲಾ ಇಳಿರಿ ಅಂದ ಡ್ರೈವರ್. ರಂಗಜ್ಜಿ ಮತ್ತು ನನಗೂ ಭಯ ಆತಂಕ ಶುರುವಾಯಿತು. ನಾವು ತಲುಪಬೇಕಾದ ಯರಬಳ್ಳಿ ಇನ್ನೂ ಹತ್ತು ಕಿಲೋಮೀಟರ್ " ಕತ್ಲಲ್ಲಿ ಕಾಮದೂರಾಗ್ ನಾವ್ ಎಲ್ಲಿಗ್ ಹೋಗಾನ ಸಾಮಿ, ನೀವೇನೋ ಬಸ್ ಹೋಗಲ್ಲ ಅಮ್ತಾ ಒಂದೆ ಸಲ ಅಂದ್ ಬಿಟ್ರಿ , ಈಗ ನಾವ್ ಏನ್ ಮಾಡಾನಾ " ಎಂದು ಕಂಡಕ್ಟರ್ ಮತ್ತು ಡ್ರೈವರ್ ನನ್ನ ಸ್ವಲ್ಪ ಜೋರಾಗಿಯೇ ತರಾಟೆಗೆ ತೆಗೆದುಕೊಂಡರು ನಮ್ಮ ರಂಗಜ್ಜಿ. ಅಜ್ಜಿಯ ಬಾಯಿ ಕೇಳಿ ಅಲ್ಲಿಗೆ ಬಂದ ಓರ್ವ ವ್ಯಕ್ತಿಯು ತನ್ನನ್ನು ಪೊಲೀಸ್ ಎಂದು ಪರಿಚಯ ಮಾಡಿಕೊಂಡು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಇಂದು ರಾತ್ರಿ ನಮ್ಮ ಮನೆಯಲ್ಲಿ ಊಟ ಮಾಡಿ, ಮಲಗಿಕೊಂಡು ನಾಳೆ ಬೆಳಿಗ್ಗೆ ನಿಮ್ಮ ಊರಿಗೆ ಹೋಗಬಹುದು ಅಂದರು. ನಾವು ಅಂದು ರಾತ್ರಿ ಅವರ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡು ಬೆಳಿಗ್ಗೆ ಎದ್ದು ಅವರಿಗೆ ಧನ್ಯವಾದಗಳನ್ನು ಹೇಳಿ ಹೊರಟೆವು. ದೇವರ ಆಗಿ ನಮ್ಮ ಕಷ್ಟ ಕಾಲದಲ್ಲಿ ಬಂದು ಸಹಾಯ ಮಾಡಿದ ಆ ಪೋಲಿಸಪ್ಪ ಎಲ್ಲಿರುವರೋ ತಿಳಿಯದು ಅವರು ಮತ್ತು ಅವರ ಕುಟುಂಬ ಎಲ್ಲೇ ಇರಲಿ ಸುಖಕರವಾಗಿರಲಿ .
ನಲವತ್ತು ವರ್ಷಗಳ ಕಾಲ ಉರುಳಿದಂತೆ...
ಮೊನ್ನೆ ಆತ್ಮೀಯರಾದ ಶಂಕರಾನಂದ ರವರ ಜೊತೆಯಲ್ಲಿ ನನ್ನ ಕಾರಿನಲ್ಲಿ ನಮ್ಮ ಊರಿಗೆ ಹೋಗಿದ್ದೆ .ಎಂದಿನಂತೆ ಊರಿಗೆ ಹೋದಾಗ ನಮ್ಮ ಅಣ್ಣ ತೆಂಗಿನ ಕಾಯಿ, ಬಾಳೆ ಗೊನೆ ಎಳನೀರು ಅದೂ ಇದೂ ಎಂದು ಡಿಕ್ಕಿ ತುಂಬಿದ ಮೇಲೆ ಹಿಂದಿನ ಎರಡು ಸೀಟಿನ ಮೇಲೂ ವಸ್ತುಗಳ ಹಾಕಿದ್ದರು. ಮುಂದೆ ಡ್ರೈವರ್ ಸೀಟಲ್ಲಿ ನಾನು ಪಕ್ಕದಲ್ಲಿ ಶಂಕರಾನಂದರ ರವರು ಇದ್ರು. ಊರಿಂದ ತುಮಕೂರಿನ ಕಡೆ ನಮ್ಮ ಕಾರು ಸಾಗುವಾಗ ತೇಕಲವಟ್ಟಿ ದಾಟಿದ ಬಳಿಕ ದಾರಿಯಲ್ಲಿ ಒಂದು ಅಜ್ಜಿ ಕೈಯಲ್ಲಿ ಚೀಲ ಹಿಡಿದುಕೊಂಡು ಕಾರಿಗೆ ಕೈ ಅಡ್ಡ ಹಾಕಿತು ಕಾರ್ ಸ್ಲೋ ಮಾಡಿ ನಿಲ್ಲಿಸಿ ಏನಜ್ಜಿ ಅಂದೆ . "ಕೊಳಾಳ್ ಗೆ ಹೋಗ್ ಬೇಕು ಬಸ್ ಇಲ್ಲ ತೇಕಲವಟ್ಟಿಯಿಂದ ನೆಡೆಕಂಡು ಬಂದೆ ಕಣಪ್ಪ ,ಕತ್ಲಾಕ್ತಾ ಐತೆ .ನನ್ನ ಕೊಳಾಳಿಗೆ ಬಿಡ್ರಪ್ಪ" ಅಂತು ಆ ಪರಿಸ್ಥಿತಿಯಲ್ಲಿ ಅಜ್ಜಿಯನ್ನು ಬಿಟ್ಟು ಬರಲು ಮನಸ್ಸಾಗಲಿಲ್ಲ. ಹಿಂದಿನ ಸೀಟಲ್ಲಿ ಜಾಗ ಇರಲಿಲ್ಲ ಮುಂದೆ ಒಬ್ಬರು ಕೂರುವ ಜಾಗದಲ್ಲಿ ಅಜ್ಜಿಯ ಲಗೇಜ್ ಸಮೇತ ಇಬ್ಬರು ಕುಳಿತರು .ಐದಾರು ಕಿಲೋಮೀಟರ್ ಸಾಗಿದ ಮೇಲೆ ಕೊಳಾಳು ಬಂತು.ನಿಧಾನವಾಗಿ ಅಜ್ಜಿ ಕಾರಿಂದ ಇಳಿಯಿತು .ನಿಮಗೆ ಒಳ್ಳೆಯದಾಗ್ಲಿ ಕಣಪ್ಪ ಎಂದು ಹರಸಿತು . ಕುತೂಹಲಕ್ಕೆ ಅಜ್ಜಿ ನಿನ್ನ ಹೆಸರೇನು? ಕೇಳಿದೆ ಕೆಂಚವ್ವ ಕಣಪ್ಪ ಅಂತು ಯಾಕೆ ಕೊಳಾಳು ಗೆ ಹೊರಟಿರೋದೆಂದು ಕೇಳಿದೆ ಕೆಂಚಪ್ಪನ್ ಗುಡಿಗೆ ಕಣಪ್ಪ ಅಂತು ತಗ ಅಜ್ಜಿ ಹುಂಡಿಗೆ ಐವತ್ತು ರುಪಾಯಿ ಹಾಕು ಎಂದೆ ಆಗ್ಲಪ್ಪ ನಂದು ಹತ್ತು ಸೇರಿಸಿ ಹಾಕ್ತೀನಿ ಎಂದು ಗಂಟನ್ನು ಹಿಡಿದು ಕತ್ತಲಲ್ಲಿ ಗುಡಿಯ ಕಡೆ ಹೊರಟಿತು... ನನ್ನ ಕಾರ್ ಮುಂದೆ ಸಾಗಿದಂತೆ ಯಾಕೋ ನಮ್ಮ ರಂಗಜ್ಜಿ ಮತ್ತು ಆ ಪೋಲಿಸಪ್ಪ ಪದೇ ಪದೇ ನೆನಪಾದರು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment