20 October 2022

ರಾಣಿಝರಿ .ಒಂದು ಸ್ಥಳ ಹಲವು ಜಗತ್ತು...




 

ರಾಣಿ ಝರಿ. ಒಂದು ಸ್ಥಳ ಹಲವು ಜಗತ್ತು.


ರಾತ್ರಿ ಮಲಗುವಾಗ ನನ್ನ ಮೊಬೈಲ್ ನಲ್ಲಿರುವ ಪೆಡೋಮೀಟರ್ "ಇಂದು ನೀನು  12 ಕಿಲೋಮೀಟರ್ ದೂರ  ನಡೆದಿರುವೆ ಅಂದರೆ 17915.... ಹೆಜ್ಜೆಗಳು ಅಭಿನಂದನೆಗಳು".ಎಂದಿತು.

ಆಗ ನನ್ನ ಅಂದಿನ ದಿನಚರಿ ನೆನಪಾಯಿತು. 


ಕಾಡು   ಸುತ್ತಬೇಕು. ಬೆಟ್ಟ ಹತ್ತಬೇಕು. ಎಲ್ಲಾದರೂ ಪರಿಸರದ ಮಧ್ಯೆ ಕಳೆದುಹೋಗಬೇಕು. ವಾರಾಂತ್ಯದಲ್ಲಿ ಮನೆಯವರೆಲ್ಲ ಸೇರಿ ಒಂದು ಒಳ್ಳೆಯ ಜಾಗಕ್ಕೆ ಟ್ರೆಕ್ಕಿಂಗ್ ಹೋಗಬೇಕು ಎಂದು  ಹಂಬಲಿಸವ ನನ್ನಂತಹ ಪರಿಸರ ಪ್ರಿಯರಿಗೆ  ‘ರಾಣಿಝರಿ’ ಹೇಳಿಮಾಡಿಸಿದ ತಾಣ.ಅಂತಹ ತಾಣಕ್ಕೆ ಟ್ರಕ್ಕಿಂಗ್ ನಂತಹ ಪಯಣ ಮಾಡಿದ್ದು ಅವಿಸ್ಮರಣೀಯ ದಿನ.

ಕಲಾವಿದರಾದ ಕೋಟೆ ಕುಮಾರ್ ರವರ ನೇತೃತ್ವದಲ್ಲಿ ಸಣ್ಣ ಪ್ರಮಾಣದ ಚಾರಣ ಮಾಡಲು ಹೊರಟ ನಮ್ಮ ತಂಡದಲ್ಲಿ ಹಿರಿಯರಾದ ಚಂದ್ರಶೇಖರಯ್ಯ, ರಂಗಸ್ವಾಮಯ್ಯ ಮತ್ತು ಎಮ್ ಎಚ್ ಹನುಮಂತರಾಯಪ್ಪ  ಖುಷಿಯಿಂದ ಚಾರಣದಲ್ಲಿ ಪಾಲ್ಗೊಂಡು ನನ್ನ ಸಂತಸವನ್ನು ಇಮ್ಮಡಿಗೊಳಿಸಿದರು.



ಪಶ್ಚಿಮ ಘಟ್ಟದ ಸಹಸ್ರಾರು ಪರ್ವತಶ್ರೇಣಿಗಳ ಪೈಕಿ ಈ ರಾಣಿಝರಿಯೂ ಒಂದು. ಇದರ ಸುತ್ತಲಿನ ಗುಡ್ಡಗಳು ‘ನಾ ನಿನಗಿಂತ ಮೇಲು... ನಾ ನಿನಗಿಂತ ಮೇಲು...’ ಎಂದು ಪೈಪೋಟಿಗೆ ಬಿದ್ದು ಒಂದಕ್ಕಿಂತ ಇನ್ನೊಂದು ಮೇಲಕ್ಕೆ ಬೆಳೆದು ಮುಗಿಲು ಮುಟ್ಟುವ ರೀತಿ ಹಬ್ಬಿಕೊಂಡಿವೆ. ಮಂಜು ಗಿರಿನೆತ್ತಿಯ ಜತೆ ಆಟಕ್ಕಿಳಿದಂತೆ ಸುತ್ತಿ ಸುಳಿದು, ಮುತ್ತಿ ಮುತ್ತಿಕ್ಕಿ ಸಂಭ್ರಮಿಸುವುದನ್ನು ನೋಡುವ ರೋಮಾಂಚನವೇ ಬೇರೆ.




ರಾಣಿಜರಿಯ ತುದಿಯಲ್ಲಿ ನಿಂತು ನೋಡಿದರೆ ಸುಮಾರು 2,500 ಅಡಿ ಕೆಳಕ್ಕೆ ದಟ್ಟವಾಗಿ ಹಬ್ಬಿರುವ ಹಸಿರು ತುಂಬಿದ ಅರಣ್ಯ ಪ್ರದೇಶದ ರಮಣೀಯ ನೋಟ ಕಾಣಸಿಗುತ್ತದೆ. ಈ ಗುಡ್ಡ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶ. ನಾವು ಕಾಫಿನಾಡಿನಲ್ಲಿ ನಿಂತು ತುಳುನಾಡನ್ನು ವೀಕ್ಷಿಸಬಹುದು. ಅದು ಈ ತಾಣದ ವಿಶೇಷ. ಗುಡ್ಡದ ತುದಿಯಿಂದ ಕಣ್ಣುಹಾಯಿಸಿದರೆ  ಚಿಕ್ಕ ಚಿಕ್ಕ ಕಟ್ಟಡಗಳು ರಂಗೋಲಿಯ ಚುಕ್ಕಿಯ ಹಾಗೆ ಕಾಣಿಸುತ್ತವೆ. ಸ್ಥಳೀಯರ ಪ್ರಕಾರ ಅದು ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಗ್ರಾಮ. 




ವರ್ಷದ ಬಹುಕಾಲ ಮಂಜಿನ ಸೆರಗಿನಲ್ಲಿ ತನ್ನ ಸೌಂದರ್ಯವನ್ನು ಮುಚ್ಚಿಕೊಂಡಿರುತ್ತದೆ ಈ ರಾಣಿಝರಿ. ಹಾಗಾಗಿ ಕೆಳಗಿನ ಕಣಿವೆಯನ್ನು ಹಾಗೂ ಸುತ್ತಲಿನ ಗುಡ್ಡಗಳನ್ನು ಕಣ್ಣತುಂಬಿಕೊಳ್ಳಲು ಕಣ್ಣುಗಳಿದ್ದರೆ ಸಾಲದು, ಅದೃಷ್ಟವೂ ಬೇಕು. ನಾವು ಹೋದಾಗ ಮಂಜಿನ ಕಣ್ಣಾಮುಚ್ಚಾಲೆ ನಡದೇ ಇತ್ತು .ಒಂದು ಹಂತದಲ್ಲಿ ಮುಂದೆ ಏನೂ ಕಾಣದಂತೆ ಮಂಜು ಮುಸುಕಿದ್ದೂ ಉಂಟು.  ಆದರೂ ಮಂಜಿನಿಂದ ಮುತ್ತಿಕೊಂಡಿರುವ ರಾಣಿಝರಿಯನ್ನು ನೋಡುವ ಅನುಭವವು ಬೇರೆಯದ್ದೇ! ನೆತ್ತಿಯ ಮೇಲೆ ಸುಮ್ಮನೆ ನಿಂತು ಕಣ್ಣುಚ್ಚಿ, ಎಲ್ಲೋ ಭೂಮಿಯಿಂದಾಚೆ ನಿಂತು ಮೋಡಗಳ ಮಧ್ಯೆ ವಿಹರಿಸುತ್ತಿರುವ ಅನುಭವವಾಗುತ್ತದೆ. ಅಕ್ಟೋಬರ್ ನ ಮಳೆಗಾಲದಲ್ಲಿ  ತಂಗಾಳಿಯು  ಮತ್ತು  ಮಂಜಿನಿಂದ ತುಂಬಿಕೊಂಡು ಚಳಿ ಹುಟ್ಟಿಸುತ್ತದೆ ಈ ಪರ್ವತದ ಒಡಲು. 





ರಾಣಿಝರಿಯು  ಅಷ್ಟೊಂದು ಕಷ್ಟದ ಚಾರಣ ಹಾದಿಯಲ್ಲ. ಕಾರಿನಲ್ಲಿ ಕೊಟ್ಟಿಗೆಹಾರದಿಂದ ಹೊರಟ ನಾವು ಕಳಸ ಹೊರನಾಡ ದಾರಿಯಲ್ಲಿ ಸಾಗಿ 

ಸುಮಾರು 17 ಕಿ.ಮೀ. ದಾರಿ ಕ್ರಮಿಸಿದೆವು. ಸುಂಕಸಾಳ ಎಂಬ ಊರು ಸಿಕ್ಕಿತು . ಸುಂಕಸಾಳದಿಂದ ಮೂರು ಕಿ.ಮೀ. ಚಲಿಸಿದಾಗ  ರಾಣಿಝರಿ ಸಿಕ್ಕಿತ್ತು.

ರಾಣಿಝರಿಗೆ ಸಾಗುವ ದಾರಿಯೂ ಅಷ್ಟೇ ಸೊಗಸಾಗಿದೆ. ಸುತ್ತಲೂ ಹಸಿರಿನಿಂದ ತುಂಬಿರುವ ದಾರಿಯಲ್ಲಿ ಕಾಫಿ ಗಿಡಗಳು ಸೊಬಗು ಹೆಚ್ಚಿಸುತ್ತವೆ. ಕೆಳಗೂರಿನ ಟೀ ಪ್ಲಾಂಟೇಶನ್‍ಗಳನ್ನು  ನೋಡಲು ಕಣ್ಣಿಗೆ ಹಬ್ಬ. ಕಾರಿನಲ್ಲಿ ಕೇಳುತ್ತಿದ್ದ ಹಳೆಯ ಕನ್ನಡ ಚಲನಚಿತ್ರಗೀತೆಗಳು ನಮ್ಮ ನೆನಪುಗಳನ್ನು ಕೆದಕುತ್ತಾ ಸೌಂದರ್ಯ ಸವಿಯುವಂತೆ ಮಾಡುತ್ತಿದ್ದವು .ನಾವು ಅಗಾಗ್ಗೆ ಆ ಹಾಡುಗಳ ಸಾಲುಗಳನ್ನು ಗುನುಗುತ್ತಾ ಪ್ರಕೃತಿಯ ಸೊಬಗನ್ನು ಕಣ್ತುಂಬಿಸಿಕೊಂಡು ಸಾಗುತ್ತಿರುವಾಗ  ಸಾಗುವ ದಾರಿಯಲ್ಲಿ ಸಿಗುವ ಹಲವು ಚಿಕ್ಕ ಪುಟ್ಟ ಹಳ್ಳಿಯ ಹೆಸರುಗಳು ಪೂರ್ಣಚಂದ್ರ ತೇಜಸ್ವಿಯವರನ್ನು ಹಾಗೂ ಅವರ ಕೃತಿಗಳನ್ನು  ನೆನಪಿಸಿದ್ದು ಸುಳ್ಳಲ್ಲ .ನಮ್ಮಂತಹ  ಪ್ರವಾಸಿಗರಿಗೆ ಮತ್ತು ಚಾರಣಿಗರಿಗೆ ಅನುಕೂಲವಾಗುವಂತೆ ಸಮೀಪದಲ್ಲಿ ಹಲವಾರು ಹೋಮ್‍ಸ್ಟೇಗಳು ತಲೆ ಎತ್ತಿರುವುದು ರಸ್ತೆ ಬದಿಯ ನಾಮಫಲಕಗಳಿಂದ ತಿಳಿಯಿತು.





 ರಾಣಿಝರಿಯ ಬುಡದವರೆಗೂ  ತೆರಳಿದ  ನಮಗೆ ಅಲ್ಲಿ ದೂರದಲ್ಲಿ ಕಾಲಬೈರವೇಶ್ವರ ದೇವಾಲಯ ಕಂಡಿತು.  ದೇವರ ದರ್ಶನ ಮಾಡೋಣ ಎಂದ ನನಗೆ ಕೋಟೆ ಕುಮಾರ್ ರವರು" ಈಗಾಗಲೇ ಸಂಜೆಯಾಗಿದೆ ಮೊದಲು ಪ್ರಕೃತಿ ದೇವರ ನೋಡೋಣ" ಎಂದಾಗ   ಎರಡು ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಚಾರಣ ಅರಂಬಿಸಿಯೇಬಿಟ್ಟೆವು .ಸಂಜೆಯ ವಾತಾವರಣದಲ್ಲಿ ಅಗಾಗ್ಗೆ ಗುಡುಗು ಕೇಳುತ್ತಿತ್ತು. ಮಳೆ ಬರುವ ಸಂಭವ ಹೆಚ್ಚಾಗಿತ್ತು. "ಮಳೆ ಬಂದರೆ ಅಲ್ಲಿ ಜಿಗಣೆ ಕಾಟ ಹುಷಾರ್ "  ಎಂಬ ಗೆಳೆಯನ ಮಾತು ನೆನೆದು ಕಾಲು ನೋಡಿಕೊಂಡೆ.ಸುಮಾರು  ಅರ್ಧಗಂಟೆಯ ಚಾ


ರಣದ ನಂತರ  ನಮಗೆ ರಾಣಿ ಝರಿಯ ಸೌಂದರ್ಯ ಅನಾವರಣವಾಯಿತು.



ದೂರದಲ್ಲಿ ಬಲ್ಲಾಳರಾಯನ ಕೋಟೆಯ ಅವಶೇಷಗಳು ಅಸ್ಪಷ್ಟವಾಗಿ ಕಾಣುತ್ತವೆ. ಮಂಜಿನ ತೆರೆಯಲ್ಲಿ ಸೂರ್ಯನ ಕಿರಣಗಳು ಚದುರಿ ಸುಂದರ ವಿನ್ಯಾಸ ಮಾಡಿವೆ. ಆಗಾಗ್ಗೆ ಬೀಳುವ ತುಂತುರು ಹನಿಗಳು ಚಾರಣದಿಂದ ಬೆವೆತ ಮೈಗೆ ತಂಪು ನೀಡುತ್ತವೆ. ಕಣ್ಣು ಹಾಯಿಸಿದಷ್ಟೂ  ಹಸಿರೊದ್ದ ಗಿರಿಕಾನನಗಳು ಮನಕ್ಕೆ ಮುದ ನೀಡುತ್ತಿವೆ . ಈ ಸೌಂದರ್ಯ ನೋಡಿದ ನನ್ನ ಮನದ ಮಾತು ಹೊರಬಂದಿತು " ಒಂದು ರಾಜ್ಯ ಹಲವು ಜಗತ್ತು"...ನನ್ನ ಜೊತೆಯಲ್ಲಿದ್ದ  ಸ್ನೇಹಿತರು ಸಹ ಅದೇ ಮಾತುಗಳನ್ನು ಪುನರುಚ್ಚಾರ ಮಾಡಿದರು.  ನಿಧಾನವಾಗಿ ಸೂರ್ಯ ಪರ್ವತಗಳ ಹಿಂದೆ ಸರಿಯುವ ಚಿತ್ರಣ ಸರೆಹಿಡಿಯುವಾಗ " ಸೀಜೀವಿ ಹುಷಾರು ಹಿಂದೆ ಕಾಲಿಡಬೇಡಿ ಪ್ರಪಾತ ಇದೆ" ಎಂಬ ಚಂದ್ರಶೇಖರಯ್ಯ ರವರ ಧ್ವನಿ ಕೇಳಿ ಒಂದು ಹೆಜ್ಜೆ ಹಿಂದೆ ಇಟ್ಟು ಬಗ್ಗಿ ನೋಡಿದೆ.ಪ್ರಪಾತ! ಒಂದು ಕ್ಷಣ ಎದೆ ನಡುಗಿತು. ಆಗ ಅಲ್ಲೇ ಇದ್ದ ಸ್ಥಳೀಯರೊಬ್ಬರು " ಸರ್  ನೀವು ನಿಂತಿರುವ ಪ್ರಪಾತ ಬಹಳ ಆಳವಿದೆ. ಇಲ್ಲಿಂದ  ಯಾರಾದರೂ ಜಾರಿ ಬಿದ್ದರೆ ಅವರ ಮೂಳೆಗಳು ಸಿಗುವುದೂ ಕಷ್ಟ, ಬಲ್ಲಾಳರಾಯನನ್ನು ಟಿಪ್ಪು ಸುಲ್ತಾನ್ ಸೆರೆಹಿಡಿದ ಮೇಲೆ ಅವನ ರಾಣಿ ಇದೇ ಪ್ರಪಾತದಲ್ಲಿ ಬಿದ್ದು ಸಾವನ್ನಪ್ಪಿದರು. ಅದಕ್ಕೆ ಈ ಸ್ಥಳಕ್ಕೆ ರಾಣಿ ಝರಿ ಎಂಬ ಹೆಸರು ಬಂದಿದೆ" ಎಂದರು. ಮುಂದುವರೆದು ಅವರು ಮಾತನಾಡುತ್ತಾ  ಇಲ್ಲಿಂದ ಮುಂದೆ  ಬಲ್ಲಾಳರಾಯನದುರ್ಗಕ್ಕೆ  ಸುಮಾರು 7-8 ಕಿ.ಮೀ. ಚಾರಣ ಮಾಡಬಹುದು ಎಂದು ಮಾಹಿತಿ ನೀಡಿದರು.

ರಾಣಿಝರಿಯ ಸೌಂದರ್ಯ ಕಣ್ತುಂಬಿಕೊಂಡು ನಮ್ಮ ಕಾರಿನ ಕಡೆ ಹೆಜ್ಜೆ ಹಾಕಿದಾಗ ಮಳೆರಾಯ ಜೋರುಸದ್ದಿನೊಂದಿಗೆ  ಬಂದೇ ಬಿಟ್ಟ. ಕಾಡಿನಲ್ಲಿ ಮಳೆಯಲ್ಲಿ ನೆನೆಯುವುದೂ ಒಂದು ಅನನ್ಯ ಅನುಭವ .ಕಾರಿನಲ್ಲಿ ಕುಳಿತು ಹೊರನಾಡಿನ ಕಡೆ ಹೊರಟಾಗ ಮಳೆ ಇನ್ನೂ ಜೋರಾಯಿತು..


ಹೀಗೆ ಹಲವಾರು ವೈಶಿಷ್ಠ್ಯಗಳಿಂದ ಕೂಡಿರುವ ರಾಣಿಝರಿಯನ್ನು ನೋಡಿ ಒಂದೊಳ್ಳೆ ಚಾರಣಸ್ಥಳ ನೋಡಿದ ಸಾರ್ಥಕತೆ ನಮ್ಮದಾಯಿತು. ವಾರಾಂತ್ಯದ ಲಾಂಗ್ ಡ್ರೈವ್ ಹೋಗಿ ಎಂಜಾಯ್ ಮಾಡಿ ಪಶ್ಚಿಮ ಘಟ್ಟದ ಸುಂದರ ಸೌಂದರ್ಯದ ಸೊಬಗನ್ನು ಸವಿಯಲು ನೀವೂ ಒಮ್ಮೆ ರಾಣಿಝರಿಗೆ ಹೋಗಿ ಬನ್ನಿ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು.



No comments: