ಹಿಕ್ಕಲ್ಲಪ್ಪನ ದರ್ಶನ ಮಾಡೋಣ ಬನ್ನಿ.
ಈ ವರ್ಷದ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲು ಮನಸ್ಸು ಮಾಡಿದ ನಮ್ಮ ಸಮಾನ ಮನಸ್ಕ ತಂಡ ತುಮಕೂರು ಸಮೀಪದ ಮತ್ತೊಂದು ವಿಶೇಷ ಸ್ಥಳ ವೀಕ್ಷಿಸಲು ಸಿದ್ಧವಾಗಿ ಮನೆಯಲ್ಲಿ ಹಬ್ಬದ ಊಟ ಸವಿದು ಬೈಕ್ ಏರಿ ಹೊರಟೇಬಿಟ್ಟೆವು.
ತುಮಕೂರು ದಾಟಿ ದಾರಿಯಲ್ಲಿ ತಂದೂರಿ ಟೀ ಸವಿದು ಬೈಕ್ ಏರಿದ ನಮ್ಮನ್ನು ದೇವರಾಯನ ದುರ್ಗದ ಕಾಡಿನ ತಂಪಾದ ಹಿತಕರವಾದ ವಾತಾವರಣ ಸ್ವಾಗತಿಸಿತು. ಊರ್ಡಿಗೆರೆ ತಲುಪಿದ ನಾವು ಸ್ಥಳೀಯರನ್ನು ಕೇಳಿಕೊಂಡು ವಿಳಾಸ ಪಡೆದು ಕೆಂಪೋನಹಳ್ಳಿ ಕ್ರಾಸ್ ಬಳಿ ತಿರುಗಿ ಹಿಕ್ಕಲ್ಲಪ್ಪ ಬೆಟ್ಟ ಅಥವಾ ಕೂರ್ಮಗಿರಿ ಕಡೆಗೆ ಸಾಗಿದೆವು...
ದೂರದಿಂದಲೇ ಸ್ವಾಗತ ಕಮಾನು ಕಂಡಿತು ಅದರ ಹಿನ್ನೆಲೆಯಲ್ಲಿ ಹಿಕ್ಕಲ್ಲಪ್ಪ ಬೆಟ್ಟವೂ ಕಾಣಿಸಿತು ನಿಧಾನವಾಗಿ ಬೈಕ್ ನಲ್ಲಿ ಬೆಟ್ಟ ಏರಿದೆವು .1650 ಅಡಿಗಳಿಗೂ ಎತ್ತರದ ಬೆಟ್ಟ ಏರುವಾಗ ಅಲ್ಲಲ್ಲಿ ಕಾಣುವ ಮರಗಿಡಗಳ ಸೌಂದರ್ಯ, ದೂರದಲ್ಲಿ ನಿಂತ ತೋಟಗಳು , ದೊಡ್ಡದಾದ ಕೆರೆಗಳ ದೃಶ್ಯಗಳು ನಮ್ಮನ್ನು ಬಹಳ ಆಕರ್ಷಸಿದವು.ಹಾಗೆ ಬರುವಾಗ ಟ್ರೆಕ್ಕಿಂಗ್ ಬಂದಿದ್ದರೆ ಇನ್ನೂ ಚೆನ್ನಾಗಿತ್ತು ಎನಿಸಿತು.
ಬೆಟ್ಟದ ತುದಿ ತಲುಪಿದ ನಾವು ಕೈಕಾಲು ತೊಳೆದುಕೊಂಡು ಹಿಕ್ಕಲ್ಲಪ್ಪ ಅಥವಾ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದೆವು.
ದೇವಾಲಯದ ಮುಖ್ಯ ವಿಗ್ರಹವು ವಿಷ್ಣುವಿನ ಆಮೆ ಅಥವಾ ಕೂರ್ಮ ಅವತಾರದಲ್ಲಿ ಇರುವುದರಿಂದ ಇದನ್ನು ಕೂರ್ಮಗಿರಿ ಕ್ಷೇತ್ರ ಎಂದೂ ಕರೆಯುತ್ತಾರೆ . ಇಲ್ಲಿನ ದೇವರು ವೆಂಕಟರಮಣನಾದರೂ ಇಲ್ಲಿ ಹಿಕ್ಕಲ್ಲಪ್ಪ ಎಂದು ಜನಪ್ರಿಯವಾಗಿ ಕರೆಯುತ್ತಾರೆ.
ಮೂಲ ಕಪ್ಪು ಗ್ರಾನೈಟ್ ವಿಗ್ರಹವನ್ನು ಸಾಲಿಗ್ರಾಮ ಕಲ್ಲಿನಿಂದ ಮಾಡಲಾಗಿದೆ. ಈ ವಿಗ್ರಹವು ನೆಲಮಟ್ಟದಿಂದ ಕೆಳಮಟ್ಟದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ.
1999 ರಲ್ಲಿ ಸ್ಥಾಪಿಸಲಾದ ಬಾಲಾಜಿಯ ಮತ್ತೊಂದು ವಿಗ್ರಹವಿದೆ . ಇದನ್ನು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನವರು ಬಂದು ಪ್ರತಿಷ್ಠಾಪಿಸಿದ್ದಾರೆ. ಅಂದಿನಿಂದ ಈ ದೇವಾಲಯವು ತಿರುಮಲದಲ್ಲಿರುವ ಮೂಲ ದೇವರ 108 ಉಪ-ದೇಗುಲಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.
ಸ್ವಾಮಿಯ ದರ್ಶನ ಮಾಡಿ ಅರ್ಚಕರಾದ ಶಿವಣ್ಣನವರನ್ನು ಈ ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ಕೋರಿದಾಗ ಅವರು ನೀಡಿದ ಮಾಹಿತಿಯು ಬಹು ಕುತೂಹಲ ಮತ್ತು ಆಸಕ್ತಿಕರವಾಗಿತ್ತು.ಅವರ ಮಾಹಿತಿಯನ್ನು ನಮ್ಮ ಸಮಾನ ಮನಸ್ಕ ತಂಡದ ಹಿರಿಯರಾದ ಕೋಟೆ ಕುಮಾರ್ ರವರು ದಾಖಲು ಮಾಡುತ್ತಿದ್ದರು. ಶಿವಣ್ಣನವರು ಹೇಳುತ್ತಾ ಹೀಗೆಂದರು
"ಇತಿಹಾಸ ಪ್ರಸಿದ್ಧ ದೇವರಾಯನದುರ್ಗದ ಉಪದುರ್ಗ ವಾದ ಕೂರ್ಮಗಿರಿಯೆಂದೇ ಪ್ರಸಿದ್ಧ ಪಡೆದಿರುವ ಬೆಟ್ಟ ಇದು. ಈ ಬೆಟ್ಟಕ್ಕೆ ಹಿಟ್ಟುಕಲ್ಲು ಬೆಟ್ಟ, ಇಕ್ಕಲ್ಲುಬೆಟ್ಟ ಕೂರ್ಮಾದ್ರಿ, ಕೂರ್ಮಾಚಲ ಇತ್ಯಾದಿ ಅನ್ವರ್ಥಕ ನಾಮಗಳಿಂದ ಕರೆಯಲ್ಪಡುವ ಈ ಕ್ಷೇತ್ರದಲ್ಲಿ ನೆಲಸಿರುವ ದೇವರೇ ಶ್ರೀ ವೆಂಕಟೇಶ್ವರಸ್ವಾಮಿ.
ಪುರಾಣ ಕಥೆಯಲ್ಲಿ ಬರುವ ಶ್ರೀ ನಿವಾಸ ಅಥವಾ ಶ್ರೀ ವೆಂಕಟೇಶ್ವರ ಮಹಿಮಾ ಗ್ರಂಥಗಳಲ್ಲಿ ಉಲ್ಲೇಖೀಸಿರುವಂತೆ ಆಂಧ್ರ ಪ್ರದೇಶದ ತಿರುಮಲಗಿರಿಯಲ್ಲಿ ಇಬ್ಬರು ಪತ್ನಿಯರ ಕಾಟ ತಾಳಲಾರದೆ ಶಿವರೂಪ ಧರಿಸಿರುವ “ ಬಕುಳಾದೇವಿ” ಆಶ್ರಯ ಪಡೆಯುವ ಮೊದಲು ಶ್ರೀ ವೆಂಕಟೇಶ್ವರ ಸ್ವಾಮಿ ಪತ್ನಿಯಾದ ಲಕ್ಷ್ಮೀದೇವಿಯನ್ನು ಅನ್ವೇಷಣಾರ್ಥವಾಗಿ ವೈಕುಂಠದಿಂದ ಭೂ ಲೋಕದ ಕರವೀರಪುರ ಅಥವಾ ಕೊಲ್ಲಾಪುರದಲ್ಲಿದ್ದ ಶ್ರೀ ಮಹಾಲಕ್ಷ್ಮೀಯನ್ನು ಅರಸುತ್ತಾ ಸಾಮಾನ್ಯ ಮನುಷ್ಯ ರೂಪಧಾರಿಯಾಗಿ ನಟನೆ ಮಾಡುತ್ತಾ ಲಕ್ಷ್ಮೀದೇವಿಯನ್ನು ಪುನಃ ವೈಕುಂಠಕ್ಕೆ ಬರುವಂತೆ ಆಗ್ರಹಿಸಿದನೆಂದು ಹೇಳಲಾಗಿದೆ.
ಆಕೆ ಬರಲು ಒಪ್ಪದಿದ್ದ ಕಾರಣ ಈ ಕೂರ್ಮಗಿರಿಯಲ್ಲಿ ನೆಲಸಿದಾಗ ಶ್ರೀ ವೆಂಕಟೇಶ್ವರ ಸ್ವಾಮಿಯು ಕೂರ್ಮನಾಗಿ ಕುಳಿತ ಸ್ಥಳದಲ್ಲೇ ಸ್ವಾಮಿಯನ್ನು ಆವರಿಸಿ ಹುತ್ತ ಬೆಳೆದಿದ್ದು ಹಾಗೂ ಹಸಿವಿನಿಂದ ನರಳುತ್ತಿದ್ದ ಸ್ವಾಮಿಗೆ ಹಾಲುಣಿಸುವ ಸಲುವಾಗಿ ಚತುರ್ಮುಖ ಬ್ರಹ್ಮದೇವರು ಹಾಗೂ ಶ್ರೀ ದುದ್ರದೇವರುಗಳೇ ಹಸು, ಕರು ರೂಪಧರಿಸಿ ಬಂದು ಹುತ್ತಕ್ಕೆ ಹಾಲು ಕರೆಯುತ್ತಿದ್ದರೆಂದು ಹೇಳಲಾಗಿದ್ದು ಸ್ವಾಮಿಯನ್ನು ಅವರಿಸಿ ಬೆಳೆದ ಹುತ್ತವೇ ಮುಂದೆ ಹಿಟ್ಟುಕಲ್ಲಾಗಿ ಪರಿವರ್ತಿತವಾದ್ದರಿಂದ ಹಿಟ್ಕಲ್ ಅಥವಾ ಹಿಕ್ಕಲ್ ಬೆಟ್ಟ ಎಂದು ದಂತ ಕಥೆಯಿಂದ ಕೇಳಿ ಬರುತ್ತದೆ. ಇಂತಹ ಪವಿತ್ರ ಸ್ಥಳವಾದ ಈ ಕೂರ್ಮಗಿರಿಯೇ “ ಅಧಿತಿರುಮಲೆ” ಎಂದು ಹಾಗೂ ಮೂಲ ತಿರುಪತಿಯೆಂದು ಕರೆಯಲ್ಪಟ್ಟಿದೆ
ಮತ್ತೊಂದು ರೀತಿಯಲ್ಲಿ ಸ್ಥಳೀಯ ಜನರಲ್ಲಿ ಕೇಳಿಬರುವ ಕಥೆಯೆಂದರೆ ಆನೆಯನ್ನು ಸಂಸ್ಕೃತದಲ್ಲಿ “ಕರಿ ಎಂದು ಆಮೆಯನ್ನು ಕೂರ್ಮ' ಎಂತಲೂ ಕರೆಯುವುದು ವಾಡಿಕೆಯಾಗಿದ್ದು ಇದರ ಅರ್ಥದಂತೆ ಪಕ್ಕದಲ್ಲೇ ಇರುವ ದೇವರಾಯನದುರ್ಗವು ಅತೀ ಎತ್ತರ, ವಿಶಾಲವಾಗಿದ್ದು, ಆನೆಯ ರೂಪದಲ್ಲಿ ಕಾಣಿಸುವುದರಿಂದ ಆ ಸ್ಥಳಕ್ಕೆ ' ಕರಿಗಿರಿ' ಪರ್ವತವೆಂದೂ ಅದರ ಪಕ್ಕದಲ್ಲಿ ಸ್ವಲ್ಪ ಅಂತರದಲ್ಲಿ ಅತೀ ಚಿಕ್ಕ ಗುಡ್ಡೆ ಇದ್ದು ಇದು ಆಮೆಯ ರೂಪದಲ್ಲಿ ಇರುವುದರಿಂದ ಇದು ಕೂರ್ಮಗಿರಿ ಎಂತಲೂ ಕರೆಯಲ್ಪಡುತ್ತಿದ್ದು ಈಗ ಪ್ರಕೃತಿ ನಯನ ಮನೋಹರ ವಾತಾವರಣದಲ್ಲಿರುವ ಪುಣ್ಯಕ್ಷೇತ್ರದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರು ಕ್ಷೀರಾಭಿಷೇಕ ಮಾಡಿ ಪ್ರಾರ್ಥಿಸಿದರೆ ಸ್ವಾಮಿಯು ಪ್ರಸನ್ನನಾಗುತ್ತಾನೆ. ಅಭೀಷ್ಟಸಿದ್ದಿಯಾಗುತ್ತದೆ ಎಂಬುದು ಪ್ರತೀತಿ" ಎಂದು ವಿವರಣೆ ನೀಡಿದರು.
ನಂತರ ದೇವಾಲಯದ ಮುಂಭಾಗದಲ್ಲಿ ಇರುವ
ಶ್ರೀದೇವಿ ಮತ್ತು ಭೂದೇವಿ ದೇವತೆಗಳ ವಿಗ್ರಹಗಳಿಗೆ ನಮಸ್ಕಾರ ಮಾಡಿ ಬೆಟ್ಟದ ತುದಿಯಿಂದ ಕೆಳಗಿನ ಪ್ರದೇಶದ ಸೌಂದರ್ಯ ಸವಿಯುವಾಗ ದೂರದಿಂದ ಬಂದ ಭಕ್ತರ ಮಾತನಾಡಿಸಿದೆವು.
ಈ ದೇವಾಲಯಕ್ಕೆ ಬೆಂಗಳೂರಿನಿಂದ ಬಂದ ಭಕ್ತರಾದ ಶ್ರೀಮತಿ ಪದ್ಮಾ ರವರನ್ನು ಮಾತನಾಡಿಸಿದಾಗ " ನಮಗೆ ಬಾಲ್ಯದಿಂದಲೂ ಈ ದೇವರ ಕೃಪೆ ಇದೆ.ನಮ್ಮ ಕುಟುಂಬ ಕಾಪಾಡುತ್ತಿರುವ ಸ್ವಾಮಿಯ ದರ್ಶನ ಮಾಡಲು ಆಗಾಗ್ಗೆ ಬರುತ್ತೇವೆ ಈ ಕ್ಷೇತ್ರವೇ ನಮಗೆ ತಿರುಪತಿ ಇದ್ದಂತೆ ಸ್ವಾಮಿ ನಮ್ಮ ಹಲವಾರು ಕಷ್ಟಗಳನ್ನು ನೀಗಿದ್ದಾನೆ" ಎಂದು ಭಾವುಕವಾಗಿ ಹೇಳುವಾಗ ಅವರ ಕಣ್ಣುಗಳಲ್ಲಿ ನೀರಾಡುವುದನ್ನು ಗಮನಿಸಿದೆ.
"ಬೆಟ್ಟದ ತುದಿಯಲ್ಲಿ ಎರಡು ದೊಡ್ಡ ಬಂಡೆಗಳ ನಡುವೆ ಒಂದು ಸಣ್ಣ ಸಿಹಿ ನೀರಿನ ಬುಗ್ಗೆ ಇದೆ. ಅದನ್ನು ನಾವು ದೊಣೆ ಎನ್ನುತ್ತೇವೆ . ಅದು ಸಾಕಷ್ಟು ಆಳವಾಗಿದೆ ಮತ್ತು ಎಂದಿಗೂ ಬತ್ತಿಲ್ಲ. ನೀವು ಆ ಸ್ಥಳ ನೋಡಲೇಬೇಕು " ಎಂದರು.
ಅವರಿಗೆ ಧನ್ಯವಾದಗಳನ್ನು ತಿಳಿಸಿ ಬೈಕ್ ಏರಿ ಬೆಟ್ಟ ಇಳಿಯುವಾಗ ಅವರು ಹೇಳಿದ ಸಿಹಿನೀರಿನ ಹೊಂಡ ನೋಡಿಕೊಂಡು ದೇವರಾಯದುರ್ಗದ ಕಾಡಿನಲ್ಲಿ ಬರುವಾಗ ಸ್ನೇಹಿತರಾದ ಎಂ ಎಚ್ ಹನುಮಂತರಾಯಪ್ಪ ಮತ್ತು ರಂಗಸ್ವಾಮಿ ರವರು ಮಾತನಾಡುತ್ತಾ ತಿರುಪತಿ ನೋಡಿದ ಧನ್ಯತಾ ಭಾವ ಉಂಟಾಯಿತು ಎಂದಿದ್ದು ಸುಳ್ಳಲ್ಲ ಅನಿಸಿತು.
ತುಮಕೂರು ತಲುಪಿದ ನಾನು ಮಕ್ಕಳಿಗೆ ದೀಪಾವಳಿ ಹಬ್ಬಕ್ಕೆ ಪಟಾಕಿ ಕೊಂಡು ಸಂಜೆ ಮನೆಗೆ ಹಿಂತಿರುಗಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನ ಮತ್ತು ಪಟಾಕಿ ಸಿಡಿಸುವ ಸಂಭ್ರಮ ದಲ್ಲಿ ಈ ವರ್ಷದ ದೀಪಾವಳಿ ವಿಶೇಷವಾಗಿತ್ತು..
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
No comments:
Post a Comment