04 October 2022

ನಮ್ಮನೆಯ ಮಾರ್ನಾಮಿ...


 ನಮ್ಮನೆಯ ಮಾರ್ನಾಮಿ...


ನಾವು ವಿಜಯ ದಶಮಿಯಂದು ಮಾರ್ನಾಮಿ ಹಬ್ಬ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದೇವೆ.

ಮೊದ ಮೊದಲು ನಮ್ಮ ಪೂರ್ವಜರ ಉಪ್ಪರಿಗೇನಹಳ್ಳಿಯ  ಮನೆಯಲ್ಲಿ ಮಾರ್ನಾಮಿ ಹಬ್ಬ ಮಾಡುತ್ತಿದ್ದ ನಾವು ಕ್ರಮೇಣ ಕೊಟಗೇಣಿಯ ನಮ್ಮ ಮನೆಯಲ್ಲಿ ಹಬ್ಬದ ಆಚರಣೆಯನ್ನು ಮುಂದುವರೆಸಿರುವೆವು. ಅಂದು ಎಲ್ಲರೂ ಬೆಳಿಗ್ಗೆ ಬೇಗನೆ ಎದ್ದು ನೆಲಕಾರ್ನೆ(ಮನೆಯ ಸ್ವಚ್ಚತೆ) ಮಾಡಿ , ಸ್ನಾನ ಮಾಡಿದ ನಂತರ ಹೆಣ್ಣು ಮಕ್ಕಳು ಅಡಿಗೆ ತಯಾರಿಯಲ್ಲಿ ನಿರತರಾದರೆ ಗಂಡಸರು ಪೂಜಾ ಸಾಮಗ್ರಿಗಳನ್ನು ತರುವುದು ಬಾಳೆ ಕಂದುಕಟ್ಟುವುದು, ಹೂ ಜೋಡಿಸುವುದು,ಪತ್ರೆ ತರುವುದು  ಇಂತಹ ಕಾರ್ಯಗಳಲ್ಲಿ ಮಗ್ನರಾಗುತ್ತೇವೆ.  ಇತ್ತೀಚಿನ ದಿನಗಳಲ್ಲಿ ಶ್ರೀ ಚಿದಾನಂದಾವಧೂತ ವಿರಚಿತ  ಶ್ರೀದೇವಿ ಮಹಾತ್ಮೆಯ ಪುಸ್ತಕ ಪಾರಾಯಣ ಮಾಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಹದಿನೆಂಟು ಅಧ್ಯಾಯ ಪಾರಾಯಣ ಮಾಡಿ ಕೊನೆಯಲ್ಲಿ ಮಂಗಳಾರತಿ ಮಾಡಿ ನೆಂಟರಿಷ್ಟರಿಗೆ ಪ್ರಸಾದ ನೀಡಿ ನಾವು ತಿನ್ನುತ್ತೇವೆ .ನಮ್ಮ ಮನೆಯಲ್ಲಿ ದಶಮಿಯಂದು ಆಯುಧ ಪೂಜೆಯನ್ನು ಮಾಡುತ್ತೇವೆ ನಮ್ಮ ಟ್ರಾಕ್ಟರ್, ಕಾರ್, ಬೈಕ್ ಗಳನ್ನು ಸಾಲಾಗಿ ನಿಲ್ಲಿಸಿ ಪುಷ್ಪಾಲಂಕಾರ ಮಾಡಿ ಪೂಜೆ ಮಾಡುತ್ತೇವೆ. ಸಂಜೆ ಹಿರಿಯರ ಪೂಜೆಯ ಸಂಭ್ರಮ ಕಳಸಕ್ಕೆ ಅಜ್ಜ ಅಜ್ಜಿಯರ ಬಟ್ಟೆಗಳನ್ನು ಉಡಿಸಿ ಹೂವಿನ ಹಾರ ಆಭರಣಗಳನ್ನು ಹಾಕಿ ಸಿಂಗರಿಸಿ ಹಣ್ಣು, ವಿವಿಧ ಭಕ್ಷಗಳ ಎಡೆಯನಿಟ್ಟು  ಕಾಯಿ ಒಡೆದು ಕುಟುಂಬದ ಸರ್ವರೂ  ಪೂಜಿಸಿ ದೂಫ  ಹಾಕುವೆವು. 

ನಂತರ "ಮೂಡ್ಲ ಮಣೇವು" ಎಂಬ ವಿಶಿಷ್ಟವಾದ ಆಚರಣೆ ಆರಂಭ . ರಾತ್ರಿ ಹತ್ತುಗಂಟೆಯ ನಂತರ ಆರಂಭವಾಗುವ ಈ ಆಚರಣೆಗೆ ನಮ್ಮ ಬೀದಿಯ ಎಲ್ಲಾ ಅಣ್ಣತಮ್ಮಂದಿರ ಮನೆಯವರು ಶಂಖ ,ಜಾಗಟೆ, ಭವನಾಸಿಗಳ ಸಮೇತ ಬಂದು ಒಂದೆಡೆ ಆಸೀನರಾಗುತ್ತಾರೆ. ಅದೇ ಸಮಯದಲ್ಲಿ ಉರಿಮೆಯವರು, ಪಂಜಿನವರು ಬಂದು ತಮ್ಮ ಸೇವಾಕೈಂಕರ್ಯ ನೆರವೇರಿಸುತ್ತಾರೆ. ಕರಿಯ ಕಂಬಳಿಯ ಮೇಲೆ ಎಲ್ಲಾ ಜಾಗಟೆ, ಭವನಾಸಿ ಇಟ್ಟು ಮುತ್ತೈದೆಯರು ತಂದ ಆರತಿ ಇಟ್ಟು ,ನೆಂಟರ ದಾಸಯ್ಯ ಬಂದು ಮೂಡ್ಲ ಮಣೇವು ಕಾರ್ಯಕ್ರಮಕ್ಕೆ ಸಹಕಾರ ನೀಡುವುದು ಗಮನಾರ್ಹ.ಪೂಜೆಯ ಕಡೆಯ ಘಟ್ಟವೆಂಬಂತೆ ಮಣೇವು ಆಟ ಆರಂಭ! ಒಂದು ಟವಲ್ ಮಡಿಚಿ ನೆಲದ ಮೇಲೆ ಹಾಸಿ  ಅದರ ಮೇಲೆ ಬಾಳೆ ಹಣ್ಣು, ಮತ್ತು ಕಾಯಿ ತಂಬಿಟ್ಟು ಇಟ್ಟು ,ದಾಸಯ್ಯ ನವರು ಅದರ ಸುತ್ತಲೂ ಉರಿಮೆ ಸದ್ದಿಗೆ ಅನುಗುಣವಾಗಿ ಜಾಗಟೆ ಬಡಿಯುತ್ತಾ ಸುತ್ತಿ ಕೊನೆಗೆ ಬಾಳೆ ಹಣ್ಣು ತಿನ್ನುತ್ತಾರೆ. ಮಣೇವಿನ ನಂತರ ಎಲ್ಲಾ ಕಾಯಿ ಮತ್ತು ಬಾಳೆ ಹಣ್ಣು ಒಟ್ಟಿಗೆ ಹಾಕಿ ಮಂಡಕ್ಕಿ ಬೆಲ್ಲ ಬೆರೆಸಿ ಎಲ್ಲರಿಗೂ ಹಂಚಿ ತಿನ್ನುವುದರೊಂದಿಗೆ ಮೂಡಲ ಮಣೇವಿಗೆ ಮಂಗಳ ಹಾಡುತ್ತೇವೆ.ಕೊನೆಯಲ್ಲಿ ಉರುಮೆ ಮತ್ತು ಪಂಜಿನವರಿಗೆ ನಮ್ಮ ಕೇರಿಯವರು ಶಕ್ತನುಸಾರ ಹಣ ನೀಡುವುದನ್ನು ಮರೆಯುವುದಿಲ್ಲ. ಮೂಡ್ಲಮಣೇವು ನಂತರ ನಮ್ಮ ಮನೆಗಳಲ್ಲಿ ಪುನಃ ಪೂಜೆ ಮಾಡಿ ನೆಂಟರ ದಾಸಯ್ಯ ಬಂದು ಗೋವಿಂದ ..ಎನ್ನುವ ಶಾಸ್ತ್ರ ಮಾಡಿದಾಗ ಕೆಲವೊಮ್ಮೆ ರಾತ್ರಿ ಹನ್ನೆರಡು ಗಂಟೆ ಹೊಡೆದ ಉದಾಹರಣೆ ಸಹ ಇದೆ.ಗೋವಿಂದ...ಶಾಸ್ತ್ರ ಮುಗಿದ ಮೇಲೆ ಊಟ ಮಾಡಿ ಮಲಗಿದಾಗ ಆಗ ಆ ವರ್ಷದ ಮಾರ್ನಾಮಿ ಹಬ್ಬ ಸುಸೂತ್ರವಾಗಿ ನಡೆದಂತೆ... ಮಲಗುವ ಮುನ್ನ ಹಾರನ ಕಣಿವೆ ರಂಗಪ್ಪನ ಅಂಬು ನೆನೆದು ಮಲಗಿದರೆ ಕನಸಲ್ಲೂ ಅಂಬಿನ ಉತ್ಸವ ಜರುಗುತ್ತವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


No comments: