27 May 2022

ಹೊನ್ನಾವರಿಕೆ. ಪುಸ್ತಕ ವಿಮರ್ಶೆ.

 



ಹೊನ್ನಾವರಿಕೆ. ವಿಮರ್ಶೆ ೩೭ 

ಎಂ ಆರ್ ಕಮಲ ರವರು ರಚಿಸಿರುವ ಹೊನ್ನಾವರಿಕೆ ಪ್ರಬಂಧಗಳ ಸಂಕಲನ ಹೆಸರಿನಿಂದಲೇ ನನ್ನ ಕುತೂಹಲ ಕೆರಳಿಸಿ ಓದುವಂತೆ ಪ್ರೇರೇಪಿಸಿತು.

ಎಂ.ಆರ್. ಕಮಲ, ಹಾಸನ ಜಿಲ್ಲೆಯ ಅರಸೀಕರೆ ತಾಲ್ಲೂಕಿನ ಮೇಟಿಕುರ್ಕೆ ಯವರು, ಹುಟ್ಟಿದ್ದು: ೧೯೫೯ರಲ್ಲಿ, ತಂದೆ ಎಂ. ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್.ಎಲ್.ಬಿ. ಪದವೀಧರೆಯಾದ ಇವರು ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿ.ಎಂ.ಶ್ರೀ' ಸ್ವರ್ಣಪದಕ ಪಡೆದಿದ್ದಾರೆ. ಫ್ರೆಂಚ್ ಭಾಷೆಯನ್ನು ಆರು ವರ್ಷಗಳ ಕಾಲ ಅಧ್ಯಯನ ಮಾಡಿರುವ ಕಮಲ ಫ್ರೆಂಚ್ ಭಾಷೆಯಲ್ಲಿ ಪದವೀಧರರು.


ಕನ್ನಡ ಸಾಹಿತ್ಯ ಮತ್ತು ನಾಟ್ಯಕ್ಷೇತ್ರದಲ್ಲಿ ಕಮಲ ಅವರ ಹೆಸರು ಮತ್ತು ಸಾಧನೆಗಳು ಚಿರಪರಿಚಿತ. ಪ್ರಕಟಿತ ಕಾವ್ಯ ಸಂಗ್ರಹಗಳು: ಶಕುಂತಲೋಪಾಖ್ಯಾನ (೧೯೮೮), ಪಾಣೆ ಮತ್ತು ಇತರ ಕವಿತೆಗಳು (೧೯೯೨),  ಮಾತೋಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ ಹಾಗೂ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿವೆ, ಹೂವ ಚೆಲ್ಲಿದ ಹಾದಿ (೨೦೦೭), ಮಾಡಿದಡಿ (೨೦೧೭), ಗದ್ಯಗಂಧಿ (೨೦೨೦), ಮಾರಿಬಿಡಿ ಸಂಕಲನ ಅಮ್ಮ ಪ್ರಶಸ್ತಿ ಪಡೆದಿದೆ. ಕಾವ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ೨೦೧೮ನೇ ಸಾಲಿನ ಮಾಸ್ತಿ ಪ್ರಶಸ್ತಿಯನ್ನು ಕಮಲ ಪಡೆದಿದ್ದಾರೆ. ನೆಲದಾಸೆಯ ನಕ್ಷತ್ರಗಳು (೨೦೨೧) ಅವರ ಆರನೆಯ ಕಾವ್ಯಸಂಗ್ರಹ,


ಕಾಳನಾಮ ಚರಿತೆ ೨೦೧೮ರಲ್ಲಿ ಪ್ರಕಟವಾದ ಹಗುರ ಹರಟೆಯ ಹಂದರ, ಕಸೂತಿಯಾದ ನೆನಪು, ಕೊಳದ ಮೇಲಿನ ಗಾಳಿ ೨೦೧೯ರಲ್ಲಿ, ಊರ ಬೀದಿಯ ಸುತ್ತು ಕ್ವಾರಂಟೈನ್ ೨೦೨೦ರಲ್ಲಿ ಪ್ರಕಟವಾದ ಪ್ರಬಂಧ ಸಂಕಲನ. ಇವು ಇವರ ಪ್ರಮುಖ ಸಾಹಿತ್ಯದ ಕೃತಿಗಳು


ಅನುವಾದ ಸಾಹಿತ್ಯದಲ್ಲಿ ಮಹತ್ವದ ಕೊಡುಗೆ ನೀಡಿರುವ ಕಮಲ ಆಫ್ರಿಕನ್-ಅಮೆರಿಕನ್, ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಕತ್ತಲ ಹೂವಿನ ಹಾಡು (೧೯೮೯), ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪು ಕವಿಗಳನ್ನು ಪರಿಚಯಿಸುವ ಪ್ರಯತ್ನ ಓದುಗರ ಗಮನ ಮತ್ತು ವಿಮರ್ಶಕ ಮಾನ್ಯತೆ ಎರಡನ್ನೂ ಪಡೆಯಿತು. ಈ ಪ್ರಯತ್ನದ ವಿಸ್ತರಣೆಯಾಗಿ ಆಫ್ರಿಕನ್ ಅಮೆರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿಯ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಕಥೆಯನ್ನು ಕಪ್ಪು ಪಟ್ಟಿ ಬೆಳಕಿನ ಹಾಡು' ಕೃತಿ ಸರಣಿಯ ನಾಲ್ಕು ಪುಸ್ತಕಗಳು ತೆರೆದಿಡುತ್ತವೆ. ಆರು ವರ್ಷಗಳ ಅವಧಿಯಲ್ಲಿ ಆಯ್ಕೆ, ಸಂಪಾದನೆ ಮತ್ತು ಅನುವಾದಗೊಂಡ ಈ ಕೃತಿಗಳು: ಕಪ್ಪು ಪಟ್ಟಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ರೂಸಾಪಾರ್ಕ್ಸ್ಳ ನನ್ನ ಕಥೆ ಮತ್ತು ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ. ಈ ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿಗೆ ಪಾತ್ರವಾಗಿವೆ. ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯನ್ನು ಕೂಡ ಕಮಲ ಪಡೆದಿದ್ದಾರೆ. 



ಪ್ರಸ್ತುತ ಹೊನ್ನಾವರಿಕೆ ಪ್ರಬಂಧಗಳು

 ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ವಿಸ್ತಾರಗೊಂಡಿದೆ. ಈ ಅಂಶಗಳೇ ಅವರಿಗೆ ತಮ್ಮದೇ ಓದುಗ ವರ್ಗವನ್ನು ಸೃಷ್ಟಿ ಕೊಟ್ಟಿವೆ.


ಮನುಷ್ಯನ ಖಾಸಗಿ ಬದುಕಿನ ಅನುಭವಗಳು ಲೋಕಾನುಭವವಾಗಿ ಬದಲಾದಾಗ ಅರಿವೇ ಆಗದೆ ಓದುಗನ ಮನಸ್ಸನ್ನು ವ್ಯಾಪಿಸಬಲ್ಲವು  ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆ ಗಿವೆಯಲ್ಲ ಎಂಬ ಅಚ್ಚರಿಯಲ್ಲಿ ಓದುಗ ಅದರಲ್ಲಿ ತಲ್ಲೀನವಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಅದರಲ್ಲೂ ನನ್ನಂತಹ ಶಿಕ್ಷಕರಿಗೆ ಅನಿಸದೆ ಇರದು. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆ  ಎಂಬ  ಅರಿವನ್ನು ಈ ಬರಹಗಳು ಮೂಡಿಸತ್ತವೆ.


ಚೋಟುದ್ದದ ಹುಡುಗರು ,

ಕಳೆದುದು ಸಿಗದಿರಲಿ,ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ,ಕನಸೊಂದನ್ನು ಸುರುಳಿ ಸುತ್ತಿ,ಬಾಗಿಲು ತೆಗೆಯ,

ವರ್ತಮಾನ ಕಾಲದ ಹುಡುಕಾಟದಲ್ಲಿ , ಎಲ್ಲ ಹೆಣ್ಣುಗಳ ದನಿಯಾಗಲಿ,ಒಂದು ಲಹರಿ,

ಬಚ್ಚಿಟ್ಟಿದ್ದು ಪರರಿಗೂ ಅಲ್ಲ,

'ಡಿಲೀಟ್' ಮಾಡುತ್ತಾ ಬದುಕುವುದು,

ಗಂಟಲಲ್ಲಿ ಮುರಿದ ಮುಳ್ಳು ,

ಬೀದಿಯಲ್ಲಿ ಸಿಕ್ಕ ಕತೆಗಳು,

ಒಂದು ರಫ್ ನೋಟ್ಬುಕ್,ವಾಸ್ತವದ ಬೆಂಕಿಯಲ್ಲಿ ಸುಡದ ನೆನಪುಗಳು, ಗಾಡಿಯ ಮೋಹ,

ನೆನಪುಗಳ ಬುತ್ತಿ ಚಿಗುರು, ಮುಂತಾದ ವಿಭಿನ್ನ ವಿಷಯಗಳ ಪ್ರಬಂಧಗಳು ನನಗೆ ಇಷ್ಟ ಆದವು.

ಅದರಲ್ಲೂ ಕೊನೆಯ ಪ್ರಬಂಧವಾದ 

ಎಲ್ಲಾ "ಪ್ರೀತಿಯ ಶಿಕ್ಷಕರಿಗೆ " ಎಂಬ ಪ್ರಬಂಧವು ನನ್ನಂತವನ ಕುರಿತೇ ಬರದಂತಹ ಸಲಹಾ ರೂಪದ ಪ್ರಬಂಧ ಎನಿಸಿತು.


ಒಟ್ಟಾರೆ ನೀವು ಒಮ್ಮೆ ಹೊನ್ನಾವರಿಕೆ ಓದಿದರೆ ವಿಭಿನ್ನ ವಿಷಯಗಳ ಪ್ರಬಂಧಗಳ ಪ್ರಪಂಚ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.


ಪುಸ್ತಕದ ಹೆಸರು: ಹೊನ್ನಾವರಿಕೆ

ಲೇಖಕರು : ಎಂ ಆರ್ ಕಮಲ 

ಪ್ರಕಾಶನ: ಕಥನ ಪ್ರಕಾಶನ ಬೆಂಗಳೂರು

ಬೆಲೆ: 175.00 ₹



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: