#ಬದುಕು_ನಿಂತ_ನೀರಲ್ಲ..
ಜೀವನ ಬಹುತೇಕ ಬಾರಿ ನಾವಂದುಕೊಂಡಂತೆ ಇರುವುದಿಲ್ಲ .ನಾವೇನೋ ಅಂದುಕೊಂಡರೆ ಮತ್ತೇನೋ ಆಗಿರುತ್ತವೆ. ಡಾಕ್ಟರ್ ಆಗಬೇಕೆಂದು ಕೊಂಡವ ಆಕ್ಟರ್ ಆಗಿಬಿಡುತ್ತಾನೆ.ಆಗರ್ಭಶ್ರೀಮಂತ ಇದ್ದಕ್ಕಿದ್ದಂತೆ ಎಲ್ಲಾ ಕಳೆದುಕೊಂಡು ಬೀದಿಗೆ ಬಂದು ನಿಂತಿರುತ್ತಾನೆ .ನನ್ನ ಜೀವನ ಇಷ್ಟೇ ಆರಕ್ಕೇರಲ್ಲ ಮೂರಕ್ಕಿಳಿಯಲ್ಲ ಎಂದುಕೊಂಡವ ಯಶಸ್ಸಿನ ಉನ್ನತ ಶಿಖರ ಏರಿಬಿಟ್ಟಿರುತ್ತಾನೆ. ಕೆಲವೊಮ್ಮೆ ನಮ್ಮ ಪ್ರಯತ್ನ ನಮ್ಮ ಯಶಸ್ಸಿಗೆ ಕಾರಣ ಎಂಬುದನ್ನು ಎಲ್ಲರೂ ಒಪ್ಪಿದರೂ ಕೆಲವೊಮ್ಮೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಯಶಸ್ಸು ಲಭಿಸದೇ ನಮ್ಮ ಕಷ್ಟ ಕೋಟಲೆಗಳು ಮುಂದುವರೆದ ಉದಾಹರಣೆಗಳು ನಮ್ಮ ಮುಂದಿವೆ.
ನಮಗೆ ಯಶಸ್ಸು ಸಿಗದಿದ್ದಾಗ ನಮ್ಮ ಕಷ್ಟ ಕಾಲದಲ್ಲಿ ನಾವು ಹೇಗೆ ವರ್ತನೆ ಮಾಡುತ್ತೇವೆ, ಒತ್ತಡ ಹೇಗೆ ನಿಯಂತ್ರಣ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ.
ಹಾಗಾದರೆ ದುಃಖ ಅಥವಾ ಕಷ್ಟಗಳನ್ನು ನಿಗ್ರಹಿಸುವುದು ಅಷ್ಟು ಸುಲಭವೇ? ಎಂದರೆ ಖಂಡಿತವಾಗಿಯೂ ಸುಲಭವಲ್ಲ ಕ್ರಮೇಣವಾಗಿ ನಾವು ಜೀವನದ. ಏರಿಳಿತಗಳು ಮತ್ತು ನೋವು ನಲಿವುಗಳಿಗೆ ಒಗ್ಗಿಕೊಳ್ಳಲೇಬೇಕು. ನಮ್ಮ ಕೈಯಲ್ಲಿ ಯಾವುದು ಇರುವುದಿಲ್ಲವೋ ಅದರ ಬಗ್ಗೆ ಚಿಂತೆ ಮಾಡುವುದನ್ನು ಕಡಿಮೆ ಮಾಡಿಕೊಂಡರೆ ನಾವು ಅರ್ಧ ನೆಮ್ಮದಿ ಪಡೆದಂತೆ. ನದಿಯು ಹಳ್ಳ ಕೊಳ್ಳ ದಾಟಿ ಸಮುದ್ರ ಸೇರುವಾಗ ನೂರಾರು ಏರಿಳಿತ ಕಂಡಿರುತ್ತದೆ ಕಡೆಗೆ ಸಾಗರವೆಂಬ ಗಮ್ಯ ಸೇರುತ್ತದೆ.ನಾವೂ ಸಹ ಜೀವನವೆಂಬ ನೌಕೆಯಲ್ಲಿ ಪಯಣ ಮುನ್ನೆಡೆಸಬೇಕು ಅದಕ್ಕೆ ಹಿರಿಯರು ಹೇಳಿರುವುದು ಬದುಕು ನಿಂತ ನೀರಲ್ಲ....
#ಸಿಹಿಜೀವಿ.
No comments:
Post a Comment