09 May 2022

ನನ್ನ ಪರಿಚಯ.ಅಗ್ರಹಾರ ಪ್ರಶಾಂತ್ ರವರಿಂದ


 


ಪರಿಚಯ ಶುದ್ಧ ಸಾಹಿತ್ಯ ಬಳಗ

ದಿನಾಂಕ ೦೯/೦೫/೨೦೨೨ ಸೋಮವಾರ

*ನಾವು - ನಮ್ಮವರು* ಪರಿಚಯ ಮಾಲಿಕೆ ೧

ಬಹುಮುಖ ಪ್ರತಿಭೆ - ಸಿ ಜಿ ವೆಂಕಟೇಶ್ವರ್

ನಾವು ಇಂದಿನ ಶುಭ ಸೋಮವಾರದಂದು *ನಾವು - ನಮ್ಮವರು* ಮಾಲಿಕೆಯಲ್ಲಿ  *ಸಿಹಿಜೀವಿ* ಯೆಂದೇ ಮನೆಮಾತಾಗಿರುವ ಬಹುಮುಖ ಪ್ರತಿಭೆಯ ಶಿಕ್ಷಕರೂ, ಕವಿಗಳೂ ಮತ್ತು ಕಲಾವಿದರಾಗಿರುವ ಸಿ ಜಿ ವೆಂಕಟೇಶ್ವರ್ ರವರನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.
   *ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ಸಿಹಿ ಜೀವಿಯಿರದ ಕ್ಷೇತ್ರವಿಲ್ಲ ಎಂಬ ನುಡಿಗೆ ಸರಿಹೊಂದುವಂತಿರುವ ಶ್ರೀಯುತರು ಕೀರ್ತಿಶೇಷ ಗೋವಿಂದಪ್ಪ ಮತ್ತು ಶ್ರೀದೇವಮ್ಮರವರ ಸುಪುತ್ರರಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸವು ಚೌಡಗೊಂಡನಹಳ್ಳಿ, ಉಪ್ಪರಿಗೇನಹಳ್ಳಿ, ಯರಬಳ್ಳಿ, ಹಿರಿಯೂರು, ಮೈಸೂರುಗಳಲ್ಲಿ ನಡೆಯಿತು. ರಾಜ್ಯಶಾಸ್ತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಎಂ ಎ ಪದವಿಯನ್ನು ಪಡೆದಿರುವ ಶ್ರೀಯುತರು ಕಥೆ, ಗಜಲ್, ಹನಿಗವನ, ಶಾಯರಿ, ಪರ್ದ್ ಬರೆಯುವುದನ್ನೇ ಮುಖ್ಯ ಹವ್ಯಾಸವಾಗಿ ಬೆಳಿಸಿಕೊಂಡು ಸುಮಾರು ಹತ್ತಕ್ಕೂ ಅಧಿಕ ಕವನ ಮತ್ತು ಲೇಖನಗಳನ್ನು ಒಳಗೊಂಡ ಪುಸ್ತಕಗಳು ಲೋಕಾರ್ಪಣೆಯಾಗಿರುವುದು ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಲೇಖನಗಳು  ನಾಡಿನ ಎಲ್ಲಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿಯನ್ನು ಹೊಂದಿರುವ ಇವರು ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುತ್ತಾರೆ. ಜೊತೆಗೆ ವೃತ್ತಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಾಜವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಾ ಪರಿಸರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ಸಿಹಿಜೀವಿಯವರು ಎಲ್ಲದಕ್ಕಿಂತ ಹೆಚ್ಚಾಗಿ ಹವ್ಯಾಸಿ ಹಾಡುಗಾರ ಮಾತ್ರವಲ್ಲ, ಉತ್ತಮ ಛಾಯಾಚಿತ್ರಗಾರ ಮತ್ತು ಬ್ಲಾಗ್ ಸಹ ಆಗಿರುವುದು ಹೆಮ್ಮೆಯ ವಿಚಾರವಾಗಿದೆ. ಇವರ ಬ್ಲಾಗ್ ನ್ನು ಜಗತ್ತಿನಾದ್ಯಂತ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಜನರು ಓದುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
        ಶ್ರೀಯುತರ *ಸಾಲು ದೀಪಾವಳಿ, ಸಿಹಿಜೀವಿಯ ಗಜಲ್, ಶಾಲಾ ಪ್ರಬಂಧ ಮತ್ತು ಪತ್ರ ಲೇಖನ, ನನ್ನಮ್ಮ ನಮ್ಮೂರಿನ ಫ್ಲಾರೆನ್ಸ ನೈಟಿಂಗೇಲ್ ಲಲಿತ ಪ್ರಬಂಧ, ರಂಗಣ್ಣನ ಗುಡಿಸಲು ಇವಿಷ್ಟು ಕೃತಿಗಳು ಲೋಕಾರ್ಪಣೆ ಗೊಂಡು ಓದುಗರ ಕೈ ಸೇರಿ ಪ್ರಶಂಸೆಗೆ ಪಾತ್ರವಾಗಿವೆ.
    ಇನ್ನು ಹೊರಬರಲು ಕಾಯ್ದು ಕುಳಿತಿರುವ ಕೃತಿಗಳೆಂದರೆ *ಉದಕದೊಳಗಿನ ಕಿಚ್ಚು*, *ಶಿಕ್ಷಣವೇ ಶಕ್ತಿ* , *ವಿದ್ಯಾರ್ಥಿಗಳಿಗಾಗಿ* *ಸಿಹಿಜೀವಿಯ ಹನಿಗಳು*, *ಬಹುಮುಖ*
   ಸಿ. ಜಿ. ವೆಂ ರವರು *ತಾಲ್ಲೂಕು ಮಟ್ಟದ ಕವಿಗೋಷ್ಠಿ,*, ಕವಿಬಳಗ, ಹನಿ ಹನಿ ಇಬ್ಬನಿ ಬಳಗ, ಸಾಧನಕೇರಿ ಬಳಗ, ಸಾಹಿತ್ಯ ಬಳಗ ಚಿಂತಾಮಣಿ, ಮುಂತಾದವರು ಆಯೋಜಿಸಿದ್ದ  *ರಾಜ್ಯ ಮಟ್ಟದ ಕವಿಗೋಷ್ಠಿ*, ತಾಲ್ಲೂಕು ಸಾಹಿತ್ಯ ಪರಿಷತ್ ಗೌರಿಬಿದನೂರು ಮುಂತಾದ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿ ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದ್ದಾರೆ.
     ಈ ಸಾಧಕರಿಗೆ ರಾಜ್ಯ ಮಟ್ಟದ *ಕಾವ್ಯ ಚಿಂತಾಮಣಿ*, ಜಿಲ್ಲಾ ಮಟ್ಟದ *ಅತ್ಯುತ್ತಮ ಶಿಕ್ಷಕ ಪ್ರಶಸ್ತಿ*, ಕೇಂದ್ರ ಸಾಹಿತ್ಯ ವೇದಿಕೆಯಿಂದ ರಾಜ್ಯ ಮಟ್ಟದ ಸಂಘಟನಾ ಚತುರ*, ರೋಟರಿ ಕ್ಲಬ್ ನಿಂದ ನೇಷನ್ ಬಿಲ್ಡರ್*  ಪ್ರಶಸ್ತಿ ಮುಂತಾದವು ಸಂದಿವೆ.

ಇನ್ನು ಸನ್ಮಾನದ ವಿಚಾರಕ್ಕೆ ಬಂದರಂತೂ ಅಪಾರ ಸಂಖ್ಯೆಯ ಗೌರವ ಸನ್ಮಾನಗಳು ಶ್ರೀಯುತರನ್ನು ಅರಸಿ ಬಂದಿವೆ, ಪ್ರಮುಖವಾದವುಗಳೆಂದರೆ *ಬಿ ಎಂ ಕೆ ಸಿ ಕಬ್ಬಡಿ ಕ್ಲಬ್* ಗೌರೀಬಿದನೂರು, *ಸಾಹಿತ್ಯ ಪರಿಷತ್* ಗೌರಿಬಿದನೂರು, *ಲಯನ್ಸ್ ಕ್ಲಬ್* ಗೌರಿಬಿದನೂರು, *ಶಾರದಾ ದೇವಿ ರಾಮಕೃಷ್ಣ ಶಾಲೆ* ಗೌರಿಬಿದನೂರು, *ಬಿಜಿಎಸ್ ಶಾಲೆ ಅಲೀಪುರ*, *ಪಾಂಚಜನ್ಯ ಟ್ರಸ್ಟ್ ಗೌರಿಬಿದನೂರು*, ಸಿದ್ಧ ಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರಿಂದ ಶ್ರೀಯುತರ ಸಾಧನೆಗೆ ಗೌರವ ಸನ್ಮಾನಗಳು ಸಂದಿವೆ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ.
     ಶ್ರೀಯುತರ ಶೈಕ್ಷಣಿಕ ಸಾಧನೆಯ ಕಡೆಗೆ ಗಮನ ಹರಿಸಿದಾಗ  ಮೇಲೆ ತಿಳಿಸಿದಂತೆ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿ, ದೀಕ್ಷಾ ಪೋರ್ಟಲ್ ನಲ್ಲಿ ೨೧ ಡಿಜಿಟಲ್ ಸಂಪನ್ಮೂಲ ರಚಿಸಿದ್ದಾರೆ. ಇದು ದೇಶದಾದ್ಯಂತ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ‌. ಶಾಲೆಯಲ್ಲಿ ಕಂಪ್ಯೂಟರ್ ಪ್ರೊಜೆಕ್ಟರ್ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
  ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕ್ಕ ಚಿಕ್ಕ ವೀಡಿಯೋಗಳನ್ನು ಮಾಡಿ ಮಕ್ಕಳಿಗೆ ಹಂಚಿ ಕಲಿಕೆ ನಿರಂತರವಾಗಿ ನಡೆಯುವತ್ತ ಕಾಳಜಿ ವಹಿಸಿರುತ್ತಾರೆ.
ಇದೆಲ್ಲಕಿಂತ ಹೆಚ್ಚಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಸಂದೇಹಗಳನ್ನು  ನಿವಾರಿಸಲು  ಜಿಲ್ಲಾ ಹಂತದ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಯಾಗಿರುತ್ತಾರೆ. ಅದಕ್ಕಾಗಿ ಸಿ ಜಿ ವೆಂ ರವರಿಗೆ ಹೃನ್ಮನದ ಅಭಿನಂದನೆಗಳು. ಜೊತೆಗೆ ದೂರದರ್ಶನದ ನೇರಪ್ರಸಾರದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
     ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಹುದುಗಿರುವ ಅದಮ್ಯ ಪ್ರತಿಭೆಗಳನ್ನು ಹೆಕ್ಕಿ ಹೊರತರುವ ನಿಟ್ಟಿನಲ್ಲಿ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ತಮ್ಮ ಶಾಲೆಯಲ್ಲಿ *ಭಿತ್ತಿ ಪತ್ರಿಕೆ*ಯನ್ನು ಪ್ರಾರಂಭಿಸಿ ಮಕ್ಕಳಿಂದಲೇ *ಕಥೆ, ಕವನ, ಹನಿಗವನ* ಬರೆಯಿಸಿ ತಿದ್ದಿ ಪ್ರೇರೇಪಿಸುವ ಮಹತ್ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.

    ಇಂತಹ ಸಾಧಕರು ನಮ್ಮ ಶುದ್ಧ ಸಾಹಿತ್ಯ ಬಳಗದಲ್ಲಿ ಇರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ವಿಚಾರವಾಗಿದೆ. ಇಂತಹ ಮಹನೀಯರನ್ನು *ನಾವು- ನಮ್ಮವರು* ಮಾಲಿಕೆಯಲ್ಲಿ ಅವರ ಸಾಧನೆಯನ್ನು ಪರಿಚಯ ಮಾಡಿಕೊಡುತ್ತಿರುವುದು ನಮಗೆ ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಸಾಧನೆ ಜಗದೆತ್ತರಕ್ಕೆ ಏರಿ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಲಿ ಎಂಬ ಹಾರೈಕೆಯೊಂದಿಗೆ ಇಂದಿಗೆ ಮಾಲಿಕೆಗೆ  ವಿರಾಮ ಹಾಕುತ್ತಿದ್ದೇನೆ.

ನಾಳೆ ಮತ್ತೊಬ್ಬ ಸಾಧಕರ ವಿವರದೊಂದಿಗೆ ನಿಮ್ಮ ಮುಂದೆ ಬರುವೆ

ಇಂತಿ

ಅಗ್ರಹಾರಪ್ರಶಾಂತ್

No comments: