25 October 2022

ದೀವಣಿಗೆ ಹಬ್ಬ ...


 

ದೀವಣಿಗೆ ಹಬ್ಬ

ನಮ್ಮ ಹುಟ್ಟೂರು ಕೊಟಗೇಣಿಯಲ್ಲಿ ದೀಪಾವಳಿ ಆಚರಣೆಯ ಸಂಪ್ರದಾಯವಿರಲಿಲ್ಲ .ದಸರಾ ರಜೆಗೆಂದು ಮಾವನವರ ಊರಾದ ಯರಬಳ್ಳಿಗೆ ಹೋದರೆ ಕೆಲವೊಮ್ಮೆ ಶಾಲೆ ಶುರುವಾದರೂ ಅಮ್ಮ ಕರೆದರೂ ಬರುತ್ತಿರಲಿಲ್ಲ.ಕಾರಣ ದೀವಣಿಗೆ ಹಬ್ಬ! ದೀವಣಿಗೆ  ಹಬ್ಬ ಮುಗಿಸಿಕೊಂಡೇ ಬರುವೆ ಎಂದು ಅಮ್ಮನಿಗೆ ಹೇಳುತ್ತಿದ್ದೆ.  ದೀಪಾವಳಿ ಹಬ್ಬವನ್ನು ಯರಬಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ "ದೀವಣಿಗೆ " ಹಬ್ಬ ಎಂದೇ ಕರೆಯುತ್ತಿದ್ದರು. ಆಗ ನಮ್ಮ ಮಾವನವರ ಮನೆಯಲ್ಲಿ ಬಹಳ ಚೆನ್ನಾಗಿ ಸಾಕಿದ ಎರಡು ಬಿಳಿ ಎತ್ತುಗಳಿದ್ದವು .ನೋಡಲು ಚೆನ್ನಾಗಿದ್ದರೂ ಗುದ್ದುವುದರಲ್ಲಿ  ಬಹಳ ಚಾಲಾಕಿಗಳಾಗಿದ್ದವು .ನಮ್ಮ ಚಿಕ್ಕಮಾಮ ಮಾತ್ರ ಅವುಗಳ ಕಟ್ಟುವುದು, ಮೇಯಿಸುವುದು , ಮೈತೊಳೆಯುವುದು ಮುಂತಾದ ಕೆಲಸ ಮಾಡುತ್ತಿದ್ದರು. ನಾನು ಅವರ ಜೊತೆಯಲ್ಲಿ ಭಯದಿಂದಲೇ ಎತ್ತುಗಳ ಬಳಿ ಸಾಗುತ್ತಿದ್ದೆ.
ದೀಪಾವಳಿ ಹಬ್ಬ ಹತ್ತಿರ ಬಂದಂತೆ ಎತ್ತುಗಳನ್ನು ಚೆನ್ನಾಗಿ  ಮೇಯಿಸಲು ಹೊಲಗಳ ಬದುಗಳಲ್ಲಿ ಮತ್ತು ಹುಲ್ಲುಗಾವಲಿನ ಕಡೆ ಹೋಗುತ್ತಿದ್ದೆವು . ಬದುಗಳಲ್ಲಿ ಎತ್ತು ಮೇಯುವಾಗ ನಾವೂ ಆಗ ತಾನೆ ಎಳೆಕಾಯಿಯಾಗಿರುವ  ಕಡ್ಲೇ ಕಾಯಿ, ಸಜ್ಜೆ ತೆನೆ, ಅವರೇ ಕಾಯಿ, ಅಲಸಂದೇ ಕಾಯಿ, ಹೆಸರು ಕಾಯಿ , ಮುಂತಾದವುದಳನ್ನು ಮೇಯುತ್ತಿದ್ದೆವು. 
ದೀಪಾವಳಿ ಹಬ್ಬದ ದಿನ ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಎತ್ತು ಮೇಯಿಸಲು ಹೊಲಕ್ಕೆ ಹೋಗಿ ಮಧ್ಯಾಹ್ನದ ವೇಳೆಗೆ ದೊಡ್ಡಸೇತುವೆ ಹಳ್ಳದಲ್ಲಿ ಎತ್ತುಗಳ ಮೈತೊಳೆದುಕೊಂಡು  ಮನೆಗೆ ಬರುತ್ತಿದ್ದೆವು .ನಮ್ಮ ಊಟದ ನಂತರ ಎತ್ತಿನ ಕೊಂಬು ಎರೆಯುವವರು ಬರುತ್ತಿಧ್ದರು . ಎತ್ತಿನ ಕೊಂಬುಗಳನ್ನು ಸೂಕ್ಷ್ಮವಾಗಿ ಎರೆದು ನೈಸ್ ಆಗಿ ಮಾಡಿ ನಾವು ಕೊಟ್ಟಷ್ಟು ಹಣ ಪಡೆದು ಅವರು ತೆರಳಿದ ಬಳಿಕ ಎತ್ತುಗಳಿಗೆ  ಅಲಂಕಾರ ಮಾಡುವ ಕೆಲಸ ಶುರು.ಮೊದಲಿಗೆ ಎತ್ತಿನ ಕೊಂಬುಗಳಿಗೆ ಬಣ್ಣ ಬಳಿಯುವುದು. ನಂತರ. ಕೊಂಬಿನ ತುದಿಗೆ ಕಳಸದಂತಹ  ಕೊಡಣಸು ಹಾಕುತ್ತಿದ್ದೆವು. ಕೆಲವೊಮ್ಮೆ ಗಗ್ಗರ ಸಹ ಹಾಕಿ . ಕಾಲಿಗೆ ಗೆಜ್ಜೆ ಕಟ್ಟುತ್ತಿದ್ದೆವು.ಎರಡು ಕೊಂಬುಗಳ ತುದಿಗೆ ಒಂದು ಕಡ್ಡಿ ಕಟ್ಟಿ ಎತ್ತಿನ ಮುಖಗಳಿಗೆ   ಮುಖವಾಡ ಕಟ್ಟಿ   ಅದಕ್ಕೆ ಚೆಂಡು ಹೂ ,ಕನಕಾಂಬರ ಹೂ, ಸೇವಂತಿಗೆ ಹೂಗಳ ಹಾರವನ್ನು ,ಬಲೂನ್ ಗಳನ್ನು, ಪೇಪರ್ ನಿಂದ ಮಾಡಿದ ಡಿಸೈನ್ ಗಳನ್ನು ಕಟ್ಟುತ್ತಿದ್ದೆವು . ಇದರ ಜೊತೆಗೆ ಎತ್ತುಗಳ ಮೈಮೇಲೆಲ್ಲ ಅದರ ಚರ್ಮ ಕಾಣದಂತೆ ಹೂಗಳನ್ನು ಹೊದಿಸುತ್ತಿದ್ದೆವು. ಅದು ಎಂಭತ್ತರ ದಶಕ   ಆಗಿನ ಕಾಲಕ್ಕೆ ನೂರಾರು ರೂಪಾಯಿಗಳನ್ನು ಎತ್ತುಗಳ ಅಲಂಕಾರಕ್ಕಾಗಿ ನಮ್ಮ ಮಾವನವರು   ಖರ್ಚು ಮಾಡುತ್ತಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಕೊಂಬು ಎರೆಯುವ ಪ್ರಕ್ರಿಯೆಯ ಮೂಲಕ ಅರಂಭವಾದ ನಮ್ಮ  ಎತ್ತುಗಳ  ಅಲಂಕಾರ ಮುಗಿದಾಗ ಸೂರ್ಯ ತನ್ನ ಗೂಡು ಸೇರಿದ್ದ.ಅಲಂಕಾರ ಮುಗಿದ ಮೇಲೆ ನಮ್ಮ ಎತ್ತುಗಳ ಅಂದ ಚೆಂದ ನೋಡಿ ನಮಗೇ ಗುರುತು ಹಿಡಿಯಲಾಗುತ್ತಿರಲಿಲ್ಲ. ಸಂಜೆಗೆ ಮನೆ ದೇವರ ಪೂಜೆ ಮಾಡಿ ಎಡೆ ಇಟ್ಟು ಎತ್ತುಗಳಿಗೂ ಎಡೆ ತಿನ್ನಿಸಿದರೆ ಅರ್ಧ ದೀಪಾವಳಿ ಹಬ್ಬ ಮುಗಿದಂತೆ. ಕ್ರಮೇಣ ನನ್ನ ಬೇಡಿಕೆಯ ಕಡೆ ಗಮನ ಹರಿಸಿದ ನನ್ನ ಮಾವನವರು ವಿರೂಪಾಕ್ಷಪ್ಪರ ಅಂಗಡಿಗೆ ಕರೆದುಕೊಂಡು  ಹೋಗಿ ನನಗೂ ನನ್ನ ಅಣ್ಣನಿಗೂ     ಕಲ್ಲಲ್ಲಿ ಕುಟ್ಟುವ ಪಟಾಕಿ, ತಂತಿ ಮತಾಪು, ಭೂಚಕ್ರ ಮುಂತಾದ ಶಬ್ದ ಬರದ ಪಟಾಕಿ ಕೊಡಿಸುತ್ತಿದ್ದರು.ಆ ಪಟಾಕಿ ಹೊಡೆವಾಗ ನಮಗೆ ಸ್ವರ್ಗ ಮೂರೇ ಗೇಣು.
ಅಲಂಕೃತವಾದ ಎತ್ತುಗಳನ್ನು ಉರುಮೆ ಬಾರಿಸಿಕೊಂಡು ಮೆರವಣಿಗೆ ಮಾಡಿಕೊಂಡು ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಬಯಲಿನಲ್ಲಿ ಒಣಗಿದ ಸೀಮೇಜಾಲಿ ಮತ್ತು  ಇತರ ಕಟ್ಟಿಗೆಯನ್ನು ಒಂದೆಡೆ ದೊಡ್ಡದಾದ ಗುಡ್ಡೆ ಹಾಕಿರುವ" ಈಡು" ಎಂಬ ಕಡೆ ಎತ್ತುಗಳನ್ನು ಓಡಿಸಿಕೊಂಡು ಹೋಗುತ್ತಿದ್ದರು. ಊರಿನ ಎಲ್ಲಾ ಅಲಂಕೃತವಾದ ಎತ್ತುಗಳ ನೋಡುವುದೇ ಒಂದು ಸಂಭ್ರಮ ಕತ್ತಲಲ್ಲೂ ಎತ್ತುಗಳ ಸೌಂದರ್ಯ ಕಂಗೊಳಿಸುತ್ತಿತ್ತು. ಎಲ್ಲಾ ಎತ್ತುಗಳು ಈಡಿನ ಬಳಿ ಬಂದಾಗ ಈಡಿಗೆ ಬೆಂಕಿ ಹಚ್ಚುತ್ತಿದ್ದರು. ಎತ್ತು ಹಿಡಿದವರು ಜೋರಾಗಿ ಕೇಕೇ ಹಾಕುತ್ತಾ ,ಶಿಳ್ಳೆ ಹೊಡೆಯುತ್ತಾ ತಮ್ಮ ಎತ್ತುಗಳು ಜೊತೆ ಈಡು ಸುತ್ತಿ ಊರ ಕಡೆ ಎತ್ತುಗಳ ಜೊತೆಯಲ್ಲಿ ಓಡಿಬರುವ ದೃಶ್ಯಗಳನ್ನು ನೋಡುವುದೇ ಚೆಂದ.ಅಂತಹ ಸಂಧರ್ಭದಲ್ಲಿ ಕೆಲ ಎತ್ತುಗಳಿಗೆ ಮತ್ತು ಜನರಿಗೆ ಬೆಂಕಿಯಿಂದ ಸಣ್ಣ ಪುಟ್ಟ ಗಾಯಗಳಾದ ಉದಾಹರಣೆಗಳೂ ಉಂಟು. ಊರ ಬಳಿ ಬಂದ ಎತ್ತುಗಳನ್ನು ಹಿಡಿದ ರೈತರು ಮೊದಲಿಗೆ ಮಾರಮ್ಮನ ಗುಡಿ ಸುತ್ತಿಸಿ ಆಶೀರ್ವಾದ ಪಡೆದು ತೀರ್ಥ  ಬಂಡಾರ ಹಾಕಿಸಿಕೊಂಡು ರಂಗಪ್ಪನವರ ಗುಡಿ ಸುತ್ತಿಸಿ ಮನೆಗೆ ತೆರಳಿ ಎತ್ತುಗಳಿಗೆ ಮೇವು ಹಾಕಿ ನಾವು ಕರಿಗಡುಬು ಊಟ ಮಾಡುತ್ತಿದ್ದೆವು  . ಊಟದ ಬಳಿಕ ನಾನು ಮತ್ತು ಅಣ್ಣ ಈ ಮೊದಲೇ ತಂದ ಕಲ್ಲಲ್ಲಿ ಕುಟ್ಟುವ ಪಟಾಕಿಯ ಪುಟ್ಟ ಪೇಪರ್ ಡಬ್ಬಿ ಬಿಚ್ಚಿ ಚಟ್ ಎಂದು ಒಂದೊಂದೇ ಪಟಾಕಿ ಕುಟ್ಟಿ ಸಂತಸ ಪಡುವುದನ್ನು ನಮ್ಮಜ್ಜಿ ನೋಡಿ ಖುಷಿ ಪಡುತ್ತಾ ಹುಷಾರು ಕಣ್ರೋ ಎಂದು ಹೇಳುವುದು ಈಗಲೂ ಕಿವಿಯಲ್ಲಿ ಕೇಳಿಸಿದಂತಾಗುತ್ತದೆ. ಈಗ ಹಳ್ಳಿಗಳಲ್ಲೂ ಎತ್ತುಗಳು ಕಡಿಮೆಯಾಗಿ ಟ್ರಾಕ್ಟರ್ ಟಿಲ್ಲರ್ ಬಂದಿವೆ ಎತ್ತುಗಳ ಪೂಜೆಯೆಲ್ಲಿ ಬಂತು?
ನಿನ್ನೆ ನನ್ನ ಚಿಕ್ಕ ಮಗಳು ಅಪ್ಪಾ ನನಗೂ ದೀಪಾವಳಿ ಹಬ್ಬಕ್ಕೆ  ಪಟಾಕಿ ಕೊಡಿಸು ಎಂದಾಗ ಮನುಷ್ಯ ಪ್ರಾಣಿಗಳ ಸಹಜೀವನದ ನನ್ನ ಬಾಲ್ಯದ ದೀಪಾವಳಿ ಬಹಳ ನೆನಪಾಯಿತು. ಬೈಕ್ ಹತ್ತಿ ಮಗಳಿಗೆ ಪಟಾಕಿ ಕೊಡಿಸಲು ತುಮಕೂರು  ನಗರದಲ್ಲಿ ವಾಹನಗಳಿಂದ ಗಿಜಿಗುಡುವ ರಸ್ತೆಯಲ್ಲಿ   ಹೊರಟಾಗ ಯಾಕೋ ಟ್ರಾಪಿಕ್ ನಲ್ಲಿ ಬಹಳ ಕಾಲ ರೆಡ್ ಸಿಗ್ನಲ್ ಕಂಡಂತಾಯ್ತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

No comments: