27 November 2022

ಸುರ್ಯ ದೇವಾಲಯ .



 


ಸುರ್ಯ ದೇವಾಲಯ. 


ಧರ್ಮಸ್ಥಳದ  ಮಂಜುನಾಥೇಶ್ವರ ಸ್ವಾಮಿಯ ದರ್ಶನ ಪಡೆದು ಉಜಿರೆಯ ಮೂಲಕ ನಮ್ಮೂರ ಕಡೆ ಹಿಂತಿರುಗುವಾಗ ಸ್ನೇಹಿತರ ಅಪೇಕ್ಷೆಯಂತೆ ಉಜಿರೆಯಿಂದ ನಾಲ್ಕು ಕಿಲೋಮೀಟರ್ ದೂರವಿರುವ "ಸುರ್ಯ" ದೇವಾಲಯಕ್ಕೆ ಭೇಟಿ ಕೊಟ್ಟೆವು.ಬಹುಶಃ ನೀವು ಈಗ ನಾನು ಟೈಪಿಂಗ್ ಮಿಸ್ಟೇಕ್ ಮಾಡಿರುವೆ ಎಂದುಕೊಂಡಿರುವಿರಿ. ಸೂರ್ಯ ಎಂದು ಬರೆಯುವ ಬದಲಿಗೆ ಸುರ್ಯ ಎಂದು ಬರೆದಿರಬಹುದೆಂಬ ಅನುಮಾನ ನಿಮ್ಮದು. ಇಲ್ಲ ನಾನು ಸರಿಯಾಗೇ ಬರೆದಿರುವೆ.ನಾನು ಈ ಸ್ಥಳಕ್ಕೆ ಹೋಗುವ ಮೊದಲು ಅದನ್ನು ಸೂರ್ಯ ದೇವಾಲಯ ಎಂದೇ ಭಾವಿಸಿದ್ದೆ. ಅಲ್ಲಿಗೆ ಹೋದಾಗ ತಿಳಿದದ್ದು ಸುರ್ಯ ಎಂಬುದು ಒಂದು ಹಳ್ಳಿ ಅಲ್ಲಿ ನೆಲೆಸಿರುವ ದೇವರು ಸದಾಶಿವ ರುದ್ರ . ಅದು ಜನರ ಆಡು ಮಾತಿನಲ್ಲಿ ಸೂರ್ಯ ದೇವಾಲಯವಾಗಿ ರೂಢಿಯಾಗಿದೆ.



ಕಾನನದ ನಡುವೆ ಅಲ್ಲಲ್ಲಿ ಕಾಣುವ ರಬ್ಬರ್ ತೋಟಗಳು, ಅಡಿಕೆ ತೆಂಗಿನ ತೋಟಗಳ ಮಧ್ಯದಲ್ಲಿ ಕಂಗೊಳಿಸುವ ಸುರ್ಯದ ಸದಾಶಿವ ರುದ್ರ ದೇವರ ದರ್ಶನ ಪಡೆದು ಅಲ್ಲಿಯ ಅರ್ಚಕರನ್ನು ಮಾತನಾಡಿಸಿದಾಗ ಆ ಕ್ಷೇತ್ರದ ಒಂದೊಂದೇ ವಿಶೇಷಗಳು ಅನಾವರಣಗೊಂಡವು.

ಅವರ ಅಭಿಪ್ರಾಯದಂತೆ  ಈ ಕ್ಷೇತ್ರವು ಭಕ್ತರ ಹರಕೆ ತೀರಿಸುವ ಕ್ಷೇತ್ರ ಮತ್ತು ಮಣ್ಣಿನ ಹರಕೆಯ ಸಂಪ್ರದಾಯದ ಕ್ಷೇತ್ರ ಎಂದು ಮನೆ ಮಾತಾಗಿದೆ.

ಭಕ್ತಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರನ್ನು ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ ಸಿದ್ಧಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯ ಹೇಗೆ ಆರಂಭವಾಯ್ತು? ಎಂಬುದಕ್ಕೆ ಯಾವುದೇ ಪುರಾವೆ ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆಗೊಂಬೆಗಳ ರಾಶಿಯೇ ಸಾಕ್ಷಿಯಾಗಿದೆ.





ಬೆಳ್ಳಿ, ಬಂಗಾರ, ಹಣ, ದವಸ-ಧಾನ್ಯ ಇವ್ಯಾವುದೂ ದುರ್ಲಭವಾದ ಸಂದರ್ಭದಲ್ಲೂ ಭೂಮಿಯಲ್ಲಿ ಲಭ್ಯವಿರುವ ಮಣ್ಣಿನಲ್ಲೇ ಗೊಂಬೆಗಳನ್ನು ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸುವುದು ಬಹುಶಃ ಅತ್ಯಂತ ದೀನ-ದುರ್ಬಲರಿಗೂ ಸುಲಭಸಾಧ್ಯ ಸರಳ ಹರಕೆ ಪದ್ದತಿಯಾಗಿ ಹಳ್ಳಿಯ ರೈತಾಪಿ ಜನರಿಂದ ಆರಂಭವಾಗಿರಬಹುದು . ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಲೂ ಇದ್ದಿರಬಹುದು . 

ಭಕ್ತರು ತಮ್ಮ ಸಂಕಲ್ಪಗಳನ್ನು ದೇವರಲ್ಲಿ ನಿವೇದಿಸಿಕೊಂಡು ಪ್ರಾರ್ಥಿಸಿ ಅದು ಈಡೇರಿದ ಮೇಲಷ್ಟೆ ಹರಕೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ. ಉದಾಹರಣೆಗೆ ಒಬ್ಬ ವ್ಯಕ್ತಿ ಒಂದು ಮನೆಯನ್ನು ಕಟ್ಟಿಸಬೇಕೆಂದು ಬಯಸಿದಲ್ಲಿ ಅದು ನಿರ್ವಿಘ್ನವಾಗಿ ನೆರವೇರಿಸಿದರೆ ಸುರ್ಯ ಸದಾಶಿವರುದ್ರ ದೇವರಿಗೆ ಹರಕೆ ಒಪ್ಪಿಸುತ್ತೇನೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರೆ ಈ ಹರಕೆ ಶ್ರೀ ಕ್ಷೇತ್ರದಲ್ಲಿ ಆಗಬಹುದು ಅಥವಾ ಅವರವರ ಮನೆಯಲ್ಲೇ ಪ್ರಾರ್ಥನೆ ಮಾಡಿಕೊಳ್ಳಬಹುದು.ಮನೆ ನಿರ್ಮಾಣ ಆದನಂತರ ಅಂದರೆ ನಮ್ಮ ಇಷ್ಟಾರ್ಥ ಸಿದ್ದಿಸಿದ ಮೇಲೆ  ಮನೆಯ ಮಣ್ಣಿನ ಆಕೃತಿಯನ್ನು ಒಂದು ಸೇರು ಅಕ್ಕಿ, ಒಂದು ತೆಂಗಿನ ಕಾಯಿ, 5 ರೂ. ಕಾಣಿಕೆಯ ಜೊತೆ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸುವ ಮೂಲಕ ಹರಕೆ ಒಪ್ಪಿಸಬಹುದು. ಇದೇ ರೀತಿ ಸಂತಾನಪ್ರಾಪ್ತಿಗಾಗಿ ತೊಟ್ಟಿಲು ಮಗು, ಮದುವೆ ಭಾಗ್ಯಕ್ಕಾಗಿ ಗಂಡು-ಹೆಣ್ಣಿನ ಗೊಂಬೆ, ವಿದ್ಯಾಭ್ಯಾಸದ ಸಫಲತೆಗಾಗಿ ಪುಸ್ತಕ - ಪೆನ್ನು, ದೇಹಾರೋಗ್ಯಕ್ಕಾಗಿ ಮನುಷ್ಯಾಕೃತಿ ಅಥವಾ ಸಂಬಂಧಪಟ್ಟ ಅಂಗಾಂಗಗಳು, ವಾಹನ ಖರೀದಿಸುವಂತಾಗಲು 

ವಾಹನಗಳು, ಒಳ್ಳೆಯ ಜಲಮೂಲಕ್ಕಾಗಿ ಬೋರ್ ವೆಲ್  ಬಾವಿ ಇತ್ಯಾದಿಯಾಗಿ ಹರಕೆ ಒಪ್ಪಿಸುವ ಪದ್ಧತಿ ಇಲ್ಲಿದೆ. ಕೌಟುಂಬಿಕ ಸಮಸ್ಯೆ, ಆರೋಗ್ಯ, ವಿದ್ಯಾಭ್ಯಾಸ, ವ್ಯವಹಾರ, ಕೃಷಿ, 

 ಜೀವನದ ಎಲ್ಲಾ ವಿಚಾರಗಳ ಸಂಬಂಧಪಟ್ಟ ಹಾಗೆ ದೇವರಲ್ಲಿ ಪ್ರಾರ್ಥಿಸಿ ಅವು ಈಡೇರಿದಾಗ ಅದಕ್ಕೆ ಸೂಕ್ತವಾದ ಮಣ್ಣಿನ ಗೊಂಬೆಗಳನ್ನು ದೇವರಿಗೆ ಹರಕೆ ಒಪ್ಪಿಸುವುದನ್ನು ಇಲ್ಲಿ ಕಾಣಬಹುದಾಗಿದೆ. ಕಾರು, ಬಸ್ಸು, ವಿಮಾನ, ದೋಣಿ, ಹೆಲಿಕಾಪ್ಟರ್, ಕಟ್ಟಡಗಳು, ಕೈ, ಕಾಲು, ಹೃದಯ, ಕಿಡ್ನಿ, ಕಂಪ್ಯೂಟರ್, ಮೇಜು, ಕುರ್ಚಿ, ದನ, ಕರು, ನಾಯಿ, ಕೋಳಿ - ಇತ್ಯಾದಿ ನೂರಾರು ತರದ ಮಣ್ಣಿನ ಹರಕೆಗಳನ್ನು ದೇವರಿಗೆ ಅರ್ಪಿಸಿರುವುದನ್ನು ಇಲ್ಲಿ ನೋಡಬಹುದಾಗಿದೆ. ಒಬ್ಬನೇ ವ್ಯಕ್ತಿ ಎಷ್ಟು ಹರಕೆಗಳನ್ನೂ ಬೇಕಾದರೂ ಹೊರಬಹುದು ಏಕೆಂದರೆ ಮಾನವನ ಆಸೆಗೆ ಮಿತಿಯಿಲ್ಲವಲ್ಲ.ಆದರೆ ಆ ಎಲ್ಲಾ ಆಸೆಗಳ ಈಡೇರಿಸುವ ದೇವನಿರುವುದೇ ನಮ್ಮ ಭಾಗ್ಯ.

ಭಕ್ತರು ದೇವಸ್ಥಾನದಲ್ಲಿ ಅರ್ಪಿಸಿದ ಮಣ್ಣಿನ ಹರಕೆಗೊಂಬೆಗಳು, ಅಕ್ಕಿ, ತೆಂಗಿನಕಾಯಿಗಳನ್ನು ಮಧ್ಯಾಹ್ನ ಮಹಾಪೂಜೆಯ ಮೊದಲು ದೇವಸ್ಥಾನದ ಸಮೀಪವೇ ಇರುವ ಮೂಲಕ್ಷೇತ್ರ ಹರಕೆಬನಕ್ಕೆ  ಒಯ್ಯಲಾಗುವುದು. ಅಲ್ಲಿ ಅರ್ಚಕರು ಪೂಜೆ ಸಲ್ಲಿಸಿ ಹರಕೆಗೊಂಬೆಗಳನ್ನು ಬನದಲ್ಲಿ ಜೋಡಿಸಿಡುತ್ತಾರೆ.

ಈ ಮಣ್ಣಿನ ಗೊಂಬೆಗಳನ್ನು ಮಣ್ಣಿನಿಂದ ಮಾಡಿ ಕುಲುಮೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ದೇವರಿಗೆ ಅರ್ಪಿಸುವಾಗ ಈ ಗೊಂಬೆಗಳಲ್ಲಿ ಯಾವುದೇ ರೀತಿಯ ಬಿರುಕು, ಒಡಕು ಇರಬಾರದು ಎಂಬುದು ಪ್ರತೀತಿ. ದೂರದ ಊರಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಈಗ ಎಲ್ಲಾ ರೀತಿಯ ಹರಕೆ ಗೊಂಬೆಗಳನ್ನು ಕುಂಬಾರರಿಂದ ಮಾಡಿಸಿ ದೇವಸ್ಥಾನದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.ದೇವಸ್ಥಾನದ ಬಲಭಾಗಕ್ಕೆ ಒಂದು ಅಂಗಡಿ ಇದೆ ಆ ಅಂಗಡಿಯಲ್ಲಿ ಎಲ್ಲಾ ರೀತಿಯ ಗೊಂಬೆಗಳು ಮತ್ತು ಹರಕೆ ವಸ್ತುಗಳು ಲಭ್ಯವಿವೆ.





ಈ ಕ್ಷೇತ್ರಕ್ಕೆ ಸುರ್ಯ ಎಂಬ ಹೆಸರಿನ ಹಿನ್ನೆಲೆಯನ್ನು ವಿಚಾರಿಸಿದಾಗ ಅರ್ಚಕರು ನೀಡಿದ ಮಾಹಿತಿಯಂತೆ  

'ಸುರ್ಯ' ಎಂಬ  ಹೆಸರು ಬರಲು ಕಾರಣವಾದ ಒಂದು ದಂತಕಥೆ ಇದೆ. ಹಿಂದೆ ಒಬ್ಬಾಕೆ ತನ್ನ ಮಗ ಸುರೆಯನ ಜೊತೆ ಈ ಪ್ರದೇಶದಲ್ಲಿದ್ದ ಕಾಡಿಗೆ ಸೊಪ್ಪು ಕಡಿಯಲೆಂದು ಹೋಗಿದ್ದಳಂತೆ. ಸೊಪ್ಪು ಕಡಿಯುವಾಗ ಸೊಪ್ಪಿನೆಡೆಯಲ್ಲಿ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ. ಆಗ ಗಾಬರಿಗೊಂಡ ಆಕೆ ತನ್ನ ಮಗನನ್ನು "ಓ.. ಸುರೆಯಾ....” ಎಂದು ಕರೆದಳು ಹಾಗೂ ಈ ಘಟನೆಯ ನಂತರ ಈ ಕ್ಷೇತ್ರಕ್ಕೆ ಸುರೆಯ, ಸುರಿಯ, 'ಸುರ್ಯ' ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಅದೇ ರೀತಿ ಆ ಲಿಂಗ ರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತು  ಎಂಬುದು ಪ್ರತೀತಿ.


ದೇವಸ್ಥಾನದ ಉತ್ತರಕ್ಕೆ ಸುಮಾರು 100ಮೀಟರ್ ದೂರದಲ್ಲಿ ಪ್ರಶಾಂತವಾದ ವನರಾಶಿಯ ಮಧ್ಯೆ ಮೇಲಿನ ಘಟನೆ ನಡೆಯಿತೆಂದು ಹೇಳಲಾಗುವ ಪ್ರದೇಶ ಹರಕೆಬನ  ಇದೆ.ಈ ಕ್ಷೇತ್ರದ ಮೂಲದ ಬಗ್ಗೆ ಒಂದು ಐತಿಹ್ಯವಿದೆ. ಹಿಂದೆ ಈ ಪ್ರದೇಶದಲ್ಲಿ ಬೈಗು ಮಹರ್ಷಿಯ ಶಿಷ್ಯರೊಬ್ಬರು ತಪವನ್ನು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಲಿಂಗ ರೂಪದಲ್ಲಿ ಇಲ್ಲಿ ನೆಲೆಯಾದರು ಎಂಬ ಪ್ರತೀತಿ ಇದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆ ಗಳು ಹಾಗೂ ಶಿಲಾಪಾದಗಳು ಇವೆ. ಮಹರ್ಷಿಗಳ ತಪೋಭೂಮಿಯಾಗಿದ್ದು, ದೇವರೊಲಿದ  ಪುಣ್ಯಕ್ಷೇತ್ರ, ಕಾಲಾಂತರದಲ್ಲಿ ಸೊಪ್ಪು ಕಡಿಯುವ ಮಹಿಳೆಯ ಮೂಲಕ ಊರಿನ ಮುಖ್ಯಸ್ಥರ ಗ್ರಾಮಸ್ಥರ ಗಮನಕ್ಕೆ ಬಂದು, ಇದರ ಸಮೀಪದಲ್ಲಿ ದೇವಾಲಯ ನಿರ್ಮಾಣ ಮಾಡಿದರು. ಎಂಬುದು ಕ್ಷೇತ್ರದ ಮೂಲದ ಬಗ್ಗೆ ಇರುವ ಐತಿಹ್ಯ.


ಇಂದಿಗೂ ಈ ಲಿಂಗ ರೂಪಿ ಶಿಲೆಗಳಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಭಕ್ತರಿಂದ ಸಮರ್ಪಿತವಾದ ಹರಕೆಗೊಂಬೆಗಳನ್ನು ಈ ಲಿಂಗಗಳ ಸುತ್ತಲೂ ಜೋಡಿಸಿಡಲಾಗುತ್ತದೆ. ಭಕ್ತಾದಿಗಳಿಗೆ ಹಗಲು ವೇಳೆ ಈ 'ಹರಕೆ ಬನ' ಸಂದರ್ಶನಕ್ಕೆ ಅವಕಾಶವಿರುತ್ತದೆ.

ಈ ವಿಷಯಗಳನ್ನು ತಿಳಿದು ನಂತರ ದೇವಾಲಯದಿಂದ ಹೊರಬಂದ ನಮಗೆ ಕಾಣಿಸಿದ್ದು ನಾಗಬನ .

ದೇವಸ್ಥಾನದ ಬಲಭಾಗದಲ್ಲಿರುವ ನಾಗಬನದಲ್ಲಿ  ನಾಗದೇವರಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಪಂಚಮಿ, ಷಷ್ಠಿ ಹಾಗೂ ನಾಗರ ಪಂಚಮಿ, ಕುಕ್ಕೆ ಪಷ್ಠಿಯಂದು ವಿಶೇಷ ಪೂಜೆ ನಡೆಯುತ್ತದಂತೆ. 

ಇದರ ಜೊತೆಯಲ್ಲಿ ದೈವ ಸಾನ್ನಿಧ್ಯವೂ ಈ ದೇವಾಲಯದ ಸಂಕೀರ್ಣದಲ್ಲಿರುವುದು ಗಮನಕ್ಕೆ ಬಂತು.ದೇವಸ್ಥಾನದ ಪೌಳಿಯಲ್ಲಿ, ಬಲಭಾಗದಲ್ಲಿ ಕೊಡಮಣಿತ್ತಾಯಿ, ಪಿಲಿಚಾಮುಂಡಿ, ಇತ್ಯಾದಿ ದೈವಗಳ ಸಾನ್ನಿಧ್ಯ ಇದೆ. ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಈ ದೈವಗಳಿಗೆ ನೇಮೋತ್ಸವ ನಡೆಯುತ್ತದಂತೆ.

ಈ ಪ್ರದೇಶದಲ್ಲಿ ನನಗೆ ಬಹಳ ಇಷ್ಟವಾದ ಮತ್ತೊಂದು ಸ್ಥಳ ಅದು ಸುಂದರ ಕೊಳ.  

ದೇವಸ್ಥಾನದ ಉತ್ತರಕ್ಕೆ 50 ಮೀಟರ್ ದೂರದಲ್ಲಿ ನಯನ ಮನೋಹರ ಕೊಳವು ಸುಮಾರು 70x80 ಅಡಿ ವಿಸ್ತಾರವಿದೆ. 35 ಅಡಿ ಆಳವಿದೆ. ಕೊಳದ ಮಧ್ಯ ಒಂದು ಸುಂದರ ಮಂಟಪವಿದ್ದು, ಇದು ಮುಳುಗಡೆ ಹೊಂದಿ ಮಳೆಗಾಲದಲ್ಲಿ ಗೋಚರಿಸುವುದಿಲ್ಲ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಯುವ ವರ್ಷಾವಧಿ ಜಾತ್ರೆಯ 'ಕೆರೆಕಟ್ಟೆ  ಉತ್ಸವ'ದ ಸಂದರ್ಭದಲ್ಲಿ ಈ ಮಂಟಪದಲ್ಲಿ ಶ್ರೀ ದೇವರ ಕೆರೆಕಟ್ಟೆ ಪೂಜೆ ನಡೆಯುತ್ತದೆ.




ಈ ದೇವಸ್ಥಾನವನ್ನು ಯಾವಾಗ ನಿರ್ಮಾಣ ಮಾಡಲಾಯಿತು? ಎಂಬುದಕ್ಕೆ, ನಿಖರ ಮಾಹಿತಿ ಅಥವಾ  ಪುರಾವೆಗಳಿಲ್ಲ. ದೇವಸ್ಥಾನದ ಒಳಾಂಗಣದಲ್ಲಿ ಮಂಟಪದಲ್ಲಿರುವ ನಂದಿಯ ವಿಗ್ರಹದ ಪೀಠದಲ್ಲಿ “ಪಿಂಗಲ ನಾಮ ಸಂವತ್ಸರದ ಮಿಥುನ ಮಾಸ ೧೭ನೇ ರವಿವಾರದೊಲು ಶ್ರೀಮತು ವೀರನರಸಿಂಗ ಲಕ್ಷ್ಮಪ್ಪರಸರಾದ ಬಂಗರಾಜ ಒಡೆಯರ ಕಾಲದಲ್ಲಿ ನೂಜಿಯ ಸಂಕು ಅಧಿಕಾರಿಯ ಮಗ ನಾರಾಯಣ ಸೇನ ಭೋವನು ಸುರಾಯದ ದೇವರ ಸನ್ನಿಧಿಯಲ್ಲಿ ಪ್ರತಿಷ್ಠೆ ಮಾಡಿದ ನಂದಿಕೇಶ್ವರನು ನಡೆಸಿದ ಶಂಭುಗೈದು ಶುಭಮಸ್ತು” ಎಂಬುದಾಗಿ ಬರೆಯಲಾಗಿದೆ. ಇದಲ್ಲದೇ ಯಾವುದೇ ಶಾಸನಗಳು ಇಲ್ಲಿ ಲಭ್ಯವಿರುವುದಿಲ್ಲ.


ಅನುವಂಶಿಕವಾಗಿ ಸುರ್ಯಗುತ್ತು ಮನೆತನದ ಆಡಳಿತಕ್ಕೆ ಒಳಪಟ್ಟಿರುವ ಸುರ್ಯದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ.ವೀರೇಂದ್ರ ಹೆಗಡೆ ರವರ ಮಾರ್ಗದರ್ಶನ ಇರುವುದು ಕ್ಷೇತ್ರದ ಕೆಲಸ ಕಾರ್ಯಗಳು ಶಿಸ್ತಿನಿಂದ ಜರುಗಲು ಸಾಧ್ಯವಾಗಿದೆ .

ಆತ್ಮೀಯರೆ ನೀವು ಒಮ್ಮೆ ಸುರ್ಯ ದ ಸದಾಶಿವ ರುದ್ರ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಇಷ್ಟಾರ್ಥ ಗಳನ್ನು ಈಡೇರಿಸಿಕೊಳ್ಳಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


No comments: