11 October 2022

ನಿಮಗೂ ಹುಚ್ಚು ಹಿಡಿಯುತ್ತದೆ...


 *ನಿಮಗೂ ಖಂಡಿತವಾಗಿಯೂ ಹುಚ್ಚು ಹಿಡಿಯುತ್ತದೆ*.



ನಾನು ಟಿ ಸಿ ಹೆಚ್ ಓದುವಾಗ  ಯರಬಳ್ಳಿ ಗೊಲ್ಲರ ಹಟ್ಟಿಯ ನನ್ನ ಗೆಳೆಯ ರಾಜು    ಶಿವರಾಮ ಕಾರಂತರ ಪುಸ್ತಕ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಪುಸ್ತಕ ನೀಡಿ ಓದಲು ಹೇಳಿದ .ದೊಡ್ಡ ಗಾತ್ರದ ಶಿವರಾಮ್ ಕಾರಂತರ ಆತ್ಮ ಚರಿತ್ರೆಯನ್ನು ಅಷ್ಟೇನೂ ಆಸಕ್ತಿಯಿಂದ ಓದಲಿಲ್ಲ . ಆ ಪುಸ್ತಕದ ಶೀರ್ಷಿಕೆಯ ಕುರಿತು ಒಂದು ರೀತಿಯ ಕುತೂಹಲ ಇದ್ದದ್ದು ಸುಳ್ಳಲ್ಲ. ಒಂದೆರಡು ಅಧ್ಯಾಯ ಮುಗಿಸಿದ ಮೇಲೆ ಬಹಳ ಕುತೂಹಲ ಮತ್ತು ಆಸಕ್ತಿ ಬೆಳೆದು ಪುಸ್ತಕ ಮುಗಿಯುವವರೆಗೂ ನಿಲ್ಲಿಸಲಿಲ್ಲ .ಈ ಪುಸ್ತಕ ಒಂದು ರೀತಿಯಲ್ಲಿ ನನ್ನ ಕಣ್ತೆರಿಸಿದ ಪುಸ್ತಕ ಎಂದರೆ ತಪ್ಪಾಗಲಿಕ್ಕಿಲ್ಲ . ದೇವರು ಎಲ್ಲರಿಗೂ ಒಂದೇ ಗಾತ್ರದ ಮೆದುಳು ಮತ್ತು ಬುದ್ದಿ ಕೊಟ್ಟರೂ ಅದರ ಬಳಕೆಯನ್ನು ಕೆಲವರು ಸಂಪೂರ್ಣವಾಗಿ, ಕೆಲವರು ಭಾಗಶಃ ,ಕೆಲವರಂತೂ ಮೆದುಳು ಮತ್ತು ಬುದ್ದಿ ಬಳಸಿಕೊಳ್ಳದೇ ಮಡೆಯರಾಗಿ, ಮೂರ್ಖರಾಗಿ  ,ಕೀಳರಿಮೆಯಲ್ಲೆ ಜೀವನ ಸಾಗಿಸಿಬಿಟ್ಟಿರುತ್ತಾರೆ.


ಈ ಪುಸ್ತಕದಲ್ಲಿ ಅವರ ಜೀವನಾನುಭವ ಓದುತ್ತಾ ಸಾಗಿದಂತೆ ಅವರ ಬಹುಮುಖ ಪ್ರತಿಭೆ ಅನಾವರಣವಾಗುತ್ತಾ ಹೋಗುತ್ತದೆ.

ಬಹುತೇಕ ಕನ್ನಡಿಗರಿಗೆ  ತಿಳಿದಿರುವಂತೆ ಅವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕವಿ ಆ ಪುಸ್ತಕ ಓದುವ ಮೊದಲಿಗೆ ನನಗೆ ಅವರ ಬಗ್ಗೆ ಅಷ್ಟೇ ಗೊತ್ತಿತ್ತು. ಪುಸ್ತಕದ ಪುಟಗಳ ತಿರುಗಿಸಿದಂತೆ ಅವರ ಹತ್ತಾರು ಮುಖಗಳು ಒಂದೊಂದೇ ಅನಾವರಣಗೊಂಡವು. 

ಮಕ್ಕಳ ಸಂಪೂರ್ಣ ವಿಕಸನ ಕ್ಕಾಗಿ ಬಾಲವನ ಆರಂಭಿಸಿ ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಕಾರಣಕರ್ತರಾದರು ತನ್ಮೂಲಕ ತಮ್ಮೊಳಗೊಬ್ಬ ಶಿಕ್ಷಣ ತಜ್ಞ ಇದ್ದಾನೆಂದು ಪ್ರೂವ್ ಮಾಡಿದರು. 

ಚಲನಚಿತ್ರ ಕ್ಷೇತ್ರವು ತಂತ್ರಜ್ಞಾನ ಬೇಡುವ ಕ್ಷೇತ್ರ ಅವರೇ ಕಥೆ ,ಚಿತ್ರಕಥೆ ,ನಿರ್ಮಾಣ, ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತು ನಾನೊಬ್ಬ ತಂತ್ರಜ್ಞ ಎಂದು ಸಾಬೀತು ಮಾಡಿ ತೋರಿದರು. 

ಅಂದು ರಾಜಕೀಯ ಎಂದರೆ ಇಂದಿನಂತೆ ಕಲುಷಿತವಾಗಿರಲಿಲ್ಲ   ಹಣ ಮಾಡುವ  ಉದ್ಯಮವಾಗಿರಲಿಲ್ಲ ನಾನೂ ಒಂದು ಕೈ ನೋಡೇ ಬಿಡುವ ಎಂದು ಚುನಾವಣೆಗೂ ಸ್ಪರ್ಧೆ ಮಾಡಿದರು ಚುನಾವಣೆಯಲ್ಲಿ ಸೋತರು ಅದು ಬೇರೆ ಮಾತು .ಈ ಮೂಲಕ ನಾನೊಬ್ಬ ರಾಜಕೀಯ ಮತ್ಸದ್ದಿ ಎಂದು ತೋರಿಸಿದರು.

ಪರಿಸರದ ನಾಶದಿಂದ ಇಂದು ನಾವು ಬಹಳ ತೊಂದರೆ ಅನುಭವಿಸುತ್ತಿದ್ದೇವೆ ಅದನ್ನು ಕಳೆದ ಶತಮಾನದಲ್ಲೆ ನಮ್ಮನ್ನು ಎಚ್ಚರಿಸಿದ ಪರಿಸರ ತಜ್ಞ ನಮ್ಮ ಕಾರಂತರು. ಕಾರವಾರ ನೌಕಾನೆಲೆ ಮುಂತಾದ ಪರಿಸರಕ್ಕೆ ಹಾನಿಯಾಗುವ ಸರ್ಕಾರದ ಯೋಜನೆಗಳ ವಿರುದ್ಧವಾಗಿ ಜನಾಂದೋಲನ ರೂಪಿಸಿ ಸರ್ಕಾರಕ್ಕೆ ಸಿಂಹ ಸ್ವಪ್ನರಾದರು.

ನಮ್ಮ ಕಲೆ, ಸಂಸ್ಕೃತಿ, ನಮ್ಮ ಅಸ್ಮಿತೆ ಎಂದು ಕಾರಂತರು ತಮ್ಮ ಕೃತಿಗಳಲ್ಲಿ ತೋರಿಸಿಕೊಟ್ಟರು ಅದರ ಜೊತೆಯಲ್ಲಿ ಕೇವಲ ಕರ್ನಾಟಕದ ದಕ್ಷಿಣ ಕನ್ನಡಕ್ಕೆ ಸೀಮಿತವಾಗಿದ್ದ ಯಕ್ಷಗಾನ ಕಲೆಯನ್ನು ತಮ್ಮ ಇಳಿವಯಸ್ಸಿನಲ್ಲೂ ಕಲಿತು ,ಕಲಿಸಿ ಜಗತ್ತಿನ ವಿವಿಧ ದೇಶಗಳಲ್ಲಿ ಪ್ರದರ್ಶನ ನೀಡಿ ನಮ್ಮ ರಾಜ್ಯದ ಮತ್ತು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ಸಾಂಸ್ಕೃತಿಕ ರಾಯಬಾರಿ ನಮ್ಮ ಕಾರಂತರು .

ಹೀಗೆ ಪುಸ್ತಕ ಪೂರ್ತಿಯಾಗಿ ಓದಿ ಮುಗಿಸಿದಾಗ ಅವರಲ್ಲಿ ಕೆಲ ಹುಚ್ಚುಗಳು ನನಗೂ ಹತ್ತಿದ್ದು ಸುಳ್ಳಲ್ಲ ಆ ಹುಚ್ಚು ಇಂದು  ನನ್ನನ್ನು ಶಿಕ್ಷಕ ವೃತ್ತಿಯ ಜೊತೆಯಲ್ಲಿ  ಲೇಖಕನಾಗಿ, ಕವಿಯಾಗಿ, ಕಾದಂಬರಿಕಾರನಾಗಿ, ಗಾಯಕನಾಗಿ , ಭಾಷಣಕಾರನಾಗಿ, ಸಂಘಟಕನಾಗಿ ರಂಗಭೂಮಿ ನಟನಾಗಿ  , ಛಾಯಾಚಿತ್ರಗ್ರಾಹಕನಾಗಿ, ಕಾರ್ಯ ನಿರ್ವಹಿಸಲು ಪ್ರೇರಣೆಯಾಗಿದೆ .ಮುಂದಿನ ದಿನಗಳಲ್ಲಿ ಈ ಹುಚ್ಚುಗಳ ಪಟ್ಟಿ ದೊಡ್ಡದಾದರೂ ಅಚ್ಚರಿ ಪಡಬೇಕಿಲ್ಲ .

ನಡೆದಾಡುವ ವಿಶ್ವ ಕೋಶ, ಕಡಲತೀರದ ಭಾರ್ಗವ ಎಂಬ ಹೆಸರಿಗೆ ಅನ್ವರ್ಥವಾಗಿ ಬದುಕಿದ ಕಾರಂತರು ನನ್ನಂತಹ ಕೋಟ್ಯಾಂತರ ಜನರ ಪ್ರೇರಕ ಶಕ್ತಿ .ಕಾರಂತರ ಎಲ್ಲಾ ಪ್ರಕಾರದ ಸಾಹಿತ್ಯವನ್ನು ನಾವು ಓದಲೇಬೇಕು ಅದರಲ್ಲೂ ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ನೀವೂ ಓದಿ. ಖಂಡಿತವಾಗಿಯೂ ನಿಮಗೂ ಒಂದೆರಡಾದರೂ ನಿಮ್ಮ  ಹುಚ್ಚು ಮಖಗಳು  ಗೋಚರವಾಗುವುದರಲ್ಲಿ ಸಂಶಯವಿಲ್ಲ. 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

No comments: