ಮಂದರಗಿರಿ
ಕೆಲವೊಮ್ಮೆ ನಾವು ದೂರದ ಪ್ರದೇಶಗಳು, ಇತರೆ ರಾಜ್ಯಗಳ ಸ್ಥಳಗಳು ಅಷ್ಟೇ ಏಕೆ ವಿದೇಶಗಳ ಸಿರಿಯನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುತ್ತೇವೆ.ಆದರೆ ನಮ್ಮ ಸುತ್ತ ಮುತ್ತ ಇರುವ ಎಷ್ಟೋ ಅಮೂಲ್ಯವಾದ ಐತಿಹಾಸಿಕ, ಪರಿಸರದ ಮಹತ್ವವಿರುವ ,ಧಾರ್ಮಿಕ ಪರಂಪರೆಯನ್ನು ಹೊಂದಿರುವ ಸ್ಥಳಗಳನ್ನು ನಾವು ನೋಡಿಯೇ ಇರುವುದಿಲ್ಲ.ಅವುಗಳನ್ನು ನೋಡಿದ ಮೇಲೆ ನಮ್ಮ ಪ್ರದೇಶದ ಬಗ್ಗೆ ನಮಗೆ ಹೆಮ್ಮೆ ಆಗಿ "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬ ರಾಮಾಯಣದ ಉಕ್ತಿ ನೆನಪಿಗೆ ಬರದೆ ಇರದು.ಇಂತದೇ ಅನುಭವ ನನಗೂ ತುಮಕೂರಿನ ಸಮೀಪದ ಅತ್ಯದ್ಭುತ ತಾಣವನ್ನು ನೋಡಿದಾಗ ಅಯಿತು.
ಇತ್ತೀಚೆಗೆ ಬಾಯರ್ಸ್ ಕಾಫಿ ಹೌಸ್ ನಲ್ಲಿ ಕಾಫಿ ಕುಡಿಯುತ್ತಾ ಮಾತನಾಡುವಾಗ ನಿಮ್ಮನ್ನು ಒಂದು ಐತಿಹಾಸಿಕ ಮತ್ತು ಸುಂದರ ಸ್ಥಳಕ್ಕೆ ಕರೆದುಕೊಂಡು ಹೋಗುವೆ ಎಂದರು ಗೆಳೆಯ ಸದಾಶಿವ್. ಎಂದು? ಅಂದೆ. ಇಂದೆ ಅಂದು ಬಿಟ್ಟರು ! ಆತ್ಮೀಯ ಶಂಕಾರಾನಂದ್ ಮತ್ತು ಸದಾಶಿವ್ ರವರ ಜೊತೆಯಲ್ಲಿ ಯಾವುದೇ ಪ್ಲಾನ್ ಮಾಡದೇ ದಿಢೀರ್ ಎಂದು ಇಳಿಹೊತ್ತಿನ ಮೂರೂವರೆಗೆ ಕಾರಿನಲ್ಲಿ ತುಮಕೂರು ಬಿಟ್ಟು ಹೊರಟೆವು. ಇನ್ನೂ ಐದು ನಿಮಿಷವಾಗಿರಲಿಲ್ಲ ಕಾರ್ ನಿಲ್ಲಿಸಿ ಇಳೀರಿ ಸರ್ ಇದೇ ನಾವು ನೋಡಬೇಕಾದ ಜಾಗ ಅಂದರು .
ಕಾರ್ ಇಳಿದು ನಿಧಾನವಾಗಿ ನಡೆದು ಸಾಗಿದ ನಮ್ಮನ್ನು ಸ್ವಾಗತಿಸಿದ್ದು ಒಂದು ಸುಂದರ ಗಿರಿ ಅದೇ ಮಂದರಗಿರಿ.ಆ ಗಿರಿಯ ಏರಲು ಮೆಟ್ಟಿಲುಗಳ ಸೌಲಭ್ಯ ಇದೆ. ಒಂದೊಂದೆ ಮೆಟ್ಟಲು ಏರುತ್ತಾ ಹೊದಂತೆ ನಮ್ಮ ಮೈಯಿಂದ ಬೆವರ ಸಾಲುಗಳ ಆಗಮನವಾಗಿ ಆಗಾಗ್ಗೆ ಬೀಸುವ ತಂಗಾಳಿ ಆ ಬೆವರಿಗೆ ಸೋಕಿದೆಡೆ ಹಿತವಾದ ಅನುಭವ.ಇನ್ನೂ ಮೇಲೆ ಸಾಗಿದಂತೆ ತುಮಕೂರು ನಗರ, ಮೈದಾಳ ಕೆರೆ, ಹೊಲಗದ್ದೆಗಳು, ರಸ್ತೆಗಳು ಹೀಗೆ ನೋಡಿದ ಪ್ರದೇಶಗಳೇ ವಿಶೇಷವಾಗಿ ಕಾಣಲಾರಂಬಿಸಿದವು. ಬೆಟ್ಟದ ತುದಿ ತಲುಪಿದ ನಮ್ಮನ್ನು ಜೈನ ಮಂದಿರಗಳ ಸಂಕೀರ್ಣ ಸ್ವಾಗತಿಸಿತು . "ಈ ಸಂಕೀರ್ಣದಲ್ಲಿ ಶ್ರೀಚಂದ್ರನಾಥ (ಪದ್ಮಾಸನ), ಶ್ರೀಪಾರ್ಶ್ವನಾಥ, ಶ್ರೀಸುಪಾರ್ಶ್ವನಾಥ ಮತ್ತು ಶ್ರೀಚಂದ್ರನಾಥ (ಖಡ್ಗಾಸನ) ಎಂಬ ನಾಲ್ಕು ಬಸದಿಗಳಿವೆ. ಅತ್ಯಂತ ಪುರಾತನವಾದ ಈ ಬಸದಿಗಳನ್ನು 12 ಮತ್ತು 14ನೇ ಶತಮಾನದಲ್ಲಿ ಕಟ್ಟಲಾಗಿದೆ. ಸುಮಾರು ಸಾವಿರ ವರ್ಷಗಳ ಇತಿಹಾಸ ಈ ಕ್ಷೇತ್ರಕ್ಕಿದೆ" ಎಂದು ತುಮಕೂರಿನ ಗೋಕುಲ ಬಡಾವಣೆಯ ನಿವಾಸಿಗಳಾದ ಅಜಿತ್ ರವರು ಮಾಹಿತಿಯನ್ನು ನೀಡಿದರು. ಆ ಜಿನ ಮೂರ್ತಿಗಳಿಗೆ ವಂದಿಸಿ ಹೊರಬಂದಾಗ ಅಲ್ಲಲ್ಲಿ ಇರುವ ಶಾಸನಗಳು ನಮ್ಮ ಗಮನ ಸೆಳೆದವು. ಇತ್ತೀಚಿಗೆ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಬರದಿಂದ ಸಾಗಿದ್ದು ಕಾಂಕ್ರೀಟ್ ಮತ್ತು ಕಬ್ಬಿಣ ಬಳಸಿ ಮರದ ಆಕೃತಿಯ ರಚನೆಯು ಕುತೂಹಲ ಕೆರಳಿಸಿತು . ಬೆಟ್ಟದ ಮೇಲ್ಬಾಗಕ್ಕೆ ವಾಹನಗಳು ಚಲಿಸುವಂತೆ ಸರ್ವಋತು ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
" ಕರ್ನಾಟಕ ಸರ್ಕಾರದ ವತಿಯಿಂದ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ. ಳಲ್ಲಿ ಯಕ್ಷ-ಯಕ್ಷಿ ವಿಗ್ರಹಗಳ ಸ್ಥಾಪನೆ.ಕಾರ್ಯ ಆಗುತ್ತಿದೆ.
1ನೇ ಬಸದಿಯ ನೆಲಹಾಸು ಜೀರ್ಣೋದ್ಧಾರ ಕಾರ್ಯವು ಯಶಸ್ವಿಯಾಗಿ ನಡೆದಿದ್ದು ಹಾಗೂ ಶ್ರೀ ಚಂದ್ರಪ್ರಭ ಬಸದಿಯ ಪಾಲಿಶ್ ಕಾರ್ಯವು ಪ್ರಗತಿಯಲ್ಲಿದೆ.
ಶ್ರೀ ಬ್ರಹ್ಮದೇವರ ಗುಡಿ ಹಾಗೂ ಗೋಪುರ ನಿರ್ಮಾಣ. ದೇವಸ್ಥಾನಗಳ ಪ್ರಕಾರದಲ್ಲಿ ಗ್ರಾನೈಟ್, ನೆಲಹಾಸು ಅಳವಡಿಕೆ.
ಉತ್ತರ ದಿಕ್ಕಿನಲ್ಲಿ ಗೋಪುರ ಹಾಗೂ ಮಹಾದ್ವಾರ ನಿರ್ಮಾಣ. ಉತ್ತರ ದಿಕ್ಕಿನಲ್ಲಿ ಗೌತಮ ಗಣಧರರ ಚರಣ ಹಾಗೂ ಭದ್ರಬಾಹು ಶ್ರುತಿಕೇವಲಿ ಚರಣಗಳಿಗೆ ಕೂಟ ನಿರ್ಮಾಣ.
4ನೇ ಜಿನಮಂದಿರದಲ್ಲಿ ಶ್ರುತಸ್ಕಂಧ ಬಸದಿ ನಿರ್ಮಾಣ. ಮುನಿನಿವಾಸ ಮತ್ತು ಮುನಿಗಳ ಚೌಕ ನಿರ್ಮಾಣ. ಬಸದಿಯ ಸುತ್ತ ಇರುವ ಕಾಂಪೌಂಡ್ ಗೋಡೆಯ ನವೀಕರಣ,
ಗ್ರೀಲ್, ವಿದ್ಯುತ್ ದೀಪ ಹಾಗೂ ಸಿ. ಸಿ. ಕ್ಯಾಮರಗಳ ಅಳವಡಿಕೆ. ಬೆಟ್ಟದ ಮೇಲೆ 4 ಕೊಠಡಿ, ಕಾರ್ಯಾಲಯ ಮತ್ತು ಭದ್ರತಾ ಸಿಬ್ಬಂದಿಗೆ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಜೀರ್ಣೋದ್ಧಾರ ಕಾರ್ಯದಲ್ಲಿ ದಾನ ನೀಡಲು ಇಚ್ಛಿಸುವ ಭಕ್ತಾಧಿಗಳು ತನು ಮನ ಧನ ನೀಡಿ ಸಹಕರಿಸಬಹುದು" ಎಂದು ಅಜಿತ್ ರವರು ತಿಳಿಸಿದರು.
ಅಲ್ಲೇ ಇರುವ ಗೂಡಂಗಡಿಯಲ್ಲಿ ಚುರುಮುರಿ ಖರೀದಿಸಿ ತಿನ್ನುತ್ತಾ ಸೂರ್ಯಾಸ್ತದ ದೃಶ್ಯವನ್ನು ಮತ್ತು ಮೈದಾಳ ಕೆರೆಯ ಸೌಂದರ್ಯವನ್ನು ನಮ್ಮ ಕಣ್ತುಂಬಿಸಿಕೊಂಡು ಮೊಬೈಲ್ ನಲ್ಲೂ ತುಂಬಿಸಿಕೊಂಡು ಬೆಟ್ಟದಿಂದ ಕೆಳಗಿಳಿದು ಬಂದು ಅಲ್ಲಿರುವ ಮತ್ತೊಂದು ಆಕರ್ಷಣೆ ಬಸದಿ ನೋಡಲು ಹೊರಟೆವು.
ದೂರದಿಂದಲೇ
ಬಾಹುಬಲಿಯಂತೆ ಕಾಣುವ ಶಾಂತ ಮೂರ್ತಿಯೊಂದು ನಮ್ಮನ್ನು ಸ್ವಾಗತಿಸಿತು. ಆದರೆ ಇದು ಬಾಹುಬಲಿಯಲ್ಲ. ದಿಗಂಬರ ಚಂದ್ರನಾಥ ತೀರ್ಥಂಕರರ ಮೂರ್ತಿ. ಇದನ್ನು 2011ರಲ್ಲಿ ಉದ್ಘಾಟಿಸಲಾಗಿದೆ. ಮೂರ್ತಿಯ ಮುಂದೆ ಸ್ತಂಭವೊಂದಿದ್ದು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತದೆ.
ಚಂದ್ರನಾಥ ತೀರ್ಥಂಕರರ ಮೂರ್ತಿ ಪಕ್ಕದಲ್ಲೇ ಚಿತ್ತಾಕರ್ಷಕವಾದ ನವಿಲಿನ ಗರಿಗಳ ಬೀಸಣಿಗೆಯ ಆಕಾರದ ಮಂದಿರವು ತನ್ನ ವಿಶಿಷ್ಠವಾದ ವಿನ್ಯಾಸದಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇದು 1855 ರಿಂದ 1955ರವರೆಗೆ ಜೀವಿಸಿದ್ದ ಆಚಾರ್ಯ ದಿಗಂಬರ ಜೈನ ಚಾರಿತ್ರ ಚಕ್ರವರ್ತಿ ಶ್ರೀಶಾಂತಿ ಸಾಗರ್ ಜೀ ಮಹಾರಾಜ್ ಗುರು ಮಂದಿರ. ದಿಗಂಬರ ಜೈನ ಮುನಿಗಳು ಉಪಯೋಗಿಸುತ್ತಿದ್ದ ನವಿಲುಗರಿಯ ಮುಚ್ಚಳಿಕೆಯ ಆಕಾರದ ಈ ಮಂದಿರ 81 ಅಡಿ ಎತ್ತರವಿದೆ ಎಂಬುದು ವಿಶೇಷ. ಇದಲ್ಲದೆ ಇದರಲ್ಲಿ ಜೈನ ತೀರ್ಥಂಕರರ ದಿನನಿತ್ಯದ ಜೀವನಶೈಲಿಯ ಚಿತ್ರಗಳನ್ನು ಪ್ರತಿಮೆಯ ಇಕ್ಕೆಲಗಳಲ್ಲಿ ಇಡಲಾಗಿದೆ. ಗುರು ಮಂದಿರದಲ್ಲಿನ ಫೋಟೊ ಗ್ಯಾಲರಿಯನ್ನು ನೋಡಿದರೆ ಜೈನ ತೀರ್ಥಂಕರರ ಜೀವನಶೈಲಿಯು ನಮಗೆ ಮನದಟ್ಟಾಗುತ್ತದೆ. ಆ ಪ್ರದೇಶದಲ್ಲಿ ಇರುವಾಗ ಎಂತಹ ಬಾಯಿಬಡುಕರು ಸಹ ಮೌನವಹಿಸಿಬಿಡುತ್ತಾರೆ.ಆ ವಾತಾವರಣದಿಂದ ಪ್ರೇರಿತರಾಗಿ ನಾವೂ ಮೌನವಾಗಿ ಕುಳಿತು ಒಂದೈದು ನಿಮಿಷ ಧ್ಯಾನ ಮಾಡಿ ಹೊರಬಂದಾಗ ಮನಕ್ಕೆ ಏನೋ ಒಂಥರ ಆನಂದವುಂಟಾಯಿತು. ನಮ್ಮ ಕಾರಿನ ಕಡೆ ಹೆಜ್ಜೆ ಹಾಕುವಾಗ
ಏಳೆಂಟು ಕಿಲೋಮೀಟರ್ ಸನಿಹದಲ್ಲೇ ಇರುವ ಇಂತಹ ಇತಿಹಾಸ ಪ್ರಸಿದ್ಧ ತಾಣವನ್ನು ಇಷ್ಟು ದಿನವಾದರೂ ನೋಡದಿದ್ದಕ್ಕೆ ಬೇಸರವಾಯಿತು. ಇದಕ್ಕೆ ಪ್ರಾಯಶ್ಚಿತ್ತ ಎಂಬಂತೆ ಪದೇ ಪದೇ ಈ ಸ್ಥಳಕ್ಕೆ ಬರಬೇಕು ಹಾಗೂ ನಮ್ಮವರಿಗೂ ಈ ತಾಣದ ಬಗ್ಗೆ ಮಾಹಿತಿ ನೀಡಿ ಅವರ ಸ್ವಾಗತಿಸಬೇಕು ಎನಿಸಿತು ಅದಕ್ಕೆ ಈ ಲೇಖನ .ಆತ್ಮೀಯರೆ ಒಮ್ಮೆ ಬನ್ನಿ ಮಂದರಗಿರಿ ಮತ್ತು ಬಸ್ತಿ ಬೆಟ್ಟದ ಸಿರಿಯ ಸೊಬಗನ್ನು ಕಣ್ತುಂಬಿಸಿಕೊಳ್ಳಿ.
ತಲುಪಲು ಮಾರ್ಗ.
ಈ ಸುಂದರ ತಾಣ
ತುಮಕೂರಿನಿಂದ 10 ಕಿ.ಮೀ ದೂರದಲ್ಲಿದೆ. ಬೆಂಗಳೂರು ಪೂನಾ ರಾಷ್ಟ್ರೀಯ ಹೆದ್ದಾರಿಯಿಂದ ಈ ಬೆಟ್ಟ ಕಾಣಲು ಸಿಗುತ್ತದೆ. ಈ ಸ್ಥಳಕ್ಕೆ ತಲುಪಲು ತುಮಕೂರಿನಿಂದ ಬರುವವರು ರಾಷ್ಟ್ರೀಯ ಹೆದ್ದಾರಿಯ ರಸ್ತೆ ಸುಂಕ ಕಟ್ಟಿದ ನಂತರ 1 ಕಿಲೋಮೀಟರ್ ಮುಂದುವರೆದರೆ ಎಡಬಾಗದಲ್ಲಿ ಬೆಟ್ಟದ ಬಗ್ಗೆ ಒಂದು ಸ್ವಾಗತ ಕಮಾನು ಇದೆ. ಇಲ್ಲಿಂದ ಮತ್ತೊಂದು ಕಿಲೋಮೀಟರ್ ಕ್ರಮಿಸಿದರೆ ಬಸ್ತಿ ಬೆಟ್ಟದ ಕೆಳಬಾಗಕ್ಕೆ ತಲುಪಬಹುದು.
ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಕ್ಷೇತ್ರದಲ್ಲಿ ವೀಕ್ಷಿಸಲು ಅವಕಾಶವಿರುತ್ತದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment