29 May 2022

ಹೊರಳು .


 


ಹೊರಳು ಮತ್ತು ಇತರೆ ಕಥೆಗಳು.ವಿಮರ್ಶೆ ೩೯ 




ಆತ್ಮೀಯರು  ಲೇಖಕರು ಮತ್ತು ಪ್ರೊಫೆಸರ್ ಆದ ವಿ ಎಲ್ ಪ್ರಕಾಶ್ ರವರು ನೀವು ಓದಲೇಬೇಕು ಎಂದು  ನನಗೆ ನೀಡಿದ ಪುಸ್ತಕ ಕೆ ಎಸ್ ಪ್ರಭಾ ರವರ ಹೊರಳು ಮತ್ತು ಇತರೆ ಕಥೆಗಳು  .ಈ ಪುಸ್ತಕ ನನಗೆ ನಿಜಕ್ಕೂ ಹಿಡಿಸಿತು.

ದೊಡ್ಡಬಳ್ಳಾಪುರದಂತಹ ಊರಿನಲ್ಲಿ ತಮ್ಮ ಬದುಕಿನ ದಾರಿ ಮತ್ತು ಗುರಿಯನ್ನು ತಾವೇ ಗೊತ್ತುಪಡಿಸಿಕೊಂಡ ವ್ಯಕ್ತಿಗಳಲ್ಲಿ ಪ್ರಭಾ ಮೇಡಂ ಮುಖ್ಯರಾಗಿ ಕಾಣುತ್ತಾರೆ. ಸಾಂಪ್ರದಾಯಿಕ ಎರಕಗಳಲ್ಲಿ ಸಿದ್ಧ ಆಕೃತಿಗಳು ಮಾತ್ರ ದೊರಕುತ್ತವೆ. ಇವು ಸಾದಸೀದ ಹಾಗೂ ಸುರಕ್ಷವಾಗಿರುತ್ತವೆ. ನಮ್ಮ ಚಹರೆ ಪಟ್ಟಿಯನ್ನು ನಾವೇ ರೂಪಿಸಿಕೊಂಡಾಗ, ನಮ್ಮ ವಿಧಿಯನ್ನು ನಾವೇ  ನಿರ್ದೇಶಿಸಿಕೊಂಡಾಗ ಅನೇಕ ಅಗ್ನಿ ದಿವ್ಯಗಳನ್ನು ಹಾದು ಬರಬೇಕಾಗುತ್ತದೆ. ಸ್ಥಾಪಿತ ವ್ಯವಸ್ಥೆಗಳ ವಿರುದ್ಧ ದಂಗೆ ಏಳಬೇಕಾಗುತ್ತದೆ.ಇಂಥ ಸಂದರ್ಭಗಳಲ್ಲಿ ಗೆಲುವಲ್ಲ, ಸೋಲು ಕೂಡ ಘನವಾಗಿಯೇ ಕಾಣುತ್ತದೆ. ಅವು ದೊಡ್ಡ ಪಾಠಗಳಂತೆ ಇರುತ್ತವೆ. ಅದರಲ್ಲೂ ಹೆಣ್ಣಾಗಿದ್ದರಂತೂ ಇದು ಇನ್ನಷ್ಟು ಕಠಿಣ ದಾರಿ.ಪ್ರಭಾ ಅವರು ಇಂಥ ದಾರಿಯಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ಬಲವಾದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.


70ರ ದಶಕದಲ್ಲಿ ಕನ್ನಡ ನೆಲದಲ್ಲಿ ಮೂಡಿದ ಕ್ರಾಂತಿಕಾರತನ, ಮತ್ತು 'ಸ್ವ'ದ ಹುಡುಕಾಟದ ಮೂಲಕವೇ ಬಹಿರಂಗದಲ್ಲಿ ತಮ್ಮ ಇರುವನ್ನು ಕಂಡುಕೊಳ್ಳುವ ಚಳವಳಿಯ ಪಾಲುದಾರರಾದ ಮೇಡಂ, ಸೃಜನಶೀಲ ಪ್ರಭೆಯನ್ನು ಕಾಪಿಟ್ಟುಕೊಂಡವರು, ಅದು ಕತೆ, ಪ್ರಬಂಧ, ಕವಿತೆಗಳಲ್ಲಿ ಚಲ್ಲುವರೆದಿದೆ. ಹೊರಳು ಮತ್ತು ಇತರ ಕತೆಗಳು ಸಂಕಲನದಲ್ಲಿ ಬರುವ ಮೊದಲ ಕಥೆಯಲ್ಲಿ ಇಲ್ಲಿಯ ನಾಯಕಿಗೆ ಮದುವೆಯಾಗಿ ಏಳುವರ್ಷಗಳಾಗಿವೆ. ಈಸ್ಟ್ ಹಾಕಿದ ಬ್ರೆಡ್ಡಿನ ಹಾಗೆ ಉಬ್ಬಿಕೊಳ್ಳುತ್ತಿರುವ ಬೊಜ್ಜಿನ ಬೆಳವಣಿಗೆಗೆ ಅವಳು ಸಿಕ್ಕಿದ್ದಾಳೆ. ಆದರೂ ಯೌವನ ಇನ್ನೂ ಅವಳಿಂದ ಕಾಲ್ತೆಗೆಯುವ ಸನ್ನಾಹದಲ್ಲಿಲ್ಲ. ಮುಖದ ಮೇಲೆ ಮೊಡವೆ ಅಂದವನ್ನು ಹೆಚ್ಚಿಸುವಂತೆ ತೋರಿದರೂ,ಕೀವುಗಟ್ಟಿದ ಅದೊಂದು ಅಸಹ್ಯ. ಹೊರಗಿನ ಬದುಕೂ ಹೀಗೆಯೇ ಸಹ್ಯ ಮತ್ತು ಅಸಹ್ಯಗಳ ಜೊತೆಗಿನ ಪ್ರೀತಿ ಕಳೆದುಕೊಂಡಿದೆ. ತನ್ನ ಆಫೀಸಿನಲ್ಲಿರುವ ರಮೇಶನ ಚೆಲುವಿಗೆ ಒಲಿಯಲು ಮನಸ್ಸು ಹಾತೊರೆಯುತ್ತಿದೆ. ಅವನ ಸಖ್ಯವನ್ನು ಬಯಸುತ್ತಿದೆ. ಎಂದೆನಿಸಿದರೂ, ಆ ನೋಟವನ್ನೇ ಇವಳು ಬಯಸುತ್ತಿದ್ದಾಳೆ. ತಾನು ಮದುವೆಯಾದ ಹೆಣ್ಣು ರಮೇಶ? ಪ್ರಶ್ನೆಯನ್ನು ಕೇಳಿಕೊಂಡರೂ, ರಮೇಶನ ನೋಟವೇ ಬೇಕೆಂದು  ಒಳಗೇ ಕುಟುಕುತ್ತಿದೆ. ರಮೇಶನಿಗೆ, ಅವನ ರೂಪಕ್ಕೆ  ತಾನು ಮರುಳಾದೆನೇ ಎಂದು ತನ್ನೊಳಗನ್ನು ಅವನು ತನ್ನ ಬಳಿಯೇ ಇರಲಿ ಎಂಬ ಸೆಳೆತ, ಕೀವು ತುಂಬಿದ ಮೊಡವೆಯಂತೆ ಈ ಅನಿಸಿಕೆಗಳು ಅಸಹ್ಯ ಎನಿಸಿದರೂ, ಅದನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಆಸೆಗಳು, ಹಂಬಲಗಳು. ಇದು ಇಲ್ಲಿಗೆ ನಿಲ್ಲುವುದಲ್ಲ. ಪಕ್ಕದ ಮನೆಯ ಆನಂದನ ದುಂಡು ಮುಖ, ದಪ್ಪ ಮೀಸೆ, ತುಟಿಗಳನ್ನು ನೋಡುವಾಗಲೂ ರಮೇಶನೇ ಕಣ್ಮುಂದೆ ಬಂದಂತಾಗುತ್ತದೆ. ತನ್ನ ಗಂಡ ಮನೆಗೆ ಬಂದು ಸೊಂಟ ಬಳಸಿದಾಗಲೂ ಈ ಹೆಣ್ಣಿನ ಮನದೊಳಗೆ ಸುಳಿಯುವವನು ರಮೇಶನೇ, ಇಂಥ ತಾಕಲಾಟ, ನೋವು, ನೈತಿಕ ಪ್ರಶ್ನೆಗಳನ್ನು ಮೀರಿ ಅಪೇಕ್ಷೆಗಳು, ಈ ತೊಳಲಾಟದಲ್ಲಿಯೇ ಈಕೆ ತನ್ನ ವಾಸ್ತವವನ್ನು ಕಂಡುಕೊಳ್ಳಬೇಕಾಗಿದೆ.ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.ಬದುಕಿಗೆ ಅರ್ಥ ಮತ್ತು ಸಾರ್ಥಕ್ಯವನ್ನು ತಂದುಕೊಳ್ಳಬೇಕಾಗಿದೆ. ಇದೊಂದು ಸವಾಲು.ನಿತ್ಯ ಸೆಣಸಾಟಕ್ಕೆ ಸಿದ್ಧಪಡಿಸುವ ಸವಾಲು.


'ಹೊರಳು' ಕತೆಯನ್ನು ಬಿಟ್ಟರೆ ಇಲ್ಲಿರುವ ಉಳಿದೆಲ್ಲ ಕತೆಗಳೂ 'ಮೊಡವೆ'ಯಂತೆಯೇ ಇಂಥ ತೊಳಲಾಟವನ್ನು ಹಿಡಿದುಕೊಡುವ ಪ್ರಯತ್ನಗಳೇ. ಹೆಣ್ಣಿನ ಮನದಾಳದಲ್ಲಿ ಹೊಮ್ಮುವ ಇಂಥ ಭಾವಗಳನ್ನು ಹಿಡಿದು ಪರೀಕ್ಷಿಸಲು ನೋಡುತ್ತವೆ. ಮನಸ್ಸಿನ ಚಲನೆಯನ್ನು ಅದು ಚಲಿಸುವ ದಿಕ್ಕನ್ನು ಪ್ರಾಮಾಣಿಕ ನೋಟದಿಂದ ಹಿಡಿಯುವುದೇ ಈ ಕತೆಗಳ ಹೆಗ್ಗಳಿಕೆಯಾದಂತೆಯೂ ತೋರುತ್ತದೆ. ಜೊತೆಗೆ ಗಂಡು ಹೆಣ್ಣಿನ ಸಂಬಂಧಗಳ ನಿಜರೂಪವನ್ನು ದಿಟ್ಟತನದಿಂದ ಬಿಡಿಸಿ ನೋಡುವುದು, ಪ್ರೀತಿಯ ಹೆಸರಿನಲ್ಲಿ ತೊಡುವ ಮುಖವಾಡಗಳನ್ನು ಕಳಚಿ ಹಾಕಲೆತ್ನಿಸುವುದು, ಗಂಡು ಮತ್ತು ಹೆಣ್ಣಿನ ನಡುವಿರುವ ನಿರಂತರ ಆಕರ್ಷಣೆಯ ಸ್ವರೂಪ ಎಂಥದ್ದು ಎಂಬುದನ್ನು ಕಂಡುಕೊಳ್ಳಲು ಹೆಣಗುವುದು ಇವೆಲ್ಲ ಪ್ರಭಾ ಅವರ ಕಥನ ಕಲೆಯ ಹಿಂದಿರುವ ಕಾಳಜಿಗಳು. ಇಂಥ ಹುಡುಕಾಟ ನಿಧಾನಕ್ಕೆ ಮಾಗುವುದು, ಬೇರೊಂದು ಮಜಲನ್ನು ಮುಟ್ಟುವುದು, ತನ್ನ ಪ್ರತಿಸ್ಪರ್ಧಿಯಾದ ಇನ್ನೊಬ್ಬ ಹೆಣ್ಣನ್ನು ದ್ವೇಷದಿಂದ ನೋಡುವ ನೋಟದಲ್ಲಿಯೇ ಬದಲಾವಣೆಯಾಗಿ, ಅದು ಸಹಾನುಭೂತಿಗೆ, ಅನುಕಂಪಕ್ಕೆ ದಾರಿಮಾಡಿಕೊಡುವುದನ್ನು (ಕಳೆದುಹೋದವರು-ಕತೆ) ಇಲ್ಲಿ ಗಮನಿಸಬಹುದು. ಹೊರಗಿನ ಮತ್ತು ಒಳಗಿನ ಒತ್ತಡಗಳಿಗೆ ಬಲಿಯಾದ ಹೆಣ್ಣು ತನ್ನ ಏಕಾಂಗಿತನದಲ್ಲಿ, ಅಸಹಾಯಕತೆಯ ಸನ್ನಿವೇಶದಲ್ಲಿ ತನ್ನ ಸಂಗಕ್ಕೆ ಪುರುಷನೊಬ್ಬನನ್ನು ಬಯಸಿದರೆ, ಅದು ಮಹಾ ಅಪರಾಧವಾಗಿ ತನಗೇಕೆ ಕಾಣಬೇಕು ಎಂಬ ಅರಿವು ಕಥಾನಾಯಕಿಯ ಮನದಲ್ಲಿ ಮೂಡುವುದು ಇನ್ನೊಂದು ಬೆಳವಣಿಗೆ. ಈ ಸಹಾನುಭೂತಿಯೇ ಇನ್ನೊಂದು ಜೀವದ ಬಗೆಗಿನ ಪ್ರೀತಿಯೂ ಆಗಿ ಬದಲಾಗುವುದು ಪ್ರಭಾ ಅವರ ಕತೆಗಳಿಗೆ ಹೊಸದೊಂದು ಅಯಾಮವನ್ನೇ ತಂದುಕೊಡುತ್ತದೆ. ಅರಿವಿನ ಬಾಗಿಲು ಎಂದರೆ ಇದೇ. ಅದು ಬೆಳಕಿನ ಬಾಗಿಲು.


'ಹೊರಳು' ಈ ಸಂಕಲನದಲ್ಲಿ ಭಿನ್ನವಾದ ಕತೆ, ದೊಡ್ಡವರ ಪ್ರಪಂಚದ ನಡವಳಿಕೆಗಳು ಪುಟ್ಟ ಮಕ್ಕಳ ಮುಗ್ಧ ಮನಸ್ಸುಗಳ ಮೇಲೆ ಎಂಥ ಕೆಟ್ಟ ಪರಿಣಾಮವನ್ನು ಬೀರುತ್ತವೆ, ಅರಳಬೇಕಾದ ಮನಸ್ಸುಗಳನ್ನು ಹೇಗೆ ಕಮರಿಸುತ್ತವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ, ನಯಗಾರಿಕೆಯಿಂದ ಹೇಳುವ ಕತೆ. ಕತೆ ಕಟ್ಟುವಲ್ಲಿ ಲೇಖಕಿ ತೋರುವ

ಸಂಯಮ, ಬರವಣಿಗೆಯ ಮೇಲಿನ ಹಿಡಿತ ಇವೆಲ್ಲವನ್ನೂ ಈ ಕತೆ ತೋರಿಸಿಕೊಡುತ್ತದೆ.


ಪ್ರಭಾ ಅವರ ಕತೆಗಳು ಎಲ್ಲಿಯೂ ಜಾಳುಜಾಳಾಗುವುದಿಲ್ಲ. ಕಲೆಗಾರಿಕೆಯನ್ನು ಧಿಕ್ಕರಿಸುವುದಿಲ್ಲ. ಕಲೆಗಾರಿಕೆಯ ಸೂಕ್ಷ್ಮ ಅಂಶಗಳಿಗೆ ಮುಖ ತಿರುಗಿಸುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಪ್ರಭಾರವರು  ಅಭಿನಂದನೆಗೆ ಅರ್ಹರಾಗುತ್ತಾರೆ. ಆದರೆ ಇನ್ನಷ್ಟು ಆಳಕ್ಕೆ ಹೋಗುವ, ಮನುಷ್ಯ ಸಂಬಂಧಗಳನ್ನು ತೀವ್ರವಾಗಿ ಶೋಧಿಸುವ ಪ್ರಯತ್ನವನ್ನು ಇವರು ಮಾಡುವುದಿಲ್ಲ. ಇಂಥ ಅವಕಾಶವು ಇದ್ದ ಕಡೆಗಳಲ್ಲೂ ಅದನ್ನು ಬಿಟ್ಟುಕೊಟ್ಟು ಅಲ್ಪತೃಪ್ತಿಯಿಂದಲೇ ಕತೆಗಳನ್ನು ಮುಗಿಸಿಬಿಡುತ್ತಾರೆ.


ಕತೆಯಾಗಲಿ, ಕಾದಂಬರಿಯಾಲಿ, ಕವಿತೆಯಾಗಲಿ ಅಥವಾ ಇನ್ನಾವುದೇ ಸೃಜನಶೀಲ ಬರಹವಾಗಲಿ ಅದೊಂದು ಬದುಕಿನ ಶೋಧ. ನಿರಂತರವಾಗಿ ಈ ಕ್ರಿಯೆಯಲ್ಲಿ ತೊಡಗುವುದರ ಮೂಲಕವೇ ನಾವು ಬದುಕಿನ ಅರ್ಥವನ್ನು ಕಂಡುಕೊಳ್ಳಬಹುದು. ಪ್ರಭಾ  ಮೇಡಂ ರವರು ಇನ್ನಷ್ಟು ಈ ಶೋಧದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಹಾಗೂ ಅವರ ಲೇಖನಿಯಿಂದ ಇನ್ನೂ ಹತ್ತಾರು ಪುಸ್ತಕಗಳು ಹೊರಹೊಮ್ಮಲಿ ಎಂದು ಆಶಿಸುವೆ.


ಪುಸ್ತಕದ ಹೆಸರು: ಹೊರಳು ಮತ್ತು ಇತರೆ ಕಥೆಗಳು

ಲೇಖಕರು: ಕೆ ಎಸ್ ಪ್ರಭಾ

ಪ್ರಕಾಶನ: ಅನಿಕೇತನ ಟ್ರಸ್ಟ್

ಬೆಲೆ:60₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: